ಭಾರತ ಕ್ರಿಕೆಟ್ ತಂಡ
ಪಿಟಿಐ ಚಿತ್ರ
ಲಂಡನ್: ಭಾರತ ಕ್ರಿಕೆಟ್ ತಂಡವು ಈ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿ ಚಾಂಪಿಯನ್ ಆಗಿದೆ. ಇದರಲ್ಲಿ, ತಂಡದ ನಾಯಕ ರೋಹಿತ್ ಶರ್ಮಾ ಹಾಗೂ 'ರನ್ ಮಷಿನ್' ವಿರಾಟ್ ಕೊಹ್ಲಿ ಅವರ ಅನುಭವದ ಜೊತೆಗೆ, ಆಲ್‌ರೌಂಡರ್‌ಗಳು ನಿರ್ಣಾಯಕ ಪಾತ್ರ ವಹಿಸಿದರು ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಐಸಿಸಿ ವಿಶ್ಲೇಷಣೆಯಲ್ಲಿ ಮಾತನಾಡಿರುವ ಪಾಂಟಿಂಗ್, 'ಟೀಂ ಇಂಡಿಯಾದ ಆಲ್‌ರೌಂಡರ್‌ಗಳು ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರಿದರು' ಎಂದು ಶ್ಲಾಘಿಸಿದ್ದಾರೆ.
'ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ – ಎಲ್ಲರೂ ಅಮೋಘವಾಗಿ ಆಡಿದರು. ಭಾರತ ತಂಡವು ಯುವ ಹಾಗೂ ಅನುಭವಿಗಳನ್ನು ಹೊಂದಿದ್ದು, ಸಮತೋಲನದಿಂದ ಕೂಡಿದೆ. ಆ ತಂಡವನ್ನು ಸೋಲಿಸುವುದು ನಿಜವಾಗಿಯೂ ಕಠಿಣ ಹಾಗೂ ಫೈನಲ್‌ನಲ್ಲಿ ನಾಯಕನೇ ಮುಂಚೂಣಿಯಲ್ಲಿ ನಿಂತು ತಂಡ ಮುನ್ನಡೆಸುತ್ತಾನೆಂದು ಟೂರ್ನಿಯ ಆರಂಭದಲ್ಲೇ ಹೇಳಿದ್ದೆ' ಎಂದಿದ್ದಾರೆ.
'ಏನೇ ಆಗಲಿ, ಹೆಚ್ಚಿನ ಆಲ್‌ರೌಂಡರ್‌ಗಳು ಇದ್ದ ಕಾರಣ, ಭಾರತ ತಂಡ ಸಮತೋಲನದಿಂದ ಕೂಡಿತ್ತು. ಅಕ್ಷರ್ ಹಾಗೂ ಜಡೇಜ ಎಡಗೈ ಆಟಗಾರರಾಗಿ ಹೆಚ್ಚಿನ ಅವಕಾಶಗಳನ್ನು ಒದಗಿಸಿದರು' ಎಂದು ಹೇಳಿದ್ದಾರೆ.
ಟೀಂ ಇಂಡಿಯಾ, ವೇಗದ ಬೌಲಿಂಗ್ ಅನ್ನು ಲಘುವಾಗಿ ಪರಿಗಣಿಸಿತು ಎಂದಿರುವ ಪಾಂಟಿಂಗ್, 'ಬೊಟ್ಟು ಮಾಡಬಹುದಾದ ಒಂದೇ ಒಂದು ವಿಚಾರವೆಂದರೆ, ಅವರು (ಟೀಂ ಇಂಡಿಯಾ) ವೇಗದ ಬೌಲಿಂಗ್ ಅನ್ನು ಹಗುರವಾಗಿ ಪರಿಗಣಿಸಿತು. ಆದರೆ, ಪರಿಸ್ಥಿತಿ ಬದಲಾದಂತೆ, ಅವರಿಗೆ ವೇಗದ ಬೌಲಿಂಗ್‌ನ ಅಗತ್ಯವೇ ಇಲ್ಲ ಎನ್ನುವಂತಾಯಿತು' ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂದುವರಿದು, 'ಆ ಕಾರಣಕ್ಕಾಗಿಯೇ ಹಾರ್ದಿಕ್ ಪಾತ್ರ ಪ್ರಮುಖವಾಗುತ್ತದೆ. ಪವರ್ ಪ್ಲೇ ಅವಧಿಯಲ್ಲಿ ಹೊಸ ಚೆಂಡಿನೊಂದಿಗೆ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಕೆಲವು ಓವರ್‌ಗಳನ್ನು ಎಸೆಯುವ ಮೂಲಕ ಸ್ಪಿನ್ನರ್‌ಗಳಿಗೆ ನೆರವಾಗುವಂತೆ ಮಾಡಬಲ್ಲರು' ಎಂದು ವಿವರಿಸಿದ್ದಾರೆ.
ಭಾರತ ತಂಡ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ತಲಾ ಇಬ್ಬರು ವೇಗಿಗಳು, ಪರಿಣತ ಸ್ಪಿನ್ನರ್‌ಗಳು ಮತ್ತು ಆಲ್‌ರೌಂಡರ್‌ಗಳೊಂದಿಗೆ ಕಣಕ್ಕಿಳಿದಿತ್ತು.
ಆದರೆ, ಗುಂಪು ಹಂತದ ಅಂತಿಮ ಪಂದ್ಯ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಒಬ್ಬರೇ ಪ್ರಮುಖ ವೇಗಿಯೊಂದಿಗೆ (ಮೊಹಮ್ಮದ್ ಶಮಿ) ಆಡಿತ್ತು. ಈ ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಮಧ್ಯಮವೇಗಿಯಾಗಿ ಶಮಿಗೆ ನೆರವಾಗಿದ್ದರು. ಉಳಿದಂತೆ ಆಲ್‌ರೌಂಡರ್‌ಗಳಾದ ಅಕ್ಷರ್ ಮತ್ತು ಜಡೇಜ, ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್, ವರುಣ್ ಚಕ್ರವರ್ತಿ ಜೊತೆ ಸೇರಿ, ಎದುರಾಳಿ ತಂಡದ ಬ್ಯಾಟಿಂಗ್‌ಗೆ ಸವಾಲಾದರು.
ಹಾರ್ದಿಕ್, ಅಕ್ಷರ್ ಮತ್ತು ಜಡೇಜ ಅವರು ರೋಹಿತ್ ಬಳಗದ ಬ್ಯಾಟಿಂಗ್‌ಗೂ ಬಲ ತುಂಬಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.