ADVERTISEMENT

CSK vs RCB Highlights: ರಜತ್ ದಾಖಲೆ, ಜಡೇಜ 3,000 ರನ್‌; ಇಲ್ಲಿದೆ ಅಂಕಿ–ಅಂಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮಾರ್ಚ್ 2025, 2:35 IST
Last Updated 29 ಮಾರ್ಚ್ 2025, 2:35 IST
<div class="paragraphs"><p>ಪಂದ್ಯದ ಬಳಿಕ ಪರಸ್ಪರ ಕೈಕುಲುಕಿದ ಆರ್‌ಸಿಬಿ ಹಾಗೂ ಸಿಎಸ್‌ಕೆ ಆಟಗಾರರು</p></div>

ಪಂದ್ಯದ ಬಳಿಕ ಪರಸ್ಪರ ಕೈಕುಲುಕಿದ ಆರ್‌ಸಿಬಿ ಹಾಗೂ ಸಿಎಸ್‌ಕೆ ಆಟಗಾರರು

   

ಚೆನ್ನೈ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ವಿರುದ್ಧ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಗೆದ್ದು ಬೀಗಿದೆ. ಇದರೊಂದಿಗೆ ಆ ತಂಡವನ್ನು ಅದರದ್ದೇ ತವರು ಮೈದಾನದಲ್ಲಿ ಸೋಲಿಸಿದ ಸಾಧನೆಯನ್ನು 17 ವರ್ಷಗಳ ಬಳಿಕ ಮಾಡಿದೆ.

ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 196 ರನ್‌ ಕಲೆಹಾಕಿತು. ನಾಯಕ ರಜತ್‌ ಪಾಟೀದಾರ್‌ ಬಿರುಸಿನ (51 ರನ್‌) ಅರ್ಧಶತಕ ಸಿಡಿಸಿದರೆ, ಆರಂಭಿಕ ಫಿಲ್‌ ಸಾಲ್ಟ್‌ (32 ರನ್‌), ಅನುಭವಿ ವಿರಾಟ್‌ ಕೊಹ್ಲಿ (31 ರನ್‌), ಕನ್ನಡಿಗ ದೇವದತ್ತ ಪಡಿಕ್ಕಲ್‌ (27 ರನ್‌), ಫಿನಿಷರ್‌ ಟಿಮ್‌ ಡೇವಿಡ್‌ (ಅಜೇಯ 22 ರನ್‌) ಸಹ ಉಪಯುಕ್ತ ಬ್ಯಾಟಿಂಗ್ ಮಾಡಿದರು.

ADVERTISEMENT

ಈ ಗುರಿ ಬೆನ್ನತ್ತಿದ ಸಿಎಸ್‌ಕೆಗೆ ವೇಗಿ ಜೋಶ್‌ ಹ್ಯಾಜಲ್‌ವುಡ್‌ ಆರಂಭದಲ್ಲೇ ಆಘಾತ ನೀಡಿದರು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಆರಂಭಿಕ ರಾಹುಲ್‌ ತ್ರಿಪಾಠಿ (ರನ್‌) ಹಾಗೂ ನಾಯಕ ಋತುರಾಜ್‌ ಗಾಯಕವಾರ್‌ (0) ಅವರನ್ನು ಔಟ್‌ ಮಾಡಿ, ಆರ್‌ಸಿಬಿಗೆ ಮೇಲುಗೈ ತಂದುಕೊಟ್ಟರು. ರಚಿನ್‌ ರವೀಂದ್ರ (41 ರನ್‌) ಆರಂಭದಲ್ಲಿ ಹಾಗೂ ರವೀಂದ್ರ ಜಡೇಜ (25 ರನ್‌) ಕೊನೆಯಲ್ಲಿ ಹೋರಾಟ ನಡೆಸಿದರೂ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ.

ಕೊನೇ ಓವರ್‌ನಲ್ಲಿ ಗೆಲ್ಲಲು 67 ರನ್‌ ಬೇಕಿದ್ದಾಗ ಎರಡು ಸಿಕ್ಸರ್‌ ಹಾಗೂ ಒಂದು ಬೌಂಡರಿ ಸಿಡಿಸಿದ ಎಂ.ಎಸ್‌. ಧೋನಿ, ಅಭಿಮಾನಿಗಳನ್ನು ರಂಜಿಸಿದರು.

ಅಂತಿಮವಾಗಿ ಆತಿಥೇಯ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 146 ರನ್‌ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ, ಆರ್‌ಸಿಬಿ 50 ರನ್‌ ಅಂತರದ ಗೆಲುವು ಸಾಧಿಸಿತು.

ಜೋಶ್ ಒಟ್ಟು ಮೂರು ವಿಕೆಟ್‌ ಪಡೆದರು. ಯಶ್‌ ದಯಾಳ್‌ ಹಾಗೂ ಲಿಯಾಮ್‌ ಲಿವಿಂಗ್‌ಸ್ಟೋನ್‌ ಎರಡೆರಡು ವಿಕೆಟ್ ಪಡೆದರು. ಇನ್ನೊಂದು ವಿಕೆಟ್‌ ಭುವನೇಶ್ವರ್‌ ಕುಮಾರ್‌ ಪಾಲಾಯಿತು.

ಆರ್‌ಸಿಬಿ ಇಲ್ಲಿ 2008ರಲ್ಲಿ ಸಿಎಸ್‌ಕೆ ವಿರುದ್ಧ ಗೆದ್ದಿತ್ತು. ಅದಾದ ನಂತರ ಆಡಿದ ಸತತ 8 ಪಂದ್ಯಗಳಲ್ಲಿ ಸೋಲು ಕಂಡಿತ್ತು.

ಸಿಎಸ್‌ಕೆಗೆ ಎರಡನೇ ದೊಡ್ಡ ಸೋಲು
ಐಪಿಎಲ್‌ನಲ್ಲಿ ರನ್‌ ಅಂತರದಲ್ಲಿ ಎದುರಾದ ಎರಡನೇ ಅತಿದೊಡ್ಡ ಸೋಲು ಇದು. 2013ರಲ್ಲಿ ಮುಂಬೈ ಇಂಡಿಯನ್ಸ್‌ ಎದುರು 60 ರನ್‌ ಅಂತರದಿಂದ ಸೋತಿತ್ತು. ಆ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿತ್ತು.

60 ರನ್‌ vs ಮುಂಬೈ ಇಂಡಿಯನ್ಸ್‌ – ಮುಂಬೈ (2013)
54 ರನ್‌ vs ಪಂಜಾಬ್‌ ಕಿಂಗ್ಸ್‌ – ಮುಂಬೈ (2022)
50 ರನ್‌ vs ಆರ್‌ಸಿಬಿ – ಚೆನ್ನೈ (2025)
46 ರನ್‌ vs ಮುಂಬೈ ಇಂಡಿಯನ್ಸ್‌ – ಚೆನ್ನೈ (2019)
44 ರನ್‌ vs ಪಂಜಾಬ್‌ ಕಿಂಗ್ಸ್‌ – ಕಠಕ್‌ (2014)
44 ರನ್‌ vs ಡೆಲ್ಲಿ ಕ್ಯಾಪಿಟಲ್ಸ್‌ – ದುಬೈ (2020)

ಧೋನಿ 9ನೇ ಕ್ರಮಾಂಕದಲ್ಲಿ ಕಣಕ್ಕೆ
ಸಿಎಸ್‌ಕೆ ಮಾಜಿ ನಾಯಕ ಎಂ.ಎಸ್‌.ಧೋನಿ ಈ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದರು. ಗೆಲ್ಲಲು ಅಗತ್ಯ ರನ್‌ ಗತಿ ಏರುತ್ತಿದ್ದರೂ, ಅವರು ಆರ್‌. ಅಶ್ವಿನ್‌ ಅವರ ನಂತರ ಕ್ರೀಸ್‌ಗೆ ಬಂದದ್ದು ಅಚ್ಚರಿಗೆ ಕಾರಣವಾಯಿತು.

ಚೆನ್ನೈನ ಪರ ಗರಿಷ್ಠ ರನ್‌
ಕೆಳ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದು, 16 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿ ಸಹಿತ 30 ರನ್‌ ಗಳಿಸಿದ ಧೋನಿ, ಚೆನ್ನೈ ತಂಡದ ಪರ ಗರಿಷ್ಠ ರನ್‌ ಕಲೆಹಾಕಿದ ಬ್ಯಾಟರ್‌ ಎನಿಸಿಕೊಂಡರು. ಈವರೆಗೆ 204 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಅವರು 4,699 ರನ್‌ ಗಳಿಸಿದ್ದಾರೆ. ನಂತರದ ಸ್ಥಾನದಲ್ಲಿ ಸುರೇಶ್‌ ರೈನಾ ಇದ್ದಾರೆ. ಅವರು 171 ಇನಿಂಗ್ಸ್‌ಗಳಲ್ಲಿ 4,687 ರನ್‌ ಕಲೆಹಾಕಿದ್ದಾರೆ.

ನಂತರದ ಸ್ಥಾನಗಳಲ್ಲಿ ಫಾಫ್‌ ಡು ಪ್ಲೆಸಿ (2,721), ಋತುರಾಜ್‌ ಗಾಯಕವಾಡ್‌ (2,433), ರವೀಂದ್ರ ಜಡೇಜ (1,939) ಇದ್ದಾರೆ.

ಜಡೇಜ 3,000 ರನ್‌
ಐಪಿಎಲ್‌ನಲ್ಲಿ ಈವರೆಗೆ 242 ಪಂದ್ಯಗಳಲ್ಲಿ ಆಡಿರುವ ರವೀಂದ್ರ ಜಡೇಜ, 186 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದಾರೆ. 76 ಇನಿಂಗ್ಸ್‌ಗಳಲ್ಲಿ ಅಜೇಯರಾಗಿ ಉಳಿದಿರುವ ಅವರು, 27.28ರ ಸರಾಸರಿಯಲ್ಲಿ 3,001 ರನ್ ಗಳಿಸಿದ್ದಾರೆ.

ಅರ್ಧಶತಕ ಜೊತೆಯಾಟವಿಲ್ಲದೆ ಗರಿಷ್ಠ ರನ್‌
ಆರ್‌ಸಿಬಿ vs ಸಿಎಸ್‌ಕೆ ಪಂದ್ಯದಲ್ಲಿ ಒಂದೇಒಂದು ಅರ್ಧಶತಕ ಜೊತೆಯಾಟ ಮೂಡಿ ಬರಲಿಲ್ಲ. ಆದಾಗ್ಯೂ ಈ ಪಂದ್ಯದಲ್ಲಿ ಎರಡೂ ತಂಡಗಳು ಗಳಿಸಿದ ಒಟ್ಟು ರನ್‌ 342. ಇದು ಐಪಿಎಲ್‌ನ ಪಂದ್ಯವೊಂದರಲ್ಲಿ ಅರ್ಧಶತಕದ ಜೊತೆಯಾಟವಿಲ್ಲದೆ, ದಾಖಲಾದ ಎರಡನೇ ಗರಿಷ್ಠ ರನ್‌ ಆಗಿದೆ.

ಕಳೆದ ವರ್ಷ ರಾಜಸ್ಥಾನ ರಾಯಲ್ಸ್‌ ಹಾಗೂ ಆರ್‌ಸಿಬಿ ನಡುವಣ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ 346 ರನ್‌ ಹರಿದುಬಂದಿತ್ತು.

ಪಾಟೀದಾರ್‌ ಅರ್ಧಶತಕ
ಬಿರುಸಿನ ಬ್ಯಾಟಿಂಗ್ ನಡೆಸಿದ ನಾಯಕ ರಜತ್‌ ಪಾಟೀದಾರ್‌, ಚೆನ್ನೈನಲ್ಲಿ ಅರ್ಧಶತಕ ಗಳಿಸಿದ ಆರ್‌ಸಿಬಿಯ ಎರಡನೇ ನಾಯಕ ಎನಿಸಿಕೊಂಡರು. 2013ರಲ್ಲಿ ವಿರಾಟ್‌ ಕೊಹ್ಲಿ ಅರ್ಧಶತಕ (58 ರನ್‌) ಬಾರಿಸಿದ್ದರು.

ಹಾಗೆಯೇ, ಚೆನ್ನೈನಲ್ಲಿ ಆರ್‌ಸಿಬಿಗೆ ಪಂದ್ಯ ಗೆದ್ದುಕೊಟ್ಟ ಎರಡನೇ ನಾಯಕ ಪಾಟೀದಾರ್‌. 2008ರಲ್ಲಿ ಇಲ್ಲಿ ಆರ್‌ಸಿಬಿ ಗೆದ್ದಾಗ ಮಾಜಿ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ನಾಯಕರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.