ADVERTISEMENT

ಜೋ ರೂಟ್‌ಗೆ 'ಸರಣಿ ಶ್ರೇಷ್ಠ' ಸಿಗಬೇಕಿತ್ತು: ಗಂಭೀರ್ ಆಯ್ಕೆಗೆ ಬ್ರೂಕ್ ಅಸಮಾಧಾನ

ಪಿಟಿಐ
Published 6 ಆಗಸ್ಟ್ 2025, 13:04 IST
Last Updated 6 ಆಗಸ್ಟ್ 2025, 13:04 IST
<div class="paragraphs"><p>ಜೋ ರೂಟ್‌‌, ಹ್ಯಾರಿ ಬ್ರೂಕ್‌&nbsp;ಹಾಗೂ&nbsp;ಗೌತಮ್‌ ಗಂಭಿರ್‌</p></div>

ಜೋ ರೂಟ್‌‌, ಹ್ಯಾರಿ ಬ್ರೂಕ್‌ ಹಾಗೂ ಗೌತಮ್‌ ಗಂಭಿರ್‌

   

ಕೃಪೆ: ಪಿಟಿಐ

ಲಂಡನ್‌: ಇತ್ತೀಚೆಗೆ ಮುಕ್ತಾಯವಾದ 'ಆ್ಯಂಡರ್ಸನ್‌–ತೆಂಡೂಲ್ಕರ್‌ ಟ್ರೋಫಿ' ಟೆಸ್ಟ್‌ ಕ್ರಿಕೆಟ್‌ ಸರಣಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ನನ್ನ ಹೆಸರನ್ನು ಭಾರತ ತಂಡದ ಕೋಚ್‌ ಗೌತಮ್‌ ಗಂಭಿರ್‌ ಅವರು ಆಯ್ಕೆ ಮಾಡಿದ್ದು ಸರಿಯಲ್ಲ ಎಂದು ಸ್ವತಃ ಇಂಗ್ಲೆಂಡ್‌ ಬ್ಯಾಟರ್‌ ಹ್ಯಾರಿ ಬ್ರೂಕ್‌ ಹೇಳಿದ್ದಾರೆ. ಹಾಗೆಯೇ, ಜೋ ರೂಟ್‌ ಅವರಿಗೆ ಆ ಪ್ರಶಸ್ತಿ ಸಿಗಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಐದು ಪಂದ್ಯಗಳ ಟೆಸ್ಟ್‌ ಸರಣಿಯು ಸೋಮವಾರ ಮುಕ್ತಾಯವಾಗಿದ್ದು, ಉಭಯ ತಂಡಗಳು 2–2 ಅಂತರದ ಸಮಬಲ ಸಾಧಿಸಿವೆ. ಎರಡೂ ತಂಡಗಳ ಕೋಚ್‌ಗಳು ಎದುರಾಳಿ ತಂಡದ ಪರ ಇಡೀ ಟೂರ್ನಿಯಲ್ಲಿ ಉತ್ತಮ ಆಟವಾಡಿದ ಒಬ್ಬೊಬ್ಬರನ್ನು 'ಸರಣಿ ಶ್ರೇಷ್ಠ' ಪ್ರಶಸ್ತಿಗೆ ಆಯ್ಕೆ ಮಾಡಿದ್ದರು.

ಇಂಗ್ಲೆಂಡ್‌ ಕೋಚ್‌ ಬ್ರೆಂಡನ್‌ ಮೆಕ್ಲಂ ಅವರು ಟೀಂ ಇಂಡಿಯಾ ನಾಯಕ ಶುಭಮನ್‌ ಗಿಲ್‌ ಅವರನ್ನು ಹಾಗೇ, ಗಂಭೀರ್‌ ಅವರು ಬ್ರೂಕ್‌ ಅವರನ್ನು ಹೆಸರಿಸಿದ್ದರು.

ಬ್ರೂಕ್‌ 5 ಪಂದ್ಯಗಳ 9 ಇನಿಂಗ್ಸ್‌ಗಳಿಂದ ತಲಾ ಎರಡು ಶತಕ ಮತ್ತು ಅರ್ಧಶತಕ ಸಹಿತ 481 ರನ್‌ ಗಳಿಸಿದ್ದಾರೆ. ರೂಟ್‌ ಕೂಡ ಇಷ್ಟೇ ಇನಿಂಗ್ಸ್‌ಗಳಲ್ಲಿ ಮೂರು ಶತಕ ಹಾಗೂ ಒಂದು ಅರ್ಧಶತಕ ಸಹಿತ 537 ರನ್ ಕಲೆಹಾಕಿದ್ದಾರೆ.

ಅಂತಿಮ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಬೀಸಾಟವಾಡಿದ್ದ ಬ್ರೂಕ್‌, ಕೇವಲ 98 ಎಸೆತಗಳಲ್ಲೇ 111 ರನ್ ಕಲೆಹಾಕಿದ್ದರು. ಆ ಮೂಲಕ, ಭಾರತ ನೀಡಿದ್ದ ದಾಖಲೆಯ 374 ರನ್‌ ಗುರಿ ಬೆನ್ನತ್ತುವ ನಿಟ್ಟಿನಲ್ಲಿ ತಮ್ಮ ತಂಡಕ್ಕೆ ನೆರವಾಗಿದ್ದರು. ಅವರೊಂದಿಗೆ ರೂಟ್‌ ಸಹ ಶತಕ(105 ರನ್‌) ಬಾರಿಸಿದ್ದರು.

ಈ ಇಬ್ಬರೂ ನಾಲ್ಕನೇ ವಿಕೆಟ್‌ಗೆ 195 ರನ್‌ ಜೊತೆಯಾಟವಾಡುವ ಮೂಲಕ ಟೀಂ ಇಂಡಿಯಾಗೆ ಸೋಲಿನ ಭೀತಿ ಮೂಡಿಸಿದ್ದರು. ಆದರೆ, ಗೆಲುವಿಗೆ 73 ರನ್‌ ಬೇಕಿದ್ದಾಗ ಬ್ರೂಕ್‌ ಔಟಾದರು. ಅದಾದ ನಂತರ ಆತಿಥೇಯ ತಂಡದ ಕುಸಿತ ಆರಂಭವಾಯಿತು. 66 ರನ್‌ ಅಂತರದಲ್ಲಿ ಕೊನೆಯ 7 ವಿಕೆಟ್‌ಗಳನ್ನು ಪತನಗೊಂಡಿದ್ದರಿಂದ ಟೀಂ ಇಂಡಿಯಾಗೆ 6 ರನ್‌ ಅಂತರದ ರೋಚಕ ಜಯ ಒಲಿದಿತ್ತು.

ಗಂಭೀರ್‌ ಆಯ್ಕೆ ಕುರಿತು ಮಾತನಾಡಿರುವ ಬ್ರೂಕ್‌, 'ನಾನು ರೂಟ್‌ ಅವರಷ್ಟು ರನ್‌ ಗಳಿಸಿಲ್ಲ. ಹಾಗಾಗಿ, ಅವರೇ (ಜೋ ರೂಟ್‌) ಸರಣಿ ಶ್ರೇಷ್ಠ ಹಾಗೂ ಹಿಂದಿನ ಹಲವು ವರ್ಷಗಳಂತೆಯೇ ಅವರು ಈ ಋತುವಿನ ಶ್ರೇಷ್ಠ ಆಟಗಾರ ಎನಿಸಿಕೊಳ್ಳಬೇಕು ಎಂದು ಭಾವಿಸಿದ್ದೆ' ಎಂದು ಹೇಳಿದ್ದಾರೆ.

'ನಾವು ಉತ್ತಮ ಸ್ಥಿತಿಯಲ್ಲಿದ್ದೆವು. ಖಂಡಿತವಾಗಿಯೂ, ಇದು ಅತ್ಯುತ್ತಮ ಸರಣಿಯಾಗಿತ್ತು. 2–2 ರಲ್ಲಿ ಸರಣಿ ಸಮವಾಯಿತು. ಪ್ರಾಮಾಣಿಕವಾಗಿ ಹೇಳುವುದಾದರೆ ಫಲಿತಾಂಶ ಹೀಗಿರಲಿದೆ ಎಂದು ನಾನು ಅಂದುಕೊಂಡಿರಲಿಲ್ಲ' ಎಂದಿದ್ದಾರೆ.

ಸರಣಿಯ ಐದು ಪಂದ್ಯಗಳ ಫಲಿತಾಂಶ

* ಮೊದಲ ಟೆಸ್ಟ್ (ಲೀಡ್ಸ್‌): ಇಂಗ್ಲೆಂಡ್‌ಗೆ 5 ವಿಕೆಟ್‌ ಜಯ
* ಎರಡನೇ ಟೆಸ್ಟ್ (ಬರ್ಮಿಂಗ್‌ಹ್ಯಾಮ್‌): ಭಾರತಕ್ಕೆ 336 ರನ್‌ ಜಯ
* ಮೂರನೇ ಟೆಸ್ಟ್‌ (ಲಾರ್ಡ್ಸ್‌): ಇಂಗ್ಲೆಂಡ್‌ಗೆ 22 ರನ್‌ ಜಯ
* ನಾಲ್ಕನೇ ಟೆಸ್ಟ್‌ (ಮ್ಯಾಂಚೆಸ್ಟರ್‌): ಡ್ರಾ
* ಐದನೇ ಟೆಸ್ಟ್‌ (ಕೆನ್ನಿಂಗ್ಟನ್‌ ಓವಲ್‌): ಭಾರತಕ್ಕೆ 6 ರನ್‌ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.