ADVERTISEMENT

'ರೋಹಿತ್ ಬಗ್ಗೆ ಒಂದು ಸಾಲಲ್ಲಿ ಹೇಳಿ' ಎಂದ ಅಭಿಮಾನಿಗೆ ಶಾರುಕ್ ಕೊಟ್ಟ ಉತ್ತರವೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜನವರಿ 2023, 11:22 IST
Last Updated 24 ಜನವರಿ 2023, 11:22 IST
ರೋಹಿತ್ ಶರ್ಮಾ ಹಾಗೂ ಶಾರುಕ್‌ ಖಾನ್‌ (ಪಿಟಿಐ ಚಿತ್ರಗಳು)
ರೋಹಿತ್ ಶರ್ಮಾ ಹಾಗೂ ಶಾರುಕ್‌ ಖಾನ್‌ (ಪಿಟಿಐ ಚಿತ್ರಗಳು)   

ಬಾಲಿವುಡ್‌ ನಟ ಶಾರುಕ್‌ ಖಾನ್‌ ಅವರು ತಮ್ಮ 'ಪಠಾಣ್‌' ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಪ್ರಚಾರದೊಟ್ಟಿಗೆ ತಮ್ಮ ಅಭಿಮಾನಿಗಳೊಂದಿಗೆ ಟ್ವಿಟರ್‌ನಲ್ಲಿ ಮಾತುಕತೆ (ಪ್ರಶ್ನೋತ್ತರ ಮಾದರಿಯಲ್ಲಿ) ನಡೆಸಿರುವ ಅವರು, ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಐಪಿಎಲ್‌ನಲ್ಲಿ ಆಡುವ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ಫ್ರಾಂಚೈಸ್‌ ಮಾಲೀಕರೂ ಆಗಿರುವ ಶಾರುಕ್‌ ಅವರನ್ನು 'ರೋಹಿತ್ ಶರ್ಮಾ ಬಗ್ಗೆ ಒಂದು ಸಾಲಿನಲ್ಲಿ ಹೇಳಿ' ಎಂದು ಅಭಿಮಾನಿಯೊಬ್ಬರು ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಶಾರುಕ್‌, ರೋಹಿತ್‌ ಅದ್ಭುತ ವ್ಯಕ್ತಿ. ಅವರೊಂದಿಗೆ ಮಧುರವಾದ ಹಲವು ವೈಯಕ್ತಿಕ ಕ್ಷಣಗಳನ್ನು ಹಂಚಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಕ್ರಿಕೆಟ್‌ ಪ್ರಿಯರಾಗಿರುವ ಶಾರುಕ್‌ಗೆ ಹಲವು ಕ್ರಿಕೆಟಿಗರೊಂದಿಗೆ ಉತ್ತಮ ಒಡನಾಟವಿದೆ.

ADVERTISEMENT

ಪಾಂಟಿಂಗ್ ದಾಖಲೆ ಸರಿಗಟ್ಟಿದ ರೋಹಿತ್
ಭಾರತ ಕ್ರಿಕೆಟ್‌ ತಂಡದ ನಾಯಕರಾಗಿರುವ ರೋಹಿತ್‌ ಶರ್ಮಾ ಇಂದು ನ್ಯೂಜಿಲೆಂಡ್‌ ವಿರುದ್ಧ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ಶತಕ (101 ರನ್‌) ಸಿಡಿಸಿದ್ದಾರೆ. ಆ ಮೂಲಕ ಈ ಮಾದರಿಯಲ್ಲಿ ಹೆಚ್ಚು ಶತಕ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಬ್ಯಾಟಿಂಗ್‌ ದಿಗ್ಗಜ ರಿಕಿ ಪಾಂಟಿಂಗ್‌ ದಾಖಲೆಯನ್ನು ಸರಿಗಟ್ಟಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ 234 ಇನಿಂಗ್ಸ್‌ನಲ್ಲಿ ಬ್ಯಾಟ್‌ ಬೀಸಿರುವ ರೋಹಿತ್‌ಗೆ ಇದು 30ನೇ ಶತಕ. ರಿಕಿ ಪಾಂಟಿಂಗ್‌ ಅವರು 375 ಪಂದ್ಯಗಳ 365 ಇನಿಂಗ್ಸ್‌ಗಳಿಂದ ಇಷ್ಟೇ ಶತಕ ಗಳಿಸಿದ್ದಾರೆ. ಒಟ್ಟಾರೆ ಹೆಚ್ಚು ಶತಕ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ರೋಹಿತ್‌ ಮೂರನೇ ಸ್ಥಾನದಲ್ಲಿದ್ದು, ಭಾರತದವರೇ ಆದ ಸಚಿನ್‌ ತೆಂಡೂಲ್ಕರ್‌ (452 ಇನಿಂಗ್ಸ್‌ಗಳಲ್ಲಿ 49 ಶತಕ) ಮತ್ತು ವಿರಾಟ್‌ ಕೊಹ್ಲಿ (262 ಇನಿಂಗ್ಸ್‌ಗಳಲ್ಲಿ 49 ಶತಕ) ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿದ್ದಾರೆ.

2020ರ ಜನವರಿ ನಂತರ ರೋಹಿತ್‌ ಬ್ಯಾಟ್‌ನಿಂದ ಏಕದಿನ ಶತಕ ಮೂಡಿಬಂದಿರಲಿಲ್ಲ.

ರೋಹಿತ್‌ ಅವರೊಂದಿಗೆ ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗ್‌ ನಡೆಸಿದ ಶುಭಮನ್‌ ಗಿಲ್‌ ಸಹ ಈ ಪಂದ್ಯದಲ್ಲಿ ಶತಕ (112) ಗಳಿಸಿದರು.

ಸದ್ಯ 45 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಭಾರತ 6 ವಿಕೆಟ್‌ ನಷ್ಟಕ್ಕೆ 325 ರನ್ ಗಳಿಸಿದೆ.

'ಪಠಾಣ್‌' ನಾಳೆ ರಿಲೀಸ್‌
ಆದಿತ್ಯ ಚೋಪ್ರಾ, ಅಲೆಕ್ಸಾಂಡರ್‌ ದೋಸ್ತಾಲ್‌ ನಿರ್ಮಿಸಿರುವ, ಶಾರುಖ್‌ ಅಭಿನಯದ 'ಪಠಾಣ್‌' ಸಿನಿಮಾವನ್ನು ಯಶ್ ರಾಜ್‌ ಫಿಲ್ಮ್ಸ್‌ ವಿತರಿಸುತ್ತಿದೆ. ₹ 250 ಕೋಟಿ ಬಜೆಟ್‌ನಲ್ಲಿ ತಯಾರಾಗಿರುವ ಈ ಚಿತ್ರ ಜನವರಿ 25 ರಂದು (ನಾಳೆ) ತೆರೆಗಪ್ಪಳಿಸಲಿದೆ. ದೇಶದ ಸುಮಾರು 5 ಸಾವಿರ ಪರದೆಗಳಲ್ಲಿ ಬಿಡುಗಡೆಗೆ ಸಿದ್ಧತೆ ನಡೆದಿದೆ. ಮುಂಗಡ ಬುಕಿಂಗ್‌ ಜನವರಿ 20ರಿಂದಲೇ ಆರಂಭವಾಗಿದೆ.

ಶಾರುಕ್‌ ಅವರು 2018ರಲ್ಲಿ ತೆರೆಕಂಡಿದ್ದ 'ಝೀರೊ' ಸಿನಿಮಾದಲ್ಲಿ ನಟಿಸಿದ್ದೇ ಕೊನೆ. ಅದಾದ ಬಳಿಕ ಅವರ ನಟನೆಯ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಹೀಗಾಗಿ 'ಪಠಾಣ್‌' ಚಿತ್ರ ಶಾರುಕ್‌ ಅಭಿಮಾನಿಗಳ ಕಾತರವನ್ನು ಹೆಚ್ಚಿಸಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.