ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್ ಹಾಗೂ ಮೊಹಮ್ಮದ್ ಸಿರಾಜ್
ಕೃಪೆ: ಪಿಟಿಐ
ನವದೆಹಲಿ: ಇಂಗ್ಲೆಂಡ್ ಹಾಗೂ ಭಾರತ ನಡುವಣ 'ಆ್ಯಂಡರ್ಸನ್–ತೆಂಡೂಲ್ಕರ್ ಟ್ರೋಫಿ' ಟೆಸ್ಟ್ ಸರಣಿ ಬೆನ್ನಲ್ಲೇ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ನೂತನ ರ‍್ಯಾಂಕಿಂಗ್ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿ 'ಸರಣಿ ಶ್ರೇಷ್ಠ' ಎನಿಸಿಕೊಂಡ ಹೊರತಾಗಿಯೂ ನಾಲ್ಕು ಸ್ಥಾನಗಳ ಕುಸಿತ ಕಂಡಿರುವ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಅಗ್ರ ಹತ್ತರ ಪಟ್ಟಿಯಿಂದ ಹೊರಬಿದಿದ್ದಾರೆ.
ಇಂಗ್ಲೆಂಡ್ ವಿರುದ್ಧ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಎರಡನೇ ಟೆಸ್ಟ್ ಬಳಿಕ 807 ಪಾಯಿಂಟ್‌ಗಳೊಂದಿಗೆ ಜೀವನಶ್ರೇಷ್ಠ 6ನೇ ಸ್ಥಾನಕ್ಕೇರಿದ್ದ ಗಿಲ್, ಇದೀಗ 13ನೇ ಸ್ಥಾನಕ್ಕೆ ಕುಸಿದಿದ್ದಾರೆ. ನಂತರ ಕ್ರಮವಾಗಿ ಲಂಡನ್‌ನ ಲಾರ್ಡ್ಸ್, ಮ್ಯಾಂಚೆಸ್ಟರ್ ಹಾಗೂ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಆಡಿದ ಆರು ಇನಿಂಗ್ಸ್‌ಗಳಲ್ಲಿ ಒಂದರಲ್ಲಷ್ಟೇ ಶತಕ ಬಾರಿಸಿದ್ದರು. ಉಳಿದ ಯಾವ ಇನಿಂಗ್ಸ್‌ನಲ್ಲೂ 25ರ ಗಡಿ ದಾಟಿರಲಿಲ್ಲ. ಹೀಗಾಗಿ, 82 ಪಾಯಿಂಟ್‌ಗಳನ್ನು ಕಳೆದುಕೊಂಡಿದ್ದಾರೆ.
ಟೂರ್ನಿಯಲ್ಲಿ ಶುಭಮನ್ ಗಿಲ್ ಸಾಧನೆ
ಮೇಲೇರಿದ ಜೈಸ್ವಾಲ್, ಸಿರಾಜ್
ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ವಿಫಲವಾದರೂ ಎರಡನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಯಶಸ್ವಿ ಜೈಸ್ವಾಲ್ (118 ರನ್) ಹಾಗೂ ಪಂದ್ಯದಲ್ಲಿ ಒಟ್ಟು 9 ವಿಕೆಟ್‌ಗಳನ್ನು ಪಡೆದು ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೊಹಮ್ಮದ್ ಸಿರಾಜ್ ಅವರು ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದಿದ್ದಾರೆ.
ಒಟ್ಟು 792 ಪಾಯಿಂಟ್ ಹೊಂದಿರುವ ಜೈಸ್ವಾಲ್ ಮೂರು ಸ್ಥಾನಗಳು ಮೇಲೇರಿ ನಾಲ್ಕಕ್ಕೆ ಜಿಗಿದಿದ್ದಾರೆ. ರಿಷಭ್ ಪಂತ್ (768 ಪಾಯಿಂಟ್) 8ನೇ ಸ್ಥಾನದಲ್ಲಿದ್ದಾರೆ. ಭಾರತದ ಬ್ಯಾಟರ್‌ಗಳ ಪೈಕಿ ಅಗ್ರ ಹತ್ತರ ಲಿಸ್ಟ್‌ನಲ್ಲಿರುವುದು ಈ ಇಬ್ಬರೇ.
'ಟೆಸ್ಟ್ ಪರಿಣತ'ರೆನಿಸಿರುವ ಇಂಗ್ಲೆಂಡ್‌ನ ಜೋ ರೂಟ್ (908 ಪಾಯಿಂಟ್) ಹಾಗೂ ಹ್ಯಾರಿ ಬ್ರೂಕ್ (868 ಪಾಯಿಂಟ್) ಮೊದಲೆರಡು ಸ್ಥಾನಗಳಲ್ಲಿ ಇದ್ದಾರೆ.
ಬೌಲರ್‌ಗಳ ವಿಭಾಗದಲ್ಲಿ 12 ಸ್ಥಾನ ಮೇಲಕ್ಕೇರಿರುವ ಸಿರಾಜ್, 674 ಪಾಯಿಂಟ್‌ಗಳೊಂದಿಗೆ 15ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಬೌಲರ್‌ಗಳ ವಿಭಾಗವನ್ನು ಭಾರತದ ಜಸ್‌ಪ್ರೀತ್ ಬೂಮ್ರಾ (889 ಪಾಯಿಂಟ್) ಮುನ್ನಡೆಸುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ (851 ಪಾಯಿಂಟ್), ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ (838 ಪಾಯಿಂಟ್) ನಂತರದ ಸ್ಥಾನಗಳಲ್ಲಿ ಇದ್ದಾರೆ.
ಆಲ್‌ರೌಂಡರ್‌ಗಳ ವಿಭಾಗದಲ್ಲಿ ಭಾರತದ ರವೀಂದ್ರ ಜಡೇಜ (405 ಪಾಯಿಂಟ್), ಬಾಂಗ್ಲಾದೇಶದ ಮೆಹದಿ ಹಸನ್ ಮಿರಾಜ್ (305 ಪಾಯಿಂಟ್) ಹಾಗೂ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ (295 ಪಾಯಿಂಟ್) ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.