ADVERTISEMENT

ರೋಹಿತ್, ಗಿಲ್ ಶತಕ; ಪಾಂಡ್ಯ ಅರ್ಧಶತಕ: ನ್ಯೂಜಿಲೆಂಡ್‌ಗೆ ಕಠಿಣ ಗುರಿ ನೀಡಿದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜನವರಿ 2023, 11:46 IST
Last Updated 24 ಜನವರಿ 2023, 11:46 IST
ರೋಹಿತ್ ಶರ್ಮಾ ಹಾಗೂ ಶುಭಮನ್‌ ಗಿಲ್‌ (ಚಿತ್ರಕೃಪೆ: Twitter / @BCCI)
ರೋಹಿತ್ ಶರ್ಮಾ ಹಾಗೂ ಶುಭಮನ್‌ ಗಿಲ್‌ (ಚಿತ್ರಕೃಪೆ: Twitter / @BCCI)   

ಇಂದೋರ್: ಆರಂಭಿಕ ಬ್ಯಾಟರ್‌ಗಳಾದ ರೋಹಿತ್‌ ಶರ್ಮಾ ಮತ್ತು ಶುಭಮನ್‌ ಗಿಲ್‌ ಸಿಡಿಸಿದ ಬಿರುಸಿನ ಶತಕಗಳು ಮತ್ತು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಸ್ಫೋಟಕ ಅರ್ಧಶತಕದ ಬಲದಿಂದ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಪಂದ್ಯದಲ್ಲಿ ಸವಾಲಿನ ಮೊತ್ತ ಕಲೆಹಾಕಿದೆ.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ರೋಹಿತ್‌ ಮತ್ತು ಗಿಲ್‌ ಮೊದಲ ವಿಕೆಟ್‌ಗೆ 212ರನ್ ಕಲೆಹಾಕಿದರು. ಇವರಿಬ್ಬರ ಸೊಗಸಾದ ಬ್ಯಾಟಿಂಗ್‌ ಬಲದಿಂದ ಭಾರತ ತಂಡ 30 ಓವರ್‌ಗಳಲ್ಲಿಯೇ 243ರನ್‌ ಕಲೆಹಾಕಿತ್ತು. ರೋಹಿತ್‌, 85 ಎಸೆತಗಳಲ್ಲಿ 6 ಬೌಂಡರಿ ಮತ್ತು 9 ಸಿಕ್ಸರ್‌ ಸಹಿತ 101 ರನ್‌ ಗಳಿಸಿ ಔಟಾದರು. ಗಿಲ್‌, 78 ಎಸೆತಗಳಲ್ಲಿ 13 ಬೌಂಡರಿ ಮತ್ತು 5 ಸಿಕ್ಸರ್‌ ಸಹಿತ 112 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ವಿರಾಟ್‌ ಕೊಹ್ಲಿ (36) ಅಲ್ಪ ಕಾಣಿಕೆ ನೀಡಿದರು. ಆದರೆ, ಇಶಾನ್‌ ಕಿಶನ್‌ (17), ಸೂರ್ಯಕುಮಾರ್‌ ಯಾದವ್‌ (14) ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ, 400ಕ್ಕಿಂತ ಹೆಚ್ಚು ರನ್‌ ಗಳಿಸುವ ಅವಕಾಶ ಅಲ್ಪದರಲ್ಲೇ ತಪ್ಪಿತು.

ADVERTISEMENT

ಆದಾಗ್ಯೂ ಕೆಳ ಕ್ರಮಾಂಕದ ಬ್ಯಾಟರ್‌ಗಳೊಂದಿಗೆ ಬಿರುಸಿನ ಆಟವಾಡಿದ ಹಾರ್ದಿಕ್‌ ಪಾಂಡ್ಯ ತಂಡದ ಮೊತ್ತ 380ರ ಗಡಿ ದಾಟಲು ನೆರವಾದರು. 38 ಎಸೆತಗಳನ್ನು ಎದುರಿಸಿದ ಪಾಂಡ್ಯ, ಏಕದಿನ ಕ್ರಿಕೆಟ್‌ನಲ್ಲಿ 9ನೇ ಅರ್ಧಶತಕ ಪೂರೈಸಿ ಔಟಾದರು. ಅಂತಿಮವಾಗಿ ಟೀಂ ಇಂಡಿಯಾ ನಿಗದಿತ 50 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್‌ಗಳನ್ನು ಕಳೆದುಕೊಂಡು 385 ರನ್ ಕೆಲಹಾಕಿತು.

ಭಾರತ ತಂಡ ಜನವರಿ 21 ಹಾಗೂ 22 ರಂದು ನಡೆದ ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಹೀಗಾಗಿ ಈ ಪಂದ್ಯವನ್ನೂ ಗೆದ್ದು ಕ್ಲೀನ್‌ ಸ್ವೀಪ್‌ ಮಾಡುವ ಲೆಕ್ಕಾಚಾರ ರೋಹಿತ್‌ ಬಳಗದ್ದು. ಆದರೆ, ಸಮಾಧಾನಕರ ಜಯ ಸಾಧಿಸುವ ಯೋಜನೆ ಟಾಮ್‌ ಲಥಾಮ್‌ ಪಡೆಯದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.