ADVERTISEMENT

IND vs SA ODI Highlights: ಟೀಂ ಇಂಡಿಯಾ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಹರಿಣಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಡಿಸೆಂಬರ್ 2025, 2:41 IST
Last Updated 4 ಡಿಸೆಂಬರ್ 2025, 2:41 IST
<div class="paragraphs"><p>ಮ್ಯಾಥ್ಯೂ&nbsp;ಬ್ರೀಟ್ಜ್‌‌ಸ್ಕಿ, ಡೆವಾಲ್ಡ್‌ ಬ್ರೆವಿಸ್‌, ಏಡನ್‌ ಮರ್ಕರಂ</p></div>

ಮ್ಯಾಥ್ಯೂ ಬ್ರೀಟ್ಜ್‌‌ಸ್ಕಿ, ಡೆವಾಲ್ಡ್‌ ಬ್ರೆವಿಸ್‌, ಏಡನ್‌ ಮರ್ಕರಂ

   

ಕೃಪೆ: ಪಿಟಿಐ

ರಾಯಪುರ: ಏಕದಿನ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ನೀಡಿದ 359 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ, ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ ಜಯದ ನಗೆ ಬೀರಿತು.

ADVERTISEMENT

ಸತತ 20ನೇ ಬಾರಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ, ಅನುಭವಿ ವಿರಾಟ್‌ ಕೊಹ್ಲಿ (102), ಯುವ ಆಟಗಾರ ಋತುರಾಜ್‌ ಗಾಯಕವಾಡ (105) ಸಿಡಿಸಿದ ಶತಕ ಹಾಗೂ ನಾಯಕ ಕೆ.ಎಲ್‌. ರಾಹುಲ್‌ (ಅಜೇಯ 66) ಗಳಿಸಿದ ಅರ್ಧಶತಕದ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 358 ರನ್‌ ಕಲೆಹಾಕಿತು.

ಬೃಹತ್‌ ಸವಾಲಿನೆದುರು ಲೀಲಾಜಾಲವಾಗಿ ಬ್ಯಾಟ್ ಬೀಸಿದ ಆಫ್ರಿಕನ್ನರು, 49.2 ಓವರ್‌ಗಳಲ್ಲೇ 362 ರನ್‌ ಗಳಿಸಿ ಜಯ ಸಾಧಿಸಿದರು. ಅದಕ್ಕಾಗಿ ಕಳೆದುಕೊಂಡಿದ್ದು 6 ವಿಕೆಟ್ ಮಾತ್ರ.

ಪ್ರವಾಸಿ ಪಡೆ ಪರ ಅಮೋಘ ಬ್ಯಾಟಿಂಗ್ ಮಾಡಿದ ಆರಂಭಿಕ ಏಡನ್‌ ಮರ್ಕರಂ  (110) ಶತಕ ಗಳಿಸಿ ಭದ್ರ ಅಡಿಪಾಯ ಹಾಕಿಕೊಟ್ಟರು. ಅದರ ಮೇಲೆ ಯುವ ಆಟಗಾರರಾದ ಮ್ಯಾಥ್ಯೂ ಬ್ರೀಟ್ಜ್‌‌ಸ್ಕಿ (68), ಡೆವಾಲ್ಡ್‌ ಬ್ರೆವಿಸ್‌ (54), ನಾಯಕ ತೆಂಬಾ ಬವುಮಾ (46) ಮತ್ತು ಕೊನೆಯಲ್ಲಿ ಮಿಂಚಿದ ಕಾರ್ಬಿನ್ ಬಾಷ್ (ಅಜೇಯ 29) ಜಯದ ಸೌಧ ಕಟ್ಟಿದರು.

ಇದರೊಂದಿಗೆ ಮೂರು ಪಂದ್ಯಗಳ ಸರಣಿಯು 1–1 ಅಂತರದ ಸಮಬಲಗೊಂಡಿದೆ. ಅಂತಿಮ ಪಂದ್ಯವು ವಿಶಾಖಪಟ್ಟಣದಲ್ಲಿ ಶನಿವಾರ (ಡಿ.6) ನಡೆಯಲಿದೆ.

ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಮೊತ್ತ ಬೆನ್ನತ್ತಿ ಗೆದ್ದ ತಂಡಗಳು

  • ದಕ್ಷಿಣ ಆಫ್ರಿಕಾ: ಆಸ್ಟ್ರೇಲಿಯಾ ವಿರುದ್ಧ 438/9 (2006)

  • ನೆದರ್ಲೆಂಡ್ಸ್‌: ಸ್ಕಾಟ್‌ಲೆಂಡ್‌ ಎದುರು 374/6 (2025)

  • ದಕ್ಷಿಣ ಆಫ್ರಿಕಾ: ಆಸ್ಟ್ರೇಲಿಯಾ ವಿರುದ್ಧ 372/6 (2016)

  • ಇಂಗ್ಲೆಂಡ್‌: ವೆಸ್ಟ್‌ಇಂಡೀಸ್‌ ವಿರುದ್ಧ 364/4 (2019)

  • ಭಾರತ: ಆಸ್ಟ್ರೇಲಿಯಾ ವಿರುದ್ಧ 362/1 (2013)

  • ದಕ್ಷಿಣ ಆಫ್ರಿಕಾ: ಭಾರತ ವಿರುದ್ಧ 359/6 (2025)

ಭಾರತ, ಇಂಗ್ಲೆಂಡ್ ದಾಖಲೆ ಸರಿಗಟ್ಟಿದ ಹರಿಣಗಳು
ಭಾರತ, ಇಂಗ್ಲೆಂಡ್‌ ತಂಡಗಳು ತಲಾ ಮೂರು ಸಲ 350ಕ್ಕಿಂತ ಅಧಿಕ ಮೊತ್ತ ಬೆನ್ನತ್ತಿ ಗೆದ್ದ ದಾಖಲೆ ಮಾಡಿದ್ದವು. ಭಾರತ 2013ರಲ್ಲಿ ಎರಡು ಬಾರಿ ಆಸ್ಟ್ರೇಲಿಯಾ ವಿರುದ್ಧ ಮತ್ತು 2017ರಲ್ಲಿ ಇಂಗ್ಲೆಂಡ್‌ ವಿರುದ್ಧ ಜಯ ಸಾಧಿಸಿತ್ತು. ಇಂಗ್ಲೆಂಡ್‌ ಪಡೆ, 2015ರಲ್ಲಿ ನ್ಯೂಜಿಲೆಂಡ್‌ ಎದುರು ಹಾಗೂ 2019ರಲ್ಲಿ ವೆಸ್ಟ್ ಇಂಡೀಸ್‌, ಪಾಕಿಸ್ತಾನ ವಿರುದ್ಧ ಈ ಸಾಧನೆ ಮಾಡಿತ್ತು.

ಇದೀಗ ಈ ಲಿಸ್ಟ್‌ಗೆ ಹೊಸ ಸೇರ್ಪಡೆ ದಕ್ಷಿಣ ಆಫ್ರಿಕಾ. ಇದಕ್ಕೂ ಮೊದಲು ಹರಿಣಗಳ ಪಡೆ, ಆಸ್ಟ್ರೇಲಿಯಾ ವಿರುದ್ಧ 2006 ಹಾಗೂ 2016ರಲ್ಲಿ 350ಕ್ಕಿಂತ ಹೆಚ್ಚಿನ ಮೊತ್ತ ಬೆನ್ನತ್ತಿದ್ದ ಗೆದ್ದಿತ್ತು.

ಪಂದ್ಯದಲ್ಲಿ ದಾಖಲಾದ ಗರಿಷ್ಠ ಮೊತ್ತ
ಭಾರತ ಮತ್ತು ದಕ್ಷಿಣ ಆಫ್ರಿಕಾ ಪಡೆಗಳು ಈ ಪಂದ್ಯದಲ್ಲಿ ಒಟ್ಟು 720 ರನ್‌ಗಳನ್ನು ಕಲೆಹಾಕಿದವು. ಉಭಯ ತಂಡಗಳ ನಡುವಣ ಏಕದಿನ ಪಂದ್ಯದಲ್ಲಿ ದಾಖಲಾದ ಗರಿಷ್ಠ ಮೊತ್ತ ಇದಾಗಿದೆ. ಇದೇ ಸರಣಿಯ ಮೊದಲ ಪಂದ್ಯದಲ್ಲಿ 681 ರನ್‌ ಕಲೆಹಾಕಿರುವುದು ಎರಡನೇ ಸ್ಥಾನದಲ್ಲಿದೆ.

ಭಾರತ vs ದಕ್ಷಿಣ ಆಫ್ರಿಕಾ ಪಂದ್ಯಗಳಲ್ಲಿ ಅತಿಹೆಚ್ಚು ಶತಕ

  • 3: ಜೊಹನೆಸ್‌ಬರ್ಗ್‌ – 2001 (ಸೌರವ್‌ ಗಂಗೂಲಿ, ಸಚಿನ್‌ ತೆಂಡೂಲ್ಕರ್‌, ಗ್ಯಾರಿ ಕ್ರಸ್ಟನ್‌)

  • 3: ಮುಂಬೈ – 2025 (ಕ್ವಿಂಟನ್‌ ಡಿ ಕಾಕ್‌, ಫಾಫ್‌ ಡು ಪ್ಲೆಸಿ, ಎಬಿ ಡಿ ವಿಲಿಯರ್ಸ್‌)

  • 3: ರಾಯಪುರ – 2025 (ವಿರಾಟ್‌ ಕೊಹ್ಲಿ, ಋತುರಾಜ್‌ ಗಾಯಕವಾಡ್‌, ಏಡನ್‌ ಮರ್ಕ್ರಂ)

ಭಾರತದ ಶತಕಗಳ ದಾಖಲೆ
ಭಾರತ ತಂಡವು, ಪಂದ್ಯವೊಂದರಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಶತಗಳನ್ನು ದಾಖಲಿಸಿದ್ದು 44ನೇ ಬಾರಿ. ಇದು ಏಕದಿನ ಕ್ರಿಕೆಟ್‌ನಲ್ಲಿ ದಾಖಲೆಯಾಗಿದೆ. ದಕ್ಷಿಣ ಆಫ್ರಿಕಾ ತಂಡ 30ನೇ ಸಲ ಇಂತಹ ಸಾಧನೆ ಮಾಡಿರುವುದು ಎರಡನೇ ಸ್ಥಾನದಲ್ಲಿದೆ.

ಸಚಿನ್‌ ಸಾಧನೆ ಸರಿಗಟ್ಟಿದ ಕೊಹ್ಲಿ
ಏಕದಿನ ಕ್ರಿಕೆಟ್‌ನಲ್ಲಿ 53ನೇ ಶತಕ ಸಿಡಿಸಿದ ವಿರಾಟ್‌ ಕೊಹ್ಲಿ, 34 ಬೇರೆ ಬೇರೆ ಕ್ರೀಡಾಂಗಣಗಳಲ್ಲಿ ಮೂರಂಕಿ ಮುಟ್ಟಿದ ಸಾಧನೆ ಮಾಡಿದರು. ಸಚಿನ್‌ ತೆಂಡೂಲ್ಕರ್‌ ಅವರೂ ಇಷ್ಟೇ ಕ್ರೀಡಾಂಗಣಗಳಲ್ಲಿ ಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.