ವಿರಾಟ್ ಕೊಹ್ಲಿ
(ಎಕ್ಸ್ ಚಿತ್ರ)
ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲೂ ಟೀಮ್ ಇಂಡಿಯಾ ಬ್ಯಾಟರ್‌ಗಳ ವೈಫಲ್ಯ ಮುಂದುವರಿದಿದ್ದು, ಮೊದಲ ದಿನದಾಟದಲ್ಲೇ 72.2 ಓವರ್‌ಗಳಲ್ಲಿ ಕೇವಲ 185 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.
ಬೌನ್ಸರ್, ವೇಗಿ ಸ್ನೇಹಿ ಪಿಚ್‌ನಲ್ಲಿ ಭಾರತೀಯ ಬ್ಯಾಟರ್‌ಗಳು ದಿನವಿಡೀ ಪರದಾಡಿದರು. ತಂಡದ ಪರ ರಿಷಭ್ ಪಂತ್ ಗರಿಷ್ಠ 40 ರನ್ ಗಳಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತದ ಆರಂಭ ಉತ್ತಮವಾಗಿರಲಿಲ್ಲ. 17 ರನ್ ಗಳಿಸುವಷ್ಟರಲ್ಲಿ ಆರಂಭಿಕರಾದ ಯಶಸ್ವಿ ಜೈಸ್ವಾಲ್ (10) ಹಾಗೂ ಕೆ.ಎಲ್. ರಾಹುಲ್ (4) ವಿಕೆಟ್‌ಗಳನ್ನು ಕಳೆದುಕೊಂಡಿತು.
ತಂಡಕ್ಕೆ ಪುನರಾಗಮನ ಮಾಡಿಕೊಂಡಿರುವ ಶುಭಮನ್ ಗಿಲ್ (20) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಪರಿಣಾಮ ಊಟದ ವಿರಾಮದ ಹೊತ್ತಿಗೆ ಭಾರತ ಮೂರು ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿ ಸಂಕಷ್ಟದಲ್ಲಿತ್ತು.
ಇಲ್ಲಿಂದ ಬಳಿಕವೂ ಪರಿಸ್ಥಿತಿ ಬದಲಾಗಲಿಲ್ಲ. ಭೋಜನ ವಿರಾಮದ ಬಳಿಕ ಭಾರತಕ್ಕೆ ವಿರಾಟ್ ಕೊಹ್ಲಿ (17) ವಿಕೆಟ್ ನಷ್ಟವಾಯಿತು. ಮಗದೊಮ್ಮೆ ಆಫ್ ಸ್ಟಂಪ್ ಆಚೆಗಿನ ಎಸೆತದಲ್ಲಿ ಕೊಹ್ಲಿ ಔಟ್ ಆದರು.
ಮತ್ತೊಂದೆಡೆ ದಿಟ್ಟ ಹೋರಾಟ ತೋರಿದ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜ ಎದುರಾಳಿಗಳಿಗೆ ಅಲ್ಪ ಹೊತ್ತು ಪ್ರತಿರೋಧ ಒಡ್ಡಿದರು. ಇವರಿಬ್ಬರು ಐದನೇ ವಿಕೆಟ್‌ಗೆ 48 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.
ರಿಷಭ್ 90 ಎಸೆತಗಳಲ್ಲಿ 40 ಮತ್ತು ಜಡೇಜ 95 ಎಸೆತಗಳಲ್ಲಿ 26 ರನ್ ಗಳಿಸಿ ಔಟ್ ಆದರು. ಇನ್ನುಳಿದಂತೆ ನಾಯಕ ಜಸ್‌ಪ್ರೀತ್ ಬೂಮ್ರಾ 22, ವಾಷಿಂಗ್ಟನ್ ಸುಂದರ್ 14, ಪ್ರಸಿದ್ದ ಕೃಷ್ಣ 3 ರನ್ ಗಳಿಸಿ ನಿರ್ಗಮಿಸಿದರು.
ಕಳೆದ ಪಂದ್ಯದ ಶತಕವೀರ ನಿತೀಶ್ ಕುಮಾರ್ ರೆಡ್ಡಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.
ಆಸ್ಟ್ರೇಲಿಯಾದ ಪರ ಮಾರಕ ದಾಳಿ ಸಂಘಟಿಸಿದ ಸ್ಕಾಟ್ ಬೋಲ್ಯಾಂಡ್ ನಾಲ್ಕು, ಮಿಚೆಲ್ ಸ್ಟಾರ್ಕ್ ಮೂರು, ಪ್ಯಾಟ್ ಕಮಿನ್ಸ್ ಎರಡು ಮತ್ತು ನೇಥನ್ ಲಯನ್ ಒಂದು ವಿಕೆಟ್ ಗಳಿಸಿ ಮಿಂಚಿದರು.
ಈ ಪೈಕಿ ಬೋಲ್ಯಾಂಡ್ 20 ಓವರ್‌ಗಳಲ್ಲಿ ಕೇವಲ 31 ರನ್ ಮಾತ್ರ ಬಿಟ್ಟುಕೊಟ್ಟರು. ಇದರಲ್ಲಿ ಎಂಟು ಮೇಡನ್ ಓವರ್ ಸೇರಿತ್ತು.
ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-2ರ ಅಂತರದ ಹಿನ್ನಡೆಯಲ್ಲಿದೆ. ಟ್ರೋಫಿ ತನ್ನ ಬಳಿಯಲ್ಲಿಯೇ ಉಳಿಸಿಕೊಳ್ಳಲು ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ಪ್ರವೇಶ ಸಾಧ್ಯತೆಯನ್ನು ಜೀವಂತವಾಗಿರಿಸಲು ಭಾರತ ಈ ಪಂದ್ಯದಲ್ಲಿ ಗೆಲಲ್ಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಬೂಮ್ರಾ ಮಿಂಚು...
ಬಳಿಕ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಮೊದಲ ದಿನದಾಟಕ್ಕೆ ಮೂರು ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 9 ರನ್ ಗಳಿಸಿದೆ.
ನಿಖರ ದಾಳಿ ಸಂಘಟಿಸಿದ ಜಸ್‌ಪ್ರೀತ್ ಬೂಮ್ರಾ, ಆಸೀಸ್ ಆರಂಭಿಕ ಬ್ಯಾಟರ್ ಉಸ್ಮಾನ್ ಖ್ವಾಜಾ (2) ವಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರೋಹಿತ್ ಇಲ್ಲ, ಬೂಮ್ರಾ ನಾಯಕ...
ಈ ಮೊದಲು ಟಾಸ್ ಗೆದ್ದ ಟೀಮ್ ಇಂಡಿಯಾದ ಉಸ್ತುವಾರಿ ನಾಯಕ ಜಸ್‌ಪ್ರೀತ್ ಬೂಮ್ರಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.
ಈ ಪಂದ್ಯದಿಂದ ವಿಶ್ರಾಂತಿ ತೆಗೆದುಕೊಳ್ಳಲು ನಾಯಕ ರೋಹಿತ್ ಶರ್ಮಾ ನಿರ್ಧರಿಸಿದ್ದಾರೆ. ಇದರಿಂದಾಗಿ ತಂಡವನ್ನು ಬೂಮ್ರಾ ಮುನ್ನಡೆಸುತ್ತಿದ್ದಾರೆ.
ಭಾರತ ತಂಡದಲ್ಲಿ ಎರಡು ಬದಲಾವಣೆ ತರಲಾಗಿದೆ. ರೋಹಿತ್ ಶರ್ಮಾ ಸ್ಥಾನಕ್ಕೆ ಶುಭಮನ್ ಗಿಲ್ ಆಯ್ಕೆಯಾಗಿದ್ದಾರೆ. ಹಾಗೆಯೇ ಗಾಯಾಳು ಆಕಾಶ್ ದೀಪ್ ಸ್ಥಾನದಲ್ಲಿ ಕನ್ನಡಿಗ ಪ್ರಸಿದ್ಧ ಕೃಷ್ಣ ಕಾಣಿಸಿಕೊಂಡಿದ್ದಾರೆ.
ಅತ್ತ ಆಸ್ಟ್ರೇಲಿಯಾ ತಂಡದಲ್ಲಿ ಬ್ಯೂ ವೆಬ್‌ಸ್ಟರ್ ಪದಾರ್ಪಣೆ ಮಾಡಿದ್ದಾರೆ.
'ನಾಯಕ ರೋಹಿತ್ ಶರ್ಮಾ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ. ತಂಡದಲ್ಲಿ ಒಗ್ಗಟ್ಟಿದ್ದು, ಯಾವುದೇ ಸ್ವಾರ್ಥತೆ ಇಲ್ಲ' ಎಂದು ಟಾಸ್ ವೇಳೆಯಲ್ಲಿ ಜಸ್‌ಪ್ರೀತ್ ಬೂಮ್ರಾ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.