ADVERTISEMENT

ಶುಭಮನ್ ಗಿಲ್ ಜೆರ್ಸಿ ₹ 5.41 ಲಕ್ಷಕ್ಕೆ ಹರಾಜು; ಬೂಮ್ರಾ ಪೋಷಾಕಿಗೆ ಬೆಲೆ ಎಷ್ಟು?

ಏಜೆನ್ಸೀಸ್
Published 9 ಆಗಸ್ಟ್ 2025, 12:42 IST
Last Updated 9 ಆಗಸ್ಟ್ 2025, 12:42 IST
<div class="paragraphs"><p>ಟೀಂ ಇಂಡಿಯಾ ನಾಯಕ ಶುಭಮನ್‌ ಗಿಲ್‌</p></div>

ಟೀಂ ಇಂಡಿಯಾ ನಾಯಕ ಶುಭಮನ್‌ ಗಿಲ್‌

   

ಕೃಪೆ: ಪಿಟಿಐ

ಇಂಗ್ಲೆಂಡ್‌ ವಿರುದ್ಧದ 'ಆ್ಯಂಡರ್ಸನ್‌–ತೆಂಡೂಲ್ಕರ್‌ ಟ್ರೋಫಿ' ಟೆಸ್ಟ್‌ ಕ್ರಿಕೆಟ್ ಸರಣಿಯ ಲಾರ್ಡ್ಸ್‌ ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ಶುಭಮನ್‌ ಗಿಲ್‌ ಧರಿಸಿದ್ದ ಜೆರ್ಸಿ, ಬರೋಬ್ಬರಿ ₹ 5.41 ಲಕ್ಷಕ್ಕೆ ಬಿಕರಿಯಾಗಿದೆ.

ADVERTISEMENT

'Red For Ruth charity' ನಡೆಸಿದ ಹರಾಜಿನಲ್ಲಿ, ಎರಡೂ ತಂಡಗಳ ಆಟಗಾರರು ಸಹಿ ಮಾಡಿದ್ದ ಶರ್ಟ್‌ಗಳು, ಕ್ಯಾಪ್‌ಗಳು, ಬ್ಯಾಟ್‌ಗಳು, ಭಾವಚಿತ್ರಗಳು, ಟಿಕೆಟ್‌ಗಳು ಸೇರಿದಂತೆ ಹಲವು ವಸ್ತುಗಳ ಪೈಕಿ ಇದು ಅತ್ಯಂತ ದುಬಾರಿ ಎನಿಸಿದೆ.

ಹರಾಜಿನಲ್ಲಿ ಭಾರತದ ಆಟಗಾರರ ವಸ್ತುಗಳೇ ಅತಿ ಹೆಚ್ಚು ಬೆಲೆ ಪಡೆದುಕೊಂಡಿರುವುದು ವಿಶೇಷ.

ವೇಗದ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ ಹಾಗೂ ಆಲ್‌ರೌಂಡರ್‌ ರವೀಂದ್ರ ಜಡೇಜ ಅವರ ಜೆರ್ಸಿಗಳು ತಲಾ ₹ 4.94 ಲಕ್ಷಕ್ಕೆ ಮಾರಾಟವಾಗಿದೆ. ಕೆ.ಎಲ್‌. ರಾಹುಲ್‌ ಅವರದ್ದು ₹ 4.70 ಲಕ್ಷ ಗಿಟ್ಟಿಸಿದೆ.

ಇಂಗ್ಲೆಂಡ್‌ ತಂಡದ ಆಟಗಾರರ ಪೈಕಿ ಹೆಚ್ಚು ಮೊತ್ತಕ್ಕೆ ಹರಾಜಾಗಿರುವುದು ಜೋ ರೂಟ್‌ ಅವರ ಪೋಷಾಕು. ₹ 4.47 ಲಕ್ಷಕ್ಕೆ ಮಾರಾಟವಾಗಿದೆ. ಉಳಿದಂತೆ, ನಾಯಕ ಬೆನ್‌ ಸ್ಟೋಕ್ಸ್‌ ಜೆರ್ಸಿ ₹ 4 ಲಕ್ಷ ಗಳಿಸಿದೆ.

ಕ್ಯಾಪ್‌ಗಳ ಪೈಕಿ ರೋಟ್‌ ಅವರು ಸಹಿ ಮಾಡಿರುವುದು ಬರೋಬ್ಬರಿ ₹ 3.52 ಲಕ್ಷಕ್ಕೆ ಮಾರಾಟವಾಗಿದೆ. ರಿಷಭ್‌ ಪಂತ್‌ ಅವರದ್ದು ₹ 1.76 ಲಕ್ಷಕ್ಕೆ ಹರಾಜಾಗಿದೆ.

ಒಟ್ಟಾರೆ ಈ ಬಿಡ್‌ನಲ್ಲಿ 2019ರ ವಿಶ್ವಕಪ್‌ ಗೆಲುವಿನ ಕ್ಷಣವನ್ನು ಪೇಯಿಂಟ್‌ ಮಾಡಿದ್ದ ಕಲಾವಿದ ಸಚಾ ಜಫ್ರಿ ಅವರ ಕಲಾಕೃತಿ ₹ 5.88 ಲಕ್ಷ ಗಳಿಸಿಕೊಂಡಿದೆ.

ಸರಣಿ ಸಮಬಲ
ಇತ್ತೀಚೆಗೆ ಮುಕ್ತಾಯವಾದ ಐದು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 2–2 ಅಂತರದ ಸಮಬಲ ಸಾಧಿಸಿವೆ.

ಲೀಡ್ಸ್‌ನಲ್ಲಿ ನಡೆದ ಮೊದಲ ಪಂದ್ಯವನ್ನು ಇಂಗ್ಲೆಂಡ್‌, 5 ವಿಕೆಟ್‌ಗಳಿಂದ ಗೆದ್ದಿತ್ತು. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ತಿರುಗೇಟು ನೀಡಿದ್ದ ಭಾರತ, 336 ರನ್ ಅಂತರದ ಜಯ ಸಾಧಿಸಿತ್ತು.

'ಕ್ರಿಕೆಟ್‌ ಕಾಶಿ' ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಪಂದ್ಯವನ್ನು ಇಂಗ್ಲೆಂಡ್‌, 22 ರನ್‌ಗಳಿಂದ ಜಯಿಸಿತ್ತು. ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಪಂದ್ಯ ಡ್ರಾ ಆಗಿತ್ತು.

ಕೆನ್ನಿಂಗ್ಟನ್‌ ಓವಲ್‌ನಲ್ಲಿ ನಡೆದ ಐದನೇ ಪಂದ್ಯವನ್ನು ಕೇವಲ 6 ರನ್‌ ಅಂತರದಿಂದ ಗೆದ್ದ ಭಾರತ, ಸರಣಿಯಲ್ಲಿ ಸಮಬಲ ಸಾಧಿಸಿತ್ತು.

ಕ್ಯಾನ್ಸರ್‌ ಜಾಗೃತಿ, ಚಿಕಿತ್ಸೆಗಾಗಿ..
'Red For Ruth' ಎಂಬುದು ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ ಆ್ಯಂಡ್ರೋ ಸ್ಟ್ರಾಸ್‌ ಅವರ ಫೌಂಡೇಷನ್‌. ಕ್ಯಾನ್ಸರ್‌ನಿಂದ ಮೃತಪಟ್ಟ ತಮ್ಮ ಪತ್ನಿ ರುಥ್‌ ಸ್ಟ್ರಾಸ್‌ ಅವರ ಸ್ಮರಣಾರ್ಥ ಫೌಂಡೇಷನ್‌ ವತಿಯಿಂದ ಪ್ರತಿವರ್ಷ ಲಾರ್ಡ್ಸ್‌ನಲ್ಲಿ ಹರಾಜು ನಡೆಸಲಾಗುತ್ತಿದೆ.

ಹರಾಜಿನಿಂದ ಬಂದ ಹಣವನ್ನು ಕ್ಯಾನ್ಸರ್‌ ಜಾಗೃತಿ, ಚಿಕಿತ್ಸೆಗಾಗಿ ಬಳಸಲಾಗುತ್ತಿದೆ. ಕಳೆದ ಆರು ವರ್ಷಗಳಲ್ಲಿ ಸುಮಾರು 3,500 ಕುಟುಂಬಗಳಿಗೆ ನೆರವು ನೀಡಿರುವುದಾಗಿ ಮತ್ತು ಸಾವಿರಕ್ಕೂ ಹೆಚ್ಚು ವೃತ್ತಿಪರರಿಗೆ ತರಬೇತಿ ನೀಡಿರುವುದಾಗಿ ಫೌಂಡೇಷನ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.