ನವದೆಹಲಿ: ಐಸಿಸಿ 19 ವರ್ಷದೊಳಗಿನವರ ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿರುವ ಭಾರತ ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಗಣ್ಯರು ಅಭಿನಂದನೆ ತಿಳಿಸಿದ್ದಾರೆ.
‘ನಮ್ಮ ನಾರಿ ಶಕ್ತಿಯ ಬಗ್ಗೆ ಅಪಾರ ಹೆಮ್ಮೆ! ಐಸಿಸಿ 19 ವರ್ಷದೊಳಗಿನವರ ಟಿ20 ವಿಶ್ವಕಪ್ 2025ರಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದ್ದಕ್ಕಾಗಿ ಭಾರತೀಯ ತಂಡಕ್ಕೆ ಅಭಿನಂದನೆಗಳು. ಈ ಗೆಲುವು ನಮ್ಮ ತಂಡದ ಅತ್ಯುತ್ತಮ ಸಾಂಘಿಕ ನಿರ್ವಹಣೆ, ದೃಢಸಂಕಲ್ಪ ಮತ್ತು ಧೈರ್ಯದ ಫಲಿತಾಂಶವಾಗಿದೆ. ಇದು ಮುಂಬರುವ ಹಲವಾರು ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ. ತಂಡದ ಮುಂದಿನ ಪ್ರಯತ್ನಗಳಿಗಾಗಿ ನನ್ನ ಶುಭಾಶಯಗಳು’ ಎಂದು ಪ್ರಧಾನಿ ನರೇಂದ್ರ ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಭಾರತದ 19 ವರ್ಷದೊಳಗಿನವರ ಮಹಿಳಾ ಕ್ರಿಕೆಟ್ ತಂಡಕ್ಕೆ ಐತಿಹಾಸಿಕ ಗೆಲುವು! ಟಿ20 ವಿಶ್ವಕಪ್‌ನಲ್ಲಿ ದೇಶಕ್ಕೆ ಕೀರ್ತಿ ತಂದಿದ್ದಕ್ಕಾಗಿ ಈ ಯುವ ಚಾಂಪಿಯನ್‌ಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಧೈರ್ಯ, ದೃಢತೆ ಮತ್ತು ಉತ್ಸಾಹ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತದೆ. ಭಾರತೀಯ ಕ್ರಿಕೆಟ್‌ಗೆ ಹೆಮ್ಮೆಯ ಕ್ಷಣ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ನಿಜವಾದ ಚಾಂಪಿಯನ್ಸ್!! ಭಾರತದ 19 ವರ್ಷದೊಳಗಿನವರ ಮಹಿಳಾ ಕ್ರಿಕೆಟ್ ತಂಡದ ಉತ್ತಮ ಪ್ರದರ್ಶನ ಮತ್ತು ಟಿ20 ವಿಶ್ವಕಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಕ್ಕೆ ಅಭಿನಂದನೆಗಳು. ಟೂರ್ನಿಯುದ್ದಕ್ಕೂ ಭಾರತ ತಂಡದ ಅಜೇಯ ಓಟ, ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನಲ್ಲಿ ಪರಾಕಾಷ್ಠೆಯಾಯಿತು. ತಂಡದ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಭಾರತಕ್ಕೆ ಐತಿಹಾಸಿಕ ಜಯ! ನಮ್ಮ ಮಹಿಳಾ ತಂಡದ ಆಟಗಾರ್ತಿಯರು ಟಿ20 ವಿಶ್ವಕಪ್ ಅನ್ನು ಸಂಪೂರ್ಣ ನಿರ್ಣಯ ಮತ್ತು ಅಸಾಧಾರಣ ಪ್ರತಿಭೆಯೊಂದಿಗೆ ಗೆದ್ದಿದ್ದಾರೆ. ಈ ಗೆಲುವು ಅವರ ಕಠಿಣ ಪರಿಶ್ರಮ ಮತ್ತು ಹೋರಾಟದ ಮನೋಭಾವಕ್ಕೆ ಸಾಕ್ಷಿಯಾಗಿದೆ. ಕರ್ನಾಟಕದ ನಿಕಿ ಪ್ರಸಾದ್ ಅವರು ನಾಯಕಿಯಾಗಿ ತಂಡವನ್ನು ಮುನ್ನಡೆಸುತ್ತಿರುವುದನ್ನು ಕಂಡು ಹೆಮ್ಮೆಯಾಗಿದೆ. ಅವರ ನಾಯಕತ್ವ ಮತ್ತು ಸಮರ್ಪಣೆ ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ಇಡೀ ತಂಡಕ್ಕೆ ಅಭಿನಂದನೆಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಹಾಲಿ ಚಾಂಪಿಯನ್ ಭಾರತ ತಂಡವು ಇಂದು ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ, 20 ಓವರ್‌ಗಳಲ್ಲಿ 82 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. 83 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ 11.2 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಭಾರತ ತಂಡವನ್ನು ಕರ್ನಾಟಕದ ಆಟಗಾರ್ತಿ ನಿಕಿ ಪ್ರಸಾದ್ ಮುನ್ನಡೆಸಿದ್ದರು. ಈಗ ಸ್ಮರಣೀಯ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.