ADVERTISEMENT

IPL 2025: RCB ಎದುರು CSK ಸೋತದ್ದೇಕೆ? ಕೋಚ್ ಫ್ಲೆಮಿಂಗ್ ನೀಡಿದ ವಿವರಣೆ ಏನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮಾರ್ಚ್ 2025, 6:55 IST
Last Updated 29 ಮಾರ್ಚ್ 2025, 6:55 IST
<div class="paragraphs"><p>ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ನಾಯಕ ಎಂ.ಎಸ್‌. ಧೋನಿ ಹಾಗೂ ಕೋಚ್‌ ಸ್ಫೀಫನ್‌ ಫ್ಲೆಮಿಂಗ್‌</p></div>

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ನಾಯಕ ಎಂ.ಎಸ್‌. ಧೋನಿ ಹಾಗೂ ಕೋಚ್‌ ಸ್ಫೀಫನ್‌ ಫ್ಲೆಮಿಂಗ್‌

   

ಸಂಗ್ರಹ ಚಿತ್ರ – ಪಿಟಿಐ

ಚೆನ್ನೈ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ 50 ರನ್‌ ಅಂತರದ ಸೋಲು ಎದುರಾದ ಕುರಿತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ (ಸಿಎಸ್‌ಕೆ) ಕೋಚ್‌ ಸ್ಫೀಫನ್‌ ಫ್ಲೆಮಿಂಗ್‌ ಮಾತನಾಡಿದ್ದಾರೆ. ತಮ್ಮ ತಂಡ ಎಡವಿದ್ದು ಎಲ್ಲಿ ಎಂದು ವಿವರಿಸಿದ್ದಾರೆ.

ADVERTISEMENT

ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದ ಪಿಚ್‌ನ ಸ್ವಭಾವವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಆಗದೇ ಇದ್ದದ್ದು ಹಾಗೂ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳದ ಕಾರಣ ಬೆಲೆ ತೆರಬೇಕಾಯಿತು ಎಂದು ಅವರು ಹೇಳಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಪಂದ್ಯದ ಬಳಿಕ ಮಾತನಾಡಿರುವ ಅವರು, 'ನಾವು ಪಿಚ್‌ ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ಇಬ್ಬನಿ ಸುರಿದರೆ ಚೆಂಡು ಜಾರಲಿದೆ ಎಂದುಕೊಂಡಿದ್ದೆವು. ಆದರೆ, ಹಾಗಾಗಲಿಲ್ಲ. ಕೆಲವು ಅವಕಾಶಗಳನ್ನು (ಕ್ಯಾಚ್‌ಗಳನ್ನು) ಕೈಚೆಲ್ಲಿದೆವು. ಅವರು (ಆರ್‌ಸಿಬಿ) ಕಷ್ಟಪಟ್ಟು ಆಡಿದರು. ಅವರನ್ನು ಹಿಮ್ಮೆಟ್ಟಿಸಲು ಸಿಕ್ಕ ಅವಕಾಶಗಳನ್ನು ಕೈಚೆಲ್ಲಿ, ಮುಂದೆ ಹೋಗಲು ಬಿಟ್ಟೆವು. ಆ ತಂಡವನ್ನು 175 ರನ್‌ಗಳಿಗೆ ನಿಯಂತ್ರಿಸಲು ಸಾಧ್ಯವಿತ್ತು. ಆದರೆ, ನಮ್ಮ ಆಟ ಉತ್ತಮವಾಗಿರಲಿಲ್ಲ' ಎಂದು ತಿಳಿಸಿದ್ದಾರೆ.

'ಚೆಪಾಕ್‌ (ಎಂ.ಎ. ಚಿದಂಬರಂ) ಕ್ರೀಡಾಂಗಣದಲ್ಲಿ ತವರಿನ ಅನುಕೂಲವೇನೂ ಆಗಲಿಲ್ಲ. ತವರಿನ ಹೊರಗೆಯೇ ಒಂದೆರಡು ಸಲ ಗೆದ್ದಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ ಇಲ್ಲಿನ ಪಿಚ್‌ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಇಂದಿನ ಫಲಿತಾಂಶ ಹೊಸದಲ್ಲ' ಎಂದಿದ್ದಾರೆ.

ಹಾಗೆಯೇ, ಚೆಪಾಕ್‌ ಈಗ, ನೇರವಾಗಿ ನಾಲ್ವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಪಿಚ್‌ ಅಲ್ಲ. ನಾವು, ಪ್ರತಿ ಪಿಚ್‌ ಅನ್ನು ಅರ್ಥ ಮಾಡಿಕೊಳ್ಳಬೇಕಿದೆ. ಸಾಮರ್ಥ್ಯವನ್ನು ಉತ್ತಮ ಪಡಿಸಿಕೊಳ್ಳುವುದು ಹಾಗೂ ಯಾವುದೇ ಪಿಚ್‌ನಲ್ಲಿ ಹೋರಾಟ ನಡೆಸುತ್ತೇವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

5 ಬಾರಿ ಪ್ರಶಸ್ತಿ ಗೆದ್ದು, ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ ಎನಿಸಿರುವ ಚೆನ್ನೈ ತನ್ನ ಮುಂದಿನ ಪಂದ್ಯವನ್ನು ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಭಾನುವಾರ (ನಾಳೆ) ಆಡಲಿದೆ.

17 ವರ್ಷದ ಬಳಿಕ ಸೋಲು
ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 196 ರನ್‌ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಸಿಎಸ್‌ಕೆ, 8 ವಿಕೆಟ್‌ಗೆ 146 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದು ತವರಿನಲ್ಲಿ ಆರ್‌ಸಿಬಿ ಎದುರು ಸಿಎಸ್‌ಕೆಗೆ ಎದುರಾದ ಎರಡನೇ ಸೋಲು.

ಐಪಿಎಲ್‌ನ ಮೊದಲ ಆವೃತ್ತಿಯ (2008ರ) ಪಂದ್ಯದಲ್ಲಿ ಆರ್‌ಸಿಬಿ ಎದುರು ಮುಗ್ಗರಿಸಿದ್ದ ಸಿಎಸ್‌ಕೆ, ನಂತರ ಆಡಿದ ಸತತ 8 ಪಂದ್ಯಗಳಲ್ಲಿ ಜಯ ಸಾಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.