ಐಪಿಎಲ್ 2025 ಟ್ರೋಫಿಯೊಂದಿಗೆ ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟೀದಾರ್
ಪಿಟಿಐ ಚಿತ್ರ
ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಚೊಚ್ಚಲ ಟ್ರೋಫಿ ಗೆದ್ದುಕೊಟ್ಟ ನಾಯಕ ಎನಿಸಿರುವ ರಜತ್ ಪಾಟೀದಾರ್ ಅವರು ವಿರಾಟ್ ಕೊಹ್ಲಿ ಕುರಿತು ಮಾತನಾಡಿದ್ದಾರೆ.
ಮೊಟೆರಾದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮಂಗಳವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿದ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿರುವ ರಜತ್, ಅಭಿಮಾನಿಗಳನ್ನುದ್ದೇಶಿಸಿ 'ಈ ಸಲ ಕಪ್ ನಮ್ಮದು' ಎಂದು ಹೇಳಿದ್ದಾರೆ.
ಟ್ರೋಫಿ ಎತ್ತಿ ಹಿಡಿಯಲು 'ವಿರಾಟ್ ಕೊಹ್ಲಿ ಬೇರೆಲ್ಲರಿಗಿಂತಲೂ ಹೆಚ್ಚು ಅರ್ಹರು' ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ವೇಳೆ, ಕ್ರೀಡಾಂಗಣದಲ್ಲಿದ್ದ ಸರಿಸುಮಾರು ಒಂದು ಲಕ್ಷ ಪ್ರೇಕ್ಷಕರು ಹರ್ಷೋದ್ಘಾರ ಮಾಡಿದ್ದಾರೆ.
'ಇದು (ಗೆಲುವು) ನನಗೆ, ವಿರಾಟ್ ಕೊಹ್ಲಿ ಹಾಗೂ ಎಲ್ಲ ಅಭಿಮಾನಿಗಳ ಪಾಲಿಗೆ ನಿಜಕ್ಕೂ ವಿಶೇಷವಾದದ್ದು. ಹಲವು ವರ್ಷಗಳಿಂದ ನಮ್ಮನ್ನು ಬೆಂಬಲಿಸಿದ ಅಭಿಮಾನಿಗಳು ಖಂಡಿತಾ ಇದಕ್ಕೆ (ಚಾಂಪಿಯನ್ ಪಟ್ಟಕ್ಕೆ) ಅರ್ಹರು. ಕೊಹ್ಲಿಗೆ ನಾಯಕತ್ವ ವಹಿಸಿದ್ದು ನನಗಂತೂ ಖಂಡಿತ ದೊಡ್ಡ ಅವಕಾಶ. ಉತ್ತಮ ಕಲಿಕೆಯೂ ಹೌದು. ಅವರು ಬೇರೆಲ್ಲರಿಗಿಂತಲೂ ಹೆಚ್ಚು ಅರ್ಹರು' ಎಂದು ಹೇಳಿದ್ದಾರೆ.
ವಿರಾಟ್ ಕೂಡ ರಜತ್ ನಾಯಕತ್ವವನ್ನು ಶ್ಲಾಘಿಸಿದ್ದಾರೆ.
'ರಜತ್ ಮುಂದೆ ನಿಂತು, ಶಾಂತಚಿತ್ತರಾಗಿ ತಂಡ ಮುನ್ನಡೆಸಿದರು. ಬೌಲಿಂಗ್‌ನಲ್ಲಿನ ಬದಲಾವಣೆಗಳು, ಶಾಂತ ಮನಸ್ಥಿತಿ ಅದ್ಭುತವಾಗಿತ್ತು' ಎಂದಿದ್ದಾರೆ.
ಗಾಯಾಳು ಆಟಗಾರನ ಬದಲು ತಂಡ ಕೂಡಿಕೊಂಡಾಗಿನಿಂದ ನಾಯಕನಾಗಿ ಪ್ರಶಸ್ತಿಯೆಡೆಗೆ ತಂಡವನ್ನು ಮುನ್ನಡೆಸುವವರೆಗೆ ರಜತ್ ಸಾಗಿದ ಹಾದಿ ರೋಚಕ ಎಂದು ಹೇಳಿದ್ದಾರೆ.
2022ರಲ್ಲಿ ಲವನೀತ್ ಸಿಸೋಡಿಯಾ ಅವರು ಗಾಯಗೊಂಡು ಹೊರಬಿದ್ದ ಕಾರಣ ಆರ್‌ಸಿಬಿ ಸೇರಿಕೊಂಡ ರಜತ್, ನಂತರ ಭರವಸೆ ಮೂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.