ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಔಟಾಗಿ ಪೆವಿಲಿಯನ್‌ನತ್ತ ಹೊರಟ ಎಂ.ಎಸ್. ಧೋನಿ
ಪಿಟಿಐ ಚಿತ್ರ
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಶನಿವಾರ ನಡೆದ ರೋಚಕ ಪಂದ್ಯದಲ್ಲಿ ಎದುರಾದ ಅಲ್ಪ ಅಂತರದ ಸೋಲಿನ ಹೊಣೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್. ಧೋನಿ ಹೊತ್ತುಕೊಂಡಿದ್ದಾರೆ.
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ವಿರಾಟ್ ಕೊಹ್ಲಿ (62 ರನ್), ಜಾಕೊಬ್ ಬೆಥೆಲ್ (55 ರನ್) ಮತ್ತು ರೊಮೆರಿಯೊ ಶೆಫರ್ಡ್ (ಅಜೇಯ 53 ರನ್) ಸಿಡಿಸಿದ ಬಿರುಸಿನ ಅರ್ಧಶತಕಗಳ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 213 ರನ್ ಗಳಿಸಿತ್ತು.
ಕಠಿಣ ಗುರಿ ಬೆನ್ನತ್ತಿದ ಚೆನ್ನೈ ಇನಿಂಗ್ಸ್‌ಗೆ ಆಯುಷ್ ಮ್ಹಾತ್ರೆ ಬಲ ತುಂಬಿದರು. 48 ಎಸೆತಗಳಲ್ಲಿ 94 ರನ್ ಗಳಿಸಿದ ಅವರು 17ನೇ ಓವರ್‌ನ 2ನೇ ಎಸೆತದಲ್ಲಿ ಔಟಾದರು. ನಂತರ ಡೇವಿಡ್ ಬ್ರೇವಿಸ್ ಗೋಲ್ಡನ್ ಡಕ್ ಆದರು.
ಗೆಲ್ಲಲು 21 ಎಸೆತಗಳಲ್ಲಿ 42 ರನ್ ಬೇಕಿದ್ದಾಗ ಕ್ರೀಸ್‌ಗಿಳಿದ ಧೋನಿ 8 ಎಸೆತಗಳಲ್ಲಿ 12 ರನ್ ಗಳಿಸಿ ಔಟಾದರು. ಕೊನೆವರೆಗೂ ಹೋರಾಡಿದ ರವೀಂದ್ರ ಜಡೇಜ 45 ಎಸೆತಗಳಲ್ಲಿ 77 ರನ್ ಗಳಿಸಿದರೂ, ತಮ್ಮ ತಂಡಕ್ಕೆ ಜಯ ತಂದುಕೊಡಲು ಆಗಲಿಲ್ಲ.
ಅಂತಿಮವಾಗಿ ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ಗೆ 211 ರನ್ ಗಳಿಸಿದ ಸಿಎಸ್‌ಕೆ, 2 ರನ್ ಅಂತರದ ಸೋಲೊಪ್ಪಿಕೊಳ್ಳಬೇಕಾಯಿತು.
ಪಂದ್ಯದ ನಂತರ ಮಾತನಾಡಿದ ಧೋನಿ, ತಂಡದ ಮೇಲಿನ ಒತ್ತಡ ಕಡಿಮೆ ಮಾಡಲು ತಾವು ಒಂದೆರಡು ದೊಡ್ಡ ಹೊಡೆತ ಪ್ರಯೋಗಿಸಬೇಕಿತ್ತು ಎಂದು ಹೇಳಿದ್ದಾರೆ.
'ಆಪಾದನೆಯನ್ನು ನಾನೇ ಹೊರುತ್ತೇನೆ' ಎನ್ನುತ್ತಾ ಮಾತು ಶುರು ಮಾಡಿದ ಅವರು, 'ನಾನು ಕ್ರೀಸ್‌ಗೆ ಇಳಿದಾಗ ಎದುರಿಸಿದ ಎಸೆತಗಳಲ್ಲಿ ರನ್ ಗಳಿಸಬೇಕಿತ್ತು. ಒತ್ತಡವನ್ನು ಕಡಿಮೆ ಮಾಡಲು ಇನ್ನೂ ಒಂದೆರಡು ಎಸೆತಗಳನ್ನು ದೊಡ್ಡ ಹೊಡೆತಗಳಾಗಿ ಪರಿವರ್ತಿಸಬೇಕಿತ್ತು' ಎಂದಿದ್ದಾರೆ.
ಕೆಳಮಟ್ಟದಲ್ಲಿ ಬರುವ ಫುಲ್‌ಟಾಸ್ ಎಸೆತಗಳನ್ನು ಹೆಚ್ಚಿನ ಬ್ಯಾಟರ್‌ಗಳು ಸಮರ್ಥವಾಗಿ ಎದುರಿಸಲಾರರು ಎಂದಿರುವ ಧೋನಿ, ಆಧುನಿಕ ಕಾಲ ಘಟ್ಟದಲ್ಲಿ ಬ್ಯಾಟರ್‌ಗಳು ಅದನ್ನು ಅಭ್ಯಾಸ ಮಾಡಬೇಕಿದೆ ಎಂದು ಕಿವಿಮಾತು ಹೇಳಿದ್ದಾರೆ. ಹಾಗೆಯೇ, ತಮ್ಮ ತಂಡದ ಬ್ಯಾಟರ್‌ಗಳು ಆ ರೀತಿಯ ಹೊಡೆತಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ.
ಜಡೇಜ ಉತ್ತಮ ಹೊಡೆತಗಳನ್ನು ಪ್ರಯೋಗಿಸಿದರೂ, ಕೆಳಗೆ ಆಡಲು ಒತ್ತು ನೀಡಿದರು. ಟೂರ್ನಿಯಲ್ಲಿ ನಾವು ಬ್ಯಾಟಿಂಗ್‌ನಲ್ಲಿ ಹಿನ್ನಡೆ ಅನುಭವಿಸಿದ್ದೇವೆ. ಆದರೆ, ಒಂದು ವಿಭಾಗವಾಗಿ ಇಂದು ಚೆನ್ನಾಗಿಯೇ ಬ್ಯಾಟಿಂಗ್ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಇದೇವೇಳೆ ಮಾತನಾಡಿದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್, ಜಯದ ಶ್ರೇಯವನ್ನು ಬ್ಯಾಟರ್‌ಗಳು ಮತ್ತು ವೇಗಿ ಯಶ್ ದಯಾಳ್‌ಗೆ ನೀಡಿದರು.
ಕೊನೇ ಓವರ್‌ನಲ್ಲಿ ಗೆಲ್ಲಲು 15 ರನ್ ಬೇಕಿದ್ದಾಗ ಬೌಲಿಂಗ್ ಮಾಡಿದ ದಯಾಳ್, ಒಂದು ಸಿಕ್ಸರ್ ಬಿಟ್ಟುಕೊಟ್ಟರೂ ಧೋನಿ ವಿಕೆಟ್ ಸಹಿತ 12 ರನ್ ಬಿಟ್ಟುಕೊಟ್ಟು ತಂಡದ ಜಯಕ್ಕೆ ಕಾರಣರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.