ADVERTISEMENT

ಕಾಲ್ತುಳಿತ ದುರಂತ | ಒತ್ತಡ ಸೃಷ್ಟಿಸಿದ್ದ 'ಈ ಸಲ ಕಪ್ ನಮ್ದೇ' ಘೋಷಣೆ: ಗವಾಸ್ಕರ್

ಏಜೆನ್ಸೀಸ್
Published 9 ಜೂನ್ 2025, 10:48 IST
Last Updated 9 ಜೂನ್ 2025, 10:48 IST
<div class="paragraphs"><p>ಎಂ. ಚಿನ್ನಸ್ವಾಮಿ ಕ್ರೀಡಾಂಗಣ </p></div>

ಎಂ. ಚಿನ್ನಸ್ವಾಮಿ ಕ್ರೀಡಾಂಗಣ

   

-ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಆಡುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಕ್ರಿಕೆಟ್‌ ದಿಗ್ಗಜ ಸುನಿಲ್‌ ಗವಾಸ್ಕರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಚಾಂಪಿಯನ್‌ ಪಟ್ಟಕ್ಕೇರಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜೂನ್‌ 3ರಂದು ನಡೆದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು 6 ರನ್‌ ಗಳಿಂದ ಮಣಿಸಿತ್ತು. ಆರ್‌ಸಿಬಿಯು, ಈ ಲೀಗ್‌ನಲ್ಲಿ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

ಕರ್ನಾಟಕ ಮಾತ್ರಲ್ಲದೆ, ದೇಶ–ವಿದೇಶಗಳಲ್ಲಿಯೂ ಸಂಭ್ರಮಾಚರಣೆಗಳು ನಡೆದಿದ್ದವು.

ಫೈನಲ್ ಪಂದ್ಯದ ಮರುದಿನವೇ ಬೆಂಗಳೂರಿನಲ್ಲಿ ಆಟಗಾರರ ವಿಜಯೋತ್ಸವ ಮೆರವಣಿಗೆ ನಡೆಸುವುದಾಗಿ ಹಾಗೂ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಸುವುದಾಗಿ ಆರ್‌ಸಿಬಿ ಘೋಷಿಸಿತ್ತು. ಹೀಗಾಗಿ, ಅತ್ಯುತ್ಸಾಹದಲ್ಲಿದ್ದ ಲಕ್ಷಾಂತರ ಅಭಿಮಾನಿಗಳು ಕ್ರೀಡಾಂಗಣದ ಬಳಿ ಜಮಾಯಿಸಿದ್ದರು. ಈ ವೇಳೆ ಕ್ರೀಡಾಂಗಣದ ಗೇಟ್‌ ಬಳಿ ಕಾಲ್ತುಳಿತ ಉಂಟಾಗಿ 11 ಮಂದಿ ಮೃತಪಟ್ಟು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಕುರಿತು ಗವಾಸ್ಕರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಎಂಥಾ ದುರಂತ? ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಕಾಲ್ತುಳಿತದಲ್ಲಿ ಜೀವಹಾನಿಯಾದದ್ದು ಹೃದಯ ವಿದ್ರಾವಕ. ಅವರೆಲ್ಲರೂ ಹಲವು ವರ್ಷಗಳಿಂದ, ಅದರಲ್ಲೂ ಕಳೆದೆರಡು ತಿಂಗಳಿನಿಂದ ಅಪಾರ ಸಂತೋಷ ನೀಡಿದ್ದ ಆಟಗಾರರನ್ನು ಕಾಣಲು ಬಯಸಿದ್ದರು. ಅಭಿಮಾನಿಗಳು ಪ್ರತಿವರ್ಷವೂ ನಮ್ಮದಾಗಬೇಕು ಎಂದು ಬಯಸಿದ್ದ ಐಪಿಎಲ್‌ ಟ್ರೋಫಿ, 18 ವರ್ಷಗಳ ಕಾಯುವಿಕೆಯ ನಂತರ ಒಲಿದಿತ್ತು' ಎಂದು 'ಮಿಡ್-ಡೇ'ಗೆ ಬರೆದ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

'ಆರ್‌ಸಿಬಿ ತಂಡವೇನಾದರೂ ಲೀಗ್‌ ಆರಂಭವಾದ ಮೊದಲ ಕೆಲವು ವರ್ಷಗಳಲ್ಲೇ ಪ್ರಶಸ್ತಿ ಗೆದ್ದಿದ್ದರೆ, ಭಾವನೆಗಳು ಪ್ರವಾಹದಂತೆ ಹೊರಹೊಮ್ಮುತ್ತಿರಲಿಲ್ಲ. ಬೇರೆ ತಂಡಗಳು ಪ್ರಶಸ್ತಿ ಗೆದ್ದಾಗ, ಆ ತಂಡಗಳ ಅಭಿಮಾನಿಗಳು ಇಷ್ಟು ಭಾವಾವೇಶಕ್ಕೆ ಒಳಗಾಗುವುದಿಲ್ಲ. ಏಕೆಂದರೆ, ಅವರು ಇಷ್ಟು ದೀರ್ಘ ಸಮಯದ ವರೆಗೆ ಕಾಯ್ದಿರುವುದಿಲ್ಲ' ಎಂದು ಹೇಳಿದ್ದಾರೆ. ಆ ಮೂಲಕ, ಅಭಿಮಾನಿಗಳು ಭಾವೋದ್ವೇಗಕ್ಕೊಳಗಾದದ್ದು ದುಂರಂತಕ್ಕೆ ಎಡೆಮಾಡಿಕೊಟ್ಟಿತು ಎಂದಿದ್ದಾರೆ.

ಆರ್‌ಸಿಬಿಯ 'ಈ ಸಲ ಕಪ್‌ ನಮ್ದೇ' ಘೋಷಣೆಯು ಆಟಗಾರರನ್ನು ಹುರಿದುಂಬಿಸುವ ಬದಲು ಕೆಲವು ವರ್ಷಗಳಿಂದ ಒತ್ತಡ ಸೃಷ್ಟಿಸುತ್ತಿತ್ತು ಎಂದು ಗವಾಸ್ಕರ್‌ ಪ್ರತಿಪಾದಿಸಿದ್ದಾರೆ.

'ಈ ಸಲ ಕಪ್‌ ನಮ್ದೇ' ಘೋಷಣೆ ಈ ಆವೃತ್ತಿಯ ಆರಂಭದಲ್ಲಿ ಹೆಚ್ಚಾಗಿ ಕೇಳಿಬರಲಿಲ್ಲ. ಹಾಗಾಗಿಯೇ, ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದರು. ತವರಿನ ಆಚೆ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಜಯದ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.