ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್‌ರೈಡರ್ಸ್
ಪಿಟಿಐ ಚಿತ್ರ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್‌ನ 18ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಕೋಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿ ಮಾರ್ಚ್ 22ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿವೆ.
'ಚೆಂಡು ಇರುವುದೇ ದಂಡಿಸಲಿಕ್ಕೆ' ಎಂಬಂತೆ ಬ್ಯಾಟ್ ಬೀಸುವ ಸಾಕಷ್ಟು ಹೊಡಿಬಡಿ ದಾಂಡಿಗರು ಐಪಿಎಲ್ ಅಂಗಳದಲ್ಲಿ ಹೆಸರು ಮಾಡಿದ್ದಾರೆ. ವೆಸ್ಟ್‌ಇಂಡೀಸ್‌ನ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ಐಪಿಎಲ್‌ನಲ್ಲಿ ಅತ್ಯುತ್ತಮ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ದಾಖಲೆ ಹೊಂದಿದ್ದಾರೆ. 126 ಪಂದ್ಯಗಳ 105 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಅವರು 174.92ರ ಸ್ಟ್ರೈಕ್‌ರೇಟ್‌ನಲ್ಲಿ 2,484 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಹೆನ್ರಿಚ್ ಕ್ಲಾಸೆನ್ (32 ಇನಿಂಗ್ಸ್, 168.30 ಸ್ಟ್ರೈಕ್‌ರೇಟ್, 993 ರನ್) ಮತ್ತು ವಿಂಡೀಸ್‌ನ ಸುನೀಲ್ ನರೇನ್ (110 ಇನಿಂಗ್ಸ್, 165.83 ಸ್ಟ್ರೈಕ್‌ರೇಟ್, 1,534 ರನ್) ನಂತರದ ಸ್ಥಾನಗಳಲ್ಲಿ ಇದ್ದಾರೆ.
ಆದರೆ, ಡೆತ್ (16–20) ಓವರ್‌ಗಳಲ್ಲಿ ವೇಗವಾಗಿ ರನ್ ಗಳಿಸಿದ ಖ್ಯಾತಿ ಇರುವುದು ಆರ್‌ಸಿಬಿಯ 'ಸ್ಟಾರ್', ಹರಿಣಗಳ ನಾಡಿನ ಸ್ಫೋಟಕ ಬ್ಯಾಟರ್ ಎಬಿ ಡಿ ವಿಲಿಯರ್ಸ್ ಅವರ ಹೆಸರಲ್ಲಿ.
ಡೆತ್ ಓವರ್‌ಗಳಲ್ಲಿ ಅತ್ಯುತ್ತಮ ಸ್ಟ್ರೈಕ್‌ರೇಟ್ ಹೊಂದಿರುವ ಐವರು (ಕನಿಷ್ಠ 500 ರನ್)
* ಎಬಿ ಡಿ ವಿಲಿಯರ್ಸ್
ಡೆತ್ ಓವರ್‌ಗಳಲ್ಲಿ 232.57 ಸ್ಟ್ರೈಕ್‌ರೇಟ್‌ನಲ್ಲಿ 1,421 ರನ್ ಗಳಿಸಿರುವ ವಿಲಿಯರ್ಸ್, ಎಂತಹ ಬೌಲರ್‌ಗೂ ನಡುಕು ಹುಟ್ಟಿಸಬಲ್ಲ ಬ್ಯಾಟರ್. ಸದ್ಯ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಅವರು, ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್‌ಸಿಬಿ ಪರ ಆಡಿದ್ದಾರೆ. 184 ಪಂದ್ಯಗಳ 170 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದು, 5,162 ರನ್ ಗಳಿಸಿದ್ದಾರೆ. 151.69 ಅವರ ಒಟ್ಟಾರೆ ಸ್ಟ್ರೈಕ್‌ರೇಟ್.
* ರಿಷಭ್ ಪಂತ್
2024ರ ಮೆಗಾ ಹರಾಜಿನಲ್ಲಿ ಬರೋಬ್ಬರಿ 27 ಕೋಟಿಗೆ ಬಿಕರಿಯಾಗುವ ಮೂಲಕ, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿರುವ ರಿಷಭ್ ಪಂತ್ ಈ ಬಾರಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಈ ವರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡಿರುವ 111 ಪಂದ್ಯಗಳ 110 ಇನಿಂಗ್ಸ್‌ಗಳಲ್ಲಿ 3,284 ರನ್ ಗಳಿಸಿದ್ದಾರೆ. ಒಟ್ಟಾರೆ 148.94 ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿರುವ ಅವರು, ಡೆತ್ ಓವರ್‌ಗಳಲ್ಲಿ 207.28ರ ದರದಲ್ಲಿ 626 ರನ್ ಬಾರಿಸಿದ್ದಾರೆ.
* ಆ್ಯಂಡ್ರೆ ರಸೆಲ್
ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಹಾಗೂ ಸದ್ಯ ಕೆಕೆಆರ್‌ನ ಕಾಯಂ ಆಟಗಾರನಾಗಿರುವ ಆ್ಯಂಡ್ರೆ ರಸೆಲ್, ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿ. ಎಂಥದೇ ಪರಿಸ್ಥಿತಿಯಲ್ಲೂ ಬೀಸಾಟಕ್ಕೆ ಒತ್ತು ನೀಡುವ ಅವರು, ಡೆತ್ ಓವರ್‌ಗಳಲ್ಲಿ 203.63ರ ಸ್ಟ್ರೈಕ್‌ರೇಟ್‌ನಲ್ಲಿ 1,065 ರನ್ ಸಿಡಿಸಿದ್ದಾರೆ.
* ವಿರಾಟ್ ಕೊಹ್ಲಿ
ಐಪಿಎಲ್ ಆರಂಭವಾದಾಗಿನಿಂದಲೂ ಆರ್‌ಸಿಬಿಯಲ್ಲಿ ಆಡುತ್ತಿರುವ ವಿರಾಟ್ ಕೊಹ್ಲಿ, ಈ ಟೂರ್ನಿಯಲ್ಲಿ ಅತಿಹೆಚ್ಚು ರನ್ ಹಾಗೂ ಹೆಚ್ಚು ಶತಕ ಗಳಿಸಿರುವ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈವರೆಗೆ 252 ಪಂದ್ಯಗಳಲ್ಲಿ ಆಡಿರುವ ಅವರು ಒಂದೇ ತಂಡದ ಪರ ಹೆಚ್ಚು ಸಲ ಕಣಕ್ಕಿಳಿದ ಆಟಗಾರನೂ ಹೌದು. ಅವರು 244 ಇನಿಂಗ್ಸ್‌ಗಳಲ್ಲಿ 131.98ರ ಸ್ಟ್ರೈಕ್‌ರೇಟ್‌ನಲ್ಲಿ 8,004 ರನ್ ಬಾರಿಸಿದ್ದಾರೆ.
ಆರಂಭದಲ್ಲಿ ರಕ್ಷಣಾತ್ಮಕವಾಗಿ ಆಡಿ ಇನಿಂಗ್ಸ್ ಕಟ್ಟಲು ಒತ್ತು ನೀಡುವ ಕೊಹ್ಲಿ, ಡೆತ್ ಓವರ್‌ಗಳಲ್ಲಿ ಏಕಾಏಕಿ ಗೇರ್ ಬದಲಿಸಿ, ರನ್ ಗತಿ ಹೆಚ್ಚಿಸಬಲ್ಲ ಬ್ಯಾಟರ್. 16ರಿಂದ 20 ಓವರ್‌ಗಳಲ್ಲಿ ಅವರು 200.91ರ ಸ್ಟ್ರೈಕ್‌ರೇಟ್‌ನಲ್ಲಿ 1,099 ರನ್ ಕಲೆಹಾಕಿದ್ದಾರೆ.
* ಶಿಮ್ರೋನ್ ಹೆಟ್ಮೆಯರ್
ಯಾವುದೇ ತಂಡದ ಮಧ್ಯಮ ಕ್ರಮಾಂಕಕ್ಕೆ ಬಲ ಒದಗಿಸಬಲ್ಲ ಬ್ಯಾಟರ್ ಈ ಶಿಮ್ರೋನ್ ಹೆಟ್ಮೆಯರ್. ವೆಸ್ಟ್ ಇಂಡೀಸ್‌ನ ಈ ಆಟಗಾರ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಪರ ಆಡಿದ್ದು, 72 ಪಂದ್ಯಗಳ, 66 ಇನಿಂಗ್ಸ್‌ಗಳಿಂದ 153.08 ಸ್ಟ್ರೈಕ್‌ರೇಟ್‌ನಲ್ಲಿ 1,243 ರನ್ ಬಾರಿಸಿದ್ದಾರೆ.
ಡೆತ್ ಓವರ್‌ಗಳಲ್ಲಿ 197.67 ಸ್ಟ್ರೈಕ್‌ರೇಟ್‌ನಲ್ಲಿ 680 ರನ್ ಸಿಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.