ಕೋಲ್ಕತ್ತ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ 'ಕಾಯಂ' ಆಟಗಾರ ವಿರಾಟ್ ಕೊಹ್ಲಿ, ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರ ಅಜೇಯ ಅರ್ಧಶತಕದ ಬಲದಿಂದ, ಆರ್‌ಸಿಬಿ ಏಳು ವಿಕೆಟ್ ಅಂತರದ ಸುಲಭ ಜಯ ಸಾಧಿಸಿತು.
ಕೋಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಕೆಕೆಆರ್, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಆರ್‌ಸಿಬಿಗೆ, ಫಿಲ್ ಸಾಲ್ಟ್ (56 ರನ್; 31ಎಸೆತ) ಮತ್ತು ಕೊಹ್ಲಿ ಮೊದಲ ವಿಕೆಟ್ ಜೊತೆಯಾಟದಲ್ಲಿ 95 ರನ್ ಕಲೆಹಾಕುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟರು.
ಕೊನೆವರೆಗೂ ಆಡಿದ ಕೊಹ್ಲಿ, 36 ಎಸೆತಗಳಲ್ಲಿ 59 ರನ್ ಗಳಿಸಿ ಔಟಾಗದೆ ಉಳಿದರು. ನಾಯಕ ರಜತ್ ಪಾಟೀದಾರ್ (34 ರನ್, 16 ಎಸೆತ) ಸಹ ಬೀಸಾಟವಾಡಿದ್ದರಿಂದ, 16.2 ಓವರ್‌ಗಳಲ್ಲೇ ಜಯ ಒಲಿಯಿತು. ಇದರೊಂದಿಗೆ ಆರ್‌ಸಿಬಿ, ಶುಭಾರಂಭದೊಂದಿಗೆ ಅಭಿಯಾನ ಆರಂಭಿಸಿತು.
ನಾಲ್ಕು ತಂಡಗಳ ಎದುರು ಸಾವಿರ ರನ್
ಕ್ರಿಕೆಟ್ ಲೋಕದ 'ಕಿಂಗ್' ಖ್ಯಾತಿಯ ವಿರಾಟ್ ಕೊಹ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ 38 ರನ್ ಗಳಿಸಿದ್ದಾಗ, ಕೆಕೆಆರ್ ವಿರುದ್ಧ ಒಟ್ಟಾರೆ 1,000 ರನ್ ಸಿಡಿಸಿದ ಸಾಧನೆ ಮಾಡಿದರು. ಇದು ಕೆಕೆಆರ್ ಎದುರು ಅವರಿಗೆ 35ನೇ ಪಂದ್ಯ. 'ಕಿಂಗ್', ಈ ರೀತಿ ತಂಡದವೊಂದರ ವಿರುದ್ಧ ಸಾವಿರ ರನ್ ಗಳಿಸಿದ್ದು ನಾಲ್ಕನೇ ಬಾರಿ. ಈಗಾಗಲೇ, ಚೆನ್ನೈ ಸೂಪರ್ ಕಿಂಗ್ಸ್ (33 ಪಂದ್ಯ, 1,053 ರನ್), ಡೆಲ್ಲಿ ಕ್ಯಾಪಿಟಲ್ಸ್ (29ಪಂದ್ಯ, 1,057 ರನ್), ಪಂಜಾಬ್ ಕಿಂಗ್ಸ್ (32 ಪಂದ್ಯ, 1,030 ರನ್) ವಿರುದ್ಧವೂ ಸಾವಿರ ರನ್ ಬಾರಿಸಿದ್ದಾರೆ.
ಇದರೊಂದಿಗೆ, ಐಪಿಎಲ್‌ನಲ್ಲಿ ಇಂತಹ ಸಾಧನೆ ಮಾಡಿದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಉಳಿದಂತೆ ಡೇವಿಡ್ ವಾರ್ನರ್ (vs ಕೆಕೆಆರ್, ಪಂಜಾಬ್ ಕಿಂಗ್ಸ್) ಮತ್ತು ರೋಹಿತ್ ಶರ್ಮಾ (vs ಕೆಕೆಆರ್, ಡೆಲ್ಲಿ ಕ್ಯಾಪಿಟಲ್ಸ್) ಎರಡು ತಂಡಗಳ ಎದುರು, ಶಿಖರ್ ಧವನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸಾವಿರ ರನ್ ಕಲೆಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.