ADVERTISEMENT

ಪಂತ್ ಔಟ್ ಮನವಿ ಹಿಂಪಡೆದದ್ದು ಬೌಲರ್‌ಗೆ ಮಾಡಿದ ಅಪಮಾನ: ಅಶ್ವಿನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮೇ 2025, 14:34 IST
Last Updated 28 ಮೇ 2025, 14:34 IST
<div class="paragraphs"><p>ಲಖನೌ ಸೂಪರ್‌ಜೈಂಟ್ಸ್‌ ನಾಯಕ ರಿಷಭ್‌ ಪಂತ್</p></div>

ಲಖನೌ ಸೂಪರ್‌ಜೈಂಟ್ಸ್‌ ನಾಯಕ ರಿಷಭ್‌ ಪಂತ್

   

ಪಿಟಿಐ ಚಿತ್ರ

ನವದೆಹಲಿ: ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯ ಲೀಗ್‌ ಹಂತದ ಕೊನೇ ಪಂದ್ಯದ ಬಳಿಕ 'ಕ್ರೀಡಾಸ್ಫೂರ್ತಿ' ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ADVERTISEMENT

ಮಂಗಳವಾರ ರಾತ್ರಿ ಲಖನೌನ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಲಖನೌ ಸೂಪರ್‌ಜೈಂಟ್ಸ್‌ (ಎಲ್‌ಎಸ್‌ಜಿ) ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಜೈಂಟ್ಸ್‌, ನಾಯಕ ರಿಷಭ್‌ ಪಂತ್ ಶತಕದ (ಅಜೇಯ 118 ರನ್‌) ಬಲದಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 227 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ಚಾಲೆಂಜರ್ಸ್‌, ವಿರಾಟ್‌ ಕೊಹ್ಲಿ (54 ರನ್‌), ನಾಯಕ ಜಿತೇಶ್‌ ಶರ್ಮಾ (ಅಜೇಯ 85 ರನ್‌) ಹಾಗೂ ಮಯಂಕ್‌ ಅಗರವಾಲ್‌ (ಅಜೇಯ 41 ರನ್‌) ಅವರ ಸಮಯೋಜಿತ ಬ್ಯಾಟಿಂಗ್‌ ನೆರವಿನಿಂದ ಇನ್ನೂ 8 ಎಸೆತ ಬಾಕಿ ಇರುವಂತೆಯೇ 4 ವಿಕೆಟ್‌ಗೆ 230 ರನ್‌ ಗಳಿಸಿ ಜಯದ ನಗೆ ಬೀರಿತು.

ಈ ಗೆಲುವು, ಪಾಯಿಂಟ್‌ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಲು ಆರ್‌ಸಿಬಿಗೆ ನೆರವಾಯಿತು.

ದಿಗ್ವೇಶ್‌ ಶಾಕ್‌; ನಾನ್‌ಸ್ಟ್ರೈಕರ್ ರನೌಟ್ ಮತ್ತು ಕ್ರೀಡಾಸ್ಫೂರ್ತಿ


ಗುರಿ ಬೆನ್ನತ್ತಿದ್ದ ಆರ್‌ಸಿಬಿ 16 ಓವರ್‌ಗಳ ಅಂತ್ಯಕ್ಕೆ 189 ರನ್ ಗಳಿಸಿತ್ತು. ಉಳಿದ 4 ಓವರ್‌ಗಳಲ್ಲಿ ಗೆಲ್ಲಲು ಬೇಕಿದ್ದದ್ದು 39 ರನ್‌.

20 ಎಸೆತಗಳಲ್ಲಿ 49 ರನ್‌ ಬಾರಿಸಿದ್ದ ಜಿತೇಶ್‌ ಹಾಗೂ 19 ಎಸೆತಗಳಲ್ಲಿ 37 ರನ್‌ ಗಳಿಸಿದ ಮಯಂಕ್‌ ಕ್ರೀಸ್‌ನಲ್ಲಿದ್ದರು.

ಈ ವೇಳೆ ಬೌಲಿಂಗ್‌ಗೆ ಇಳಿದ ದಿಗ್ವೇಶ್ ರಾಠಿ, ಆರ್‌ಸಿಬಿ ಪಾಳಯದಲ್ಲಿ ಆತಂಕದ ಅಲೆ ಎಬ್ಬಿಸಿದರು. ಮೊದಲ ಎಸೆತವನ್ನು ರಿವರ್ಸ್‌ ಸ್ವೀಪ್‌ ಪ್ರಯೋಗಿಸಿದ ಜಿತೇಶ್‌, ಬ್ಯಾಕ್‌ವರ್ಡ್‌ ಪಾಯಿಂಟ್‌ನಲ್ಲಿದ್ದ ಆಯುಷ್‌ ಬದೋನಿ ಕೈಗೆ ಕ್ಯಾಚಿತ್ತರು. ಆದರೆ, ಚೆಂಡು ಫೀಲ್ಡರ್‌ ಕೈಸೇರುವ ಮೊದಲು ನೆಲಕ್ಕೆ ತಾಕಿತ್ತೇ ಎಂಬುದನ್ನು ಚೆಕ್‌ ಮಾಡುವ ವೇಳೆ, ಎಸೆತ ನೋ ಬಾಲ್‌ ಆಗಿದ್ದದ್ದು ಗಮನಕ್ಕೆ ಬಂದಿತು. ಹೀಗಾಗಿ, ಜಿತೇಶ್‌ ಉಳಿದುಕೊಂಡರು.

ಆದರೆ, ಓವರ್‌ನ ಕೊನೇ ಎಸೆತಕ್ಕೆ ಮುನ್ನ ದಿಗ್ವೇಶ್‌ ಮತ್ತೊಮ್ಮೆ ಶಾಕ್ ನೀಡಿದರು.

ಬೌಲಿಂಗ್ ಮಾಡಲು ಬಂದ ದಿಗ್ವೇಶ್, ನಾನ್‌ಸ್ಟ್ರೈಕರ್‌ ಎಂಡ್‌ನಲ್ಲಿದ್ದ ಜಿತೇಶ್‌ ಅವರು ಕ್ರೀಸ್‌ನಿಂದ ಮುಂದೆ ಹೋಗುತ್ತಿರುವುದನ್ನು ಗಮನಿಸಿ ಬೆಲ್ಸ್‌ ಎಗರಿಸಿ ಔಟ್‌ಗೆ ಮನವಿ ಮಾಡಿದರು. ಪರಿಶೀಲನೆ ವೇಳೆ, ದಿಗ್ವೇಶ್‌ ಅವರು, ಜಿತೇಶ್‌ಗೂ ಮೊದಲೇ ಕ್ರೀಸ್‌ ದಾಟಿರುವುದು ಕಂಡು ಬಂತು. ಹಾಗಾಗಿ, ಪರದೆ ಮೇಲೆ ನಾಟೌಟ್ ಎಂದು ಪ್ರಕಟವಾಯಿತು. ಅಷ್ಟರಲ್ಲಿ, ರಿಷಭ್‌ ಕೂಡ 'ನಾನ್‌ಸ್ಟ್ರೈಕರ್ ರನೌಟ್' ಔಟ್‌ ಮನವಿಯನ್ನು ಹಿಂಪಡೆದರು.

ರಿಷಭ್‌ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಜಿತೇಶ್‌ ಕೂಡ ಆಲಂಗಿಸಿದರು. ಇದೀಗ, ಲಖನೌ ನಾಯಕ ಕ್ರೀಡಾಸ್ಫೂರ್ತಿಯನ್ನು ಎತ್ತಿಹಿಡಿದಿದ್ದಾರೆ ಎಂದೆಲ್ಲ ಚರ್ಚೆಯಾಗುತ್ತಿದೆ. ಆದರೆ, ಪಂತ್‌ ಅವರನ್ನು ಮಾಜಿ ಕ್ರಿಕೆಟಿಗ ಆರ್‌. ಅಶ್ವಿನ್‌ ಟೀಕಿಸಿದ್ದಾರೆ.

2019ರ ಆವೃತ್ತಿಯಲ್ಲಿ ಜಾಸ್ ಬಟ್ಲರ್‌ ಅವರನ್ನು ಇದೇ ರೀತಿ (ನಾನ್‌ಸ್ಟ್ರೈಕರ್ ರನೌಟ್) ಔಟ್‌ ಮಾಡಿ ಸುದ್ದಿಯಾಗಿದ್ದ ಅಶ್ವಿನ್‌, ತಮ್ಮ ಯುಟ್ಯೂಬ್ ಚಾನಲ್‌ 'Ash Ki Baat'ನಲ್ಲಿ ಮಾತನಾಡಿದ್ದಾರೆ. ಆಟಗಾರರನ್ನು ಬೆಂಬಲಿಸುವುದು ನಾಯಕನ ಕರ್ತವ್ಯ. ಔಟ್‌ಗಾಗಿನ ಮೇಲ್ಮನವಿಯನ್ನು ಹಿಂಪಡೆಯುವ ಬಗ್ಗೆ ನಿರ್ಧಾರ ಮಾಡುವ ಮೊದಲೇ ಚರ್ಚಿಸಬೇಕಿತ್ತು ಎಂದು ಹೇಳಿದ್ದಾರೆ.

'ಆಟಗಾರರನ್ನು ಬೆಂಬಲಿಸುವುದು ನಾಯಕನ ಕೆಲಸ. ಬೌಲರ್‌ ತಮ್ಮನ್ನು ತಾವು ಸಣ್ಣವರಂತೆ ಭಾವಿಸಿಕೊಳ್ಳುವಂತೆ ಮಾಡಬಾರದು. ಮೇಲ್ಮನವಿಯನ್ನು ಹಿಂಪಡೆಯುವ ನಿರ್ಧಾರವನ್ನು ಮೊದಲೇ ಮಾಡಬೇಕಿತ್ತು' ಎಂದಿದ್ದಾರೆ.

2020ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಆಡಿದ್ದ ಅಶ್ವಿನ್‌, ಆಗಿನ ಕೋಚ್‌ ರಿಕಿ ಪಾಂಟಿಂಗ್ ನೀಡಿದ್ದ ಸೂಚನೆಯನ್ನು ಸ್ಮರಿಸಿದ್ದಾರೆ. ನಾನ್‌ ಸ್ಟ್ರೈಕರ್‌ ಎಂಡ್‌ನಲ್ಲಿರುವ ಯಾವುದೇ ಬ್ಯಾಟರ್‌ ಅನ್ನು ರನೌಟ್‌ ಮಾಡಬಾರದು ಎಂದು ಪಾಂಟಿಂಗ್‌ ಅವರು ಟೂರ್ನಿ ಆರಂಭಕ್ಕೂ ಮುನ್ನವೇ ಆಟಗಾರರಿಗೆ ಹೇಳಿದ್ದರು. ಹಾಗಾಗಿ, ಎಲ್ಲರೂ ಅವರ ಮಾತನ್ನು ಪಾಲಿಸಿದ್ದೆವು. ಆದರೆ, ಈ ರೀತಿಯ ಯಾವುದೇ ಸ್ಪಷ್ಟನೆ ಎಲ್‌ಎಸ್‌ಜಿ vs ಆರ್‌ಸಿಬಿ ಪಂದ್ಯದ ವೇಳೆ ಕಾಣಲಿಲ್ಲ ಎಂದು ಹೇಳಿದ್ದಾರೆ.

ಮೇಲ್ಮನವಿಯನ್ನು ಹಿಂಪಡೆದದ್ದು ಬೌಲರ್‌ಗೆ ಮಾಡಿದ ಅಪಮಾನ ಎಂದು ಪ್ರತಿಪಾದಿಸಿರುವ ಅಶ್ವಿನ್‌, 'ಮೇಲ್ಮನವಿಗೂ ಮುನ್ನ ಚರ್ಚಿಸಿದ್ದರೇ, ಇಲ್ಲವೇ ಎಂಬುದು ಗೊತ್ತಿಲ್ಲ. ಆದರೆ, ಕೋಟ್ಯಂತರ ಜನರ ಎದುರು ಯುವ ಆಟಗಾರರು ಮೂದಲಿಕೆಗೊಳಗಾಗುವುದು ನಿಲ್ಲಬೇಕು. ನಾವು ಯಾರಿಗಾದರೂ ಹಾಗೆ ಮಾಡುತ್ತೇವೆಯೇ? ಬೌಲರ್‌ ಸಣ್ಣವರಂತೆ ಕಾಣಲು ಕಾರಣವೇನು? ಇದು ಖಂಡಿತಾ ಅಪಮಾನ' ಎಂದು ಕಟುವಾಗಿ ಹೇಳಿದ್ದಾರೆ.

'ಹಾಗೆ ಮಾಡುವುದರಿಂದ, ಬೌಲರ್‌ ಮತ್ತೊಮ್ಮೆ ಅಂತಹ ಪ್ರಯತ್ನಕ್ಕೆ ಮುಂದಾಗುವುದಿಲ್ಲ. ಇನ್ನೊಮ್ಮೆ ಆ ರೀತಿ ಔಟ್‌ ಮಾಡಬಾರದು ಎಂದು ಜನರೂ ಹೇಳುತ್ತಾರೆ. ಹಾಗೆ ಮಾಡಬಾರದೇಕೆ? ಅಂತಹ ನಿಯಮವೇನು ಇಲ್ಲ. ಬ್ಯಾಟರ್‌, ಹೆಚ್ಚುವರಿ ಹೆಜ್ಜೆ ಇಡುವುದರಿಂದ ಸುಲಭವಾಗಿ ಎರಡು ರನ್‌ ಪೂರೈಸುವ ಅವಕಾಶ ಸಿಗುತ್ತದೆ' ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.