ಸಂಜು ಸ್ಯಾಮ್ಸನ್ ಹಾಗೂ ರವೀಂದ್ರ ಜಡೇಜಾ
– ಪಿಟಿಐ ಚಿತ್ರಗಳು
ಮುಂಬೈ: ಆಲ್‌ರೌಂಡರ್ ರವೀಂದ್ರ ಜಡೇಜ ಮತ್ತು ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್ ಅವರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಕ್ರಮವಾಗಿ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಪ್ರತಿನಿಧಿಸಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರ ಜಡೇಜ ಅವರು ರಾಜಸ್ಥಾನ ತಂಡಕ್ಕೆ ಟ್ರೇಡ್ ಮೂಲಕ ಸೇರಿದ್ದಾರೆ. ಅವರು ಚೆನ್ನೈ ತಂಡದಲ್ಲಿ (₹ 18 ಕೋಟಿ) ಪಡೆಯುತ್ತಿದ್ದ ಶುಲ್ಕಕ್ಕಿಂತಲೂ ರಾಯಲ್ಸ್‌ನಲ್ಲಿ (₹ 14 ಕೋಟಿ) ಕಡಿಮೆ ಪಡೆದಿದ್ದಾರೆ.
‘12 ಆವೃತ್ತಿಗಳಲ್ಲಿ ಚೆನ್ನೈ ತಂಡದಲ್ಲಿ ಆಡಿದ್ದ ಜಡೇಜ ಅವರು ಐಪಿಎಲ್‌ನಲ್ಲಿ ಅತ್ಯಂತ ಅನುಭವಿ ಆಟಗಾರರಲ್ಲಿ ಒಬ್ಬರಾಗಿದ್ದಾರೆ. 250 ಪಂದ್ಯಗಳಲ್ಲಿ ಆಡಿದ್ದಾರೆ. ಅವರ ಲೀಗ್ ಶುಲ್ಕವು ₹ 18 ಕೋಟಿಯಿಂದ ₹ 14 ಕೋಟಿಗೆ ಪರಿಷ್ಕೃತಗೊಂಡಿದೆ’ ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
‘ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಮತ್ತು ಭಾರತ ತಂಡದ ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್ ಅವರು ಇನ್ನು ಮುಂದೆ ಚೆನ್ನೈ ತಂಡದಲ್ಲಿ ಆಡಲಿದ್ದಾರೆ. ಅವರಿಗೆ ₹ 18 ಕೋಟಿ ನೀಡಲಾಗಿದೆ’ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅನುಭವಿ ಆಟಗಾರ ಸಂಜು ಅವರು ಇದುವರೆಗೆ ಐಪಿಎಲ್‌ನಲ್ಲಿ 177 ಪಂದ್ಯಗಳಲ್ಲಿ ಆಡಿದ್ದಾರೆ. 2013ರಲ್ಲಿ ಅವರು ಐಪಿಎಲ್‌ನಲ್ಲಿ ಪದಾರ್ಪಣೆ ಮಾಡಿದ್ದರು.
‘ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ ಅವರು ಚೆನ್ನೈ ಸೂಪರ್ ಕಿಂಗ್ಸ್‌ನಿಂದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬದಲಾದರು. ಅವರಿಗೆ ಲೀಗ್ ಶುಲ್ಕವಾಗಿ ₹ 2.4 ಕೋಟಿ ನೀಡಲಾಗಿದೆ. 27 ವರ್ಷದ ಸ್ಯಾಮ್ 64 ಪಂದ್ಯಗಳಲ್ಲಿ ಆಡಿದ್ದಾರೆ. ಅವರು ಈ ಹಿಂದೆ ಪಂಜಾಬ್ ಕಿಂಗ್ಸ್ (2019, 2023 ಮತ್ತು 2024) ತಂಡದಲ್ಲಿ ಆಡಿದ್ದರು. ಉಳಿದಂತೆ ಚೆನ್ನೈ ಬಳಗದಲ್ಲಿ ಆಡಿದ್ದಾರೆ’ ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಅವರು ಮುಂಬೈ ಇಂಡಿಯನ್ಸ್‌ನಿಂದ ಲಖನೌ ಸೂಪರ್ ಜೈಂಟ್ಸ್ ಬಳಗಕ್ಕೆ ಸೇರ್ಪಡೆಯಾಗಿದ್ದಾರೆ. ಅವರಿಗೆ ₹30 ಲಕ್ಷ ನೀಡಲಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿದ್ದ ದಕ್ಷಿಣ ಆಫ್ರಿಕಾದ ಡೊನೊವಾನ್ ಫೆರೀರಾ ಅವರು ಮತ್ತೆ ರಾಜಸ್ಥಾನ ರಾಯಲ್ಸ್‌ಗೆ ಮರಳಿದ್ದಾರೆ. ₹ 1 ಕೋಟಿ ಶುಲ್ಕ ನೀಡಲಾಗಿದೆ.
ಕೆಕೆಆರ್ ಬಳಿ ಹೆಚ್ಚು ಹಣ
ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಂಬರುವ ಮಿನಿ ಬಿಡ್ ಪ್ರಕ್ರಿಯೆಯಲ್ಲಿ ಆಟಗಾರರ ಖರೀದಿಗೆ ತೀವ್ರ ಪೈಪೋಟಿ ನಡೆಸುವ ನಿರೀಕ್ಷೆ ಇದೆ. ಏಕೆಂದರೆ ಈ ಎರಡೂ ತಂಡಗಳು ಹೆಚ್ಚು ಆಟಗಾರರನ್ನು ಬಿಡುಗಡೆ ಮಾಡಿರುವುದರಿಂದ ತಮ್ಮ ಖಾತೆಯಲ್ಲಿ ಹೆಚ್ಚು ಹಣವನ್ನು ಹೊಂದಿವೆ.
ಕೋಲ್ಕತ್ತ ತಂಡದ ಥೈಲಿಯಲ್ಲಿ ಸದ್ಯ ₹ 64.30 ಕೋಟಿ ಹಣವಿದೆ. ವೆಂಕಟೇಶ್ ಅಯ್ಯರ್ (₹23.75ಕೋಟಿ) ಮತ್ತು ಆ್ಯಂಡ್ರೆ ರಸೆಲ್ (₹ 12 ಕೋಟಿ) ಅವರನ್ನು ತಂಡವು ಬಿಡುಗಡೆ ಮಾಡಿದೆ. ಚೆನ್ನೈ ತಂಡದ ಪರ್ಸ್‌ನಲ್ಲಿ ₹ 40 ಕೋಟಿ ಹಣ ಉಳಿದಿದೆ.
ಆರ್‌ಸಿಬಿಯಿಂದ ಮಯಂಕ್ ಬಿಡುಗಡೆ
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ತನ್ನ ಬಹುತೇಕ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದೆ. 18 ವರ್ಷಗಳ ನಂತರ ಪ್ರಶಸ್ತಿ ಗೆದ್ದು ಇತಿಹಾಸ ಬರೆದ ತಂಡದಲ್ಲಿ ಮಿಂಚಿದ್ದವರನ್ನು ಮುಂದುವರಿಸಿದೆ.
ಆದರೆ ತಂಡದಲ್ಲಿದ್ದ ಕರ್ನಾಟಕದ ಮಯಂಕ್ ಅಗರವಾಲ್, ದಕ್ಷಿಣ ಆಫ್ರಿಕಾ ವೇಗಿ ಲುಂಗಿ ಎನ್‌ಗಿಡಿ ಮತ್ತು ಸ್ಪಿನ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಬಿಡುಗಡೆ ಮಾಡಿದೆ. ಒಟ್ಟು ಎಂಟು ಆಟಗಾರರನ್ನು ರಿಲೀಸ್ ಮಾಡಿದೆ. ಹೋದ ಆವೃತ್ತಿಯ ಟೂರ್ನಿಯಲ್ಲಿ ಮಯಂಕ್ ಅಗರವಾಲ್ ಅವರು ಗಾಯಗೊಂಡಿದ್ದ ದೇವದತ್ತ ಪಡಿಕ್ಕಲ್ ಬದಲು ಪ್ಲೇ ಆಫ್ ಪಂದ್ಯಗಳ ಸಂದರ್ಭದಲ್ಲಿ ಸ್ಥಾನ ಪಡೆದಿದ್ದರು. ನಾಯಕ ರಜತ್ ಪಾಟೀದಾರ್, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸೇರಿ ಉಳಿದವರು ತಂಡದಲ್ಲಿ ಮುಂದುವರಿದಿದ್ದಾರೆ.
ಐಪಿಎಲ್ ಟೂರ್ನಿಯ ಹತ್ತು ತಂಡಗಳಿಗೂ ತಮ್ಮ ಬಳಗದ ಆಟಗಾರರನ್ನು ಬಿಡುಗಡೆ ಮಾಡಲು ಶನಿವಾರ ಕೊನೆಯ ದಿನವಾಗಿತ್ತು. ಆಟಗಾರರ ಮಿನಿ ಹರಾಜು ಪ್ರಕ್ರಿಯೆಯು ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆಯಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಲಿಯಾಮ್ ಲಿವಿಂಗ್‌ಸ್ಟೋನ್, ಲುಂಗಿ ಎನ್‌ಗಿಡಿ, ಮನೋಜ್ ಬಾಂಢಗೆ, ಮಯಂಕ್ ಅಗರವಾಲ್, ಮೋಹಿತ್ ರಾಠಿ, ಸ್ವಸ್ತಿಕ್ ಚಿಕಾರಾ, ಟಿಮ್ ಸೀಫರ್ಟ್. ಬ್ಲೆಸಿಂಗ್ ಮುಝರ್‌ಬಾನಿ.
ಗುಜರಾತ್ ಟೈಟನ್ಸ್: ಕರೀಂ ಜನತ್, ಕುಲವಂತ್ ಖೆಜ್ರೊಲಿಯಾ, ಗೆರಾಲ್ಡ್ ಕೋಯಿಜಿ, ದಸುನ್ ಶನಕಾ, ಮಹಿಪಾಲ್ ಲೊಮ್ರೊರ್.
ಪಂಜಾಬ್ ಕಿಂಗ್ಸ್: ಗ್ಲೆನ್ ಮ್ಯಾಕ್ಸ್‌ವೆಲ್, ಆ್ಯರನ್ ಹಾರ್ಡೀ, ಜೋಶ್ ಇಂಗ್ಲಿಸ್, ಕುಲದೀಪ್ ಸೇನ್, ಪ್ರವೀಣ್ ದುಬೆ.
ಚೆನ್ನೈ ಸೂಪರ್ ಕಿಂಗ್ಸ್: ಮಥೀಷ ಪಥಿರಾಣ, ಡೆವೊನ್ ಕಾನ್ವೆ, ರಚಿನ್ ರವೀಂದ್ರ, ದೀಪಕ್ ಹೂಡಾ, ವಿಜಯಶಂಕರ್, ಆ್ಯಂಡ್ರೆ ಸಿದ್ಧಾರ್ಥ್, ಕಮಲೇಶ್ ನಾಗರಕೋಟಿ, ರಾಹುಲ್ ತ್ರಿಪಾಠಿ, ಶೇಖ ರಶೀದ್, ವಂಶ್ ಬೇಡಿ
ಕೋಲ್ಕತ್ತ ನೈಟ್ ರೈಡರ್ಸ್: ಆ್ಯಂಡ್ರೆ ರಸೆಲ್, ಕ್ವಿಂಟನ್ ಡಿ ಕಾಕ್, ಎನ್ರಿಚ್ ನಾಕಿಯಾ, ವೆಂಕಟೇಶ್ ಅಯ್ಯರ್, ಮೋಯಿನ್ ಅಲಿ.
ಲಖನೌ ಸೂಪರ್ ಜೈಂಟ್ಸ್: ರವಿ ಬಿಷ್ಣೋಯಿ, ಡೇವಿಡ್ ಮಿಲ್ಲರ್, ಆಕಾಶ್‌ದೀಪ್, ಆರ್ಯನ್ ಜುಯಾಲ್, ಯುವರಾಜ್ ಚೌಧರಿ, ರಾಜವರ್ಧನ್ ಹಂಗರಗೇಕರ್
ಡೆಲ್ಲಿ ಕ್ಯಾಪಿಟಲ್ಸ್: ಮೋಹಿತ್ ಶರ್ಮಾ, ಫಾಫ್ ಡುಪ್ಲೆಸಿ, ಸಾದಿಕುಲ್ಲಾ ಅಟಲ್, ಜೇಕ್ ಫ್ರೆಸರ್ ಮೆಕ್‌ಗುರ್ಕ್, ಮನ್ವಂತ್ ಕುಮಾರ್, ದರ್ಶನ್ ನಾಲ್ಕಂಡೆ, ದೊನೊವನ್ ಫೆರೀರಾ.
ರಾಜಸ್ಥಾನ ರಾಯಲ್ಸ್: ವಣಿಂದು ಹಸರಂಗಾ, ಮಹೀಷ್ ತೀಕ್ಷಣ, ಫಜಲ್‌ಹಕ್ ಫರೂಕಿ, ಅಶೋಕ್ ಶರ್ಮಾ ಕುಮಾರ ಕಾರ್ತಿಕೇಯ, ಆಕಾಶ್ ಮದ್ವಾಲ್.
ಮುಂಬೈ ಇಂಡಿಯನ್ಸ್: ಬೆವೊನ್ ಜೇಕಬ್ಸ್, ಕರ್ಣ ಶರ್ಮಾ, ಕೆ.ಎಲ್. ಶ್ರೀಜಿತ್, ಲಿಜಾದ್ ವಿಲಿಯಮ್ಸ್, ಮುಜೀಬ್ ಉರ್ ರೆಹಮಾನ್, ಪಿಎಸ್‌ಎನ್ ರಾಜು, ರೀಸ್ ಟಾಪ್ಲಿ, ವಿಘ್ನೇಷ್ ಪುತ್ತೂರ್.
ಸನ್‌ರೈಸರ್ಸ್ ಹೈದರಾಬಾದ್: ಅಭಿವನ್ ಮನೋಹರ್, ಅಥರ್ವ ತೈಡೆ, ಸಚಿನ್ ಬೇಬಿ, ವಿಯಾನ್ ಮಲ್ದರ್, ಮೊಹಮ್ಮದ್ ಶಮಿ, ಸಮರಜೀತ್ ಸಿಂಗ್, ರಾಹುಲ್ ಚಾಹರ್, ಆ್ಯಡಂ ಜಂಪಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.