ಪಂದ್ಯದ ವೇಳೆ ಸಹ ಆಟಗಾರರೊಂದಿಗೆ ಎಂ.ಎಸ್.ಧೋನಿ
ಚಿತ್ರ: X / @IPL
ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮಾಜಿ ನಾಯಕ ಎಂ.ಎಸ್. ಧೋನಿ (43) ವಿಕೆಟ್ ಹಿಂದೆ 'ಮ್ಯಾಜಿಕ್' ಮಾಡುವುದನ್ನು ಮುಂದುವರಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಅವರು, ಮಿಂಚಿನ ವೇಗದಲ್ಲಿ ಸ್ಟಂಪ್ ಔಟ್ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಕೇವಲ 15 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 32 ರನ್ ಬಾರಿಸಿ ಸಿಎಸ್‌ಕೆ ಪಾಳೆಯದಲ್ಲಿ ಭೀತಿ ಹುಟ್ಟಿಸಿದ್ದ ಫಿಲ್ ಸಾಲ್ಟ್ ಅವರನ್ನು 5ನೇ ಓವರ್‌ನ ಕೊನೇ ಎಸೆತದಲ್ಲಿ ಧೋನಿ ಸ್ಟಂಪ್ ಔಟ್ ಮಾಡಿದರು.
ಸ್ಪಿನ್ನರ್ ನೂರ್ ಅಹ್ಮದ್ ಎಸೆದ 'ಗೂಗ್ಲಿ'ಯನ್ನು ಡ್ರೈವ್ ಮಾಡಲು ಮುಂದಾದ ಸಾಲ್ಟ್ ವಿಫಲರಾದರು. ಅವರ ಕಾಲು ಕ್ರೀಸ್‌ನಿಂದ ಹೊರಗೆ ಸ್ವಲ್ಪವೇ ಜರುಗಿದ್ದನ್ನು ಅರಿತ ಧೋನಿ, ಚೆಂಡನ್ನು ಹಿಡಿದು ಮಿಂಚಿನ ವೇಗದಲ್ಲಿ ಬೆಲ್ಸ್ ಎಗರಿಸಿದರು. ಇದರೊಂದಿಗೆ ಸಾಲ್ಟ್ ಅವರ ಬೀಸಾಟಕ್ಕೆ ತೆರೆ ಬಿದ್ದಿತು.
ಕಣ್ಣಿನ ರೆಪ್ಪೆ ಬಡಿಯುವಷ್ಟು ವೇಗದಲ್ಲಿ ಅವರನ್ನು ಔಟ್ ಮಾಡಿದ ಧೋನಿಯ ಚಾಕಚಕ್ಯತೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಧೋನಿ ಚೆಂಡನ್ನು ಹಿಡಿದು, ಬೆಲ್ಸ್ ಎಗರಿಸುವವರೆಗಿನ 'ರಿಯಾಕ್ಷನ್ ಟೈಮ್' ಕೇವಲ 0.16 ಸೆಕೆಂಡ್ ಎಂಬುದು ಇನಿಂಗ್ಸ್ ಬ್ರೇಕ್ ಸಂದರ್ಭದಲ್ಲಿ ಪ್ರಸಾರವಾಯಿತು.
ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ನ ಸೂರ್ಯಕುಮಾರ್ ಯಾದವ್ ಅವರನ್ನೂ ಇದೇ ರೀತಿ ಔಟ್ ಮಾಡಿದ್ದರು ಧೋನಿ.
17 ವರ್ಷದ ಬಳಿಕ ಜಯ
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 196 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಸಿಎಸ್‌ಕೆ, 8 ವಿಕೆಟ್‌ಗೆ 146 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದು ಚೆನ್ನೈ ಪಿಚ್‌ನಲ್ಲಿ ಆರ್‌ಸಿಬಿಗೆ ದೊರೆತ ಎರಡನೇ ಜಯ.
ಐಪಿಎಲ್‌ನ ಮೊದಲ ಆವೃತ್ತಿಯ (2008ರ) ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಗೆದ್ದಿದ್ದ ಆರ್‌ಸಿಬಿ, ನಂತರ ಆಡಿದ ಸತತ 8 ಪಂದ್ಯಗಳಲ್ಲಿ ಸೋಲು ಕಂಡಿತ್ತು. 2008ರಲ್ಲಿ ರಾಹುಲ್ ದ್ರಾವಿಡ್ ನಾಯಕರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.