ADVERTISEMENT

ಟೆಸ್ಟ್‌ಗೆ ರೋಹಿತ್, ವಿರಾಟ್ ವಿದಾಯ: ಆತಂಕಪಡುವ ಅಗತ್ಯವಿಲ್ಲ ಎಂದ ಮಾಜಿ ಕ್ರಿಕೆಟಿಗ

ಪಿಟಿಐ
Published 15 ಮೇ 2025, 13:28 IST
Last Updated 15 ಮೇ 2025, 13:28 IST
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ    

ನವದೆಹಲಿ: ದಿಗ್ಗಜ ಬ್ಯಾಟರ್‌ಗಳಾದ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಇದೇ ರೀತಿ, 'ಫ್ಯಾಬ್‌ 4' ಆಟಗಾರರು ದೀರ್ಘ ಮಾದರಿಗೆ ನಿವೃತ್ತಿ ಘೋಷಿಸಿದಾಗಲೂ ಭಾರತ ತಂಡ ಪುಟಿದೆದ್ದಿದೆ ಎಂದು ಮಾಜಿ ಕ್ರಿಕೆಟಿಗ ಸಂಜಯ್‌ ಮಂಜ್ರೇಕರ್‌ ಹೇಳಿದ್ದಾರೆ.

ಭಾರತ ತಂಡ, ಮುಂದಿನ ತಿಂಗಳು ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಡಲಿದೆ. ಈ ಹೊತ್ತಿನಲ್ಲೇ, ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್‌ಗಳೆನಿಸಿದ್ದ ರೋಹಿತ್‌ ಹಾಗೂ ವಿರಾಟ್‌ ದೀರ್ಘ ಮಾದರಿಯಿಂದ ಹೊರ ನಡೆದಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಹಂಚಿಕೊಂಡಿರುವ ಮಂಜ್ರೇಕರ್‌, ಭಾರತೀಯ ಕ್ರಿಕೆಟ್‌ನ 'ಫ್ಯಾಬ್‌ 4' ಆಟಗಾರರಾದ ಸಚಿನ್‌ ತೆಂಡೂಲ್ಕರ್‌, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಅವರ ನಿರ್ಗಮನದ ಸಮಯಕ್ಕೆ ರೋ–ಕೋ ವಿದಾಯವನ್ನು ಹೋಲಿಸಿದ್ದಾರೆ.

ADVERTISEMENT

'ಕೆಲವು ಅಭಿಮಾನಿಗಳು ಕಳವಳಗೊಂಡಿದ್ದಾರೆ ಎಂಬುದು ನನಗೆ ಗೊತ್ತು. ಫ್ಯಾಬ್‌–4 ಆಟಗಾರರು ಒಂದೇ ಸಮಯದಲ್ಲಿ ನಿರ್ಗಮಿಸಿದ ಹೊತ್ತಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಕೆಲವೇ ವರ್ಷಗಳಲ್ಲಿ ಭಾರತ ತಂಡ ವಿಶ್ವದ ನಂಬರ್‌ 1 ಸ್ಥಾನಕ್ಕೇರಿತ್ತು' ಎಂದು ಪ್ರತಿಪಾದಿಸಿದ್ದಾರೆ.

ದೇಶದಲ್ಲಿ ಎಲ್ಲಿಯವರೆಗೆ ಈ ಕ್ರೀಡೆ ಜನಪ್ರಿಯವಾಗಿರುತ್ತದೋ, ಅಲ್ಲಿಯವರೆಗೂ ಸಾಕಷ್ಟು ಯುವ ಆಟಗಾರರು ಬರುತ್ತಾರೆ ಎಂದಿದ್ದಾರೆ.

'ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ, ಆತಂಕಪಡುವ ಅಗತ್ಯವಿಲ್ಲ. ನೆನಪಿರಲಿ, ಫ್ಯಾಬ್‌–4 ನಿವೃತ್ತಿಯ ನಂತರ ಭಾರತದ ಬೌಲಿಂಗ್‌ ಗುಣಮಟ್ಟ ಸುಧಾರಿಸಿತು. ಈಗಲೂ ಅದೇರೀತಿ ಆಗಲಿದೆ. ಹೊಸ ಸ್ಟಾರ್‌ಗಳು, ಹೊಸ ಬೌಲರ್‌ಗಳು ಹೊರಬರಲಿದ್ದಾರೆ. ಭಾರತವು ವಿಶ್ವದ ಅಗ್ರತಂಡವಾಗಿ ಮುಂದುವರಿಯಲಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್‌ ಆರ್‌.ಅಶ್ವಿನ್‌ ಅವರು ಕಳೆದ ವರ್ಷ ಈ ಮಾದರಿಗೆ ವಿದಾಯ ಹೇಳಿದ್ದಾರೆ. ಹೀಗಾಗಿ, ಭಾರತ ತಂಡ ರೋಹಿತ್‌, ವಿರಾಟ್‌ ಮತ್ತು ಅಶ್ವಿನ್‌ ಅವರ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್‌ ಸವಾಲು ಎದುರಿಸಲಿದೆ.

ENG vs IND ಟೆಸ್ಟ್‌ ಸರಣಿ

  • 1ನೇ ಪಂದ್ಯ: ಜೂನ್‌ 20–24 – ಹೆಡಿಂಗ್ಲೇ, ಲೀಡ್ಸ್‌

  • 2ನೇ ಪಂದ್ಯ: ಜುಲೈ 02–06 – ಎಜ್‌ಬಾಸ್ಟನ್‌, ಬರ್ಮಿಂಗ್‌ಹ್ಯಾಮ್‌

  • 3ನೇ ಪಂದ್ಯ: ಜುಲೈ 10–14 – ಲಾರ್ಡ್ಸ್‌, ಲಂಡನ್‌

  • 4ನೇ ಪಂದ್ಯ: ಜುಲೈ 23–27 – ಓಲ್ಡ್‌ ಟ್ರಾಫರ್ಡ್‌, ಮ್ಯಾಂಚೆಸ್ಟರ್‌

  • 5ನೇ ಪಂದ್ಯ: ಜುಲೈ 31–ಆಗಸ್ಟ್‌ 4 – ಓವಲ್‌, ಲಂಡನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.