ಆರ್‌ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ
ಪಿಟಿಯ ಚಿತ್ರಗಳು
ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ನಡುವಣ ಐಪಿಎಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ.
ರಾತ್ರಿ 7ಕ್ಕೆ ಟಾಸ್ ಆಗಬೇಕಿತ್ತು. ಆದರೆ, ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ವಿಳಂಬವಾಗಿದೆ.
ಆರ್‌ಸಿಬಿ, ಟೂರ್ನಿಯಲ್ಲಿ ಆಡಿರುವ 11 ಪಂದ್ಯಗಳಲ್ಲಿ 8ರಲ್ಲಿ ಜಯ ಸಾಧಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಬಾಕಿ ಮೂರು ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದರೂ, ಪ್ಲೇ ಆಫ್ ಸ್ಥಾನ ಖಾತ್ರಿಯಾಗಲಿದೆ. ಆದರೆ, ಕೆಕೆಆರ್ ಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ.
ಸ್ಥಿರ ಪ್ರದರ್ಶನ ನೀಡಲು ವಿಫಲವಾಗುತ್ತಿರುವ ಈ ತಂಡ ಆಡಿರುವ 12 ಪಂದ್ಯಗಳಲ್ಲಿ ತಲಾ ಐದು ಜಯ, ಸೋಲು ಕಂಡಿದೆ. ಉಳಿದೊಂದು ಪಂದ್ಯ ರದ್ದಾಗಿದ್ದು, ಒಟ್ಟು 11 ಪಾಯಿಂಟ್‌ಗಳನ್ನಷ್ಟೇ ಹೊಂದಿದೆ. ಹೀಗಾಗಿ, ಬಾಕಿ ಎರಡೂ ಪಂದ್ಯಗಳಲ್ಲಿ ಗೆದ್ದರಷ್ಟೇ, ಮುಂದಿನ ಹಂತಕ್ಕೇರಲು ಸಾಧ್ಯ.
ಒಂದು ವೇಳೆ, ಇಂದು ಪಂದ್ಯ ರದ್ದಾದರೆ, ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ಪ್ಲೇ ಆಫ್‌ಗೇರುವುದು ಬಹುತೇಕ ಖಚಿತವಾಗಲಿದೆ. ಆದರೆ, ಅಜಿಂಕ್ಯ ರಹಾನೆ ಬಳಗಕ್ಕೆ ಮುಂದಿನ ಹಂತದ ಬಾಗಿಲು ಬಂದ್ ಆಗಲಿದೆ.
ಭಾರತ–ಪಾಕಿಸ್ತಾನ ಸೇನಾ ಸಂಘರ್ಷದ ಕಾರಣ ಟೂರ್ನಿಯು ಒಂದು ವಾರ ಮುಂದೂಡಿಕೆಯಾಗಿತ್ತು. ಕದನ ವಿರಾಮ ಘೋಷಣೆ ಬಳಿಕ ಪುನರಾರಂಭಗೊಳ್ಳುತ್ತಿರುವ ಟೂರ್ನಿಯ ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವ ಈ ತಂಡಗಳೇ, ಉದ್ಘಾಟನಾ ಪಂದ್ಯದಲ್ಲೂ ಸೆಣಸಾಡಿದ್ದವು ಎಂಬುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.