ADVERTISEMENT

ಮುಷೀರ್ ಖಾನ್ 'ವಾಟರ್‌ ಬಾಯ್‌' ಎಂದರೇ ಕೊಹ್ಲಿ? ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಮೇ 2025, 4:47 IST
Last Updated 30 ಮೇ 2025, 4:47 IST
<div class="paragraphs"><p>ಮುಷೀರ್‌ ಖಾನ್‌ ಕ್ರೀಸ್‌ಗಿಳಿದಾಗ ವಿರಾಟ್‌ ಕೊಹ್ಲಿ ಸನ್ನೆ ಮಾಡುತ್ತಿರುವುದು</p></div>

ಮುಷೀರ್‌ ಖಾನ್‌ ಕ್ರೀಸ್‌ಗಿಳಿದಾಗ ವಿರಾಟ್‌ ಕೊಹ್ಲಿ ಸನ್ನೆ ಮಾಡುತ್ತಿರುವುದು

   

ಚಿತ್ರಕೃಪೆ: X

ಚಂಡೀಗಡದ ಮುಲ್ಲನಪುರದಲ್ಲಿ ಗುರುವಾರ ರಾತ್ರಿ ನಡೆದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಮಣಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ), ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯ ಫೈನಲ್‌ಗೆ ಬರೋಬ್ಬರಿ 9 ವರ್ಷಗಳ ಬಳಿಕ ಲಗ್ಗೆ ಇಟ್ಟಿದೆ.

ADVERTISEMENT

ಟಾಸ್‌ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್‌ ಬೌಲಿಂಗ್‌ ಆಯ್ದುಕೊಂಡರು. ನಾಯಕನ ನಿರ್ಧಾರ ಸಮರ್ಥಿಸಿಕೊಳ್ಳುವಂತೆ ಶಿಸ್ತಿನ ದಾಳಿ ಸಂಘಟಿಸಿದ ಬೌಲರ್‌ಗಳು, ಎದುರಾಳಿ ಪಡೆಯನ್ನು 14.1 ಓವರ್‌ಗಳಲ್ಲಿ ಕೇವಲ 101 ರನ್‌ಗೆ ಕಟ್ಟಿಹಾಕಿದರು. ಈ ಗುರಿ, ಪಾಟೀದಾರ್‌ ಪಡೆಗೆ ಸವಾಲೇ ಆಗಲಿಲ್ಲ. ಕೇವಲ 2 ವಿಕೆಟ್‌ಗಳನ್ನು ಕಳೆದುಕೊಂಡು 10 ಓವರ್‌ಗಳಲ್ಲೇ ಗುರಿ ತಲುಪಿತು. ಫಿಲ್‌ ಸಾಲ್ಟ್‌ ಕೇವಲ 27 ಎಸೆತಗಳಲ್ಲಿ 56 ರನ್‌ ಬಾರಿಸಿದರು.

ಇದರೊಂದಿಗೆ ಬೆಂಗಳೂರು ತಂಡ, ಈ ಟೂರ್ನಿಯಲ್ಲಿ ನಾಲ್ಕನೇ ಬಾರಿ ಫೈನಲ್‌ಗೇರಿತು. ಒಮ್ಮೆಯೂ 'ಚಾಂಪಿಯನ್‌' ಎನಿಸಿಕೊಳ್ಳದ ಈ ತಂಡ, 2009, 2011 ಹಾಗೂ 2016ರಲ್ಲೂ ಈ ಸಾಧನೆ ಮಾಡಿತ್ತು.

ಹೀಯಾಳಿಸಿದರೇ ಕೊಹ್ಲಿ?
ಆರ್‌ಸಿಬಿಯ ಸಾಧನೆ ಹೊರತಾಗಿಯೂ, ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ಅವರು ಯುವ ಕ್ರಿಕೆಟಿಗ ಮುಷೀರ್ ಖಾನ್‌ ಅವರನ್ನು ಅವಮಾನಿಸಿದ್ದಾರೆ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.

ಬೆಂಗಳೂರು ತಂಡದ ಶಿಸ್ತಿನ ಬೌಲಿಂಗ್‌ ಎದುರು ತತ್ತರಿಸಿದ್ದ ಪಂಜಾಬ್‌ ಕಿಂಗ್ಸ್‌, 60 ರನ್‌ ಆಗುವಷ್ಟರಲ್ಲೇ ಪ್ರಮುಖ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 8.2 ಓವರ್‌ನಲ್ಲಿ ಶಶಾಂಕ್‌ ಸಿಂಗ್‌ ಔಟಾದಾಗ 20 ವರ್ಷದ ಮುಷೀರ್‌ ಇಂಪ್ಯಾಕ್ಟ್‌ ಆಟಗಾರನಾಗಿ ಕಣಕ್ಕಿಳಿದರು.

ಆಗ ಮೊದಲ ಸ್ಲಿಪ್‌ನಲ್ಲಿ ನಿಂತಿದ್ದ ಕೊಹ್ಲಿ, ಖಾನ್‌ ಅವರನ್ನು 'ವಾಟರ್‌ ಬಾಯ್‌' ಎಂದು ಮೂದಲಿಸಿದ್ದಾರೆ ಎಂಬುದಾಗಿ ಟೀಕಿಸಲಾಗುತ್ತಿದೆ. ಆ ಸಂದರ್ಭದ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿದ್ದು, ಈ ರೀತಿ ನಡೆದುಕೊಂಡಿರುವುದು ಅನುಭವಿ ಆಟಗಾರನಿಗೆ ಶೋಭೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ ಅವರು ಮುಷೀರ್‌ ಕಡೆಗೆ ಸನ್ನೆ ಮಾಡುತ್ತಿರುವುದನ್ನು ಗಮನಿಸಿದ ವೀಕ್ಷಕ ವಿವರಣೆಗಾರ ಮ್ಯಾಥ್ಯೂ ಹೇಡನ್‌, 'ಮೊದಲ ಸ್ಲಿಪ್‌ನಲ್ಲಿರುವ ವಿರಾಟ್‌ ಕೊಹ್ಲಿಯನ್ನು ಗಮನಿಸಿ. ಹೈವೋಲ್ಟೇಜ್‌ ಪಂದ್ಯದಲ್ಲಿ ಪದಾರ್ಪಣೆ ಮಾಡುತ್ತಿರುವ ಆಟಗಾರ. ಯಾರು ಈತ? ಎಂದು ಕೇಳುತ್ತಿದ್ದಾರೆ' ಎಂದು ಹೇಳಿದ್ದಾರೆ.

ಮ್ಯಾಥ್ಯೂ ಹೇಳಿಕೆಗೆ ಪ್ರತಿಕ್ರಿಯಿಸಿದ ಸಹ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ, ನಿಮ್ಮೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ ಆಡಿದ್ದ ಸರ್ಫರಾಜ್‌ ಖಾನ್‌ ಸಹೋದರ ತಾನು ಎಂಬುದನ್ನು ಮುಷೀರ್‌ ಅವರು ಕೊಹ್ಲಿಗೆ ನೆನಪಿಸಬೇಕು ಎಂದು ಸಲಹೆ ನೀಡಿದ್ದಾರೆ. 'ಅವರು ಕೊಹ್ಲಿಯತ್ತ ತಿರುಗಿ, ಭಾರತ ಪರ 150 ರನ್‌ ಬಾರಿಸಿದ್ದ ನನ್ನ ಸಹೋದರ ನಿಮಗೆ ಗೊತ್ತಿದೆ ಎನ್ನಬೇಕು' ಎಂದಿದ್ದಾರೆ.

ಇಷ್ಟೆಲ್ಲಾ ಆದರೂ ಕೊಹ್ಲಿ ಏನು ಹೇಳಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಅವರ ಅಭಿಮಾನಿಗಳು, ಮುಷೀರ್‌ ಅವರನ್ನು ಕೊಹ್ಲಿ ಹೀಯಾಳಿಸಿಲ್ಲ ಎಂದೇ ಸಮರ್ಥಿಸಿಕೊಳ್ಳುತ್ತಿದ್ದಾರೆ.

ಪಂದ್ಯದಲ್ಲಿ ಕೇವಲ ಮೂರು ಎಸೆತ ಎದುರಿಸಿದ ಮುಷೀರ್‌, ಖಾತೆ ತೆರೆಯದೆ ಔಟಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.