ADVERTISEMENT

IPL 2025: SRH ಎದುರು ಮಿಂಚಿ ಪಂದ್ಯಶ್ರೇಷ್ಠ ಎನಿಸಿದ 'Unsold' ಶಾರ್ದೂಲ್ ಠಾಕೂರ್

ರಾಯಿಟರ್ಸ್
Published 28 ಮಾರ್ಚ್ 2025, 5:31 IST
Last Updated 28 ಮಾರ್ಚ್ 2025, 5:31 IST
   

ಹೈದರಾಬಾದ್‌: ಟೂರ್ನಿಯಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಲಖನೌ ಸೂಪರ್‌ ಜೈಂಟ್ಸ್‌ (ಎಲ್‌ಎಸ್‌ಜಿ) ತಂಡವು ಬಲಿಷ್ಠ ಸನ್‌ರೈಸರ್ಸ್‌ ಹೈದರಾಬಾದ್‌ (ಎಸ್‌ಆರ್‌ಎಚ್‌) ಪಡೆಯನ್ನು ಅದರ ತವರಿನಂಗಳದಲ್ಲೇ ಗುರುವಾರ ಸೋಲಿಸಿದೆ.

ಸ್ಫೋಟಕ ಬ್ಯಾಟರ್‌ಗಳ ದಂಡೇ ಇರುವ ಎಸ್‌ಆರ್‌ಎಚ್‌ ತನ್ನ ಮೊದಲ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್‌ ಎದುರು 44 ರನ್‌ ಅಂತರದ ಗೆಲುವು ಸಾಧಿಸಿತ್ತು. ಹೀಗಾಗಿ, ತವರಿನ (ಹೈದರಾಬಾದ್‌) ಕ್ರೀಡಾಂಗಣದಲ್ಲಿ ಮತ್ತೊಂದು ಜಯ ಸಾಧಿಸಿ ಗೆಲುವಿನ ಓಟ ಮುಂದುವರಿಸುವ ಲೆಕ್ಕಾಚಾರದಲ್ಲಿ ಆದರೆ ಅದಕ್ಕೆ ಎಲ್‌ಎಸ್‌ಜಿ ಮಧ್ಯಮ ವೇಗಿ ಶಾರ್ದೂಲ್‌ ಠಾಕೂರ್ ತಡೆಯಾದರು.

ಟಾಸ್‌ ಗೆದ್ದರೂ ಎಸ್‌ಆರ್‌ಎಚ್‌ ಅನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದ ಎಲ್‌ಎಸ್‌ಜಿ ನಾಯಕ ರಿಷಭ್‌ ಪಂತ್‌, ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಕಟ್ಟಿಹಾಕುವ ಸವಾಲಿನ ಹೊಣೆಯನ್ನು ತಮ್ಮ ಬೌಲರ್‌ಗಳಿಗೆ ವಹಿಸಿದರು. ಅದನ್ನು ಶಾರ್ದೂಲ್‌ ಹಾಗೂ ಉಳಿದವರು ಅಚ್ಚುಕಟ್ಟಾಗಿ ನಿಭಾಯಿಸಿದರು.

ADVERTISEMENT

ಇನಿಂಗ್ಸ್‌ನ ಮೂರನೇ ಓವರ್‌ನ ಮೊದಲೆರಡು ಎಸೆತಗಳಲ್ಲಿ ಅಭಿಷೇಕ್ ಶರ್ಮಾ (6 ರನ್‌) ಹಾಗೂ ಇಶಾನ್‌ ಕಿಶನ್‌ (0) ಅವರನ್ನು ಪೆವಿಲಿಯನ್‌ಗೆ ಅಟ್ಟಿದ ಶಾರ್ದೂಲ್‌, ಎಸ್‌ಆರ್‌ಎಚ್‌ಗೆ ಆಘಾತ ನೀಡಿದರು. ಇದು, ಪ್ರವಾಸಿ ಪಡೆಯ ವಿಶ್ವಾಸ ಹೆಚ್ಚಿಸಿತು. ಇದರಿಂದಾಗಿ, ಮೊದಲ ಪಂದ್ಯದಲ್ಲಿ ದಾಖಲೆಯ 286 ರನ್ ಗಳಿಸಿದ್ದ ಎಸ್‌ಆರ್‌ಎಚ್‌ ಬಳಗವನ್ನು, ಇಲ್ಲಿ ನಿಗದಿತ ಓವರ್‌ಗಳ್ಲಲಿ 9 ವಿಕೆಟ್‌ಗೆ 190 ರನ್‌ಗಳಿಗೆ ನಿಯಂತ್ರಿಸಲು ಸಾಧ್ಯವಾಯಿತು.

ಈ ಗುರಿಯನ್ನು ಎಲ್‌ಎಸ್‌ಜಿ ಕೇವಲ 5 ವಿಕೆಟ್‌ ಕಳೆದುಕೊಂಡು ತಲುಪಿತು. ತಲಾ ಅರ್ಧಶತಕ ಸಿಡಿಸಿದ ನಿಕೋಲಸ್‌ ಪೂರನ್‌ (70 ರನ್‌) ಹಾಗೂ ಮಿಚೇಲ್‌ ಮಾರ್ಷ್‌ (52 ರನ್‌), ತಮ್ಮ ತಂಡ ಇನ್ನೂ 23 ಎಸೆತಗಳು ಇರುವಂತೆಯೇ 193 ರನ್‌ಗಳಿಸಲು ಕಾರಣರಾದರು.

ಮಿಂಚಿದ 'Unsold' ಠಾಕೂರ್
2024ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಶಾರ್ದೂಲ್‌ ಠಾಕೂರ್‌ ಅವರನ್ನು ಯಾವ ತಂಡವೂ ಖರೀದಿಸಿರಲಿಲ್ಲ. ಹಾಗಾಗಿ ಅವರು ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್‌ ಆಡಲು ಮುಂದಾಗಿದ್ದರು. ಆದರೆ, ಎಲ್‌ಎಸ್‌ಜಿಯ ಪ್ರಮುಖ ವೇಗಿ ಮೊಹ್ಸಿನ್‌ ಖಾನ್‌ ಗಾಯಾಳಾಗಿದ್ದರಿಂದ, ಕೊನೇ ಕ್ಷಣದಲ್ಲಿ ಅವಕಾಶ ಗಿಟ್ಟಿಸಿದ್ದರು.

ಮೊದಲ ಪಂದ್ಯದಲ್ಲಿ ದೆಹಲಿ ವಿರುದ್ಧ 2 ಓವರ್‌ಗಳಲ್ಲಿ 19 ರನ್‌ ನೀಡಿ ವಿಕೆಟ್‌ ಉರುಳಿಸಿದ್ದ ಶಾರ್ದೂಲ್‌, ಎಸ್‌ಆರ್‌ಎಚ್‌ ವಿರುದ್ಧ ತಮ್ಮ ಕೋಟಾದ ನಾಲ್ಕು ಓವರ್‌ಗಳನ್ನು ಪೂರ್ಣಗೊಳಿಸಿದರು. 34 ರನ್‌ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ, ಗರಿಷ್ಠ ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ಅವರು, ತಮ್ಮನ್ನು ಖರೀದಿಸದ ಫ್ರಾಂಚೈಸ್‌ಗಳ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ್ದಾರೆ.

ಬೌಲರ್‌ಗಳ ಪಾಲಿನ ಅಪಾಯಕಾರಿ ಬ್ಯಾಟರ್ ಅಭಿಷೇಕ್‌ ಶರ್ಮಾ, ಕಳೆದ ಪಂದ್ಯದ ಶತಕವೀರ ಇಶಾನ್‌ ಕಿಶನ್‌, ಅಭಿನವ್‌ ಮನೋಹರ್‌ ಹಾಗೂ ಮೊಹಮ್ಮದ್‌ ಶಮಿ ಅವರನ್ನು ಔಟ್‌ ಮಾಡುವ ಮೂಲಕ ಪಂದ್ಯಕ್ಕೆ ತಿರುವು ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಶಾರ್ದೂಲ್‌, 'ಈ ಋತುವಿನ ಐಪಿಎಲ್‌ನಲ್ಲಿ ಆಡುತ್ತೇನೆ ಎಂದುಕೊಂಡಿದ್ದಿರಾ?' ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

'ಪ್ರಾಮಾಣಿಕವಾಗಿ ಹೇಳಬೇಕೆಂದರೆ ಹಾಗೆ ಅಂದುಕೊಂಡಿರಲಿಲ್ಲ. ಆದರೆ, ಐಪಿಎಲ್‌ನಲ್ಲಿ ಆಡಲಾಗದಿದ್ದರೆ, ಕೌಂಟಿಯಲ್ಲಿ ಆಡಲು ಯೋಜಿಸಿದ್ದೆ' ಎಂದಿದ್ದಾರೆ.

'ರಣಜಿ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾಗ ಜಹೀರ್‌ ಖಾನ್‌ (ಲಖನೌ ತಂಡದ ಮೆಂಟರ್‌) ಕರೆ ಮಾಡಿದ್ದರು. ಬದಲಿ ಆಟಗಾರನಾಗಿ ನಿಮಗೆ ಅವಕಾಶ ಸಿಗಬಹುದು ಎಂದು ತಿಳಿಸಿದ್ದರು' ಎಂದಿದ್ದಾರೆ.

ಮುಂದುವರಿದು, 'ಏರಿಳಿತಗಳು ಬದುಕಿನ ಭಾಗ. ಯಾವಾಗಲೂ ನನ್ನಲ್ಲಿನ ಕೌಶಲಗಳನ್ನು ನಂಬುತ್ತೇನೆ' ಎಂದು ಹೇಳಿದ್ದಾರೆ.

ಟೂರ್ನಿಯಲ್ಲಿ ಹಲವು ತಂಡಗಳು 200ಕ್ಕೂ ಅಧಿಕ ರನ್‌ಗಳನ್ನು ಸುಲಭವಾಗಿ ರನ್‌ ಗಳಿಸುತ್ತಿರುವ ಕುರಿತು, ಪಿಚ್‌ಗಳು ಹೆಚ್ಚು ಸಮತೋಲನದಿಂದ ಕೂಡಿದ್ದರೆ ಬೌಲರ್‌ಗಳೂ ಯಶಸ್ಸು ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

'ಈ ರೀತಿಯ (ಬ್ಯಾಟಿಂಗ್ ಸ್ನೇಹಿ) ಪಿಚ್‌ಗಳಲ್ಲಿ ಬೌಲರ್‌ಗಳು ಯಶಸ್ಸು ಸಾಧಿಸುವುದು ಅಪರೂಪ' ಎಂದು ಅಭಿಪ್ರಾಯಪಟ್ಟಿರುವ ಅವರು, 'ಪಿಚ್‌ಗಳು ಬ್ಯಾಟರ್‌ಗಳು ಹಾಗೂ ಬೌಲರ್‌ಗಳಿಗೆ ಸಮಬಲದ ಹೋರಾಟ ನಡೆಸಲು ಸಾಧ್ಯವಾಗುವ ರೀತಿಯಲ್ಲಿ ಪಿಚ್‌ಗಳು ಸಿದ್ಧವಾಗಬೇಕು ಎಂದು ಕಳೆದ ಪಂದ್ಯದ ಸಂದರ್ಭದಲ್ಲೂ ಹೇಳಿದ್ದೆ' ಎಂದು ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.