ಸ್ಮೃತಿ ಮಂದಾನ
ದುಬೈ: ಭಾರತ ತಂಡದ ಪ್ರಮುಖ ಬ್ಯಾಟರ್ ಸ್ಮೃತಿ ಮಂದಾನ ಅವರು ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನ ಮರಳಿ ಪಡೆಯುವ ಹಾದಿಯಲ್ಲಿದ್ದಾರೆ. ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ತ್ರಿಕೋನ ಸರಣಿಯಲ್ಲಿ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಂದಾನ ಬುಧವಾರ ಪ್ರಕಟವಾದ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
ಸರಣಿಯ ಫೈನಲ್‌ನಲ್ಲಿ ಶತಕ (101, 116ಎ) ಬಾರಿಸಿದ್ದ ಈ ಆಟಗಾರ್ತಿ ಈ ಹಿಂದೆ 2019ರಲ್ಲಿ ಏಕದಿನ ಮಾದರಿಯ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದರು. ಈಗ ಅವರಿಗೂ, ಅಗ್ರಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೋಲ್ವಾರ್ಟ್ ಅವರಿಗೂ ಕೇವಲ 11 ಪಾಯಿಂಟ್‌ಗಳ ಅಂತರವಿದೆ. ತ್ರಿಕೋನ ಸರಣಿಯಲ್ಲಿ ಮಂದಾನ 264 ರನ್ ಗಳಿಸಿದ್ದರೆ, ಲಾರಾ ಬರೇ 86 ರನ್ ಗಳಿಸಿದ್ದರು.
ಶ್ರೀಲಂಕಾ ತಂಡದ ನಾಯಕಿ ಚಾಮರಿ ಅಟಪಟ್ಟು ಅವರೂ ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ. ತವರಿನಲ್ಲಿ ನಡೆದ ಸರಣಿಯಲ್ಲಿ 139 ರನ್ ಗಳಿಸಿದ್ದ ಅವರು ಏಳನೇ ಸ್ಥಾನಕ್ಕೇರಿದ್ದಾರೆ. ಭಾರತದ ಜೆಮಿಮಾ ರಾಡ್ರಿಗಸ್ 20ರಿಂದ 15ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಸ್ನೇಹ ರಾಣಾ ಪ್ರಗತಿ: ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್ ಅವರು ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ಭಾರತದ ಆಫ್ ಸ್ಪಿನ್ನರ್ ಸ್ನೇಹ ರಾಣಾ ಅವರು ನಾಲ್ಕು ಸ್ಥಾನ ಪ್ರಗತಿ ಕಂಡು 34ನೇ ಸ್ಥಾನಕ್ಕೇರಿದ್ದಾರೆ. ಅವರು ತ್ರಿಕೋನ ಸರಣಿಯಲ್ಲಿ ಕೇವಲ 14ರ ಸರಾಸರಿಯಲ್ಲಿ 15 ವಿಕೆಟ್‌ಗಳನ್ನು ಪಡೆದು ಸರಣಿಯ ಆಟಗಾರ್ತಿ ಗೌರವಕ್ಕೆ ಪಾತ್ರರಾಗಿದ್ದರು.
ಆಸ್ಟ್ರೇಲಿಯಾದ ಆಶ್ಲೆ ಗಾರ್ಡನರ್ ಏಕದಿನ ಆಲ್‌ರೌಂಡರ್‌ಗಳ ಯಾದಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ಭಾರತದ ದೀಪ್ತಿ ಶರ್ಮಾ ಐದನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.