ADVERTISEMENT

ಹಳೇ ಶೈಲಿಯಲ್ಲೇ ಬ್ಯಾಟಿಂಗ್ ಮಾಡುತ್ತಿದೆ ಭಾರತ: ನಾಸಿರ್ ಹೀಗೆ ಹೇಳಿದ್ದು ಏಕೆ?

ಐಎಎನ್ಎಸ್
Published 10 ನವೆಂಬರ್ 2022, 15:08 IST
Last Updated 10 ನವೆಂಬರ್ 2022, 15:08 IST
ಪವರ್‌ ಪ್ಲೇ ವೇಳೆ ರಕ್ಷಣಾತ್ಮಕವಾಗಿ ಆಡಿದ ವಿರಾಟ್‌ ಕೊಹ್ಲಿ. (ಚಿತ್ರಕೃಪೆ: Twitter / @BCCI)
ಪವರ್‌ ಪ್ಲೇ ವೇಳೆ ರಕ್ಷಣಾತ್ಮಕವಾಗಿ ಆಡಿದ ವಿರಾಟ್‌ ಕೊಹ್ಲಿ. (ಚಿತ್ರಕೃಪೆ: Twitter / @BCCI)   

ಅಡಿಲೇಡ್‌: ಭಾರತ ಕ್ರಿಕೆಟ್ ತಂಡವು ಪವರ್‌ ಪ್ಲೇ ವೇಳೆ ಇನ್ನೂ ಹಳೇ ಮಾದರಿಯಲ್ಲೇ ಬ್ಯಾಟಿಂಗ್ ಮಾಡುತ್ತಿದೆ ಎಂದುಇಂಗ್ಲೆಂಡ್ ಕ್ರಿಕೆಟ್‌ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್‌ 10 ವಿಕೆಟ್‌ ಅಂತರದ ಸೋಲು ಅನುಭವಿಸಿದೆ.

ಪಂದ್ಯದ ಬಳಿಕ 'ಸ್ಕೈ ಸ್ಪೋರ್ಟ್ಸ್‌' ಜೊತೆ ಮಾತನಾಡಿರುವ ನಾಸಿರ್‌, 'ಇಂಗ್ಲೆಂಡ್‌ ತಂಡ ಮೊದಲ ಆರು ಓವರ್‌ಗಳಲ್ಲಿ (ಪವರ್‌ ಪ್ಲೇ ವೇಳೆ) ಹೇಗೆ ಬ್ಯಾಟಿಂಗ್‌ ಮಾಡಿತು ಎಂಬುದನ್ನು ನೋಡಿದರೆ, ಭಾರತ ತಂಡ ಮಾಡಿದ ದೋಷವೇನು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅಲೆಕ್ಸ್‌ ಹೇಲ್ಸ್‌ ಮತ್ತು ಜಾಸ್‌ ಬಟ್ಲರ್‌ ನಿರ್ಭೀತಿಯಿಂದ ಬ್ಯಾಟ್‌ ಬೀಸಿದರು. ಆದರೆ, ಭಾರತ ಇನ್ನೂ ಹಳೇ ಶೈಲಿಯಲ್ಲೇ ಬ್ಯಾಟಿಂಗ್‌ ನಡೆಸಿತು' ಎಂದು ಹೇಳಿದ್ದಾರೆ.

ADVERTISEMENT

ಬ್ಯಾಟಿಂಗ್‌ ವೇಳೆ ಮೊದಲ ಆರು ಓವರ್‌ಗಳ ಪವರ್‌ ಪ್ಲೇ ಅವಧಿಯಲ್ಲಿ ರಕ್ಷಣಾತ್ಮಕವಾಗಿ ಆಡಿದ ಭಾರತ ತಂಡ 1 ವಿಕೆಟ್‌ ನಷ್ಟಕ್ಕೆ 38 ರನ್‌ ಗಳಿಸಿತ್ತು. ಉಪನಾಯಕ ಕೆ.ಎಲ್‌.ರಾಹುಲ್‌ 5 ಎಸೆತಗಳಲ್ಲಿ 5 ರನ್‌ ಗಳಿಸಿ ಔಟಾದರೆ,ವಿರಾಟ್ ಕೊಹ್ಲಿ 13 ಎಸೆತಗಳಲ್ಲಿ 12 ರನ್‌ ಮತ್ತು ನಾಯಕ ರೋಹಿತ್‌ ಶರ್ಮಾ 18 ಎಸೆತಗಳಲ್ಲಿ 20 ರನ್‌ ಗಳಿಸಿದ್ದರು.

ಆದರೆ, ಇಂಗ್ಲೆಂಡ್‌ ತಂಡ ಇದೇ ಅವಧಿಯಲ್ಲಿ ಬಿರುಸಾಗಿ ಬ್ಯಾಟ್‌ ಬೀಸಿ ವಿಕೆಟ್‌ ನಷ್ಟವಿಲ್ಲದೆ 68 ರನ್‌ ಕಲೆಹಾಕಿತ್ತು. ಅಲೆಕ್ಸ್‌ ಹೇಲ್ಸ್‌ 23 ಎಸೆತಗಳಲ್ಲಿ 42 ರನ್‌ ಮತ್ತು ಜಾಸ್‌ ಬಟ್ಲರ್‌ 19 ಎಸೆತಗಳಲ್ಲಿ 29 ರನ್‌ ಬಾರಿಸಿದ್ದರು.

ಹುಸ್ಸೇನ್‌ ಮಾತನ್ನು ಮತ್ತೊಬ್ಬ ಮಾಜಿ ಕ್ರಿಕೆಟಿಗ ಮೈಕಲ್‌ ಅಥರ್ಟನ್‌ ಸಹ ಒಪ್ಪಿಕೊಂಡಿದ್ದು, ಭಾರತದ ಬ್ಯಾಟರ್‌ಗಳು ಇಂಗ್ಲೆಂಡ್‌ ಬೌಲರ್‌ಗಳು ಪರಿಸ್ಥಿತಿಗೆ ಒಗ್ಗಿಕೊಳ್ಳಲು ಅವಕಾಶ ಮಾಡಿಕೊಟ್ಟರು. ಆದರೆ, ಇಂಗ್ಲೆಂಡ್‌ ಬ್ಯಾಟರ್‌ಗಳು ಆ ತಪ್ಪು ಮಾಡಲಿಲ್ಲ. ಇದು ಎರಡೂ ತಂಡಗಳ ನಡುವಿನ ವ್ಯತ್ಯಾಸವಾಗಿದೆ ಎಂದು ಹೇಳಿದ್ದಾರೆ.

ಇಂದು (ನವೆಂಬರ್‌ 10 ರಂದು) ಅಡಿಲೇಡ್‌ನ ಓವಲ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 169 ರನ್ ಗಳಿಸಿತ್ತು.ಟೂರ್ನಿಯಲ್ಲಿ ನಾಲ್ಕನೇ ಅರ್ಧಶತಕ ಸಿಡಿಸಿದ ವಿರಾಟ್‌ ಕೊಹ್ಲಿ (50) ಮತ್ತು ಸ್ಫೋಟಕ ಬ್ಯಾಟಿಂಗ್ ಮಾಡಿದ ಹಾರ್ದಿಕ್‌ ಪಾಂಡ್ಯ (63) ಭಾರತ ತಂಡಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾಗಿದ್ದರು.

ಈ ಮೊತ್ತ ಇಂಗ್ಲೆಂಡ್‌ಗೆ ಸವಾಲೇ ಆಗಲಿಲ್ಲ. ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಅಲೆಕ್ಸ್‌ ಹೇಲ್ಸ್‌ (89) ಮತ್ತು ಜಾಸ್‌ ಬಟ್ಲರ್‌ (80) ಜೋಡಿ ಮುರಿಯದ ಮೊದಲ ವಿಕೆಟ್‌ ಪಾಲುದಾರಿಕೆಯಲ್ಲಿ 170 ರನ್‌ ಕಲೆಹಾಕಿತು. ಹೀಗಾಗಿ 10 ವಿಕೆಟ್ ಅಂತರದ ಜಯ ಸಾಧಿಸಿದ ಇಂಗ್ಲೆಂಡ್‌, ‌ನವೆಂಬರ್‌ 13ರಂದು ಪಾಕಿಸ್ತಾನ ವಿರುದ್ಧ ಮೆಲ್ಬರ್ನ್‌ನಲ್ಲಿ ನಡೆಯುವ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.