
ಲಾಹೋರ್: ಭಾರತದ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಬೇಕೇ? ಬೇಡವೇ? ಎಂಬ ಅಂತಿಮ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಶನಿವಾರ ತಿಳಿಸಿದೆ.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಬಾಂಗ್ಲಾದೇಶ ತಂಡವನ್ನು ವಿಶ್ವಕಪ್‌ನಿಂದ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಈ ವಿಚಾರವನ್ನು ಪ್ರಧಾನಿ ಶಹಬಾಜ್ ಷರೀಫ್ ಮುಂದೆ ಇಡಲಾಗುವುದು. ವಿದೇಶ ಪ್ರವಾಸದಲ್ಲಿರುವ ಅವರು, ವಾಪಸ್ ಆದ ನಂತರ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
'ಟಿ20 ವಿಶ್ವಕಪ್‌ನಲ್ಲಿ ನಾವು ಆಡುತ್ತೇವೆಯೇ, ಇಲ್ಲವೇ ಎಂಬ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿದೆ' ಎಂದು ಸ್ಪಷ್ಟಪಡಿಸಿದ್ದಾರೆ.
'ನಮ್ಮ ಪ್ರಧಾನಿ ಸದ್ಯ ದೇಶದಲ್ಲಿಲ್ಲ. ವಾಪಸ್ ಆದ ನಂತರ, ಅವರಿಂದ ಸಲಹೆ ಪಡೆಯುತ್ತೇವೆ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ವಿಶ್ವಕಪ್‌ನಲ್ಲಿ ಆಡುವುದು ಬೇಡ ಎಂದು ಷರೀಫ್ ಅವರು ಹೇಳಿದರೆ, ಐಸಿಸಿ ಬೇರೆ ಯಾವುದೇ ತಂಡಕ್ಕೆ ಆಹ್ವಾನ ನೀಡಬಹುದು' ಎಂದು ಖಚಿತಪಡಿಸಿದ್ದಾರೆ.
ರಾಜತಾಂತ್ರಿಕ ವಿವಾದದ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಪಿಸಿಬಿ ಮಾಡಿಕೊಂಡಿರುವ ಒಪ್ಪಂದದ ಅನುಸಾರ, ಪಾಕಿಸ್ತಾನ ತಂಡದ ಎಲ್ಲ ಪಂದ್ಯಗಳು ಶ್ರೀಲಂಕಾದಲ್ಲಿ ನಿಗದಿಯಾಗಿವೆ.
ಪಾಕ್ ಬೆಂಬಲ
ಬಾಂಗ್ಲಾದೇಶ ತಂಡವು ಭದ್ರತೆಯ ಕಾರಣ ನೀಡಿ, ತನ್ನ ಪಾಲಿನ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಐಸಿಸಿಗೆ ಮನವಿ ಮಾಡಿತ್ತು.
ಈ ಸಂಬಂಧ ಐಸಿಸಿ ಮಂಡಳಿಗಳ ಸಭೆಯಲ್ಲಿ ಸದಸ್ಯರ ಅಭಿಮತ ಪಡೆಯಲಾಗಿತ್ತು. ಬಾಂಗ್ಲಾ ತಂಡವು ಭಾರತದಲ್ಲಿಯೇ ಪಂದ್ಯಗಳನ್ನು ಆಡಬೇಕು ಎನ್ನುವ ನಿರ್ಣಯದ ಪರ 14 ಸದಸ್ಯರು ಮತ ಚಲಾಯಿಸಿದ್ದರು. ಅದರ ವಿರುದ್ಧ ಬಾಂಗ್ಲಾ ಹಾಗೂ ಪಾಕಿಸ್ತಾನ ಮಾತ್ರವೇ ನಿಂತಿದ್ದವು.
ಹೀಗಾಗಿ, ಬಾಂಗ್ಲಾ ಮಂಡಳಿಗೆ ತನ್ನ ತೀರ್ಮಾನ ವ್ಯಕ್ತಪಡಿಸಲು ಐಸಿಸಿಯು 24 ಗಂಟೆಗಳ ಗಡುವು ನೀಡಿತ್ತು. ಆದಾಗ್ಯೂ, ಬಾಂಗ್ಲಾ ಸರ್ಕಾರದ ಕ್ರೀಡಾ ಸಚಿವಾಲಯದ ಸಲಹೆಗಾರ ಅಸೀಫ್ ನಜ್ರುಲ್ ಅವರು ಐಸಿಸಿ ತೀರ್ಪನ್ನು ಒಪ್ಪಲಿಲ್ಲ. ಇದರಿಂದಾಗಿ ಬಾಂಗ್ಲಾ ತಂಡವನ್ನು ಕೈಬಿಡಲಾಗಿದೆ.
'ಬಾಂಗ್ಲಾದೇಶ ತಂಡಕ್ಕೆ ಅನ್ಯಾಯ'
ಬಾಂಗ್ಲಾದೇಶವನ್ನು ವಿಶ್ವ ಕ್ರಿಕೆಟ್‌ನ 'ದೊಡ್ಡ ಪಾಲುದಾರ' ರಾಷ್ಟ್ರ ಎಂದು ಬಣ್ಣಿಸಿರುವ ನಖ್ವಿ, ಆ ತಂಡಕ್ಕೆ ಐಸಿಸಿ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದ್ದಾರೆ.
'ಬಾಂಗ್ಲಾದೇಶವು ವಿಶ್ವ ಕ್ರಿಕೆಟ್‌ನ ದೊಡ್ಡ ಪಾಲುದಾರ ರಾಷ್ಟ್ರವಾಗಿದ್ದು, ಈ ಪ್ರಕರಣದಲ್ಲಿ ನ್ಯಾಯಯುತವಾಗಿ ನಡೆಸಿಕೊಂಡಿಲ್ಲ. ಬುಧವಾರ (ಜನವರಿ 22ರಂದು) ನಡೆದ ಸಭೆಯಲ್ಲೂ ಇದನ್ನೇ ಪ್ರತಿಪಾದಿಸಿದ್ದೆ. ಐಸಿಸಿ ನಿಲುವಿನಲ್ಲಿ ಹಲವು ಅಂಶಗಳಿವೆ. ಅವನ್ನೆಲ್ಲ ಸಮಯ ಬಂದಾಗ ಮಾತಾಡುತ್ತೇನೆ' ಎಂದಿದ್ದಾರೆ.
ಭಾರತದ ವಿರುದ್ಧ ಪರೋಕ್ಷ ಕಿಡಿ
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಆಯ್ದ ನಿರ್ಧಾರಗಳನ್ನಷ್ಟೇ ಕೈಗೊಳ್ಳುತ್ತಿದೆ. ಅದರ ತೀರ್ಮಾನಗಳ ಮೇಲೆ 'ಒಂದು ಸದಸ್ಯ ರಾಷ್ಟ್ರ' ಪ್ರಭಾವ ಬೀರುತ್ತಿದೆ ಎಂದು ಆರೋಪಿಸಿದ್ದಾರೆ. ಆ ಮೂಲಕ ಪರೋಕ್ಷವಾಗಿ ಭಾರತದತ್ತ ಬೊಟ್ಟು ಮಾಡಿದ್ದಾರೆ.
'ಒಂದು ದೇಶವು ನಿರ್ದೇಶನಗಳನ್ನು ನೀಡುತ್ತಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳಿಗೆ ಅನುಕೂಲವಾಗುವಂತೆ ಸ್ಥಳ ಬದಲಾವಣೆ ಮಾಡಲು ಐಸಿಸಿಗೆ ಸಾಧ್ಯವಿದೆ ಎಂದಮೇಲೆ, ಅದನ್ನು ಬಾಂಗ್ಲಾ ವಿಚಾರದಲ್ಲೂ ಅನುಸರಿಸಲು ಏಕೆ ಸಾಧ್ಯವಾಗಿಲ್ಲ?' ಎಂದು ಪ್ರಶ್ನಿಸಿದ್ದಾರೆ.
'ನಮ್ಮ ನೀತಿ ಮತ್ತು ನಿಲುವುಗಳನ್ನು ಸ್ಪಷ್ಟವಾಗಿದೆ. ನಮ್ಮ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ನಾವು ಐಸಿಸಿಗೆ ಅಧೀನರಲ್ಲ. ಸರ್ಕಾರದ ನಿರ್ದೇಶನ ಪಾಲಿಸುತ್ತೇವೆ' ಎಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.