ADVERTISEMENT

ನೂರು 'ನೂರು': ಸಚಿನ್ ದಾಖಲೆ ಮುರಿಯುವರೇ ಕೊಹ್ಲಿ: ಗವಾಸ್ಕರ್ ಹೇಳಿದ್ದಿಷ್ಟು...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಡಿಸೆಂಬರ್ 2025, 10:25 IST
Last Updated 7 ಡಿಸೆಂಬರ್ 2025, 10:25 IST
<div class="paragraphs"><p>ವಿರಾಟ್‌ ಕೊಹ್ಲಿ, ಸುನಿಲ್‌ ಗವಾಸ್ಕರ್‌ ಹಾಗೂ ಸಚಿನ್‌ ತೆಂಡೂಲ್ಕರ್</p></div>

ವಿರಾಟ್‌ ಕೊಹ್ಲಿ, ಸುನಿಲ್‌ ಗವಾಸ್ಕರ್‌ ಹಾಗೂ ಸಚಿನ್‌ ತೆಂಡೂಲ್ಕರ್

   

ಕೃಪೆ: ಪಿಟಿಐ

ವಿಶಾಖಪಟ್ಟಣಂ: ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ದಾಖಲೆ 'ಮಾಸ್ಟರ್‌ ಬ್ಲಾಸ್ಟರ್‌' ಸಚಿನ್‌ ತೆಂಡೂಲ್ಕರ್ ಅವರ ಹೆಸರಲ್ಲಿದೆ. ಸದ್ಯ ಕ್ರಿಕೆಟ್‌ ಜಗತ್ತಿನ 'ಸೂಪರ್‌ಸ್ಟಾರ್‌' ಎನಿಸಿರುವ ವಿರಾಟ್‌ ಕೊಹ್ಲಿ ಅವರು, ಆ ದಾಖಲೆಯ ಸಮೀಪಕ್ಕೆ ಬಂದು ನಿಂತಿದ್ದಾರೆ.

ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ 2013ರಲ್ಲೇ ವಿದಾಯ ಹೇಳಿರುವ ಸಚಿನ್‌ ಖಾತೆಯಲ್ಲಿ 100 ಶತಕಗಳಿವೆ. ಟೆಸ್ಟ್‌ ಮತ್ತು ಟಿ20 ತೊರೆದು ಏಕದಿನ ಮಾದರಿಯಲ್ಲಷ್ಟೇ ಮುಂದುವರಿದಿರುವ 37 ವರ್ಷದ ಕೊಹ್ಲಿ, 84 ಸಲ ಮೂರಂಕಿ ದಾಟಿದ್ದಾರೆ. ಹೀಗಾಗಿ, ಸಚಿನ್ ಅವರ ದಾಖಲೆಯನ್ನು ಮುರಿಯುವರೇ ಎಂಬ ಚರ್ಚೆ ಆರಂಭವಾಗಿದೆ.

ಆ ಕುರಿತು ಕ್ರಿಕೆಟ್‌ ದಿಗ್ಗಜ ಸುನಿಲ್‌ ಗವಾಸ್ಕರ್‌ ಪ್ರತಿಕ್ರಿಯಿಸಿದ್ದಾರೆ.

ತಪ್ಪಿತು ಹ್ಯಾಟ್ರಿಕ್‌ ಅವಕಾಶ
ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಶನಿವಾರವಷ್ಟೇ (ಡಿ.6) ಮುಕ್ತಾಯವಾದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಕೊಹ್ಲಿ, ಎರಡು ಶತಕ ಹಾಗೂ ಒಂದು ಅರ್ಧಶತಕ ಬಾರಿಸಿದ್ದಾರೆ.

151ರ ಸರಾಸರಿ ಮತ್ತು 117ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅವರು 302 ರನ್‌ ಕಲೆಹಾಕಿದರೂ, ಹ್ಯಾಟ್ರಿಕ್‌ ಶತಕ ಸಿಡಿಸುವ ಅವಕಾಶ ಕಳೆದುಕೊಂಡರು.

ರಾಂಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ 135 ರನ್‌ ಚಚ್ಚಿದ್ದ 'ಕಿಂಗ್‌', ರಾಯಪುರದಲ್ಲಿ ನಡೆದ ಎರಡನೇ ಹಣಾಹಣಿಯಲ್ಲಿ 102 ರನ್‌ ಗಳಿಸಿದ್ದರು. ವಿಶಾಖಪಟ್ಟಣಂನಲ್ಲಿ ನಡೆದ ಅಂತಿಮ ಸೆಣಸಾಟದಲ್ಲಿ ಆಫ್ರಿಕಾ ನೀಡಿದ್ದ 271 ರನ್‌ಗಳ ಸವಾಲಿನ ಗುರಿ ಎದುರು ಅಬ್ಬರಿಸಿದ್ದ ಅವರು, 45 ಎಸೆತಗಳಲ್ಲೇ ಅಜೇಯ 65 ರನ್‌ ಬಾರಿಸಿದ್ದರು.

ಗೆಲ್ಲಲು ಇನ್ನಷ್ಟು ರನ್‌ಗಳ ಅಗತ್ಯವಿದ್ದಿದ್ದರೆ, ಕೊಹ್ಲಿ ಬ್ಯಾಟ್‌ನಿಂದ ಸತತ ಮೂರನೇ ಶತಕ ಸಿಡಿಯುವ ಸಾಧ್ಯತೆ ಇತ್ತು.

ಗವಾಸ್ಕರ್‌ ಹೇಳಿದ್ದಿಷ್ಟು...
ಮೂರನೇ ಪಂದ್ಯದ ವೇಳೆ 'JioHotstar' ನೇರಪ್ರಸಾರದಲ್ಲಿ ಮಾತನಾಡಿರುವ ಗವಾಸ್ಕರ್‌, ಮೂರು ಪಂದ್ಯಗಳಲ್ಲಿ ಆಡಿರುವ ಕೊಹ್ಲಿ ಎರಡು ಶತಕ ಬಾರಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗಳಿಸಬಹುದು. 100 ಶತಕ ಸಿಡಿಸುವುದು ಅವರಿಂದ ಸಾಧ್ಯ ಎಂಬಂತೆ ಕಾಣುತ್ತಿದೆ ಎಂದಿದ್ದಾರೆ.

'(ನೂರು ಶತಕ ಗಳಿಸುವುದು) ಏಕೆ ಸಾಧ್ಯವಿಲ್ಲ? ಅವರು ಇನ್ನು ಮೂರು ವರ್ಷ ಆಡಿದರೂ, ಇನ್ನು ಬೇಕಿರುವುದು 16 ಶತಕಗಳು ಮಾತ್ರ' ಎಂದು ಹೇಳಿದ್ದಾರೆ.

'ಕೊಹ್ಲಿ ಬ್ಯಾಟಿಂಗ್ ಮಾಡುತ್ತಿರುವ ರೀತಿಯನ್ನು ಗಮನಿಸಿದರೆ, ನ್ಯೂಜಿಲೆಂಡ್‌ ಎದುರಿನ ಮುಂಬರುವ ಮೂರು ಪಂದ್ಯಗಳ ಸರಣಿಯಲ್ಲೂ ಎರಡು ಶತಕ ಗಳಿಸಬಹುದು. ಹಾಗಾಗಿ, ನೂರು ಶತಕ ಸಿಡಿಸುವ ಸಾಧ್ಯತೆ ದಟ್ಟವಾಗಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವರ್ಷಾರಂಭದಲ್ಲೇ ನ್ಯೂಜಿಲೆಂಡ್‌ ಸವಾಲು
ನ್ಯೂಜಿಲೆಂಡ್‌ ತಂಡ 2026ರ ಆರಂಭದಲ್ಲೇ ಭಾರತಕ್ಕೆ ಬಂದಿಳಿಯಲಿದ್ದು, ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳಲ್ಲಿ ಆಡಲಿದೆ.

ಏಕದಿನ ಪಂದ್ಯಗಳ ವೇಳಾಪಟ್ಟಿ
ಮೊದಲ ಪಂದ್ಯ:
ವಡೋದರಾ (ಜನವರಿ 11)
ಎರಡನೇ ಪಂದ್ಯ:
ರಾಜ್‌ಕೋಟ್‌ (ಜನವರಿ 14)
ಮೂರನೇ ಪಂದ್ಯ:
ಇಂದೋರ್‌ (ಜನವರಿ 18)

ಟಿ20 ಪಂದ್ಯಗಳ ವೇಳಾಪಟ್ಟಿ
ಮೊದಲ ಪಂದ್ಯ:
ನಾಗ್ಪುರ (ಜನವರಿ 21)
ಎರಡನೇ ಪಂದ್ಯ: ರಾಯಪುರ (ಜನವರಿ 23)
ಮೂರನೇ ಪಂದ್ಯ: ಗುವಾಹಟಿ (ಜನವರಿ 25)
ನಾಲ್ಕನೇ ಪಂದ್ಯ: ವಿಶಾಖಪಟ್ಟಣಂ (ಜನವರಿ 28)
ಐದನೇ ಪಂದ್ಯ:
ತಿರುವನಂತಪುರಂ (ಜನವರಿ 31)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.