ADVERTISEMENT

ISS ಅಂಗಳದಲ್ಲಿ ಭಾರತದ ಹೆಜ್ಜೆ; ಇತಿಹಾಸ ಸೃಷ್ಟಿಸಿದ ಗಗನಯಾನಿ ಶುಭಾಂಶು ಶುಕ್ಲಾ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 11:25 IST
Last Updated 26 ಜೂನ್ 2025, 11:25 IST
<div class="paragraphs"><p>ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್‌) ಪ್ರವೇಶಿಸಿದ ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಅವರು ತಮ್ಮ ಅನುಭವ ಹಂಚಿಕೊಂಡರು. ಶುಕ್ಲಾ ಅವರೊಂದಿಗೆ ಪ್ರಯಾಣಿಸಿದ ಸಹ ಗಗನಯಾನಿಗಳು ಮತ್ತು ಐಎಸ್‌ಎಸ್‌ನಲ್ಲಿರುವ ಗಗನಯಾನಿಗಳು ಇದ್ದಾರೆ –</p></div>

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್‌) ಪ್ರವೇಶಿಸಿದ ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಅವರು ತಮ್ಮ ಅನುಭವ ಹಂಚಿಕೊಂಡರು. ಶುಕ್ಲಾ ಅವರೊಂದಿಗೆ ಪ್ರಯಾಣಿಸಿದ ಸಹ ಗಗನಯಾನಿಗಳು ಮತ್ತು ಐಎಸ್‌ಎಸ್‌ನಲ್ಲಿರುವ ಗಗನಯಾನಿಗಳು ಇದ್ದಾರೆ –

   

ಪಿಟಿಐ

ನವದೆಹಲಿ: ಭಾರತೀಯ ವಾಯುಪಡೆಯ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ಐಎಸ್‌ಎಸ್‌) ಯಶಸ್ವಿಯಾಗಿ ಪ್ರವೇಶಿಸುವ ಮೂಲಕ ಗುರುವಾರ ಇತಿಹಾಸ ಸೃಷ್ಟಿದರು. ಈ ಮೂಲಕ ಅವರು ಐಎಸ್‌ಎಸ್‌ ಅಂಗಳದಲ್ಲಿ ಭಾರತದ ಹೆಜ್ಜೆ ಮೂಡುವಂತೆ ಮಾಡಿದರು.

ADVERTISEMENT

ಐಎಸ್‌ಎಸ್‌ ಪ್ರವೇಶಿಸಿದ ಭಾರತದ ಮೊದಲ ಗಗನಯಾನಿ ಎಂಬ ಕೀರ್ತಿಗೂ ಶುಕ್ಲಾ ಭಾಜನರಾದರು. ಭಾರತದ ರಾಕೇಶ್‌ ಶರ್ಮಾ ಅವರು ಗಗನಯಾನ ಕೈಗೊಂಡ 41 ವರ್ಷಗಳ ಬಳಿಕ ಅಂತರಿಕ್ಷ ಯಾನ ಕೈಗೊಂಡ ಎರಡನೇ ಗಗನಯಾನಿ ಅವರಾಗಿದ್ದಾರೆ. 

ನಾಲ್ವರು ಗಗನಯಾನಿಗಳನ್ನು ಹೊಂದಿದ್ದ ‘ಡ್ರ್ಯಾಗನ್‌’ ಬಾಹ್ಯಾಕಾಶ ಕೋಶವು (ಗ್ರೇಸ್‌) ಉಡಾವಣೆಯಾದ 28 ಗಂಟೆಗಳಲ್ಲಿ (ನಿಗದಿಗಿಂತ 30 ನಿಮಿಷ ಮೊದಲು) ಐಎಸ್‌ಎಸ್‌ ಜತೆ ಜೋಡಣೆ ಸಾಧಿಸಿದೆ. ಭಾರತೀಯ ಕಾಲಮಾನದ ಪ್ರಕಾರ ಗುರುವಾರ ಸಂಜೆ 4.01ಕ್ಕೆ ಜೋಡಣೆ ಪ್ರಕ್ರಿಯೆ ಆರಂಭವಾಗಿ 4.15ಕ್ಕೆ ಪೂರ್ಣಗೊಂಡಿತು ಎಂದು ‘ನಾಸಾ’ ಪ್ರಕಟಣೆಯಲ್ಲಿ ತಿಳಿಸಿದೆ. 

‘ಡ್ರ್ಯಾಗನ್‌’ ಅನ್ನು ಹೊತ್ತ ಸ್ಪೇಸ್‌ಎಕ್ಸ್‌ನ ‘ಫಾಲ್ಕನ್‌–9’ ರಾಕೆಟ್ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಮಧ್ಯಾಹ್ನ 12.01ಕ್ಕೆ ನಭಕ್ಕೆ ಚಿಮ್ಮಿತ್ತು. 

ಐಎಸ್‌ಎಸ್‌ ಜತೆಗೆ ನೌಕೆಯು ಮೃದುವಾಗಿ ಸಂಪರ್ಕ ಸಾಧಿಸಿದ ಬಳಿಕ, ಇವೆರಡನ್ನೂ 12 ಸೆಟ್‌ಗಳ ಕೊಕ್ಕೆಗಳೊಂದಿಗೆ ಸಂಪರ್ಕಿಸುವ ಮೂಲಕ ಕಠಿಣ ಜೋಡಣಾ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಲಾಯಿತು. ಆ ಬಳಿಕ ನೌಕೆಯೊಂದಿಗೆ ಸಂವಹನ ಮತ್ತು ವಿದ್ಯುತ್‌ ಸಂಪರ್ಕದ ಸ್ಥಾಪನೆಯಾಯಿತು ಎಂದು ನಾಸಾ ಹೇಳಿದೆ.

ದೇಶವಾಸಿಗಳಿಗೆ ನಮಸ್ಕಾರ. ಉತ್ತಮ ಸವಾರಿ ಅದಾಗಿತ್ತು. ತೇಲುವುದು ನಿಜವಾಗಿಯೂ ಅದ್ಭುತ ಅನುಭವ. ಇದು ನನ್ನ ವೈಯಕ್ತಿಕ ಸಾಧನೆಯಲ್ಲ ಬದಲಿಗೆ ನನ್ನ ಜತೆ ನಿಮ್ಮೆಲ್ಲರ ಸಾಮೂಹಿಕ ಶ್ರಮವಿದೆ
ಶುಭಾಂಶು ಶುಕ್ಲಾ 

ಶುಕ್ಲಾ ಅವರೊಂದಿಗೆ, ಅಮೆರಿಕದ ಪೆಗ್ಗಿ ವಿಟ್ಸನ್, ಹಂಗರಿಯ ಟಿರ್ಬೊ ಕಾಪು ಹಾಗೂ ಪೋಲೆಂಡ್‌ನ ಸ್ವವೋಶ್ ಓಜ್ನೈನ್‌ಸ್ಕಿ ವೀಶ್ನೀವುಫ್‌ಸ್ಕಿ ಅವರೂ ಯಶಸ್ವಿಯಾಗಿ ಐಎಸ್‌ಎಸ್‌ ಪ್ರವೇಶಿಸಿದರು.  14 ದಿನಗಳವರೆಗೆ ಐಎಸ್‌ಎಸ್‌ನಲ್ಲಿರುವ ಈ ಗಗನಯಾನಿಗಳು 60ಕ್ಕೂ ಹೆಚ್ಚು ಪ್ರಯೋಗಗಳನ್ನು ಕೈಗೊಳ್ಳಲಿದ್ದಾರೆ.

‘ಆಕ್ಸಿಯಂ–4’ ಕಾರ್ಯಕ್ರಮಕ್ಕೆ ಅನುಭವಿ ಗಗನಯಾತ್ರಿಯಾದ ಅಮೆರಿಕದ ಪೆಗ್ಗಿ ವಿಟ್ಸನ್ ಕಮಾಂಡರ್‌ ಆಗಿದ್ದರೆ, ಭಾರತೀಯ ವಾಯುಪಡೆಯಲ್ಲಿ ಪರೀಕ್ಷಾರ್ಥ ಪೈಲಟ್‌ ಆಗಿರುವ ಶುಕ್ಲಾ ಅವರು ಪೈಲಟ್‌ ಆಗಿದ್ದಾರೆ. 

ಪೋಲೆಂಡ್‌ನ ಸ್ವವೋಶ್ ಓಜ್ನೈನ್‌ಸ್ಕಿ ವೀಶ್ನೀವುಫ್‌ಸ್ಕಿ ಅವರು ಯೋಜನಾ ತಜ್ಞರಾಗಿದ್ದಾರೆ. ಅವರು ಪೋಲೆಂಡ್‌ನಿಂದ ಬಾಹ್ಯಾಕಾಶಕ್ಕೆ ಪ್ರವೇಶಿಸಿದ ಎರಡನೇ ವ್ಯಕ್ತಿ ಎಂದು ಕೀರ್ತಿಗೆ ಪಾತ್ರರಾಗಿದ್ದಾರೆ. ಈ ದೇಶದ ಮೊದಲ ಗಗನಯಾನಿ 1978ರಲ್ಲಿ ಬಾಹ್ಯಾಕಾಶ ಪ್ರವೇಶಿಸಿದ್ದರು. 

ಹಂಗರಿಯ ಟಿರ್ಬೊ ಕಾಪು ಅವರೂ ಯೋಜನಾ ತಜ್ಞರಾಗಿದ್ದು, ಈ ದೇಶದಿಂದ ಬಾಹ್ಯಾಕಾಶ ಪ್ರವೇಶಿಸಿದ ಎರಡನೇ ಗಗನಯಾತ್ರಿ ಆಗಿದ್ದಾರೆ. 45 ವರ್ಷಗಳ ಹಿಂದೆ ಹಂಗರಿಯ ಮೊದಲ ಬಾಹ್ಯಾಕಾಶ ಯಾನ ನಡೆದಿತ್ತು. 

ಐಎಸ್‌ಎಸ್‌ನಲ್ಲಿ ಈಗಾಗಲೇ ಏಳು ಗಗನಯಾನಿಗಳು ಇದ್ದಾರೆ. ಈಗ ಹೊಸದಾಗಿ ನಾಲ್ವರ ಸೇರ್ಪಡೆಯಿಂದ ಅಲ್ಲಿರುವ ಒಟ್ಟು ಗಗನಯಾನಿಗಳ ಸಂಖ್ಯೆ 11ಕ್ಕೆ ಏರಿದೆ.

ಐಎಸ್‌ಎಸ್‌ನಲ್ಲಿ ಅಪ್ಪುಗೆಯ ಸ್ವಾಗತ

ಐಎಸ್‌ಎಸ್‌ ಪ್ರವೇಶಿಸಿದ ನಾಲ್ವರು ಗಗನಯಾನಿಗಳಿಗೆ ಅಲ್ಲಿನ ಸಿಬ್ಬಂದಿಯಿಂದ ಬೆಚ್ಚಗಿನ ಅಪ್ಪುಗೆಯ ಸ್ವಾಗತ ದೊರೆಯಿತು. ಜೋಡಣಾ ಪ್ರಕ್ರಿಯೆ ಆರಂಭವಾದ ಒಂದು ಗಂಟೆ 45 ನಿಮಿಷಗಳ ಬಳಿಕ (ಸಂಜೆ 5.44ಕ್ಕೆ) ಐಎಸ್‌ಎಸ್‌ ದ್ವಾರ ತೆರೆಯಿತು. ಆ ಬಳಿಕ ‘ಗ್ರೇಸ್‌’ನಲ್ಲಿದ್ದ ಗಗನಯಾನಿಗಳು ತೇಲಿಕೊಂಡು ಐಎಸ್‌ಎಸ್‌ ಒಳಹೊಕ್ಕರು. ‘ಆಕ್ಸಿಯಂ–4’ರ ಕಮಾಂಡರ್‌ ಪೆಗ್ಗಿ ವಿಟ್ಸನ್‌ ಅವರು ಸಂಜೆ 5.53ಕ್ಕೆ ಮೊದಲಿಗೆ ತೇಲಿಕೊಂಡು ನಿಲ್ದಾಣದ ಒಳಗೆ ಬರುತ್ತಿದ್ದಂತೆ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಅವರನ್ನು ಶುಕ್ಲಾ ಮತ್ತು ಇತರ ಇಬ್ಬರು ಗಗನಯಾನಿಗಳು ಹಿಂಬಾಲಿಸಿದರು. ನಾಲ್ವರಿಗೂ ಪಾನೀಯ ನೀಡುವ ಮೂಲಕ ಐಎಸ್‌ಎಸ್‌ ಸಿಬ್ಬಂದಿ ಸ್ವಾಗತಿಸಿದರು.   

ಮಾವಿನ ರಸ ಕ್ಯಾರೆಟ್‌ ಹಲ್ವಾ...

ಸಂಸ್ಕರಿಸಿದ ಮಾವಿನ ರಸ ತಿನ್ನಲು ಸಿದ್ಧವಾಗಿರುವ ಹೆಸರು ಕಾಳು ಮತ್ತು ಕ್ಯಾರೆಟ್‌ ಹಲ್ವಾ ... ಇವು ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಿರುವ ಭಾರತೀಯ ಸ್ವಾದಿಷ್ಟ ಖಾದ್ಯಗಳು. ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 14 ದಿನಗಳವರೆಗೆ ಇರಲಿದ್ದಾರೆ. ಈ ಅವಧಿಯಲ್ಲಿ ಈ ಆಹಾರವನ್ನು ಸೇವಿಸಲಿದ್ದಾರೆ. ಅಲ್ಲದೆ ಈ ಖಾದ್ಯಗಳನ್ನು ತನ್ನ ಸಹ ಗಗನಯಾನಿಗಳ ಜತೆಗೂ ಹಂಚಿಕೊಳ್ಳಲಿದ್ದಾರೆ.

‘ಇಸ್ರೊ’ ಜತೆ ಸಮಾಲೋಚಿಸಿ ಮೈಸೂರಿನ ಡಿಫೆನ್ಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಬಯೋ ಡಿಫೆನ್ಸ್‌ ಟೆಕ್ನಾಲಜೀಸ್‌ (ಡಿಐಬಿಟಿ) ಈ ಆಹಾರಗಳನ್ನು ಆಯ್ಕೆ ಮಾಡಿದೆ.  ದೇಶದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆ ‘ಗಗನಯಾನ’ಕ್ಕಾಗಿ (2027) ಈ ಆಹಾರಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಅವನ್ನೇ ಶುಕ್ಲಾ ಅವರು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಡಿಐಬಿಟಿಯ ನಿರ್ದೇಶಕ ಆರ್‌. ಕುಮಾರ್‌ ಮಾಹಿತಿ ನೀಡಿದ್ದಾರೆ. 

ಬಾಹ್ಯಾಕಾಶದಲ್ಲಿ ಸೇವಿಸುವುದಕ್ಕೆ ಬೇಕಾದಂತೆ ಈ ಆಹಾರವನ್ನು ಸಿದ್ಧಪಡಿಸಲಾಗಿದೆ. ಇವನ್ನು ಕೊಠಡಿಯ ವಾತಾವರಣದಲ್ಲಿ 12 ತಿಂಗಳವರೆಗೆ ಸಂರಕ್ಷಿಸಿಡಬಹುದು. ಸುಲಭವಾಗಿ ತೆಗೆದುಕೊಂಡು ಹೋಗಲು ಮತ್ತು ಸೇವಿಸಲು ಅನುಕೂಲವಾಗುವಂತೆ 100 ಗ್ರಾಂಗಳ ಪೌಚ್‌ಗಳಲ್ಲಿ ಈ ಆಹಾರವನ್ನು ಶೇಖರಿಸಲಾಗಿದೆ.

ಶೂನ್ಯ ಗುರುತ್ವದ ಸೂಚಕ ‘ಜಾಯ್‌’

ನವದೆಹಲಿ: ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಅವರು ‘ಗ್ರೇಸ್‌’ನಲ್ಲಿದ್ದ ಹಂಸ ಪಕ್ಷಿ ಹೋಲುವ ಆಟಿಕೆ ‘ಜಾಯ್‌’ ಅನ್ನು ಪರಿಚಯಿಸಿದರು. ಶೂನ್ಯಗುರುತ್ವಾಕರ್ಷಣೆಯ ಸೂಚಕವಾಗಿ ಇದು ಕಾರ್ಯ ನಿರ್ವಹಿಸುತ್ತಿದೆ. ಅದು ‘ಆಕ್ಸಿಯಂ–4’ ಯೋಜನೆಯ ‘ಐದನೇ ಸಿಬ್ಬಂದಿ ಸದಸ್ಯ’ ಆಗಿದೆ ಎಂದು ಹೇಳಿದರು.

ಶುಕ್ಲಾ ಅವರ ಮಗ ಕಿಯಾಶ್‌ಗೆ ಪ್ರಾಣಿಗಳ ಮೇಲೆ ಅಪಾರ ಪ್ರೀತಿಯಿದೆ. ಈ ಕಾರಣಕ್ಕಾಗಿ ಹಂಸ ಪಕ್ಷಿಯ ಆಟಿಕೆಯನ್ನು ಶೂನ್ಯ ಗುರುತ್ವಾಕರ್ಷಣೆಯ ಸೂಚಕವಾಗಿ ಆಯ್ಕೆ ಮಾಡಲಾಗಿದೆ.

‘ನಾವು ಇಲ್ಲಿರುವುದು ನಾಲ್ವರಷ್ಟೇ ಅಲ್ಲ. ನಮ್ಮ ಜತೆಗೆ ಜಾಯ್‌ ಕೂಡ ಇದೆ. ಅದೂ ನಮ್ಮೊಂದಿಗೆ ತೇಲುತ್ತದೆ. ಅದು ಕೋಶದಾದ್ಯಂತ ತೇಲಾಡುತ್ತಿರುತ್ತದೆ. ಕೆಲವೊಮ್ಮೆ ಅದನ್ನು ಹುಡುಕಬೇಕಾದ ಪ್ರಸಂಗವೂ ಬಂದಿದೆ’ ಎಂದು ಪೋಲೆಂಡ್‌ನ ಸ್ವವೋಶ್ ಓಜ್ನೈನ್‌ಸ್ಕಿ ವೀಶ್ನೀವುಫ್‌ಸ್ಕಿ ಹೇಳಿದ್ದಾರೆ.

ಮೂರು ದೇಶಗಳ ಸಂಸ್ಕೃತಿಯ ಸಂಕೇತ: ಹಂಸ ಪಕ್ಷಿಯನ್ನು ಭಾರತದಲ್ಲಿ ಬುದ್ಧಿವಂತಿಕೆ ಮತ್ತು ಪರಿಶುದ್ಧತೆಯ ಸಂಕೇತಿಸುತ್ತದೆ. ಜತೆಗೆ ಅದು ಸತ್ಯದ ಅನ್ವೇಷಣೆಯನ್ನೂ ಪ್ರತಿನಿಧಿಸುತ್ತದೆ. ಅಲ್ಲದೆ ಇದನ್ನು ಸರಸ್ವತಿ ದೇವಿಯ ವಾಹನ ಎಂದೂ ಭಾವಿಸಲಾಗಿದೆ. ಪೋಲೆಂಡ್‌ನಲ್ಲಿ ಹಂಸವು ಶುದ್ಧತೆ, ನಿಷ್ಠೆಯನ್ನು ಪ್ರತಿನಿಧಿಸಿದರೆ, ಹಂಗರಿಯಲ್ಲಿ ಇದು ನಿಷ್ಠೆ ಮತ್ತು ಪ್ರಕೃತಿಯ ಸೌಂದರ್ಯವನ್ನು ಪ್ರತಿನಿಧಿಸುತ್ತದೆ. ಶೂನ್ಯ ಗುರುತ್ವಾಕರ್ಷಣೆಯ ಸೂಚಕವಾಗಿ ಹಂಸವನ್ನು ಆಯ್ಕೆ ಮಾಡುವ ಮೂಲಕ ‘ಆಕ್ಸಿಯಂ–4’ನ ಗಗನಯಾನಿಗಳು ತಮ್ಮ ದೇಶಗಳ ಸಂಸ್ಕೃತಿ ವೈವಿಧ್ಯತೆಯನ್ನು ಪ್ರತಿಬಿಂಬಿಸಿದ್ದಾರೆ ಎಂದು ‘ಆಕ್ಸಿಯಂ ಸ್ಪೇಸ್‌’ ತಿಳಿಸಿದೆ.

ಐಎಸ್‌ಎಸ್‌ ತಲುಪಿದ ಡ್ರ್ಯಾಗನ್; ದೇಶದಾದ್ಯಂತ ಸಂಭ್ರಮದ ಅಲೆ

ಲಖನೌ: ಲಖನೌ ಮೂಲದ ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾನಿಗಳಿದ್ದ ‘ಡ್ರ್ಯಾಗನ್’ ಬಾಹ್ಯಾಕಾಶ ನೌಕೆಯು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ಐಎಸ್‌ಎಸ್‌) ನೆಲೆಯೂರುತ್ತಿದ್ದಂತೆ ಭಾರತದಲ್ಲಿ ಸಂಭ್ರಮ ಮನೆ ಮಾಡಿದೆ.

‘ಭಾರತ್‌ ಮಾತಾ ಕೀ ಜೈ’, ‘ಇಂಡಿಯಾ, ಇಂಡಿಯಾ’, ‘ಹಿಪ್‌ ಹಿಪ್ ಹುರ್‍ರೆ...’ ಘೋಷಣೆಗಳು ಮುಗಿಲುಮುಟ್ಟಿವೆ. ಬುಧವಾರ ಯಶಸ್ವಿಯಾಗಿ ಉಡ್ಡಯನವಾದ ನೌಕೆಯು, ಭೂಮಿಯ ಸುತ್ತಲೂ 28 ಗಂಟೆಗಳ ಪರಿಭ್ರಮಿಸಿ, ನಂತರ ಯಶಸ್ವಿಯಾಗಿ ನಿಗದಿತ ಕಕ್ಷೆಯನ್ನು ಗುರುವಾರ ಸೇರಿತು.

ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದದಲ್ಲಿ ಸ್ಪರ್ಶ ಮಾಡುವುದರ ಹಿಂದೆಯೇ 41 ವರ್ಷದ ನಂತರ ಭಾರತೀಯನೊಬ್ಬ ಈ ಇತಿಹಾಸ ನಿರ್ಮಿಸಿದ ಹಿರಿಮೆಗೆ ಅವರು ಪಾತ್ರರಾದರು.

ಶುಕ್ಲಾ ಅವರ ತಂದೆ–ತಾಯಿ, ಬಂಧುಗಳು, ಶಿಕ್ಷಕರು, ಸ್ನೇಹಿತರು, ಅಸಂಖ್ಯ ವಿದ್ಯಾರ್ಥಿಗಳು ಮತ್ತು ಬಾಹ್ಯಾಕಾಶ ಕ್ಷೇತ್ರದ ಪ್ರೇಮಿಗಳು ಈ ಸಂದರ್ಭದಲ್ಲಿ ಶುಭ ಕೋರಿದರು. ಗಗನಯಾನಿಗಳು ಐಎಸ್‌ಎಸ್‌ನಲ್ಲಿ ನೆಲೆಯೂರುವ ಕ್ಷಣವನ್ನು, ತ್ರಿವರ್ಣಧ್ವಜ ಹಿಡಿದು ಶುಕ್ಲಾ ಅವರ ತಂದೆ–ತಾಯಿ ಕೂಡಾ ಆನಂದಿಸಿದರು.

‘ಅವನು ಐಎಸ್ಎಸ್‌ ತಲುಪಿದ್ದಾನೆ, ನಾವು ಚಂದ್ರನ ಮೇಲೆ ಇದ್ದಂತೆ ಭಾಸವಾಗುತ್ತಿದೆ’ ಎಂದು ಶುಭಾಂಶು ಅವರ ಸಹೋದರಿ ಸುಚಿ ಮಿಶ್ರಾ ಸಂತಸ ಹಂಚಿಕೊಂಡರು. ಇಡೀ ಭಾರತದಂತೆ, ನಮ್ಮ ಕುಟುಂಬ ಕೂಡಾ ಈ ಕ್ಷಣವನ್ನು ಸಂಭ್ರಮಿಸುತ್ತಿದೆ ಎಂದು ಹೇಳಿದರು.

ಬುಧವಾರದಂತೆ ಗುರುವಾರವೂ ಶುಕ್ಲಾ ಅವರ ತಂದೆ ಶಂಭು ಮತ್ತು ತಾಯಿ ಆಶಾ ಅವರು ಇಲ್ಲಿನ ವರ್ಲ್ಡ್‌ ಯೂನಿಟಿ ಕನ್ವೆನ್ಷನ್‌ ಸೆಂಟರ್ (ಡಬ್ಲ್ಯುಯುಸಿಸಿ)ಯಲ್ಲಿ ಈ ಸಂಭ್ರಮವನ್ನು ವೀಕ್ಷಿಸಿದರು. ಶುಕ್ಲಾ ಅವರು ಇಲ್ಲಿಯೇ 12ನೇ ತರಗತಿಯವರೆಗೂ ಶಿಕ್ಷಣ ಪೂರೈಸಿದ್ದರು.

ಆತ ನನ್ನ ಮಗ. ಆದರೆ, ಈ ಹೊತ್ತಿನಲ್ಲಿ ಅದನ್ನೂ ಮೀರಿದವನು. ನಮ್ಮ ಆಶೀರ್ವಾದದೊಂದಿಗೆ ಅಸಂಖ್ಯ ಭಾರತೀಯರ ಕನಸು ಮತ್ತು ಪ್ರಾರ್ಥನೆಯನ್ನು ಅಂತರಿಕ್ಷಕ್ಕೆ ಒಯ್ದಿದ್ದಾನೆ ಎಂದು ಶುಭಾಂಶು ಅವರ ತಂದೆ ಇಲ್ಲಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.