ADVERTISEMENT

ಮುಟ್ಟಿನ ಉತ್ಪನ್ನಗಳ ಆಯ್ಕೆ; ಯಾವುದು ಸುರಕ್ಷಿತ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜನವರಿ 2026, 7:05 IST
Last Updated 17 ಜನವರಿ 2026, 7:05 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮುಟ್ಟು ಗುಟ್ಟಲ್ಲ. ಹೆಣ್ಣುಮಕ್ಕಳಲ್ಲಿ ಮುಟ್ಟು ಸಹಜವಾದ ಜೈವಿಕ ಪ್ರಕ್ರಿಯೆಯಾಗಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹೆಣ್ತನದ ಪರಿಭಾಷೆಯೂ ಬದಲಾಗುತ್ತಿದೆ. ‘ಆ ದಿನಗಳು’ ಎಂಬ ಶಬ್ದಗಳು ‘ಮುಟ್ಟು.. ಪಿರಿಯಡ್‌..’ಗೆ ಬದಲಾಗಿದ್ದು ‘ಹ್ಯಾಪಿ ಟು ಬ್ಲೀಡ್‌’ ಎಂಬ ಪುಟ್ಟ ಆಂದೋಲನದಿಂದ. ಪಂಜಾಬ್‌ನ ಮಹಿಳಾ ಹಕ್ಕುಗಳ ಕಾರ್ಯಕರ್ತೆ ನಿಕಿತಾ ಅರೋರಾ ಎನ್ನುವವರು 2015ರಲ್ಲಿ ಈ ಆಂದೋಲನ ಆರಂಭಿಸಿದ್ದರು.

ಮುಟ್ಟಿನ ವೇಳೆ ಎಚ್ಚರಿಕೆ ವಹಿಸಬೇಕಾಗಿದ್ದು ಸ್ವಚ್ಛತೆಯ ಕಡೆಗೆ. ಮೊದಲೆಲ್ಲ, ಅಮ್ಮಂದಿರು ಕಾಟನ್ ಬಟ್ಟೆಗಳನ್ನು ಬಳಸುತ್ತಿದ್ದರು. (ಇಂದಿಗೂ ಅನೇಕ ಹಳ್ಳಿಗಳಲ್ಲಿ ಬಟ್ಟೆಯ ಬಳಕೆಯಿದೆ) ನಂತರ ದಿನಗಳಲ್ಲಿ ನ್ಯಾಪ್ಕಿನ್‌ ಅಥವಾ ಸ್ಯಾನಿಟರಿ ಪ್ಯಾಡ್‌ಗಳು ಮಾರುಕಟ್ಟೆಗೆ ಬಂದವು.

ADVERTISEMENT

ಪ್ಯಾಡ್‌ಗಳ ಬಳಕೆ ಕ್ಯಾನ್ಸರ್‌ಗೆ ಕಾರಣವಾಗಬಲ್ಲದು ಎನ್ನುವ ವರದಿಗಳು ಹರಡಿದರೂ, ಪ್ಯಾಡ್‌ಗಳ ಬಳಕೆ ಸಾಮಾನ್ಯವಾಯಿತು. ಹೆಣ್ಣುಮಕ್ಕಳ ಹಿತಕ್ಕಾಗಿ ಸರ್ಕಾರವೂ ಶಾಲೆಗಳಲ್ಲಿ ‘ಶುಚಿ’ ಯೋಜನೆ ಮೂಲಕ ಕಾಟನ್‌ ಪ್ಯಾಡ್‌ಗಳನ್ನು ನೀಡಲಾರಂಭಿಸಿತು.

ನಂತರ ಮಾರುಕಟ್ಟೆಗೆ ಬಂದಿದ್ದು ಟ್ಯಾಂಪೂನ್ ಮತ್ತು ಮುಟ್ಟಿನ ಕಪ್‌ಗಳು. ಈಗ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ಮುಂಬರುವ ಶೈಕ್ಷಣಿಕ ವರ್ಷದಿಂದ ಶಾಲಾ ಮಕ್ಕಳಿಗೆ ‘ಮುಟ್ಟಿನ ಕಪ್‌’ಗಳನ್ನು ನೀಡಲು ನಿರ್ಧರಿಸಿದೆ.

ಮುಟ್ಟಿನ ಹರಿವು ತಡೆಗೆ ಹಲವು ಆಯ್ಕೆ

ಋತುಚಕ್ರದ ವೇಳೆಯಲ್ಲಿ ಮನೆಯಲ್ಲೇ ಇರುವ ಕಾಟನ್‌ ಬಟ್ಟೆಗಳನ್ನು ಬಳಕೆ ಮಾಡುವುದು ಹೆಚ್ಚು ಖರ್ಚಿಲ್ಲದ್ದು. ಆದರೆ ಎಷ್ಟು ಸುರಕ್ಷಿತ ಎನ್ನುವುದನ್ನು ಗಮನಿಸಬೇಕಾದ ಸಂಗತಿಯಾಗಿದೆ. ಒಮ್ಮೆ ಬಳಸಿದ ಬಟ್ಟೆಗಳನ್ನು ಮತ್ತೆ ಬಳಕೆ ಮಾಡುವುದಾದರೆ ಅದರ ಶುಚಿತ್ವದ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ, ಉದಾಹರಣೆಗೆ ಬಿಸಿನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸುವುದರಿಂದ ಬಟ್ಟೆಯ ನೈರ್ಮಲ್ಯ ಕಾಪಾಡಬಹುದು.

ಇನ್ನು ಪ್ಯಾಡ್‌ಗಳ ಬಳಕೆ, ಮಾರುಕಟ್ಟೆಯಲ್ಲಿ ತರಹೇವಾರಿ ಕಂಪನಿಯ, ವಿವಿಧ ಆಯ್ಕೆಗಳಲ್ಲಿ ಪ್ಯಾಡ್‌ಗಳು ಲಭ್ಯವಿವೆ. ಬಜೆಟ್‌ ಸ್ನೇಹಿಯಾಗಿರುವ ಪ್ಯಾಡ್‌ಗಳು ಸುಲಭವಾಗಿ ಎಲ್ಲಾ ವೈದ್ಯಕೀಯ ಅಂಗಡಿಗಳಲ್ಲೂ ಲಭ್ಯವಿರುತ್ತವೆ. ಬಳಕೆಯೂ ಸುಲಭ, ಸುರಕ್ಷಿತ. ಆದರೆ ಪ್ಯಾಡ್‌ ಬಳಕೆಯಿಂದ ಕೆಲವು ಅಪಾಯಗಳೂ ಇವೆ. ಉದಾಹರಣೆಗೆ ದಪ್ಪ ಪ್ಯಾಡ್‌ಗಳ ಬಳಕೆಯಿಂದ ಕಿರಿಕಿರಿ. ಓಡಾಟ, ಕುಳಿತು ಏಳುವುದು ಸೇರಿದಂತೆ ಇತರ ಕಲಸಗಳನ್ನು ಮಾಡುವಾಗ ಸರಿಯುವ ಸಾಧ್ಯತೆ ಇರುತ್ತದೆ. ಇದರಿಂದ ರಕ್ತದ ಕಲೆಗಳಾಗಬಹುದು. ಮುಖ್ಯವಾಗಿ ಪ್ಯಾಡ್‌ಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಮಾಡುವುದರಿಂದ ಪರಿಸರ ಸ್ನೇಹಿ ಕೂಡ ಅಲ್ಲ ಎನ್ನಲಾಗುತ್ತದೆ.

ಇನ್ನೊಂದು ಆಯ್ಕೆ ಎಂದರೆ ಟ್ಯಾಂಪೂನ್‌ಗಳ ಬಳಕೆ. ಸಿಲಿಂಡರ್‌ ಆಕಾರದ ಸಣ್ಣ ಉತ್ಪನ್ನವಾಗಿರುವ ಇದು ಸುಲಭವಾಗಿ ಹೀರಿಕೊಳ್ಳುತ್ತದೆ. ಕ್ರೀಡಾಪಟುಗಳು ಹೆಚ್ಚು ಬಳಸುತ್ತಾರೆ. ಇದನ್ನು ಒಮ್ಮೆ ಅಳವಡಿಸಿಕೊಂಡರೆ ಜಾರುವ ಸಮಸ್ಯೆ ಇರದು, ಹೀಗಾಗಿ ಕಿರಿಕಿರಿಯಾಗದು. ಜತೆಗೆ ಕಲೆಗಳಾಗಬಹುದು ಎನ್ನುವ ಭಯ ಇರದು. ಆದರೆ ಸಮಯಕ್ಕೆ ಸರಿಯಾಗಿ ಅದನ್ನು ಹೊರತೆಗೆಯುವುದು ಮುಖ್ಯವಾಗಿರುತ್ತದೆ, 8 ಗಂಟೆಗೂ ಹೆಚ್ಚು ಕಾಲ ಟ್ಯಾಂಪೂನ್‌ ಬಳಕೆ ಅಪಾಯಕಾರಿ.

ಮುಟ್ಟಿನ ಕಪ್‌ಗಳನ್ನು ಕಳೆದ ಕೆಲವು ವರ್ಷಗಳಿಂದ ಅತಿ ಹೆಚ್ಚು ಜನರು ಬಳಸುತ್ತಿದ್ದಾರೆ. ವೈದ್ಯಕೀಯ ದರ್ಜೆಯ ಸಿಲಿಕೋನ್‌ನಿಂದ ಇದನ್ನು ತಯಾರಿಸಲಾಗುತ್ತದೆ. ಇದು ಕಪ್‌ನ ಆಕಾರದಲ್ಲಿರುವುದರಿಂದ ಇದನ್ನು ಅಳವಡಿಸಿಕೊಳ್ಳಬೇಕು. ತುಸು ದುಬಾರಿಯಾದರೂ ದೀರ್ಘಕಾಲ ಬಾಳಿಕೆ ಬರುವಂತಹದ್ದಾಗಿದೆ. ಮುಟ್ಟಿನ ಹರಿವನ್ನು 12 ಗಂಟೆಗಳ ಕಾಲ ಹಿಡಿದಿಡುವ ಸಾಮರ್ಥ್ಯ ಇದರದ್ದು. ಆದರೆ ಮುಟ್ಟಿನ ಕಪ್‌ಗಳ ಬಳಕೆಯಲ್ಲಿ ಅಪಾಯಗಳೂ ಹೆಚ್ಚು. ಅಳವಡಿಕೆ ಮತ್ತು ಸುರಕ್ಷಿತವಾಗಿ ಹೊರತೆಗೆಯುವ ಬಗ್ಗೆ ತಿಳಿದಿರಬೇಕು. ನಿಯಮಿತವಾಗಿ ಶುಚಿಗೊಳಿಸುವುದು ಅಗತ್ಯ.

ಮುಟ್ಟಿನ ಕಪ್‌ಗಳ ಬಳಕೆಗೆ ಹೆಚ್ಚು ಸ್ವಚ್ಛತೆ ಅಗತ್ಯವಾಗಿರುತ್ತದೆ. ಪ್ಯಾಡ್‌ಗಳನ್ನು ಬಳಸಿದಂತೆ ಸುಲಭವಾದ ಬಳಕೆ ಸಾಧ್ಯವಾಗದು. ಅದರಲ್ಲೂ ಮಕ್ಕಳಿಗೆ ಮುಟ್ಟಿನ ಕಪ್‌ ಬಳಕೆ ತುಸು ಅಪಾಯಕಾರಿ. ಏಕೆಂದರೆ ಕಪ್‌ಗಳನ್ನು ಯೋನಿಯೊಳಗೆ ಅಳವಡಿಸಿಕೊಳ್ಳಬೇಕಾಗಿರುವುದರಿಂದ ಅದರ ಬಗ್ಗೆ ತಿಳಿವಳಿಕೆ ಅಗತ್ಯವಾಗಿರುತ್ತದೆ. ಇಲ್ಲದಿದ್ದರೆ ಸೋಂಕುಗಳ ಅಪಾಯ ಹೆಚ್ಚು. ಕೆಲವು ಅಧ್ಯಯನವೂ ಮಕ್ಕಳಿಗೆ ಮತ್ತು ಮದುವೆಯಾಗದ ಹೆಣ್ಣುಮಕ್ಕಳಿಗೆ ಮುಟ್ಟಿನ ಕಪ್‌ಗಳು ಅಪಾಯಕಾರಿ ಎಂದೇ ಹೇಳುತ್ತವೆ. ಹೀಗಾಗಿ ಪ್ಯಾಡ್‌ಗಳ ಬಳಕೆಯೇ ಸುರಕ್ಷಿತ. ಒಮ್ಮೆ ಮಾತ್ರ ಬಳಸಬಹುದಾಗಿದ್ದರಿಂದ ಸೋಂಕಿನ ಅಪಾಯವೂ ತೀರಾ ಕಡಿಮೆ ಇರುತ್ತದೆ.
ಡಾ. ಸವಿತಾ ಸೂರಿ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.