ADVERTISEMENT

ಕೊನೆಯಾದೀತೆ ರಾಜಕೀಯ ಅಸ್ಥಿರತೆ?

ಎ.ನಾರಾಯಣ
Published 26 ಜುಲೈ 2019, 9:11 IST
Last Updated 26 ಜುಲೈ 2019, 9:11 IST
   

ಬಹು ದಿನಗಳ ರಾಜಕೀಯ ಬೃಹನ್ನಾಟಕದ ಬಳಿಕ ರಾಜ್ಯದ ಕಾಂಗ್ರೆಸ್‌–ಜೆಡಿಎಸ್ ಮೈತ್ರಿ ಸರ್ಕಾರ ವಿಶ್ವಾಸಮತ ಗೆಲ್ಲಲು ಸಾಧ್ಯವಾಗದೆ ಜುಲೈ 23ರಂದು ಸಂಜೆ ಅಧಿಕಾರದಿಂದ ನಿರ್ಗಮಿಸಿದೆ. ‘ಮೈತ್ರಿ’ ಸರ್ಕಾರದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ 15 ಶಾಸಕರು ರಾಜೀನಾಮೆ ನೀಡಿದ್ದು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಹುಮತ ಕಳೆದುಕೊಳ್ಳುವಂತೆ ಮಾಡಿತು.

ಆದರೆ, ಬಿಜೆಪಿಯ ‘ಆಪರೇಷನ್ ಕಮಲ’ ಕಾರ್ಯಾಚರಣೆಯಲ್ಲಿ ಅತೃಪ್ತ ಶಾಸಕರು ಕೈಜೋಡಿಸಿದ್ದು ಈಗ ಗುಟ್ಟಾಗಿ ಉಳಿದಿಲ್ಲ. ಈ ಶಾಸಕರಿಗೆ ಪಕ್ಷದ ಚಿಹ್ನೆಯಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡುವುದು, ಹೊಸ ಸರ್ಕಾರದಲ್ಲಿ ಸಚಿವ ಸ್ಥಾನ ಸೇರಿದಂತೆ ಪ್ರಮುಖ ಹುದ್ದೆಗಳನ್ನು ನೀಡುವ ಆಮಿಷವೊಡ್ಡಲಾಗಿರುವುದೂ ಸತ್ಯ.

ಅಂತೂ ಎರಡನೇ ಬಾರಿಗೆ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ತಯಾರಾಗಿದೆ. ಆದರೆ ಈ ಬೆಳವಣಿಗೆಯಿಂದ ರಾಜ್ಯದ ರಾಜಕೀಯ ಅಸ್ಥಿರತೆ ಕೊನೆಗೊಳ್ಳಬಹುದು ಎಂದು ನಿರೀಕ್ಷಿಸಲಾಗದು.

ADVERTISEMENT

ಕಾಂಗ್ರೆಸ್, ಜೆಡಿಎಸ್: ಸಾಂಪ್ರದಾಯಿಕ ಸ್ಪರ್ಧಿಗಳು

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಸೋಲಿಸಬೇಕು ಎಂಬ ಗುರಿಯೊಂದಿಗೆ ಅಸ್ತಿತ್ವಕ್ಕೆ ಬಂದ ಮೈತ್ರಿ ಸರ್ಕಾರ ಆರಂಭದಿಂದಲೂ ವಿರೋಧಭಾಸಗಳ ಗೂಡಾಗಿತ್ತು. ಹೈಕಮಾಂಡ್ ಮಟ್ಟದಲ್ಲಿ ಮೈತ್ರಿ ಏರ್ಪಟ್ಟಿದ್ದೇನೋ ನಿಜ. ದಶಕಗಳಿಂದ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾಗಿದ್ದ ಉಭಯ ಪಕ್ಷದ ಕೆಲವು ನಾಯಕರಿಗೆ ಇದು ರುಚಿಸಲಿಲ್ಲ. ಕಾರ್ಯಕರ್ತರಲ್ಲಿ ಧೈರ್ಯ ತುಂಬಿ, ಅವರನ್ನು ಹುರಿದುಂಬಿಸುತ್ತಾ ಮೈತ್ರಿ ಬಲಪಡಿಸುವ ಬದಲು ಕಾಂಗ್ರೆಸ್‌ನ ಒಂದು ಬಣದ ನಾಯಕರು ತಾವೇ ಒಡಕಿನ ಸಂದೇಶಗಳಿಗೆ ಕಾರಣರಾದರು. ಪರಿಣಾಮವಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೀನಾಯ ಸೋಲನುಭವಿಸಬೇಕಾಯಿತು.

ನಂತರ ಕುಮಾರಸ್ವಾಮಿ ಸರ್ಕಾರದ ಪತನ ಸನ್ನಿಹಿತವಾಯಿತು. ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ಪಕ್ಷಾಂತರಕ್ಕೆ ಪ್ರಚೋದನೆ ನೀಡುವ ಕೆಲಸವನ್ನು ಬಿಜೆಪಿ ಮಾಡಿತು. ಸರ್ಕಾರ ಅಸ್ಥಿರಗೊಳಿಸಲು ಹಲವು ಬಾರಿ ಪ್ರಯತ್ನಿಸಿ ಯಶಸ್ಸು ಕಾಣದ ಬಿಜೆಪಿ ಈ ಬಾರಿ ಕಾಂಗ್ರೆಸ್‌ನ ಒಬ್ಬ ಸಚಿವ ಮತ್ತು ಜೆಡಿಎಸ್‌ನ ಮಾಜಿ ಅಧ್ಯಕ್ಷ ಸೇರಿದಂತೆ ಪ್ರಭಾವಿ ಶಾಸಕರನ್ನೇ ಗುರಿಯಾಗಿಸಿತು. ವಿಧಾನಸಭೆ ಸಭಾಧ್ಯಕ್ಷರು ಅತೃಪ್ತ ಶಾಸಕರ ರಾಜೀನಾಮೆ ಸ್ವೀಕರಿಸಿದೇ ಇದ್ದಾಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲಾಯಿತು. ಕಾನೂನು ತೊಡಕುಗಳು ಬಗೆಹರಿದ ಕೂಡಲೇ ಅತೃಪ್ತ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಆ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಬಹುದು.

ಬಿಜೆಪಿಯ ತಲೆನೋವು ಆರಂಭ

2008ರಲ್ಲಿ ಸರ್ಕಾರ ರಚಿಸಿದಾಗಲೂ ಬಿಜೆಪಿಗೆ ಸ್ಪಷ್ಟ ಬಹುಮತಕ್ಕಿಂತ ಕೆಲವು ಸ್ಥಾನಗಳು ಕಡಿಮೆ ಇದ್ದವು. ಅಧಿಕಾರದಲ್ಲಿ ಉಳಿಯಲು ಆಗ ಅನುಸರಿಸಿದ್ದ ತಂತ್ರಗಾರಿಕೆಯನ್ನೇ ಬಿಜೆಪಿ ಈಗಲೂ ನೆಚ್ಚಿಕೊಂಡಿದೆ. ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಜನಾದೇಶ ಪಡೆಯಲು ಇರುವ ಯಾವುದೇ ಅವಕಾಶವನ್ನು ಬಿಜೆಪಿ ಈಗ ಕೈಬಿಡಲಾರದು. ಆದಾಗ್ಯೂ ಪಕ್ಷದೊಳಗಿನ ಬಣಗಳ ಸಂಘರ್ಷ ಬಿಜೆಪಿಗೆ ಪ್ರಮುಖ ಸವಾಲಾಗಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರನ್ನು ಪಕ್ಷಕ್ಕೆ ಸೇರಿಸಿಕೊಂಡ ಬಳಿಕ ಆಂತರಿಕ ಭಿನ್ನಮತ ಸೃಷ್ಟಿಯಾಗುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು.

ಅತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಸಂಪೂರ್ಣ ಜರ್ಝರಿತವಾಗಿವೆ. ತಮ್ಮ ಶಾಸಕರು ಪಕ್ಷ ತೊರೆಯುವುದನ್ನು ತಡೆಯುವುದೇ ಆ ಪಕ್ಷಗಳಿಗೆ ಸವಾಲಾಗಿ ಪರಿಣಮಿಸಿದೆ. ಈಗಿರುವ ಸ್ಥಿತಿಯಿಂದ ಸುಧಾರಿಸಿಕೊಂಡು ಬಿಜೆಪಿಯನ್ನು ಎದುರಿಸಲು ಉಭಯ ಪಕ್ಷಗಳಿಗೆ ಸ್ವಲ್ಪ ಸಮಯ ಬೇಕಾಗಬಹುದು. ಹೊಸ ಬಿಜೆಪಿ ಸರ್ಕಾರ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದರ ಮೇಲೆಯೂ ಇದು ಅವಲಂಬಿತವಾಗಿದೆ. ಉಭಯ ಪಕ್ಷಗಳು ಮೈತ್ರಿಯನ್ನು ತ್ಯಜಿಸಿ ಮುಂಬರುವ ಚುನಾವಣೆಗಳನ್ನು ಪ್ರತ್ಯೇಕವಾಗಿ ಎದುರಿಸುವ ಸಾಧ್ಯತೆಯೂ ಇದೆ.

ಮೊನ್ನೆ ಸದನದಲ್ಲಿ ಬಿಜೆಪಿ ಸಚಿವರೊಬ್ಬರು ತನ್ನ ಕುರಿತಾದ ನಕಲಿ ವಿಡಿಯೋ ಚಿತ್ರಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವಿಚಾರ ಪ್ರಸ್ತಾಪಿಸುವಾಗ ಇದರ ಹಿಂದೆ ತನ್ನ ಪಕ್ಷದವರೂ ಇದ್ದಾರೆ ಅಂತ ಹೇಳಿದ್ದನ್ನು ಗಮನಿಸಬೇಕು. ಅಧಿಕಾರ ಹತ್ತಿರವಾಗುತ್ತಲೇ ಕಾಲೆಳೆಯುವ ಪ್ರವೃತ್ತಿ ಹೆಚ್ಚಾಗುತ್ತಿರುವುದರ ಮುನ್ಸೂಚನೆ ಇದಿರಬಹುದೇ? ಬಿಜೆಪಿಯ ಇನ್ನೊಂದು ಸವಾಲು ಈಗ ರಾಜೀನಾಮೆ ನೀಡಿರುವ ಅತೃಪ್ತರನ್ನೋ ಅವರ ಮಕ್ಕಳನ್ನೂ ತನ್ನ ಲಾಂಛನದಡಿ ಉಪಚುನಾವಣೆಯಲ್ಲಿ ಗೆಲ್ಲಿಸುವುದು. ಅಧಿಕಾರದಲ್ಲಿ ಮುಂದುವರಿಯಬೇಕಾದರೆ 15 ಅತೃಪ್ತಾತ್ಮರ ಪೈಕಿ ಎಂಟು ಮಂದಿಯನ್ನಾದರೂ ಗೆಲ್ಲಿಸುವ ಅನಿವಾರ್ಯತೆ ಬಿಜೆಪಿಗೆ ಇದೆ. ಒಂದು ವೇಳೆ ಇಷ್ಟು ಮಂದಿ ಗೆಲ್ಲದೇ ಹೋದರೆ ಮತ್ತೆ ಅಸ್ಥಿರತೆ ಮುಂದುವರಿಯಲಿದೆ.

ಉಪಚುನಾವಣೆಯಲ್ಲಿ ಸ್ಥಾನಗಳನ್ನು ಗೆಲ್ಲುವುದು ಬಿಜೆಪಿಗೆ ಅಷ್ಟೊಂದು ಕಷ್ಟವಾಗಲಾರದಾದರೂ, ಈ ವಿಚಾರದಲ್ಲಿ ಯಾವುದೇ ರೀತಿಯ ಅಚಾತುರ್ಯ ನಡೆಯದಂತೆ ಬಿಜೆಪಿ ಖಾತರಿಪಡಿಸಿಕೊಳ್ಳಲಿದೆ. ಈ ರೀತಿ ಖಾತರಿ ಮಾಡುವ ಒಂದು ವಿಧಾನ ಎಂದರೆ ಇನ್ನಷ್ಟೂ ಅತೃಪ್ತರನ್ನು ಕಾಂಗ್ರೆಸ್ ಮತ್ತು ಜನತಾ ದಳ ಪಕ್ಷಗಳಲ್ಲಿ ಸೃಷ್ಟಿಸಿ ಅವರನ್ನು ರಾಜೀನಾಮೆ ಕೊಡಿಸುವುದು. ಈಗಿರುವ ಹದಿನೈದು ಮುಂದೆ ಇಪ್ಪತ್ತೋ, ಇಪ್ಪತ್ತೈದೋ ಆದರೆ ಆಗ ಉಪಚುನಾವಣೆಯಲ್ಲಿ ಎಂಟೋ, ಹತ್ತೋ ಸ್ಥಾನಗಳನ್ನು ಗೆಲ್ಲಲು ಕಷ್ಟವಾಗಲಾರದು ಎನ್ನುವ ದೃಷ್ಟಿಯಿಂದ ಬಿಜೆಪಿ ಹೀಗೆ ಮಾಡುವ ಎಲ್ಲಾ ಸಾಧ್ಯತೆಗಳೂ ಇವೆ. ಆಗ ಏನಾಗುತ್ತದೆ ಎಂದರೆ ಬಿಜೆಪಿಗೆ ಒಂದು ದೊಡ್ಡ ಸಂಖ್ಯೆಯ ವಲಸಿಗರನ್ನು ನಿಭಾಯಿಸುವ ಸವಾಲು ಎದುರಾಗುತ್ತದೆ.

ಹದಿನೈದರಿಂದ ಇಪ್ಪತ್ತು ವಲಸಿಗರನ್ನು ಬಗಲಿಗೆ ಕಟ್ಟಿಕೊಂಡು ಸರಕಾರ ನಡೆಸುವುದು ಎಂದರೆ ಒಂದು ರೀತಿಯಲ್ಲಿ ಮೈತ್ರಿ ಸರಕಾರ ನಡೆಸಿದಂತೆಯೆಸರಿ. ಆದುದರಿಂದ ರಾಜಕೀಯ ಅಸ್ಥಿರತೆ ಸೃಷ್ಟಿಸಿರುವ ಮೈತ್ರಿ ಸರಕಾರವನ್ನು ಕೆಳಗಿಳಿಸಿ ಸ್ಥಿರ ಸರಕಾರವನ್ನು ಸ್ಥಾಪಿಸಿದ್ದೇವೆ ಎಂಬ ಬಿಜೆಪಿ ನಾಯಕರ ಹೇಳಿಕೆಯನ್ನು ಯಥಾವತ್ತಾಗಿ ಸ್ವೀಕರಿಸುವುದು ಕಷ್ಟ. ಎಲ್ಲವೂ ಮುಂದಿನ ಬಹಳಷ್ಟು ಆಗು ಹೋಗುಗಳನ್ನು ಅವಲಂಬಿಸಿವೆ.

ಅವಧಿಪೂರ್ವ ಅಂತ್ಯ ಕಂಡ ಮೂರನೇ ಸಮ್ಮಿಶ್ರ ಸರ್ಕಾರ

14 ತಿಂಗಳಲ್ಲೇ ಪತನವಾದ ಕುಮಾರಸ್ವಾಮಿ ಅವರ ಸರ್ಕಾರ, ರಾಜ್ಯದಲ್ಲಿ ಅವಧಿಪೂರ್ವ ಅಂತ್ಯ ಕಂಡ ಮೂರನೇ ಸಮ್ಮಿಶ್ರ ಸರ್ಕಾರವಾಗಿದೆ. ಅತಂತ್ರ ವಿಧಾನಸಭೆ ಹಿನ್ನೆಲೆಯಲ್ಲಿ 2004ರಲ್ಲಿ ಮೊದಲ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರ 20 ತಿಂಗಳುಗಳಲ್ಲಿ ಪತನವಾಗಿತ್ತು. ನಂತರ ಬಿಜೆಪಿ–ಜೆಡಿಎಸ್ ಮೈತ್ರಿಯೊಂದಿಗೆ ಅಸ್ತಿತ್ವಕ್ಕೆ ಬಂದ ಸರ್ಕಾರವೂ 20 ತಿಂಗಳುಗಳಲ್ಲಿ ಅಂತ್ಯ ಕಂಡಿತು. ಇದಕ್ಕೂ ಮುನ್ನ 1983ರಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಬಿಜೆಪಿಯ ಬಾಹ್ಯ ಬೆಂಬಲದೊಂದಿಗೆ ಜನತಾ ಪಕ್ಷದ ಸರ್ಕಾರ ರಚಿಸಿತ್ತು. ಆದರೆ ಈ ಸರ್ಕಾರವೂ ದೀರ್ಘ ಕಾಲ ಬಾಳಲಿಲ್ಲ. ಒಂದು ವರ್ಷ ಕಳೆಯುವಷ್ಟರಲ್ಲೇ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ವಿಧಾನಸಭೆ ವಿಸರ್ಜಿಸಿದ್ದರು. ನೆರೆಯ ಕೇರಳವು ತನ್ನದೇ ಆದ ಸ್ಥಿರ ಸಮ್ಮಿಶ್ರ ರಾಜಕೀಯವನ್ನು ಸಾಂಸ್ಥೀಕರಣಗೊಳಿಸಿದ್ದರೆ ಕರ್ನಾಟಕ ರಾಜಕಾರಣವು ಅಧಿಕಾರವನ್ನು ಹಂಚಿಕೊಳ್ಳುವ ಸಂಸ್ಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.