
ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026–27ನೇ ಸಾಲಿನ ಬಜೆಟ್ ಮಂಡಿಸಿದರು
ಪಿಟಿಐ ಚಿತ್ರ
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ 2026–27ನೇ ಸಾಲಿನ ಬಜೆಟ್‌ನಲ್ಲಿ ಎಲ್ಲರ ಜತೆ, ಎಲ್ಲರ ವಿಕಾಸ, ಜನರ ಆಶೋತ್ತರಗಳ ಈಡೇರಿಕೆ, ಪ್ರತಿಯೊಬ್ಬರಿಗೂ ಸಂಪನ್ಮೂಲ ಬಳಕೆಯ ಸಮಾನ ಅವಕಾಶ ಎಂಬ ಮೂರು ಮಂತ್ರಗಳನ್ನು ಅವರು ಪ್ರತಿಪಾದಿಸಿದ್ದಾರೆ.
ಆದಾಯ ತೆರಿಗೆ ಸುಧಾರಣೆಗಳ ಭಾಗವಾಗಿ ಹೊಸ ಆದಾಯ ತೆರಿಗೆ ನೀತಿಯು ಇದೇ ಏಪ್ರಿಲ್‌ನಿಂದ ಜಾರಿಗೆ ಬರಲಿದೆ. ಸರಳೀಕೃತವಾಗಿರುವ ಈ ವ್ಯವಸ್ಥೆಯಲ್ಲಿ ಸಣ್ಣ ತೆರಿಗೆದಾರರಿಗೆ ಹೆಚ್ಚಿನ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಸಚಿವೆ ಹೇಳಿದ್ದಾರೆ.
ಟಿಸಿಎಸ್ ಮತ್ತು ಟಿಡಿಎಸ್ ಹಂಚಿಕೆ: ವಿದೇಶದಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ಸೇವೆಗಳ ಮೇಲಿನ ತೆರಿಗೆ ಸಂಗ್ರಹಿತ ಮೂಲವಾದ ಟಿಸಿಎಸ್ ಅನ್ನು ಶೇ 2ಕ್ಕೆ ಇಳಿಸಲಾಗಿದೆ. ಸಣ್ಣ ವ್ಯಾಪಾರಸ್ಥರು ಮತ್ತು ಜನರ ಮೇಲಿನ ತೆರಿಗೆ ಹೊರೆ ಇಳಿಸಲು ಹಲವು ಸುಧಾರಣೆಗಳನ್ನು ಅವರು ಘೋಷಿಸಿದ್ದಾರೆ. ಇದರಿಂದ ಮಧ್ಯಮ ವರ್ಗದ ತೆರಿಗೆದಾರರಿಗೆ ಒಂದಷ್ಟು ನಿರಾಳತೆ ಸಿಗಲಿದೆ.
ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೂ, ಹೊಸ ತೆರಿಗೆ ಪದ್ಧತಿಯು ಇದೇ ಏಪ್ರಿಲ್‌ನಿಂದ ಜಾರಿಗೊಳಿಸುವ ಮತ್ತು ಆದಾಯ ತೆರಿಗೆ ಪಾವತಿಸದಿದ್ದರೆ ಶೇ 10ರಷ್ಟು ದಂಡ ವಿಧಿಸುವ ಹಾಗೂ ರಿಟರ್ನ್ಸ್ ಮರುಸಲ್ಲಿಕೆ ಅವಕಾಶವನ್ನು ಮಾರ್ಚ್ 31ರವರೆಗೂ ವಿಸ್ತರಿಸುವ ಘೋಷಣೆಗಳು ಹೊರಬಿದ್ದಿವೆ.
ರಸ್ತೆ, ರೇಲ್ವೆ, ಮೆಟ್ರೊ, ಬಂದರು ಮತ್ತು ಸರಕು ಸಾಗಣೆಯನ್ನು ಇನ್ನಷ್ಟು ಉತ್ತಮಗೊಳಿಸಲು ಸಾರ್ವಜನಿಕ ಬಂಡವಾಳವನ್ನು ₹12.2 ಲಕ್ಷ ಕೋಟಿಗೆ ಹೆಚ್ಚಳ ಮಾಡಲಾಗಿದೆ.
ಹೈ ಸ್ಪೀಡ್ ರೈಲು: ಏಳು ಹೊಸ ಹೈ ಸ್ಪೀಡ್ ರೈಲುಗಳನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದರಲ್ಲಿ ಬೆಂಗಳೂರು, ಹೈದರಾಬಾದ್, ಚೆನ್ನೈ, ಪುಣೆ, ವಾರಾಣಸಿ, ಸಿಲಿಗುರಿಯನ್ನು ಸಂಪರ್ಕಿಸುವ ಮಾರ್ಗಗಳಿವೆ. ಆ ಮೂಲಕ ದೇಶದ ಪ್ರಮುಖ ಮೆಟ್ರೊಗಳನ್ನು ಸಂಪರ್ಕಿಸುವ ಯೋಜನೆಯನ್ನು ಪ್ರಕಟಿಸಿದ್ದಾರೆ.
ಜಲಮಾರ್ಗ ಮತ್ತು ನಗರಾಭಿವೃದ್ಧಿ: ಹಲವು ಹೊಸ ಜಲಮಾರ್ಗಗಳು, ನಗರ ಮೂಲಸೌಕರ್ಯ ಉತ್ತೇಜನ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಇದರಲ್ಲಿ 2 ಹಾಗೂ 3ನೇ ಹಂತದ ಪಟ್ಟಣ ಪ್ರದೇಶಗಳನ್ನೂ ಒಳಗೊಳ್ಳುವ ಭರವಸೆ ನೀಡಲಾಗಿದೆ.
ಇವುಗಳಿಂದ ಪ್ರಯಾಣ ಸಮಯ ಕಡಿಮೆ ಮಾಡುವುದು, ಸರಕು ಸಾಗಣೆ ಸುಗಮವಾಗುವಂತೆ ಮತ್ತು ಪೂರಕ ಉದ್ಯೋಗ ಸೃಜಿಸುವ ಯೋಜನೆ ಇದೆ ಎಂದಿದ್ದಾರೆ.
ಕೃತಕ ಬುದ್ಧಿಮತ್ತೆ ಆಧಾರಿತ ‘ಭಾರತ್ ವಿಸ್ತಾರಾ’ ಎಂಬ ಬಹುಭಾಷಾ ಎಐ ಸಾಧನವನ್ನು ಅಭಿವೃದ್ಧಿಪಡಿಸಿ ರೈತರಿಗೆ ನೆರವಾಗುವ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದರಿಂದ ಕೃಷಿ ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.
ಗ್ರಾಮೀಣ ಭಾಗದ ಜೀವನಶೈಲಿ ಉತ್ತಮಪಡಿಸುವ ನಿಟ್ಟಿನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಬೆಳೆ ಆಧಾರಿತ ಯೋಜನೆಯನ್ನು ಇನ್ನಷ್ಟು ಉತ್ತೇಜಿಸಿ ರೈತರ ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸೇವಾ ವಲಯ ಹಾಗೂ ಕೌಶಲ ಆಧಾರಿತ ಯೋಜನೆಗಳ ಮೂಲಕ ಗ್ರಾಮಗಳಲ್ಲಿ ಉದ್ಯೋಗ ಹೆಚ್ಚಿಸುವುದು ಮತ್ತು ಜೀವನೋಪಾಯ ತರಬೇತಿ ನೀಡುವ ಯೋಜನೆ ಜಾರಿಗೆ ತರುವುದಾಗಿ ತಿಳಿಸಿದ್ದಾರೆ.
ಇದರಿಂದ ಕೃಷಿ ಆದಾಯ, ಕೃಷಿ ಕ್ಷೇತ್ರವನ್ನು ಡಿಜಿಟಲೀಕರಣಗೊಳಿಸುವುದು ಮತ್ತು ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶವನ್ನು ಹೆಚ್ಚಿಸುವ ಯೋಜನೆ ಹೊಂದಿರುವುದಾಗಿ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಕೃಷಿಯನ್ನು ಇನ್ನಷ್ಟು ಉತ್ತೇಜಿಸುವ ನಿಟ್ಟಿನಲ್ಲಿ 500 ಜಲಾಶಯಗಳ ನಿರ್ಮಾಣಕ್ಕೆ ಅನುದಾನ ಮೀಸಲಿಡುವುದಾಗಿ ಹೇಳಿದ್ದಾರೆ. ತೆಂಗು, ಗೇರು, ಕೊಕೊ ಮತ್ತು ಗಂಧದ ಬೆಳೆ ಉತ್ತೇಜಿಸುವ ವಿಶೇಷ ಕಾರ್ಯಕ್ರಮ ರೂಪಿಸುವ ಪ್ರಸ್ತಾವವೂ ಬಜೆಟ್‌ನಲ್ಲಿ ಘೋಷಣೆಯಾಗಿದೆ.
ಮಹಾತ್ಮಾ ಗಾಂಧಿ ಗ್ರಾಮ ಸಮಾಜ ಯೋಜನೆ ಮೂಲಕ ಗ್ರಾಮೀಣ ಭಾಗದಲ್ಲಿ ಖಾದಿ ಹಾಗೂ ಇನ್ನಿತರ ಕರಕುಶಲ ಕೈಗಾರಿಕೆಗಳನ್ನು ಉತ್ತೇಜಿಸುವುದಾಗಿ ಹೇಳಲಾಗಿದೆ.
ಬಯೋಫಾರ್ಮ ಶಕ್ತಿ ಯೋಜನೆಯ ಭಾಗವಾಗಿ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ನಾವೀನ್ಯತೆ ಮತ್ತು ತಯಾರಿಕೆಗೆ ₹10 ಸಾವಿರ ಕೋಟಿ ಅನುದಾನ ನೀಡುವುದಾಗಿ ಬಜೆಟ್‌ನಲ್ಲಿ ಘೋಷಣೆಯಾಗಿದೆ.
ಪ್ರಮುಖ ಔಷಧಗಳ ಮೇಲಿನ ತೆರಿಗೆ ಕಡಿತದ ಜತೆಗೆ, ಸಾಂಪ್ರದಾಯಿಕ ಚಿಕಿತ್ಸಾ ವಿಧಾನವಾದ ಆಯುರ್ವೇದ ಪದ್ಧತಿಯನ್ನು ಇನ್ನಷ್ಟು ವಿಸ್ತರಿಸಲು ರಾಷ್ಟ್ರವ್ಯಾಪಿ ಮೂರು ವಿಶ್ವವಿದ್ಯಾಲಯ ತೆರೆಯುವ ಪ್ರಸ್ತಾವ ಬಜೆಟ್‌ನಲ್ಲಿದೆ. ಕ್ಯಾನ್ಸರ್ ಔಷಧವು ಅಗತ್ಯವಿರುವ ಪ್ರತಿಯೊಬ್ಬರಿಗೂ ಸಿಗುವಂತೆ ಮಾಡಲು ತೆರಿಗೆ ಕಡಿತ ಕ್ರಮ ಕೈಗೊಳ್ಳಲಾಗಿದೆ.
ಉತ್ತರ ಭಾರತದಲ್ಲೂ ಮಾನಸಿಕ ಆರೋಗ್ಯ ಚಿಕಿತ್ಸೆ ಲಭ್ಯವಾಗುವಂತೆ ಮಾಡಲು ನಿಮ್ಹಾನ್ಸ್ 2ನೇ ಘಟಕವನ್ನು ರಾಂಚಿ, ತೇಜಪುರದಲ್ಲಿ ತೆರೆಯುವುದಾಗಿ ನಿರ್ಮಲಾ ಹೇಳಿದ್ದಾರೆ. ಏಮ್ಸ್, ಪ್ರಾದೇಶಿಕ ಆರೋಗ್ಯ ಕೇಂದ್ರ ತೆರೆಯುವ ಯೋಜನೆಯನ್ನು ಅವರು ಆಯವ್ಯಯದಲ್ಲಿ ತಿಳಿಸಿದ್ದಾರೆ.
ಉನ್ನತ ಶಿಕ್ಷಣಕ್ಕೆ ಇನ್ನಷ್ಟು ಉತ್ತೇಜನ ನೀಡುವ ದೃಷ್ಟಿಯಿಂದ ದೇಶದ ಐದು ನಗರಗಳಲ್ಲಿ ವಿಶ್ವವಿದ್ಯಾಲಯ ಟೌನ್‌ಶಿಪ್‌ಗಳನ್ನು ಘೋಷಿಸಿದ್ದಾರೆ. ಆ ಮೂಲಕ ಶಿಕ್ಷಣ ಮತ್ತು ಕೌಶಲವು ಒಂದು ಕಡೆ ಸಿಗುವಂತೆ ಮಾಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ್ದಾರೆ. ಕೃತಕ ಬುದ್ಧಿಮತ್ತೆಯನ್ನೂ ಒಳಗೊಂಡು ತಂತ್ರಜ್ಞಾನ ಆಧಾರಿತ ಕಲಿಕಾ ಪದ್ಧತಿಯನ್ನು ಉತ್ತೇಜಿಸುವುದಾಗಿ ಹೇಳಿದ್ದಾರೆ. ಬಾಲಕಿಯರ ಶಿಕ್ಷಣ ಪ್ರಮಾಣ ಹೆಚ್ಚಿಸಲು ಪ್ರತಿ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರ ನಿಲಯ ತೆರೆಯುವ ಘೋಷಣೆ ಮಾಡಿದ್ದಾರೆ.
ಸೆಮಿಕಂಡಕ್ಟರ್ ಮಿಷನ್ 2.0 ಅನ್ನು ವಿತ್ತ ಸಚಿವರು ಘೋಷಿಸಿದ್ದಾರೆ. ಆ ಮೂಲಕ ಜಾಗತಿಕ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತ ಪ್ರಮುಖ ಸ್ಥಾನ ಪಡೆಯುವಂತೆ ಮಾಡುವ ಯೋಜನೆಯನ್ನು ಸರ್ಕಾರ ಹೊಂದಿರುವುದಾಗಿ ಹೇಳಿದ್ದಾರೆ.
ಒಡಿಶಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಅಪರೂಪದ ಖನಿಜಗಳ ಕಾರಿಡಾರ್ ಸ್ಥಾಪಿಸಿ, ಎಲೆಕ್ಟ್ರಾನಿಕ್ ಮತ್ತು ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಗೆ ಅಗತ್ಯವಿರುವ ಬಿಡಿಭಾಗಗಳಿಗೆ ಆಮದು ಆವಲಂಬನೆ ತಪ್ಪಿಸುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ.
ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು ಇನ್ನಷ್ಟು ಬಲಪಡಿಸಲು ಮತ್ತು ಜಾಗತಿಕ ಸ್ಪರ್ಧೆಗೆ ಅವುಗಳನ್ನು ಸಜ್ಜುಗೊಳಿಸಲು ₹10 ಸಾವಿರ ಕೋಟಿ ನೆರವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ವಿದೇಶಿ ನೇರ ಬಂಡವಾಳ ಮತ್ತು ಡಿಜಿಟಲ್ ವಹಿವಾಟು ಹೆಚ್ಚಿಸುವ ನಿಟ್ಟಿನಲ್ಲಿ ‘ಭಾರತ್ ಟ್ರೇಡ್ ನೆಟ್’ ಎಂಬ ಯೋಜನೆ ಮೂಲಕ ಜಾಗತಿಕ ವ್ಯಾಪಾರ ಸಂಪರ್ಕವನ್ನು ಇನ್ನಷ್ಟು ಉತ್ತಮಪಡಿಸುವ ಪ್ರಸ್ತಾವವನ್ನು ಅವರು ಮಂಡಿಸಿದ್ದಾರೆ. ದೇಶದಲ್ಲಿರುವ ಡಾಟಾ ಸೆಂಟರ್‌ಗಳನ್ನು ಬಳಸಿ ಜಾಗತಿಕ ಮಟ್ಟದಲ್ಲಿ ಕೆಲಸ ಮಾಡುವ ಕಂಪನಿಗಳಿಗೆ ‘ತೆರಿಗೆ ರಜೆ’ ಮತ್ತು 2047ರ ಹೊತ್ತಿಗೆ ಜಾಗತಿಕ ಹೂಡಿಕೆ ಹೆಚ್ಚಿಸುವ ಕುರಿತೂ ಬಜೆಟ್‌ನಲ್ಲಿ ಹೇಳಲಾಗಿದೆ.
ನಗರಾಭಿವೃದ್ಧಿ, ವಸತಿ ಮತ್ತು ಮೂಲ ಸೌಕರ್ಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಅನುದಾನ ಹೆಚ್ಚಳ, ಯುವಜನತೆಗೆ ಕೌಶಲ, ಸೇವಾ ವಲಯದ ರಫ್ತು ಮತ್ತು ಉದ್ಯೋಗದ ಮೂಲಕ ಪ್ರದೇಶಗಳ ಆದಾಯ ಹೆಚ್ಚಳಕ್ಕೆ ಆದ್ಯತೆ ನೀಡುವತ್ತ ಸರ್ಕಾರ ಗಮನ ಹರಿಸಿರುವುದಾಗಿ ಹೇಳಿದ್ದಾರೆ.
ಉದ್ಯೋಗ ಸೃಜನೆಗಾಗಿ ಹಲವು ಯೋಜನೆಗಳು ಬಜೆಟ್‌ನಲ್ಲಿ ಘೋಷಣೆಯಾಗಿವೆ. ವಿಕಸಿತ ಭಾರತ್ ಯೋಜನೆಯ ಆಶಯದಂತೆ ಶಿಕ್ಷಣದಿಂದ ಉದ್ಯೋಗಕ್ಕೆ ಕೊಂಡಿ ಬೆಸೆಯುವ ಗೇಮಿಂಗ್, ಆ್ಯನಿಮೇಷನ್‌ನಿಂದ ಹಿಡಿದು ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಮೂಲಕ ಉದ್ಯೋಗ ಸೃಜಿಸುವ ಯೋಜನೆಗಳನ್ನು ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.