ಒಂದು ದೇಶ ಒಂದು ಚುನಾವಣೆ, ಒಂದು ದೇಶ ಒಂದು ತೆರಿಗೆ, ಒಂದು ದೇಶ ಒಂದು ಕಾರ್ಡ್, ಒಂದು ದೇಶ ಒಂದು ವಿದ್ಯಾರ್ಥಿ ಐಡಿ, ಒಂದು ದೇಶ ಒಂದು ನಂಬರ್ ಪ್ಲೇಟ್. ಭಲಾ ಭಲಾ ಏನು ಏಕರೂಪತೆ, ಮೆಚ್ಚಬೇಕಾದ್ದೆ. ವಿವಿಧತೆಯಲ್ಲಿ ಏಕತೆಯನ್ನು ಸಾರಿದ ದೇಶದಲ್ಲಿ ಏಕತೆಯ ಮಹಾಪೂರ. ಒಂದು ದೇಶ ಒಂದು ಸಾಧನ ಎನ್ನೋದರಲ್ಲಿ ಹಲವಾರು ಅನುಕೂಲಗಳಿವೆ. ಅದರಲ್ಲಿ ಅನುಮಾನಗಳಿಲ್ಲ. ಆದರೆ ಇದಕ್ಕಿಂತಲೂ ಅಗತ್ಯವಾಗಿ ಏಕತೆ ಸಾಧಿಸಲೇಬೇಕಾದ ಅನೇಕ ಸಂಗತಿಗಳು ಇವೆ.
ಉದಾಹರಣೆಗೆ ಒಂದು ದೇಶ ಒಂದು ಚುನಾವಣೆ ಚಿಂತನೆಯನ್ನೇ ತೆಗೆದುಕೊಳ್ಳೋಣ. ಇದಕ್ಕೆ ಸಂಬಂಧಿಸಿದ ಮಸೂದೆ ಈಗಾಗಲೇ ಸಂಸತ್ತಿನಲ್ಲಿ ಮಂಡನೆಯಾಗಿದೆ. ಜಂಟಿ ಸಂಸದೀಯ ಸಮಿತಿ ಪರಿಶೀಲನೆಗೆ ಅದನ್ನು ಒಪ್ಪಿಸಲಾಗಿದೆ. ಒಂದೇ ಬಾರಿಗೆ ಚುನಾವಣೆ ನಡೆದರೆ ಸಮಯ, ಹಣ ಎಲ್ಲ ಉಳಿತಾಯವಾಗುತ್ತದೆ ಎನ್ನೋದನ್ನು ಒಪ್ಪಿಕೊಳ್ಳೋಣ. ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ತಿಂಗಳಾನುಗಟ್ಟಲೆ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗುತ್ತದೆ ಎನ್ನುವುದನ್ನೂ ತಿಳಿದುಕೊಳ್ಳೋಣ. ಆದರೆ ಒಂದು ನೆನಪಿಡಬೇಕಾದ ವಿಷಯ ಏನೆಂದರೆ, 1967ರವರೆಗೆ ಈ ದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳು ಏಕಕಾಲದಲ್ಲೇ ನಡೆಯು ತ್ತಿದ್ದವು. ನಂತರದ ದಿನಗಳಲ್ಲಿ ಅವು ಬೇರೆ ಬೇರೆಯಾಗಿ ನಡೆಯಲು ಕಾರಣ ಮತದಾರರಂತೂ ಖಂಡಿತ ಅಲ್ಲ. ಈ ವ್ಯವಸ್ಥೆ ಹಾಳಾಗಲು ರಾಜಕಾರಣಿಗಳು ಕಾರಣ ಅನ್ನೋದನ್ನೂ ಮರೆಯಬಾರದು. ಒಂದೇ ಬಾರಿಗೆ ಚುನಾವಣೆ ನಡೆದರೆ ಜಾತಿ ಆಧಾರಿತ ಚುನಾವಣಾ ಪದ್ಧತಿ, ಹಣ ಬಲ ಮತ್ತು ತೋಳ್ಬಲದ ಚುನಾವಣಾ ಪದ್ಧತಿಕೊನೆಗೊಳ್ಳುತ್ತವೆಯೇ? ಈಗ ಸುಧಾರಣೆ ಆಗಬೇಕಿರುವುದು ಚುನಾವಣಾ ಪದ್ಧತಿಯಲ್ಲಿ.
ಒಂದು ದೇಶ ಒಂದು ಚುನಾವಣೆ, ಒಂದು ದೇಶ ಒಂದು ಕಾರ್ಡ್ ಎಂದು ಬೊಬ್ಬೆ ಹೊಡೆಯುವವರು ಒಂದು ದೇಶ ಒಂದು ಬೆಲೆ ಎಂದು ಯಾಕೆ ಮಾತನಾಡುವುದಿಲ್ಲ. ಕೃಷಿ ಉತ್ಪನ್ನಗಳಿಗೆ ಏಕರೂಪದ ಕನಿಷ್ಠ ಬೆಂಬಲ ಬೆಲೆ ಕೊಡಲು ಏಕೆ ಸಾಧ್ಯವಾಗುವುದಿಲ್ಲ. ಕನಿಷ್ಠ ಬೆಂಬಲ ಬೆಲೆಯನ್ನು ಕೊಡಿ ಎಂದು ಹೋರಾಟ ನಡೆಸುವ ರೈತರ ಮೇಲೆ ಜಲಪಿರಂಗಿ ದಾಳಿ ನಡೆಸುವ, ಅಶ್ರುವಾಯು ಷೆಲ್ ಪ್ರಯೋಗಿಸಿ ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನಗಳು ಯಾಕೆ ನಡೆಯುತ್ತವೆ. ಬೆಲೆ ಖಾತರಿ ಕಾನೂನು ಜಾರಿ ಮಾಡಿ, ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ತನ್ನಿ ಎಂದು ಮುಷ್ಕರ ನಡೆಸಿದರೆ ಅವರಿಗೆ ಲಾಠಿ ಏಟು ಬೀಳುತ್ತದೆ ಯಾಕೆ?
ಒಂದು ದೇಶ ಒಂದು ಚುನಾವಣೆ ಜಾರಿಗೆ ತನ್ನಿ ಎಂದು ಯಾವ ಮತದಾರರೂ ಕೇಳಿಕೊಂಡಿಲ್ಲ. ಅದಕ್ಕಾಗಿ ಹೋರಾಟವನ್ನೂ ನಡೆಸಿಲ್ಲ. ಆದರೂ ಅದರ ಜಾರಿಗೆ ತರಾತುರಿ ತೋರುವ ನಮ್ಮ ನಾಯಕರು ಬೆಲೆ ನಿಗದಿ ಮಾಡಿ ಎಂದು ಕೂಗುವ ರೈತರು ರಾಜಧಾನಿ ಪ್ರವೇಶಿಸದಂತೆ ಬೇಲಿ ಹಾಕುತ್ತಾರೆ. ಹೋರಾಟ ವಿಫಲಗೊಳಿಸಲು ದಬ್ಬಾಳಿಕೆಗಳು ನಡೆಯುತ್ತವೆ. ವೇದಿಕೆಗಳ ಮೇಲೆ ‘ರೈತರು ಈ ದೇಶಕ್ಕೆ ಅನ್ನ ನೀಡುವ ಅನ್ನದಾತರು’ ಎಂದು ಕೊಂಡಾಡುವ ಜನರೇ ರೈತರು ಕೇಳುವ ಕನಿಷ್ಠ ಬೆಂಬಲ ಬೆಲೆಯನ್ನು ನೀಡಲು ಮುಂದಾಗುವುದಿಲ್ಲ ಯಾಕೆ? ಹೋರಾಟನಿರತ ರೈತರಲ್ಲಿ ನಾಲ್ಕು ಮಂದಿ ಸಾವಿಗೀಡಾದರೂ ನಮ್ಮ ಮನಸ್ಸು ಕರಗುವುದಿಲ್ಲ ಯಾಕೆ?
ಮೂರು ವರ್ಷಗಳ ಹಿಂದೆ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ವರ್ಷಾನುಗಟ್ಟಲೆ ಹೋರಾಟ ನಡೆಸಿದಾಗಲೂ ನಮ್ಮ ಆಡಳಿತಗಾರರ ಧೋರಣೆ ಹೀಗೆಯೇ ಇತ್ತು. ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ಈಗ ನಡೆಯುತ್ತಿರುವ ಹೋರಾಟದ ಕುರಿತೂ ನಮ್ಮ ರಾಜಕೀಯ ಮುಖಂಡರಿಗೆ ಕರುಣೆ ಬರುತ್ತಿಲ್ಲ. ಪಂಜಾಬಿನ ಶಂಭು ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟದ ಸಂದರ್ಭದಲ್ಲಿ ಶುಭಕರನ್ ಸಿಂಗ್ ಎಂಬ ಯುವ ರೈತ ಪೊಲೀಸ್ ಜಟಾಪಟಿಯಲ್ಲಿ ಸಾವನ್ನಪ್ಪಿದ. ಆತನ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ಕೊಡುವುದಾಗಿ ಪಂಜಾಬ್ ಸರ್ಕಾರ ಪ್ರಕಟಿಸಿತು. ಆದರೆ ಇದನ್ನು ರೈತ ಕುಟುಂಬ ತಿರಸ್ಕರಿಸಿತು. ನಮ್ಮ ಕುಟುಂಬಕ್ಕೆ ಪರಿಹಾರ ಬೇಡ. ನಮಗೆ ನ್ಯಾಯ ಸಿಗಬೇಕು. ರೈತ ಹೋರಾಟಕ್ಕೆ ಜಯ ಸಿಗಬೇಕು ಎಂದು ಒತ್ತಾಯಿಸಿತು. ಆದರೂ ನಮ್ಮನ್ನು ಆಳುವ ಮಂದಿಗೆ ಕರುಣೆ ಬರಲಿಲ್ಲ. ಕನಿಷ್ಠ ಬೆಂಬಲ ಬೆಲೆ ಕೋರಿಕೆ ಬಗ್ಗೆ ಪರಿಶೀಲಿಸುವ ಕನಿಷ್ಠ ಬುದ್ಧಿಯೂ ಬರಲಿಲ್ಲ. ಆಳುವವರು ಅಳಲಿಲ್ಲ, ರೈತರ ಗೋಳು ಮುಗಿಯಲಿಲ್ಲ.
ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗಲ್ಲ. ಆದರೆ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಹೆಚ್ಚಾಗುತ್ತಲೇ ಇದೆ. ದಿನದಿಂದ ದಿನಕ್ಕೆ, ತಿಂಗಳಿನಿಂದ ತಿಂಗಳಿಗೆ ಬೆಲೆಗಳು ಏರುತ್ತಲೇ ಇವೆ. ಪೆಟ್ರೋಲ್, ಡೀಸೆಲ್ ಬೆಲೆ ನಿರ್ಧರಿಸುವ ಅಧಿಕಾರ ಕೇಂದ್ರ ಸರ್ಕಾರದ ಕೈಯಲ್ಲಿಯೇ ಇದೆ. ಒಂದು ದೇಶ ಒಂದು ಪೆಟ್ರೋಲ್ ಬೆಲೆ, ಒಂದು ದೇಶ ಒಂದು ಡೀಸೆಲ್ ಬೆಲೆ ಎಂದು ಮಾಡೋಕೆ ಯಾಕೆ ಸಾಧ್ಯವಾಗಲ್ಲ. ಹೀಗೆ ಪ್ರಶ್ನೆ ಕೇಳಿದರೆ ‘ನಾವೇನು ಮಾಡೋಣ, ರಾಜ್ಯಗಳು ಸೆಸ್ ಹಾಕುತ್ತವೆ’ ಎಂದು ಕೇಂದ್ರ ತಪ್ಪಿಸಿಕೊಳ್ಳೋಕೆ ಪ್ರಯತ್ನಪಡುತ್ತದೆ. ಆದರೆ ಜಿಎಸ್‌ಟಿ ಜಾರಿ ಮಾಡಿ ರಾಜ್ಯಗಳಿಗೆ ತೆರಿಗೆ ಪಾಲು ನೀಡುತ್ತಿರುವ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್‌ಗಳನ್ನೂ ಅದರ ವ್ಯಾಪ್ತಿಗೆ ತಂದು ರಾಜ್ಯಗಳಿಗೆ ನ್ಯಾಯಯುತ ಪರಿಹಾರ ನೀಡುವ ಬಗ್ಗೆ ಆಲೋಚಿಸುವು ದಿಲ್ಲ. ಮನಸ್ಸು ಮಾಡಿದರೆ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನೂ ನೀಡಬಹುದು. ಗ್ರಾಹಕರಿಗೆ ಒಂದೇ ರೀತಿಯ ಬೆಲೆಯನ್ನೂ ನಿಗದಿ ಮಾಡಬಹುದು. ಇಚ್ಛಾಶಕ್ತಿ ಬೇಕು ಅಷ್ಟೆ.
ಇಚ್ಛಾಶಕ್ತಿಯ ವಿಷಯಕ್ಕೆ ಬಂದರೆ ಎಲ್ಲ ರಾಜಕೀಯ ಪಕ್ಷಗಳ ನಾಯಕರೂ ಒಂದೇ ದೋಣಿಯ ಕಳ್ಳರು.ಇಂಧನ ಸಚಿವರಾಗಿದ್ದಾಗ ಜೆ.ಎಚ್.ಪಟೇಲರಿಗೆ ‘ನಮ್ಮ ರಾಜ್ಯದಲ್ಲಿ ವಿದ್ಯುತ್ ಕೊರತೆ ಬಹಳ ಇದೆ. ಪಕ್ಕದ ತಮಿಳುನಾಡು, ಆಂಧ್ರಪ್ರದೇಶದಲ್ಲಿ ವಿದ್ಯುತ್ ಕಡಿತ ಇಲ್ಲ ಯಾಕೆ?’ ಎಂದು ಕೇಳಿದಾಗ ಪಟೇಲರು ‘ವಿದ್ಯುತ್ ಕೊರತೆ ವಿಷಯದಲ್ಲಿ ಎಲ್ಲ ರಾಜ್ಯಗಳೂ ಒಂದೆ. ನಾವು ಪುರಂದರ ದಾಸರಾದರೆ ಅವರು ಕನಕದಾಸರು ಅಷ್ಟೆ’ ಎಂದು ಉತ್ತರಿಸಿದ್ದರು. ರೈತರ, ಗ್ರಾಹಕರ ಹಿತ ಕಾಯುವ ವಿಷಯದಲ್ಲಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಕತೆಯೂ ಇದೇ ಆಗಿದೆ.
ಒಂದು ದೇಶ ಒಂದು ಚುನಾವಣೆಗಿಂತ ಮೊದಲು ಒಂದು ದೇಶ ಒಂದು ಶಿಕ್ಷಣ ಪದ್ಧತಿ, ಒಂದು ದೇಶ ಒಂದು ಆರೋಗ್ಯ ವ್ಯವಸ್ಥೆ ಬೇಡವೇ? ನಮ್ಮಲ್ಲಿ ಬಡವರ ಮಕ್ಕಳಿಗೆ ಒಂದು ರೀತಿಯ ಶಿಕ್ಷಣ, ಶ್ರೀಮಂತರ ಮಕ್ಕಳಿಗೆ ಒಂದು ರೀತಿಯ ಶಿಕ್ಷಣ ವ್ಯವಸ್ಥೆ ಇದೆ. ಅದೇ ರೀತಿ ಬಡವರಿಗೊಂದು, ಸಿರಿವಂತರಿಗೊಂದು ಆರೋಗ್ಯ ವ್ಯವಸ್ಥೆ ಇದೆ. ಇದು ತೊಲಗಿ ಸಮಾನ ಶಿಕ್ಷಣ, ಸಮಾನ ಆರೋಗ್ಯ ವ್ಯವಸ್ಥೆ ಜಾರಿಗೆ ಬರಬೇಕಾಗಿರುವುದು ಈಗಿನ ತುರ್ತು ಅಲ್ಲವೇ? ಬರೀ ಭಾವನಾತ್ಮಕ ರಾಜಕಾರಣ ಮಾಡಿದರೆ ದೇಶ ಉದ್ಧಾರವಾಗದು. ಸುಧಾರಣಾ ರಾಜಕೀಯದ ಬಗ್ಗೆ ಆಲೋಚನೆ ನಡೆಸದಿದ್ದರೆ ಕೆಡುಕು ಕಟ್ಟಿಟ್ಟ ಬುತ್ತಿ.
ಅದೆಲ್ಲಾ ಹೋಗಲಿ ಸ್ವಾಮಿ, ಒಂದು ದೇಶ ಒಂದು ಸಂವಿಧಾನ ಅನುಷ್ಠಾನ ಆದರೂ ಬೇಡವೇ? ಈಗ ಅದು ಆಗ್ತಾ ಇದೆಯಾ? ನೀವೇ ಹೇಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.