ADVERTISEMENT

Mysuru Dasara | ದಸರಾ ಆನೆಗಳಿಗೆ ತೂಕ ಪರೀಕ್ಷೆ: 5.36 ಟನ್ ತೂಗಿದ ‘ಅಭಿಮನ್ಯು’

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 5:41 IST
Last Updated 11 ಆಗಸ್ಟ್ 2025, 5:41 IST
<div class="paragraphs"><p>ಮೈಸೂರಿನ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ&nbsp;ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳಿಗೆ ತೂಕ ಪರಿಶೀಲನೆ ಮಾಡಲಾಯಿತು.</p></div>

ಮೈಸೂರಿನ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳಿಗೆ ತೂಕ ಪರಿಶೀಲನೆ ಮಾಡಲಾಯಿತು.

   

ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.

ಮೈಸೂರು: 5,360 ಕೆ.ಜಿ ತೂಗಿದ ಕ್ಯಾಪ್ಟನ್ ‘ಅಭಿಮನ್ಯು’ ದಸರಾ ಆನೆಗಳಲ್ಲೇ ಎರಡನೇ ಹೆಚ್ಚು ತೂಕದ ಆನೆಯಾಗಿ ಹೊರಹೊಮ್ಮಿದನು. ಮೊದಲ ಸ್ಥಾನದಲ್ಲಿ ‘ಭೀಮ’  (5,465 ಕೆ.ಜಿ) ಇದ್ದನು.

ADVERTISEMENT

ಅರಮನೆ ಆವರಣದಲ್ಲಿ ಬಿಡಾರ ಹೂಡಿರುವ 9 ದಸರಾ ಆನೆಗಳ ತೂಕ ಪರೀಕ್ಷೆಯು ನಗರದ ಧನ್ವಂತರಿ ರಸ್ತೆಯಲ್ಲಿರುವ ‘ಸಾಯಿರಾಂ ಎಲೆಕ್ಟ್ರಾನಿಕ್‌ ವ್ಹೇಬ್ರಿಡ್ಜ್‌’ನಲ್ಲಿ ಸೋಮವಾರ ನಡೆಯಿತು.

ಕಳೆದ ದಸರೆಯಲ್ಲಿ ನಡೆದಿದ್ದ ತೂಕ ಪರೀಕ್ಷೆಯಲ್ಲಿ 5.3 ಟನ್ ತೂಗಿ, ಎಲ್ಲ ಆನೆಗಳಿಗಿಂತ ಅಭಿಮನ್ಯು ತೂಕಬಲದಲ್ಲಿ ಮೊದಲ ಸ್ಥಾನದಲ್ಲಿದ್ದನು. ಈ ಬಾರಿಯ ಮೊದಲ ತೂಕ ಪರೀಕ್ಷೆಯಲ್ಲಿ 60 ಕೆ.ಜಿ ಹೆಚ್ಚು ತೂಗಿದ್ದಾನೆ.   

ಬಲ ಹೆಚ್ಚಿಸಿಕೊಂಡ ಭೀಮ: 2017ರ ದಸರೆ ಹಾಗೂ ಕಳೆದ ನಾಲ್ಕು ವರ್ಷದಿಂದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿರುವ ‘ಭೀಮ’ ದಾಖಲೆ ಪ್ರಮಾಣದಲ್ಲಿ ಬಲ ಹೆಚ್ಚಿಸಿಕೊಂಡಿದ್ದಾನೆ. 2022ರ ದಸರೆಯಲ್ಲಿ ಸುಮಾರು 4 ಸಾವಿರ ಕೆ.ಜಿ ತೂಗುತ್ತಿದ್ದವ, ವರ್ಷದಿಂದ ವರ್ಷಕ್ಕೆ ತೂಕ ಹೆಚ್ಚಿಸಿಕೊಳ್ಳುತ್ತಿದ್ದಾನೆ. ಇದೀಗ 5.5 ಟನ್‌ ಅಂಚಿಗೆ ಬಂದಿದ್ದಾನೆ. 25 ವರ್ಷದ ಕಿರಿಯ ಆನೆಯಾಗಿದ್ದರೂ ತೂಕದಲ್ಲಿ ಬಲಶಾಲಿಯಾಗಿ ಹೊಮ್ಮಿದ್ದಾನೆ. 6 ಟನ್‌ಗಿಂತಲೂ ಹೆಚ್ಚು ತೂಗುತ್ತಿದ್ದ ಮಾಸ್ಟರ್‌ ‘ಅರ್ಜುನ’ನ ದಾಖಲೆ ಮುರಿಯುವ ತವಕದಲ್ಲಿದ್ದಾನೆ.  

ಕಳೆದ 9 ವರ್ಷದಿಂದ ದಸರೆಗೆ ಬರುತ್ತಿರುವ ಅನುಭವಿ ಆನೆ ಧನಂಜಯ 5,310 ಕೆ.ಜಿ ತೂಗಿ ಮೂರನೇ ಸ್ಥಾನ ಪಡೆದರೆ, ಎತ್ತರದ ಆನೆಯಾದ (2.86 ಮೀ.), ಆಕರ್ಷಕ ಕಿವಿಗಳನ್ನು ಹೊಂದಿರುವ 40 ವರ್ಷದ ‘ಏಕಲವ್ಯ’ 5,305 ಕೆ.ಜಿ ತೂಗಿ 4ನೇ ಸ್ಥಾನ ಪಡೆದನು. ಶ್ರೀರಂಗಪಟ್ಟಣ ದಸರೆಯಲ್ಲಿ ಪಾಲ್ಗೊಳ್ಳುತ್ತಿರುವ, ಕೂಂಬಿಂಗ್ ಕಾರ್ಯಾಚರಣೆಯಲ್ಲಿ ‘ಅರ್ಜುನ’ನ ಸ್ಥಾನ ತುಂಬಿರುವ ‘ಮಹೇಂದ್ರ’ 5,120 ಕೆ.ಜಿ ತೂಗಿದರೆ, ‘ಪ್ರಶಾಂತ’ 5,110 ಕೆ.ಜಿ ಇದ್ದನು. 

ಮೂರನೇ ಬಾರಿ ದಸರೆಯಲ್ಲಿ ಪಾಲ್ಗೊಳ್ಳುತ್ತಿರುವ ಸುಂದರ ಆನೆ 26 ವರ್ಷದ ‘ಕಂಜನ್‌’ 4,880 ಕೆ.ಜಿ ತೂಗಿದರೆ, ‌ಹೆಣ್ಣಾನೆಗಳಲ್ಲಿ ‘ಲಕ್ಷ್ಮಿ’ 3,730 ಕೆ.ಜಿ ಹಾಗೂ ‘ಕಾವೇರಿ’ 3,010 ಕೆ.ಜಿ ತೂಕವಿದ್ದರು. 

ಡಿಸಿಎಫ್ ಐ.ಬಿ.ಪ್ರಭುಗೌಡ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.