ADVERTISEMENT

2025ರ ಮೆಲುಕು | ಕ್ಷಣವೆಂಬುದೆ ವರುಷ, ಕಂಡಂತೆ ಹರುಷ: ನಟ ಕಿಶೋರ್ ಸಂದರ್ಶನ

ಶ್ವೇತಕುಮಾರಿ
Published 20 ಡಿಸೆಂಬರ್ 2025, 10:05 IST
Last Updated 20 ಡಿಸೆಂಬರ್ 2025, 10:05 IST
<div class="paragraphs"><p>ನಟ ಕಿಶೋರ್</p></div>

ನಟ ಕಿಶೋರ್

   

ಭಿನ್ನ ಧ್ವನಿ ಹಾಗೂ ಭಿನ್ನ ದನಿ ಮೂಲಕ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ಪ್ರಮುಖ ನಟ ಕಿಶೋರ್. ಕನ್ನಡ, ತಮಿಳು ತೆಲುಗು, ಮಲಯಾಳಂ ಭಾಷೆಗಳ ಸಿನಿಮಾಗಳಲ್ಲಿ ಹೆಚ್ಚಾಗಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅವರು, ಇತ್ತ ರಂಗಭೂಮಿಯಲ್ಲಿಯೂ ಬಣ್ಣ ಹಚ್ಚುತ್ತಾರೆ. ಸಾಮಾಜಿಕ ಜವಾಬ್ದಾರಿಯಿಂದ ಆಡಳಿತ ವರ್ಗಕ್ಕೆ ನಿಷ್ಟುರ ಪ್ರಶ್ನೆಗಳ ಬಾಣ ಎಸೆಯುವ ಕಿಶೋರ್ ಅವರ ಮಾತಿನ ರೀತಿಯೇ ಸೊಗಸು. ಒಬ್ಬ ಕಲಾವಿದರಾಗಿ ಬದುಕನ್ನು ಅವರು ನೋಡುವ ದೃಷ್ಟಿಕೋನವೇ ಭಿನ್ನ. ಬದುಕಿನ ಹರಿವಿನ ಅರಿವಿನೊಂದಿಗೆ, ಕಾಲ, ಸಂತಸ, ಸಂಕಷ್ಟಗಳ ಬಗ್ಗೆ ಹಳೆ ವರುಷದ ನೆನಪಲ್ಲಿ, ಹೊಸ ವರ್ಷದ ನೆಪದಲ್ಲಿ ಕಿಶೋರ್ ಅವರನ್ನು 'ಪ್ರಜಾವಾಣಿ ಡಿಜಿಟಲ್' ಮಾತನಾಡಿಸಿದಾಗ...

2025 ನಿಮ್ಮ ಪಾಲಿಗೆ ಹೇಗಿತ್ತು?

ADVERTISEMENT

ಚೆನ್ನಾಗಿತ್ತು. ಆದರೆ ವರ್ಷದ ಲೆಕ್ಕ ಹಾಕಿ ನಾನು ಬದುಕುವುದಿಲ್ಲ‌. ಪ್ರತಿ ದಿನ, ಪ್ರತಿ ಕ್ಷಣವನ್ನು ಸಂಪೂರ್ಣವಾಗಿ ಬದುಕಬೇಕು. ದಿನದ ಹೊರೆಯನ್ನು ನಾಳೆಗೆ ಉಳಿಸಬಾರದು, ಅಂದಂದಿನ ಬದುಕು ಅಂದಂದಿಗೆ ಮುಗಿದು ನಾಳೆ ಹೊಸಬದುಕು ಆರಂಭಿಸುವ ಪ್ರಯತ್ನ ಮಾಡಬೇಕು. ಭೂಮಿ ಮೇಲೆ ಭಾರ ಹಾಕದ ಹಾಗೆ, ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಸಂಪನ್ಮೂಲ ಬಳಸಿ ಬದುಕಿ ಹೋದರೆ ಸಾಕು. 'ಯುಗಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ' ಅಂತ ಕವಿಗಳೇ ಹೇಳಿದ್ದಾರಲ್ಲ, ಗಿಡ, ಮರ ಪ್ರಕೃತಿಯ ಹಾಗೆ, ಹೊಸ ಚೈತನ್ಯದೊಂದಿಗೆ ನಾಳೆಗಳು ಬರುತ್ತವೆ. ಪ್ರತಿದಿನವೂ ಹೊಸ ಹುಟ್ಟು, ಹೊಸ ಬದುಕು. ಹಾಗಂತ ಹೊಸ ವರ್ಷ ಆಚರಿಸುವವರನ್ನು, ಶುಭಾಶಯ ಕೋರುವುದನ್ನು ವಿರೋಧಿಸಲ್ಲ. ಎಲ್ಲರೂ ಶುಭ ಆಗಬೇಕೆಂಬ ಆಶಯ ಒಳ್ಳೆಯದೇ ಅಲ್ವಾ, ಹಾಗಾಗಿ, ಅದಕ್ಕೆ ಸ್ಪಂದಿಸುತ್ತೇನೆ. ಅದೊಂಥರ, ಶುಭೋದಯ ಎಂದ ಹಾಗೆ. ವರ್ಷದ ಲೆಕ್ಕ ಹಾಕಿ ಬದುಕಿದಾಗ, ನಾವು ಕನಸು ಕಟ್ಟಿಕೊಂಡು ಬದುಕಲು ಶುರು ಮಾಡುತ್ತೇವೆ. ಮೋದಿಯವರು ಹೇಳುತ್ತಾರಲ್ಲ, 2047ಕ್ಕೆ ಏನೋ ಒಂದು ಆಗುತ್ತದೆ ಅಂತ, ಅದೇ ರೀತಿ, ಈ ವರ್ಷ ಏನೋ ಆಗುತ್ತದೆ ಎಂದೆಲ್ಲ ಕನಸುತ್ತ ಬದುಕುತ್ತೇವೆ.‌ ಅಷ್ಟರಲ್ಲಿ ಡಿಸೆಂಬರ್ ತಲುಪಿ, ಜನವರಿ ಬಾಗಿಲು ತಟ್ಟುತ್ತಿರುತ್ತದೆ‌. ದಿನ, ಕ್ಷಣಗಳನ್ನು ಅರಿವಿನಿಂದ, ಪ್ರೀತಿಯಿಂದ ಬದುಕಿದರೆ ಬದುಕು ಚೆನ್ನ.

ಈ ವರ್ಷದ ಖುಷಿ ಕೊಟ್ಟ ಸಂಗತಿಗಳೇನು?

ಬೇಕಾದಷ್ಡಿವೆ. ಬೆಳಿಗ್ಗೆ ಎದ್ದುಕೊಂಡು ನಮ್ಮ ಮಕ್ಕಳ ಮುಖ ನೋಡಿ ನಕ್ಕರೆ, ಮಾತನಾಡಿದರೆ ಅದೇ ಖುಷಿಯ ವಿಷಯ. ಈಗಿನ ಮಕ್ಕಳು ಮಾತಾಡುವುದೇ ನಿಲ್ಲಿಸಿಬಿಟ್ಟಿದ್ದಾರೆ. ನಮ್ಮ ಆರೋಗ್ಯ ಚೆನ್ನಾಗಿದೆ‌, ಗೆಳೆಯರು, ಹಿತೈಷಿಗಳು ಆರೋಗ್ಯವಾಗಿದ್ದಾರೆ ಎಂದಾಗ ಖುಷಿಯಾಗುತ್ತದೆ. ಜಗತ್ತಿನಲ್ಲಿ ಏನೂ ತೊಂದರೆಗಳಾದೆ, ಯುದ್ಧಗಳಾಗದೆ ಎಷ್ಟೋ ಜನಗಳಿರುವುದು ನೋಡಿ ಖುಷಿಯಾಗುತ್ತದೆ. ಮೊನ್ನೆ ನಮ್ಮನೆ ಕಿಟಕಿ ಮುಂದೆ ಬಾಲ‌ ತುಂಡಾಗಿ ರಕ್ತ ಸೋರುತ್ತಿದ್ದ ಒಂದು ಬೆಕ್ಕು ಬಂದು ಕೂತಿತ್ತು. ಅದಕ್ಕೆ ಚಿಕಿತ್ಸೆ ಕೊಡಿಸಲು ಸಾಧ್ಯವಾಯಿತು. ನಂತರ ಅದನ್ನು ನಮ್ಮ ಮನೆಯಲ್ಲಿಯೇ ಸಾಕುತ್ತಿದ್ದೇವೆ. ದಿನಾ ಮನೆಗೆ ಹೋಗಿ ಆ ಬೆಕ್ಕಿನ ಮುಖ ನೋಡುವಾಗ ಖುಷಿಯಾಗುತ್ತದೆ. ಬದುಕಿನ ಸೌಂದರ್ಯ ನಾವು ನೋಡುವ ದೃಷ್ಟಿಕೋನದಲ್ಲಿ ಅಡಗಿರುತ್ತದೆ ಎನ್ನುವ ಚಿಂತನೆಯೊಂದಿಗೆ ಬದುಕನ್ನು ನೋಡಲು ಸಾಧ್ಯವಾದರೆ ನಮ್ಮ ಸುತ್ತಲೂ ಖುಷಿ ಪಡುವ, ಖುಷಿ ಕೊಡುವ ಹಲವು ಸಂಗತಿಗಳು ಕಾಣಿಸುತ್ತವೆ. 'ಎಲ್ಲೆಲ್ಲೂ ಸಂಗೀತವೇ...' ಅಂತ ಒಂದು ಹಾಡು ಇದೆಯಲ್ಲ, ಹಾಗೆ. ಕಣ ಕಣದಲ್ಲಿ ಸಂಗೀತವಿದೆ. ಅದನ್ನು ನೋಡುವುದಕ್ಕೆ ನಮಗೆ ಸಾಧ್ಯ ಆಗಬೇಕು. ಆ ನೋಟ ಬೆಳೆಸಿಕೊಳ್ಳುವುದು ಮುಖ್ಯ.

ವಿಷಾದವುಂಟು ಮಾಡಿದ, ಕಹಿ ಎನಿಸಿದ ನೆನಪೇನಾದರೂ...?

ನೋವುಗಳನ್ನು, ಗಾಯಗಳನ್ನು ಮರೆಯುವುದು, ಸಂಕಟಗಳನ್ನು ದಾಟುವುದು, ಎಲ್ಲವನ್ನು ಮೀರುವುದೇ ಮನುಷ್ಯನ ಜೀವನ. ನನಗೆ ಮರೆವು ಜಾಸ್ತಿ. ಒಳ್ಳೆಯದ್ದು, ಕೆಟ್ಟದ್ದು ಎರಡೂ ಮರೆತುಹೋಗುತ್ತವೆ.‌ ಕೆಟ್ಟದ್ದು ಮರೆತರೆ ಹೆಚ್ಚು ಖುಷಿ, ಒಳ್ಳೆಯದ್ದು ಮರೆತರೆ ಪರವಾಗಿಲ್ಲ, ಅದು ಕಣ್ಣಿಗೆ ಆಗಾಗ ಕಾಣಿಸುತ್ತಲೇ ಇರುತ್ತದೆ.

ಹೊಸ ವರ್ಷಕ್ಕೆ ನಿಮ್ಮ ಸಿನಿಮಾ ಪಟ್ಟಿ...?

ಕೆಲವು ಸಣ್ಣಪುಟ್ಟ ಸಿನಿಮಾಗಳು ಇವೆ. ಬರಗೂರು ರಾಮಚಂದ್ರಪ್ಪ ಸರ್ ಜೊತೆ 'ಮಹಾಕವಿ' ಅಂತ ಒಂದು ಸಿನಿಮಾ ಕೆಲಸ ಮುಗಿದಿದೆ. ಪಂಪನನ್ನು ಭಿನ್ನ ದೃಷ್ಟಿಕೋನದಿಂದ ತೋರಿಸುವ ಸಿನಿಮಾ ಅದು. ಚೆನ್ನಾಗಿದೆ. ಈ ಕಾಲಕ್ಕೆ ಅಗತ್ಯ ಕೂಡ. ಹಂಸಲೇಖ ಅವರ ನಿರ್ದೇಶನದ ‘ಓK’ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದೇನೆ. ಅದು ತುಂಬ ಮುಖ್ಯವಾದ ಸಿನಿಮಾ. ಸತ್ಯರಾಜ್ ಅವರೊಂದಿಗೆ ಒಂದು ತಮಿಳು ಸಿನಿಮಾದಲ್ಲಿ ನಟಿಸಿದ್ದೇನೆ. ತುಂಬ ಚೆನ್ನಾಗಿರುವ ಪಾತ್ರ, ಆಸಕ್ತಿಕರವಾಗಿದೆ. ನಾಗಾರ್ಜುನ ಅವರ ಸಿನಿಮಾದಲ್ಲಿದ್ದೇನೆ.

ಬದುಕಿನಲ್ಲಿ ಏನಾದರೂ ಬದಲಾವಣೆ ಮಾಡಿಕೊಳ್ಳಬೇಕು ಅನಿಸಿದೆಯಾ?

'ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ'. ಜಂಗಮವಾಗಿರುವುದು ತುಂಬ ಮುಖ್ಯ. ಬದಲಾವಣೆ ಸಹಜ ಹಾಗೂ ನಿರಂತರ. ನಾವು ಎಷ್ಟೇ ಸರಿ ಇದ್ದೇವೆ ಎಂದು ಭಾವಿಸಿದರೂ ಎಲ್ಲೋ ಒಂದು ಕಡೆ ಬದಲಾವಣೆ ದಾರಿ ಇರುತ್ತದೆ. ಜಗತ್ತಿಗೆ ತಕ್ಕಂತೆ ನಾವೂ ಬದಲಾಗುತ್ತ, ಹೊಂದಿಕೊಂಡು ಹೋಗಬೇಕು. ಸಮಸ್ಯೆಗಳ ಬಗ್ಗೆ, ಸರಿತಪ್ಪುಗಳ ಬಗ್ಗೆ ಮಾತನಾಡಬೇಕು, ತಿದ್ದಬೇಕು. ಸ್ಥಾವರ ಆಗಿಬಿಟ್ಟರೆ ಅಲ್ಲಿಯೇ ಮುಗಿದುಹೋಗಿಬಿಡುತ್ತೇವೆ ನಾವು‌‌. ಬದಲಾವಣೆ ನಿರಂತರ ಆಗುತ್ತಲೇ ಇರಬೇಕು. ಬದುಕಿನ ಚಲನೆಗೆ ಅದು ಮುಖ್ಯ. ಮುಂಚೆ ಎಲ್ಲ, ಬೇಕಾದಷ್ಟು ಸಮಯ ಇದೆ ಅನಿಸುತ್ತಿತ್ತು. ವಯಸ್ಸಾಗುತ್ತಲೇ, ಸಮಯ ಕಡಿಮೆ ಎಂಬ ಅರಿವಾಗುತ್ತದೆ. ಪ್ರತಿಯೊಂದು ಕ್ಷಣಗಳನ್ನೂ ನೆನಪುಗಳಾಗಿ ಕೂಡಿಡಬೇಕು.

ಜನತೆಗೆ ಏನು ಹೇಳಲು ಬಯಸುತ್ತೀರಿ?

ಖುಷಿಯಿಂದ ಪ್ರತಿ ದಿನ, ಪ್ರತಿ ಕ್ಷಣವನ್ನು ಬದುಕಬೇಕು. ಪ್ರೀತಿಯಿಂದ, ಶಾಂತಿಯಿಂದ. ದಿನವನ್ನೇ ವರ್ಷದಂತೆ ಬದುಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.