‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’
‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮೂರನೇ ಆವೃತ್ತಿಯ ಸಮಾರಂಭ ಜೂನ್ 27ರಂದು ನಡೆಯಲಿದೆ. 19 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಹೆಸರುಗಳನ್ನು, ನಾಮನಿರ್ದೇಶನಗೊಂಡ ಸಿನಿಮಾಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದೀಗ ‘ಅತ್ಯುತ್ತಮ ನಟ’ ವಿಭಾಗದಲ್ಲಿ ನಾಮನಿರ್ದೇಶನಗೊಂಡವರನ್ನು ಪರಿಚಯಿಸುವ ಸಮಯ.
ಕಿಚ್ಚ ಸುದೀಪ್
ಕಿಚ್ಚ ಸುದೀಪ್
ಕನ್ನಡ ಚಿತ್ರರಂಗದಲ್ಲಿ ಎರಡೂವರೆ ದಶಕಗಳನ್ನು ಪೂರೈಸಿರುವ ನಟ ಸುದೀಪ್ ‘ಮ್ಯಾಕ್ಸ್’ ಚಿತ್ರದ ನಟನೆಗಾಗಿ ನಾಮನಿರ್ದೆಶನಗೊಂಡಿದ್ದಾರೆ. 1997ರಲ್ಲಿ ‘ತಾಯವ್ವ’ ಚಿತ್ರದ ರಾಮುವಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಇವರು ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ‘ಸ್ಪರ್ಶ’, ‘ಹುಚ್ಚ’ದಿಂದ ಹಿಡಿದು ‘ಮ್ಯಾಕ್ಸ್’ ತನಕ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ನಂದಿ’, ‘ಕಿಚ್ಚ’, ‘ಸ್ವಾತಿ ಮುತ್ತು’, ‘ಮೈ ಆಟೋಗ್ರಾಫ್’, ‘ಮುಸ್ಸಂಜೆ ಮಾತು’ ಮೊದಲಾದ ಚಿತ್ರಗಳಲ್ಲಿ ನಟನೆಯಿಂದಲೇ ಗಮನ ಸೆಳೆದರು. ‘ಈಗ’ ಇವರ ನಟನೆಯನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದ ಚಿತ್ರ. ಅತ್ಯುತ್ತಮ ನಟನೆಗಾಗಿ ಸಾಕಷ್ಟು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ‘ನಂ 73 ಶಾಂತಿ ನಿವಾಸ’ ಚಿತ್ರದ ಮೂಲಕ ನಿರ್ದೇಶಕನಾಗಿ ಗುರುತಿಸಿಕೊಂಡರು. ನಿರ್ಮಾಪಕನಾಗಿ ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾಗಳನ್ನು ನಿರ್ಮಿಸಿದ ಇವರು ಸದ್ಯ ‘ಬಿಲ್ಲ ರಂಗ ಭಾಷ’ ಚಿತ್ರದಲ್ಲಿ ನಟಿಸುತ್ತಿದ್ದು, ಇದು ಇವರ 47ನೇ ಚಿತ್ರ.
****
ದುನಿಯಾ ವಿಜಯ್
ದುನಿಯಾ ವಿಜಯ್
ಸದ್ಯ ಕನ್ನಡ ಚಿತ್ರರಂಗದಲ್ಲಿ ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ನೀಡುತ್ತಿರುವ ವಿಜಯ್ ‘ಭೀಮ’ ಚಿತ್ರದ ನಟನೆಗಾಗಿ ನಾಮನಿರ್ದೇಶನಗೊಂಡಿದ್ದಾರೆ. ಯೋಗರಾಜ್ ಭಟ್ ಅವರ ‘ರಂಗ ಎಸ್‌ಎಸ್‌ಎಲ್‌ಸಿ’ ಚಿತ್ರದಲ್ಲಿ ಸುದೀಪ್ ಅವರೊಂದಿಗೆ ನಟಿಸುವ ಮೂಲಕ ವಿಜಯ್ ತಮ್ಮ ಸಿನಿಪಯಣ ಪ್ರಾರಂಭಿಸಿದರು. ಸೂರಿ ನಿರ್ದೇಶನದ ಚೊಚ್ಚಲ ಚಿತ್ರ ‘ದುನಿಯಾ’ ಮೂಲಕ ಇವರು ಜನಪ್ರಿಯರಾದರು. ಈತನಕ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ನಿರ್ದೇಶಕನಾಗಿಯೂ ಗಮನ ಸೆಳೆದಿದ್ದಾರೆ. ಇವರು ನಟಿಸಿ ನಿರ್ದೇಶಿಸಿದ ‘ಸಲಗ’, ‘ಭೀಮ’ ಚಿತ್ರಗಳು ಹಿಟ್ ಸಿನಿಮಾಗಳ ಪಟ್ಟಿ ಸೇರಿವೆ. ತೆಲುಗು ಚಿತ್ರಗಳಲ್ಲಿಯೂ ಕಾಣಿಸಿಕೊಂಡಿರುವ ಇವರು ಅತ್ಯುತ್ತಮ ನಟನೆಗಾಗಿ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸದ್ಯ ಜಡೇಶ್ ಹಂಪಿ ನಿರ್ದೇಶನದ ‘ಲ್ಯಾಂಡ್ ಲಾರ್ಡ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘ಸಿಟಿ ಲೈಟ್ಸ್’ ಚಿತ್ರದಲ್ಲಿ ನಟನೆ ಜತೆಗೆ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ.
****
ರಂಗಾಯಣ ರಘು
ರಂಗಾಯಣ ರಘು
‘ಶಾಖಾಹಾರಿ’ ಸಿನಿಮಾ ಬಳಿಕ ‘ಅಭಿನಯಾಸುರ’ ಎಂಬ ಬಿರುದು ಪಡೆದಿರುವ ನಟ ರಂಗಾಯಣ ರಘು ಕನ್ನಡ ಚಿತ್ರರಂಗದಲ್ಲಿ ಮೂರೂವರೆ ದಶಕಗಳನ್ನು ಪೂರೈಸಿ ಹೆಜ್ಜೆ ಇಡುತ್ತಿದ್ದಾರೆ. ‘ಶಾಖಾಹಾರಿ’ ಸಿನಿಮಾದಲ್ಲಿನ ನಟನೆಗಾಗಿ ಇವರು ನಾಮನಿರ್ದೇಶನಗೊಂಡಿದ್ದಾರೆ. ಖಳನಾಯಕ, ಹಾಸ್ಯ, ಪೋಷಕ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿರುವ ಇವರು ಸದ್ಯ ಮುಖ್ಯಭೂಮಿಕೆಯಲ್ಲೇ ಮಿಂಚುತ್ತಿದ್ದಾರೆ. ‘ಶಾಖಾಹಾರಿ’ ಹಾಗೂ ‘ಅಜ್ಞಾತವಾಸಿ’ ಇದಕ್ಕೆ ಸಾಕ್ಷ್ಯವಾಗಿದೆ. ಭಿನ್ನವಾದ ಪಾತ್ರ ಪೋಷಣೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ರಂಗಭೂಮಿ ಹಿನ್ನೆಲೆಯ ಇವರು ‘ಸುಗ್ಗಿ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಇಲ್ಲಿಯವರೆಗೂ 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಸೈನೈಡ್’, ‘ದುನಿಯಾ’, ‘ಗಾಳಿಪಟ’, ‘ಶಾಖಾಹಾರಿ’ ಸಿನಿಮಾಗಳ ಮೂಲಕ ಜನರು ಇವರನ್ನು ಗುರುತಿಸಿಸುವುದು ಹೆಚ್ಚು. 2007ರಲ್ಲಿ ‘ದುನಿಯಾ’ ಚಿತ್ರದಲ್ಲಿನ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ‘ಮೂರನೇ ಕೃಷ್ಣಪ್ಪ’, ‘ಟಗರುಪಲ್ಯ’, ‘ರಂಗಸಮುದ್ರ’ದಂತಹ ಮಣ್ಣಿನ, ಭಾಷಾ ಸೊಗಡಿನ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡ ಇವರು ಹೊಸ ಚಿಗುರುಗಳನ್ನು ಪೋಷಿಸಿದವರು. ಸದಾ ಭಿನ್ನ ಪಾತ್ರಗಳ ಬಾಯಾರಿಕೆ ಹೊತ್ತ ಇವರ ಸಿನಿಬ್ಯಾಂಕ್‌ನಲ್ಲಿ ಸದ್ಯ ಹತ್ತಕ್ಕೂ ಅಧಿಕ ಸಿನಿಮಾಗಳಿವೆ.
****
ಪ್ರಮೋದ್ ಶೆಟ್ಟಿ
ಪ್ರಮೋದ್ ಶೆಟ್ಟಿ
‘ಲಾಫಿಂಗ್ ಬುದ್ಧ’ ಚಿತ್ರದಲ್ಲಿನ ನಟನೆಗಾಗಿ ಇವರು ನಾಮನಿರ್ದೇಶನಗೊಂಡಿದ್ದಾರೆ. ರಂಗಭೂಮಿ ಹಿನ್ನೆಲೆಯ ಪ್ರಮೋದ್, ‘ಜುಗಾರಿ’ ಚಿತ್ರದ ಮೂಲಕ ಸಿನಿಮಾ ಲೋಕ ಪ್ರವೇಶಿಸಿದರು. ಇದಾದ ಬಳಿಕ ಮತ್ತೆ ರಂಗಭೂಮಿಯೊಳಕ್ಕೆ ಹೊಕ್ಕ ಇವರನ್ನು ಬೆಳ್ಳಿಪರದೆಗೆ ಎಳೆದು ತಂದಿದ್ದು ‘ಉಳಿದವರು ಕಂಡಂತೆ’. ಇದಾದ ಬಳಿಕ ಅವರ ಸಾಲು ಸಾಲು ಸಿನಿಮಾಗಳು ತೆರೆಕಂಡವು. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದಲ್ಲಿ ‘ಉಪಾಧ್ಯಾಯ’ರಾಗಿ ಮಿಂಚಿದ ಅವರು ಬಳಿಕ ‘ರಿಕ್ಕಿ’, ‘ಕಿರಿಕ್ ಪಾರ್ಟಿ’, ‘ಅವನೇ ಶ್ರೀಮನ್ನಾರಾಯಣ’, ‘ಕಥಾಸಂಗಮ’, ‘ಒಂದು ಶಿಕಾರಿಯ ಕಥೆ’, ‘ತೂತು ಮಡಿಕೆ’, ‘ಹೀರೋ’ ‘ಕಾಂತಾರ’ ಮುಂತಾದ ಸಿನಿಮಾಗಳಲ್ಲಿ ನಟಿಸಿದರು. ಪೋಷಕ ಪಾತ್ರದ ಮೂಲಕ ಸಿನಿಪಯಣ ಆರಂಭಿಸಿದ್ದ ಪ್ರಮೋದ್ ಇಂದು ಹೀರೊ ಆಗಿ ನಿಂತಿದ್ದಾರೆ. ‘ಲಾಫಿಂಗ್ ಬುದ್ಧ’ ಇವರ ಸಿನಿ ಬದುಕಿನಲ್ಲೊಂದು ವಿಶೇಷ ಸಿನಿಮಾವಾಗಿದೆ. ಚಿತ್ರದಲ್ಲಿನ ಪಾತ್ರಕ್ಕಾಗಿ 30 ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದರು ಪ್ರಮೋದ್. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಜೀವಿಸಿದ್ದ ಅವರು ನಗುವಿನ ಜೊತೆಗೆ ಭಾವನಾತ್ಮಕ ದೃಶ್ಯಗಳಲ್ಲಿ ಈಜಾಡಿಸಿದ್ದರು. ಸದ್ಯ ‘ಕಾಂತಾರ’ ಪ್ರೀಕ್ವೆಲ್‌ನಲ್ಲಿ ತೊಡಗಿಸಿಕೊಂಡಿರುವ ಅವರು ‘ರಿಚರ್ಡ್ ಆ್ಯಂಟನಿ’ಯಲ್ಲೂ ನಟಿಸುತ್ತಿದ್ದಾರೆ.
****
ವಿನಯ್ ರಾಜ್‌ಕುಮಾರ್
ವಿನಯ್ ರಾಜ್‌ಕುಮಾರ್
ಭಿನ್ನ ಪಾತ್ರಗಳ ಆಯ್ಕೆಯಿಂದಲೇ ಹೆಸರುವಾಸಿಯಾಗಿರುವ ವಿನಯ್ ರಾಜ್‌ಕುಮಾರ್ ‘ಪೆಪೆ’ ಚಿತ್ರದ ಖಡಕ್ ನಟನೆಗಾಗಿ ನಾಮನಿರ್ದೇಶನಗೊಂಡಿದ್ದಾರೆ. ಕಂಟೆಂಟ್ ಆಧಾರಿತ ಸಿನಿಮಾಗಳನ್ನೇ ಆಯ್ದುಕೊಂಡು ತಮ್ಮ ಹಿಂದಿನ ಪಾತ್ರಗಳಿಗೇ ಸವಾಲು ಒಡ್ಡಿಕೊಳ್ಳುವ ಇವರು ‘ಪೆಪೆ’ಯಲ್ಲಿ ಮಾಸ್, ರಗಡ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಇವರು ‘ಸಿದ್ಧಾರ್ಥ’ ಚಿತ್ರದ ಮೂಲಕ ನಾಯಕನಾದರು. ‘ಅನಂತು ವರ್ಸಸ್ ನುಸ್ರುತ್’, ‘ಒಂದು ಸರಳ ಪ್ರೇಮಕಥೆ’ ಮೊದಲಾದ ಸಿನಿಮಾಗಳ ಮೂಲಕ ಗಮನ ಸೆಳೆದರು. ಸದ್ಯ ‘ಅಂದೊಂದಿತ್ತ ಕಾಲ’, ‘ಸಿಟಿ ಲೈಟ್ಸ್’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
****
ದಿಗಂತ್
ದಿಗಂತ್
ಸ್ಯಾಂಡಲ್‌ವುಡ್‌ನ ದೂದ್‌ಪೇಡ ಎಂದೇ ಖ್ಯಾತಿ ಪಡೆದಿರುವ ದಿಗಂತ್ ‘ಮಾರಿಗೋಲ್ಡ್’ ಚಿತ್ರದ ನಟನೆಗಾಗಿ ನಾಮನಿರ್ದೇಶಿತರಾಗಿದ್ದಾರೆ. ‘ಮಿಸ್ ಕ್ಯಾಲಿಫೋರ್ನಿಯಾ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಇವರು ಗುರುತಿಸಿಕೊಂಡಿದ್ದು ಯೋಗರಾಜ್ ಭಟ್ಟರ ಗರಣಿಯಲ್ಲಿ. ಭಟ್ಟರ ‘ಮುಂಗಾರು ಮಳೆ’, ‘ಗಾಳಿಪಟ’ ಚಿತ್ರಗಳಲ್ಲಿ ಗಮನ ಸೆಳೆದ ಇವರು ‘ಮನಸಾರೆ’, ‘ಪಂಚರಂಗಿ’ ಚಿತ್ರಗಳಿಂದ ಜನರ ಮನಸೂರೆಗೊಂಡರು. ಭಿನ್ನ ಪಾತ್ರಗಳನ್ನೇ ಆಯ್ದುಕೊಳ್ಳುವ ಇವರು ಮಾರಿಗೋಲ್ಡ್‌ನಲ್ಲಿ ಮಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಅವರ ‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರ ತೆರೆಯಲ್ಲಿದೆ.
****
ಗೌರಿಶಂಕರ್
ಗೌರಿಶಂಕರ್
ಸ್ಯಾಂಡಲ್‌ವುಡ್‌ನಲ್ಲಿ ನಾಯಕನಾಗಿ ಗಟ್ಟಿಯಾಗಿ ನೆಲೆಯೂರಬೇಕೆಂಬ ಕನಸು ಹೊತ್ತಿರುವ ಗೌರಿಶಂಕರ್ ‘ಕೆರೆಬೇಟೆ’ ಚಿತ್ರಕ್ಕಾಗಿ ನಾಮನಿರ್ದೇಶನಗೊಂಡಿದ್ದಾರೆ. ಮಲೆನಾಡಿನ ನಾಗನಾಗಿ ಚಿತ್ರದಲ್ಲಿ ಗಮನ ಸೆಳೆದಿದ್ದಾರೆ. ಖಳನಾಯಕನಿಂದ ನಾಯಕನಾಗಿ ಪರಿವರ್ತನೆ ಹೊಂದುವ ವಿಭಿನ್ನ ಪಾತ್ರವನ್ನು ಇವರು ನಟನಾಗಿ ಜೀವಿಸಿದ್ದಾರೆ. ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ದಶಕಗಳ ಕಾಲ ಕೆಲಸ ಮಾಡಿದ ಇವರು ‘ರಾಜಹಂಸ’ ಚಿತ್ರದ ಮೂಲಕ ನಾಯಕನಾದರು. ಬಳಿಕ ‘ಜೋಕಾಲಿ’ ಚಿತ್ರದಲ್ಲಿ ಕಾಣಿಸಿಕೊಂಡರು. ಸದ್ಯ ಹೊಸ ಚಿತ್ರಕ್ಕಾಗಿ ಕಥೆಯ ಹುಡುಕಾಟದಲ್ಲಿದ್ದಾರೆ.
****
ಮಹಾದೇವ ಹಡಪದ
ಮಹಾದೇವ ಹಡಪದ
‘ಫೋಟೋ’ ಸಿನಿಮಾದಲ್ಲಿನ ನಟನೆಗಾಗಿ ಇವರು ನಾಮನಿರ್ದೇಶನಗೊಂಡಿದ್ದಾರೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿನ ಸಂಕಷ್ಟಗಳನ್ನು ಕಟ್ಟಿಕೊಡುವ ಈ ಚಿತ್ರದಲ್ಲಿ ದಿನಗೂಲಿ ಕಟ್ಟಡ ಕಾರ್ಮಿಕನ ಪಾತ್ರದಲ್ಲಿ ‘ದುರ್ಗ್ಯ’ ಎಂಬ ಬಾಲಕನ ತಂದೆಯಾಗಿ ಜೀವಿಸಿದ್ದಾರೆ ಮಹಾದೇವ ಹಡಪದ. ಬೆಳಗಾವಿಯ ರಾಮದುರ್ಗದವರಾದ ಇವರು ರಂಗಕರ್ಮಿ, ಕಥೆಗಾರರಾಗಿರುವ ಇವರು ಸುಮಾರು 50 ನಾಟಕಗಳನ್ನು ನಿರ್ದೇಶಿಸಿದ್ದಾರೆ. ಸಮುದಾಯದ ಮೂಲಕ ರಂಗಭೂಮಿಗೆ ಹೆಜ್ಜೆ ಇಟ್ಟ ಇವರು ನೀನಾಸಂ ತಿರುಗಾಟದಲ್ಲಿ ನಟನಾಗಿ ಹಾಗೂ ತಂತ್ರಜ್ಞನಾಗಿ ಇದ್ದವರು. ರಂಗತಂಡವನ್ನೂ ಕಟ್ಟಿರುವ ಇವರು ಕನ್ನಡ ಎಂ.ಎ.ಪದವೀಧರರು. ಸಿನಿಮಾ ಕ್ಷೇತ್ರದಲ್ಲಿ ನಾಲ್ಕೈದು ವರ್ಷಗಳಿಂದ ಸಕ್ರಿಯರಾಗಿರುವ ಇವರು ‘19.20.21.’, ‘ಭೈರತಿ ರಣಗಲ್’, ‘ಮಿಕ್ಕ ಬಣ್ಣದ ಹಕ್ಕಿ’ ಸೇರಿ ಸುಮಾರು ಹತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಪರಜ್ಯ’ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
****
ರಾಜವರ್ಧನ್
ರಾಜವರ್ಧನ್
‘ಹಿರಣ್ಯ’ ಸಿನಿಮಾದಲ್ಲಿನ ನಟನೆಗಾಗಿ ಇವರು ನಾಮನಿರ್ದೇಶನಗೊಂಡಿದ್ದಾರೆ. ನಟ ಡಿಂಗ್ರಿ ನಾಗರಾಜ್ ಪುತ್ರ ಇವರು. ‘ಬಿಚ್ಚುಗತ್ತಿ’ ಸಿನಿಮಾ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ ಇವರು ನಂತರ ‘ಪ್ರಣಯಂ’, ‘ಹಿರಣ್ಯ’ ಮತ್ತು ‘ಗಜರಾಮ’ ಚಿತ್ರಗಳಲ್ಲಿ ನಟಿಸಿದ್ದಾರೆ. ಬಾರ್ನ್‌ಸ್ವಾಲೋ ಸಂಸ್ಥೆಯಿಂದ ‘ಜಾವಾ’ ಸಿನಿಮಾ ನಿರ್ಮಾಣ ಮಾಡುತ್ತಿರುವ ಇವರು ‘ಕಮಲ್ ಶ್ರೀದೇವಿ’ ಸಿನಿಮಾಗೂ ಕೈಜೋಡಿಸಿದ್ದಾರೆ. ನಟನೆಯ ಜೊತೆಗೆ ಹೊಸಬರ ಕಿರುಚಿತ್ರಗಳ ನಿರ್ಮಾಣ ಯೋಜನೆಯೂ ಇವರಿಗಿದೆ. ಸದ್ಯ ಕನ್ನಡದ ಜೊತೆಗೆ ರಾಜವರ್ಧನ್ ತೆಲುಗು, ತಮಿಳು ಚಿತ್ರರಂಗಗಳತ್ತಲೂ ಗಮನ ಹರಿಸಿದ್ದಾರೆ.
****
‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.