ADVERTISEMENT

‘ಭಾಯ್, ಭಾಯ್’ ಎಂದು ಕೂಗುವವರೆಲ್ಲ ಚಿತ್ರಮಂದಿರಗಳಿಗೆ ಬರುವುದಿಲ್ಲ: ಸಲ್ಮಾನ್ ಖಾನ್

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2025, 4:44 IST
Last Updated 27 ಮಾರ್ಚ್ 2025, 4:44 IST
<div class="paragraphs"><p>ಸಲ್ಮಾನ್ ಖಾನ್</p></div>

ಸಲ್ಮಾನ್ ಖಾನ್

   

–ಪಿಟಿಐ ಚಿತ್ರ

ಮುಂಬೈ: ‘ಭಾಯ್, ಭಾಯ್’ ಎಂದು ಕೂಗುವ ಅಭಿಮಾನಿಗಳೆಲ್ಲಾ ಚಿತ್ರಮಂದಿರಗಳಿಗೆ ಬರುವುದಿಲ್ಲ. ಜತೆಗೆ, ಬಾಲಿವುಡ್ ಮತ್ತು ದಕ್ಷಿಣದ ನಟರನ್ನು ಸೇರಿಸಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದು ಕಷ್ಟ ಎಂದು ನಟ ಸಲ್ಮಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ದಕ್ಷಿಣ ಭಾರತದ ಚಿತ್ರ ನಿರ್ಮಾಪಕ ಅಟ್ಲಿ ಜತೆಗಿನ ತಮ್ಮ ಬಹು ನಿರೀಕ್ಷಿತ ಆಕ್ಷನ್ ಚಿತ್ರವು ಬಜೆಟ್ ಸೇರಿದಂತೆ ಇತರೆ ಸಮಸ್ಯೆಗಳಿಂದಾಗಿ ವಿಳಂಬವಾಗಿದೆ’ ಎಂದು ಹೇಳಿದ್ದಾರೆ.

‘ಅಟ್ಲಿ ಅವರು ಬಹಳ ದೊಡ್ಡ ಬಜೆಟ್ ಆಕ್ಷನ್ ಚಿತ್ರವನ್ನು ಬರೆದಿದ್ದಾರೆ. ಬಜೆಟ್ ಸೇರಿದಂತೆ ಕೆಲವು ಕಾರಣಗಳಿಂದ ತಡವಾಗಿದೆ. ಹಾಗೆಯೇ ಚಿತ್ರದಲ್ಲಿ ರಜನಿಕಾಂತ್ ಸರ್ ಅಥವಾ ಕಮಲ್ ಹಾಸನ್ ಸರ್ ಇಬ್ಬರಲ್ಲಿ ಯಾರು ಇರುತ್ತಾರೆಂದು ನನಗೆ ತಿಳಿದಿಲ್ಲ’ ಎಂದು ತಿಳಿಸಿದ್ದಾರೆ.

ಬಾಲಿವುಡ್ ಮತ್ತು ದಕ್ಷಿಣದ ನಟರನ್ನು ಸೇರಿಸಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದು ಕಷ್ಟ. ಒಂದು ವೇಳೆ ಅಂತಹ ಸಹಯೋಗ ಸಂಭವಿಸಲು ಸರಿಯಾದ ಸ್ಕ್ರಿಪ್ಟ್ ಅಗತ್ಯವಿದೆ ಎಂದು ಸಲ್ಮಾನ್ ಅಭಿಪ್ರಾಯಪಟ್ಟಿದ್ದಾರೆ.

‘ದಕ್ಷಿಣ ಭಾರತದ ಚಿತ್ರನಟರು ಹೆಚ್ಚು ಸಂಭಾವನೆ ತೆಗೆದುಕೊಳ್ಳುತ್ತಾರೆ. ಆದೇ ರೀತಿ ನಾವು ಕೂಡ ಸಂಭಾವನೆ ತೆಗೆದುಕೊಳ್ಳುತ್ತೇವೆ. ಅದರಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ. ಉದಾಹರಣೆಗೆ, ‘ರಾಮಾಯಣ’ದಂತಹ ಚಿತ್ರದಲ್ಲಿ ಎಲ್ಲರೂ ಒಟ್ಟಾಗಿ ನಟಿಸಬಹುದು. ನಾನು ದಕ್ಷಿಣದ ನಿರ್ದೇಶಕರು, ನಟರು ಮತ್ತು ತಂತ್ರಜ್ಞರೊಂದಿಗೆ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ’ ಎಂದು ಹೇಳಿದ್ದಾರೆ.

‘ದಕ್ಷಿಣ ರಾಜ್ಯಗಳಲ್ಲಿ ನನ್ನನ್ನು ‘ಭಾಯ್, ಭಾಯ್’ ಎಂದು ಕರೆಯುವ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಇದ್ದರೂ ಕೂಡ ಸಿನಿಮಾ ಬಿಡುಗಡೆಯಾದಾಗ ಚಿತ್ರಮಂದಿರಗಳಿಗೆ ಹೋಗುವುದಿಲ್ಲ. ನಾವು ರಜನಿಕಾಂತ್, ಚಿರಂಜೀವಿ, ಸೂರ್ಯ, ರಾಮ್ ಚರಣ್ ಅವರ ಚಿತ್ರಗಳನ್ನು ವೀಕ್ಷಿಸುತ್ತೇವೆ. ಅವರು ನಮ್ಮ ಸಿನಿಮಾಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದರೆ, ಅವರ ಅಭಿಮಾನಿಗಳು ನಮ್ಮ ಚಿತ್ರಗಳನ್ನು ನೋಡಲು ಹೋಗುವುದಿಲ್ಲ’ ಎಂದು ಸಲ್ಮಾನ್ ಖಾನ್‌ ತಿಳಿಸಿದ್ದಾರೆ.

‘ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಿಸಲು ಹೆಚ್ಚಿನ ಹಣ ಬೇಕಾಗುತ್ತದೆ. ನಮ್ಮ ದೇಶದಲ್ಲಿರುವ ಚಿತ್ರಮಂದಿರಗಳ ಸಂಖ್ಯೆಯನ್ನು ನೋಡಿದರೆ ಹಣ ಹಿಂಪಡೆಯುವುದು ತುಂಬಾ ಕಷ್ಟಕರವಾಗುತ್ತದೆ. ನಮ್ಮಲ್ಲಿ 20,000ರಿಂದ 30,000 ಚಿತ್ರಮಂದಿರಗಳಿದ್ದರೆ, ನಾವು ಹಾಲಿವುಡ್ ಅನ್ನೇ ಆಳಬಹುದು’ ಎಂದು ಖಾನ್ ಹೇಳಿದ್ದಾರೆ.

‘ಸಿಕಂದರ್’ ನಂತರ ನಾನು ಮತ್ತೊಂದು ದೊಡ್ಡ ಆಕ್ಷನ್ ಚಿತ್ರದಲ್ಲಿ ನನ್ನ ಅಣ್ಣ... ಸಂಜಯ್ ದತ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದೇನೆ ಎಂದು ಖಾನ್ ಮಾಹಿತಿ ಹಂಚಿಕೊಂಡಿದ್ದಾರೆ.

ಸಾಜಿದ್ ನಾದಿಯಾದ್‌ವಾಲಾ ನಿರ್ಮಾಣ ಮತ್ತು ಎ.ಆರ್. ಮುರುಗದಾಸ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಸಿಕಂದರ್’ ಚಿತ್ರ ಇದೇ ಮಾರ್ಚ್ 30ರಂದು ಈದ್ ಹಬ್ಬದಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಸತ್ಯರಾಜ್, ಕಾಜಲ್ ಅಗರ್ವಾಲ್ ಮತ್ತು ಶರ್ಮಾನ್ ಜೋಶಿ ಸೇರಿದಂತೆ ಇತರರು ನಟಿಸಿದ್ದಾರೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.