ADVERTISEMENT

ಊಟ, ನಿದ್ರೆ ಬಿಟ್ಟು ಸತತ ಮೂರು ದಿನ ಮರ ತಬ್ಬಿ ನಿಂತ ಕೆನ್ಯಾ ಯುವತಿಯ ಉದ್ದೇಶವೇನು?

ಅಭಿಲಾಷ್ ಎಸ್‌.ಡಿ.
Published 24 ಫೆಬ್ರುವರಿ 2026, 4:29 IST
Last Updated 24 ಫೆಬ್ರುವರಿ 2026, 4:29 IST
   

ಹವಾಮಾನ ವೈಪರೀತ್ಯದಿಂದಾಗಿ ಪ್ರಕೃತಿಯು ಸಮತೋಲನ ಕಳೆದುಕೊಳ್ಳುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅತಿಕ್ರಮಗಳಿಂದಾಗಿ ಭೂ ಗ್ರಹಕ್ಕೆ ಜ್ವರ ಬರುತ್ತಿದೆ. ತಾಪಮಾನ ಏರಿಕೆಯಿಂದ ಹಿಮಪರ್ವತಗಳು ಕರಗುತ್ತಿವೆ. ಅಕಾಲಿಕ ಮಳೆಯಾಗುತ್ತಿದೆ. ಉಸಿರಾಡುವ ಗಾಳಿ, ಕುಡಿಯುವ ನೀರು ಮತ್ತು ಆಸರೆಯಾಗಿರುವ ಭೂಮಿಯ ಮೇಲೂ ಗಂಭೀರ ಪರಿಣಾಮಗಳುಂಟಾಗುತ್ತಿವೆ.

ದಿನದಿಂದ ದಿನಕ್ಕೆ ಏರುತ್ತಲೇ ಇರುವ ಜಾಗತಿಕ ತಾಪಮಾನವು, ಕೇವಲ ಋತುಮಾನದ ಬದಲಾವಣೆಯಲ್ಲ. ಭವಿಷ್ಯದ ಪೀಳಿಗೆಗಳ ಅಸ್ತಿತ್ವಕ್ಕೆ ಎದುರಾಗಿರುವ ಗಂಭೀರ ಪ್ರಶ್ನೆಯಾಗಿದೆ. ಅದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬೇಕಿದೆ. ಸಾಧ್ಯವಾದಷ್ಟು ಬೇಗನೆ ಎಚ್ಚೆತ್ತುಕೊಂಡು, ಭವಿಷ್ಯವನ್ನು ಕಾಯುವ ಕೆಲಸಕ್ಕೆ ಕೈಜೋಡಿಸಬೇಕಿದೆ. ಸಾಕಷ್ಟು ಪರಿಸರ ಪ್ರಿಯರು ಆ ನಿಟ್ಟಿನಲ್ಲಿ ಮನುಕುಲವನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಅಂತಹ ಮಹನೀಯರ ಸಾಲಿಗೆ ಸೇರುತ್ತಾರೆ, ಕೆನ್ಯಾದ ಟ್ರುಫೆನಾ ಮುಥೋನಿ.

ತಮ್ಮದೇ ದೇಶದ ಪರಿಸರವಾದಿ, ನೊಬೆಲ್ ಪುರಸ್ಕೃತೆ ವಂಗಾರಿ ಮಾಥೈ (Wangari Maathai) ಅವರ ಗ್ರೀನ್‌ ಬೆಲ್ಟ್‌ ಅಭಿಯಾನದಿಂದ ಪ್ರೇರಣೆಗೊಂಡ ಮುಥೋನಿ, ತಾಪಮಾನವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೊಡುಗೆ ನೀಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ADVERTISEMENT

ನೈರಿ ಕೌಂಟಿಯ ಮಥಿರಾ ಎಂಬಲ್ಲಿ ಜನಿಸಿದ ಈ ಯುವತಿ, ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಹವಾಮಾನ ಬದಲಾವಣೆ ವಿಚಾರವಾಗಿ ಧ್ವನಿ ಎತ್ತುತ್ತಿದ್ದಾರೆ. ಕೆನ್ಯಾದಲ್ಲಿ ಅರಣ್ಯ ಪ್ರದೇಶವನ್ನು ವಿಸ್ತರಿಸುವಲ್ಲಿ ಶ್ಲಾಘನಾರ್ಹ ಪಾತ್ರ ವಹಿಸಿ, ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ.

ʼಶಾಲೆಗಳಲ್ಲಿ ಪರಿಸರ ಕ್ಲಬ್‌ಗಳನ್ನು ರೂಪಿಸುವ ಮೂಲಕ, ಮಕ್ಕಳಲ್ಲಿ ಆರಂಭದಿಂದಲೇ ಪರಿಸರದೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಬೇಕು ಎನ್ನುವ ಅವರು, ತಾಪಮಾನ ಏರಿಕೆಯನ್ನು ತಡೆಯಲು ತಳಮಟ್ಟದಿಂದಲೇ ಕೆಲಸಗಳಾಗಬೇಕು. ಅದಕ್ಕಾಗಿ, ಭವಿಷ್ಯದ ತಲೆಮಾರಿಗೆ ಪರಿಸರಾಸಕ್ತಿಯನ್ನು ಮೂಡಿಸುವುದು ಮುಖ್ಯʼ ಎಂಬ ಸ್ಪಷ್ಟ ನಿಲುವು ಹೊಂದಿದ್ದಾರೆ. ಅದೇ ಉದ್ದೇಶದಿಂದ, ʼHug the Earthʼ ಸಂಘಟನೆ ಮತ್ತು ಅಭಿಯಾನ ಆರಂಭಿಸಿ, ಪರಿಸರಾಸಕ್ತರ ಗಮನ ಸೆಳೆದಿದ್ದಾರೆ.

ʼನಾವು ಪ್ರಕೃತಿಯನ್ನು ಪ್ರೀತಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆʼ ಎಂಬ ಸಂದೇಶ ಸಾರುವುದು ಅವರ ಉದ್ದೇಶ. ಮುಥೋನಿ ಅವರ ಪ್ರಕಾರ, ಮರವನ್ನು ಅಪ್ಪಿಕೊಳ್ಳುವುದೆಂದರೆ; ಪ್ರಕೃತಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಳ್ಳುವುದು ಎಂದರ್ಥ. ಆ ನಿಟ್ಟಿನಲ್ಲಿ ಅವರು, ಸಾವಿರಾರು ಮಕ್ಕಳನ್ನು ಪ್ರೇರೇಪಿಸಿದ್ದಾರೆ.

ಮುಥೋನಿ ಹಾದಿಯಲ್ಲಿ ಚಿಪ್ಕೊ ನೆನಪು

ಭಾರತದ ಪರಿಸರ ಹೋರಾಟದಲ್ಲಿ ಮಹತ್ವದ್ದೆನಿಸಿರುವ ʼಚಿಪ್ಕೊ ಚಳವಳಿʼ ನಮಗೆಲ್ಲ ಚಿರಪರಿಚಿತ. ಸದ್ಯ ಉತ್ತರಾಖಂಡದಲ್ಲಿರುವ ಚಮೋಲಿ ಜಿಲ್ಲೆಯಲ್ಲಿ 1972ರ ಏಪ್ರಿಲ್‌ನಲ್ಲಿ ನಡೆದ ಈ ಆಂದೋಲನಕ್ಕೆ ಸುಂದರಲಾಲ್‌ ಬಹುಗುಣ, ಚಂಡಿ ಪ್ರಸಾದ್ ಭಟ್ ಅವರಂತಹ ಪರಿಸರವಾದಿಗಳು ಮಾರ್ಗದರ್ಶನ ನೀಡಿದರೂ, ನಿರ್ಣಾಯಕ ಪಾತ್ರವಹಿಸಿದ್ದು ಮಹಿಳೆಯರೇ.

ವಾಣಿಜ್ಯೋದ್ದೇಶ ಹಾಗೂ ಅಭಿವೃದ್ಧಿಯ ಹೆಸರಲ್ಲಿ ಮರಗಳ ಹನನಕ್ಕೆ ಕಾರಣವಾಗುವಂತಹ ಸರ್ಕಾರದ ನೀತಿಗಳ ವಿರುದ್ಧ, ರೇಣಿ ಗ್ರಾಮದ ಗೌರಾ ದೇವಿ ನೇತೃತ್ವದಲ್ಲಿ 27 ಮಹಿಳೆಯರು ನಿಂತರು. ಬೃಹತ್‌ ಅಣೆಕಟ್ಟು, ಕೈಗಾರಿಕೆ ಮತ್ತು ರಸ್ತೆಗಳ ನಿರ್ಮಾಣಕ್ಕಾಗಿ ಅರಣ್ಯ ನಾಶವಾಗುವುದನ್ನು ತಪ್ಪಿಸಲು ಮುಂದಾದರು. ಉಸಿರುಣಿಸುವ ಮರಗಳನ್ನು ಉರುಳಿಸಲು ಬಂದವರಿಗೆ ಬಗ್ಗದೆ, ಮರಗಳನ್ನು ಅಪ್ಪಿಕೊಳ್ಳುವ ಮೂಲಕ ಹೋರಾಟ ನಡೆಸಿದ್ದರು. ಮುಂದೆ ಈ ಹೋರಾಟವು ದೇಶವ್ಯಾಪಿಯಾಯಿತು.

ಕರ್ನಾಟಕದ ಪಶ್ಚಿಮಘಟ್ಟದಲ್ಲಿ ಪರಿಸರವಾದಿ ಪಾಂಡುರಂಗ ಹೆಗಡೆ ನೇತೃತ್ವದಲ್ಲಿ 1982ರ ಸೆಪ್ಟೆಂಬರ್‌ನಲ್ಲಿ ನಡೆದ ಅಪ್ಪಿಕೊ ಚಳವಳಿ ಸೇರಿದಂತೆ ದೇಶದಾದ್ಯಂತ ನಡೆದ ಹೋರಾಟಗಳಿಗೂ ಚಿಪ್ಕೊ ಸ್ಫೂರ್ತಿಯಾಯಿತು.

ʼಚಿಪ್ಕೊʼ, ʼಅಪ್ಪಿಕೊʼ ಹಾದಿಯಲ್ಲೇ ಹೆಜ್ಜೆ ಇಟ್ಟಿದ್ದಾರೆ ಮುಥೋನಿ.

ಮುಥೋನಿ ಹೆಸರಲ್ಲಿದೆ ಗಿನ್ನೆಸ್‌ ರೆಕಾರ್ಡ್‌

ಚಿಪ್ಕೊ ಹೋರಾಟದ ಮಾದರಿಯಲ್ಲೇ, ಮರವನ್ನು ಬರೋಬ್ಬರಿ 72 ಗಂಟೆಗಳ ಕಾಲ (ಮೂರು ದಿನ) ನಿರಂತರವಾಗಿ ಆಲಂಗಿಸಿ ನಿಂತ ಮುಥೋನಿ ಹೆಸರಲ್ಲಿ ಗಿನ್ನೆಸ್‌ ದಾಖಲೆಯೊಂದು ನಿರ್ಮಾಣವಾಗಿದೆ.

ಮೊದಲು ಇಂತಹದೊಂದು ಸಾಹಸಕ್ಕೆ ಕೈಹಾಕಿದವರು, ಉಗಾಂಡದ ಫೇಯ್ತ್ ಪೆಟ್ರೀಷಿಯಾ ಅರಿಯೊಕೋಟ್ (ಆಗ 29 ವರ್ಷ ವಯಸ್ಸು). ಅವರು, 2024ರಲ್ಲಿ ಬರೋಬ್ಬರಿ 16 ಗಂಟೆ, 6 ನಿಮಿಷ ಮರವನ್ನು ಅಪ್ಪಿಕೊಂಡಿದ್ದರು.

ಘಾನಾದ ಅಬ್ದುಲ್ ಹಕೀಮ್ ಅವಾಲ್ (24 ಗಂಟೆ, 21 ನಿಮಿಷ 4 ಸೆಕೆಂಡು) ಅವರು 2024ರಲ್ಲಿ ಫೇಯ್ತ್‌ ಅವರನ್ನು ಹಿಂದಿಕ್ಕಿದ್ದರು. 2025ರ ಫೆಬ್ರುವರಿಯಲ್ಲಿ ಮುಥೋನಿ, 48 ಗಂಟೆಗಳ ವರೆಗೆ ಮರವನ್ನು ಆಲಂಗಿಸಿ ಮೊದಲ ಸಲ ದಾಖಲೆ ಮಾಡಿದ್ದರು. ಅದನ್ನು, ಘಾನಾದವರೇ ಆದ ಫ್ರೆಡೆರಿಕ್ ಬೋಕ್ಯೆ ( 50 ಗಂಟೆ, 2 ನಿಮಿಷ, 28 ಸೆಕೆಂಡ್), ಸ್ವಲ್ಪ ಸಮಯದಲ್ಲೇ ಮುರಿದಿದ್ದರು.‌

ಇದೀಗ ಮತ್ತೆ ಅಸಾಧಾರಣ ಸಾಮರ್ಥ್ಯ ಪ್ರದರ್ಶಿಸಿದ್ದಾರೆ ಮುಥೋನಿ. ನೈರಿಯಲ್ಲಿ 2025ರ ಡಿಸೆಂಬರ್‌ 8ರಿಂದ 11ರವರೆಗೆ ರಾಯಲ್ ಪಾಮ್ ಮರ ಅಪ್ಪಿನಿಂತ ಅವರನ್ನು ನೈರಿ ಕೌಂಟಿ ಗವರ್ನರ್‌ ಮುತಾಹಿ ಕಹಿಗಾ ಸೇರಿದಂತೆ, ನೆರೆದಿದ್ದ ನೂರಾರು ಮಂದಿ ಹರ್ಷೋದ್ಗಾರದ ಮೂಲಕ ಬೆಂಬಲಿಸಿದ್ದಾರೆ.

ದಾಖಲೆಗಳು ಏನೇ ಇರಲಿ. ಈ ರೀತಿ ಮರಕ್ಕೆ ತೋಳು ಬಳಸಿ ನಿಂತ ಎಲ್ಲರ ಉದ್ದೇಶವೂ ಒಂದೇ ಎಂಬುದು ಸದಾ ಸ್ಮರಿಸಬೇಕಾದ ವಿಚಾರ.

ದಾಖಲೆಯ ಹಾದಿ ಸುಲಭವಾಗಿರಲಿಲ್ಲ

ಊಟ ಹಾಗೂ ನಿದ್ರೆಯಿಲ್ಲದೆ, ಮೂರು ದಿನಗಳ ಕಾಲ ನಿಂತು ದಾಖಲೆ ಬರೆದ ನಂತರ ಮಾತನಾಡಿರುವ ಮುಥೋನಿ, ʼಮೊದಲ ಪ್ರಯತ್ನದ ವೇಳೆ ಕಲಿತ ಪಾಠ, ದೊರೆತ ಅನುಭವ ಎರಡನೇ ಸಲ ದಾಖಲೆ ಬರೆಯಲು ನೆರವಾಯಿತು. ಮೊದಲನೇ ಸಲ ಇಂತಹದೊಂದು ಪ್ರಯತ್ನಕ್ಕಿಳಿಯುವ ಮುನ್ನ, ಸಣ್ಣಗೊಂದಿಷ್ಟು ಉಪವಾಸ, ಕಡಿಮೆ ನೀರು ಕುಡಿದು ದೀರ್ಘ ಸಮಯದವರೆಗೆ ಇರುವುದನ್ನು ಅಭ್ಯಾಸ ಮಾಡಿಕೊಂಡಿದ್ದೆ. ಅದು ಸರಿಯಲ್ಲ ಎಂಬುದು ನಂತರ ಮನವರಿಕೆಯಾಗಿತ್ತು. ಮೂತ್ರಪಿಂಡಗಳ ಮೇಲೆ ಅನಗತ್ಯ ಒತ್ತಡ ಸೃಷ್ಟಿಯಾಗಲಿದೆ. ಅದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂಬುದು ಗೊತ್ತಾಯಿತು. ಆದಾಗ್ಯೂ, ತಂತ್ರಗಾರಿಕೆಗಿಂತ ಹೆಚ್ಚಾಗಿ ದೈಹಿಕವಾಗಿ ಕಠಿಣ ಅಭ್ಯಾಸಕ್ಕೆ ಒತ್ತು ನೀಡಿದ್ದೆʼ ಎಂದು ಹೇಳಿದ್ದಾರೆ.

ʼಆದರೆ, ಎರಡನೇ ಬಾರಿಗೆ ಸವಾಲಿಗೆ ಹೋಗುವ ಮುನ್ನ, ವಿಭಿನ್ನವಾಗಿ ತಯಾರಿ ಮಾಡಿಕೊಂಡಿದ್ದೆ. ದೇಹಕ್ಕೆ ಅನಗತ್ಯ ಒತ್ತಡ ಸೃಷ್ಟಿಸುವ ಅಭ್ಯಾಸಗಳ ಬದಲು, ಅಂಗಾಂಗಗಳಿಗೆ ಯಾವುದೇ ಹಾನಿಯಾಗದಂತೆ ಸಜ್ಜಾದೆ. ನೀರಿನ ಸೇವನೆ ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಇದರಿಂದ, ನಿರಾಳ ಭಾವ ಮತ್ತು ಆತ್ಮವಿಶ್ವಾಸ ಮೂಡಿತ್ತುʼ ಎಂದಿದ್ದಾರೆ.

ʼಇದು ಸಾಕಷ್ಟು ಪರಿಣಾಮ ಬೀರಿತು. ಮರವನ್ನು ತಬ್ಬಿ ಅಷ್ಟು ಹೊತ್ತು ನಿಂತರೂ ಅಷ್ಟೇನೂ ಆಯಾಸವಾಗಿರಲಿಲ್ಲ. ಆದರೆ, ಸವಾಲಿಗೆ ಅಣಿಯಾಗುವ ಹಿಂದಿನ ದಿನ ಸರಿಯಾಗಿ ವಿಶ್ರಾಂತಿ ತೆಗೆದುಕೊಂಡಿರಲಿಲ್ಲವಾದ್ದರಿಂದ, ತುಸು ನಿದ್ರೆ ಕಾಡಿತು. ಒಟ್ಟಾರೆಯಾಗಿ, ಸರಿಯಾದ ಸಿದ್ಧತೆ ಮಾಡಿಕೊಳ್ಳುವುದು, ಜೀವನ ಕ್ರಮದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಹಾಗೂ ಆ ನಿಟ್ಟಿನಲ್ಲಿ ಹೊರಟಾಗ ದೇಹದ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯʼ ಎಂದಿದ್ದಾರೆ.

ಗಂಟೆಗೆ 5 ನಿಮಿಷ ಬಿಡುವು
ಎಲ್ಲ ಮ್ಯಾರಥಾನ್‌ ದಾಖಲೆ ಪ್ರಯತ್ನಗಳ ವೇಳೆ ಲಭ್ಯವಿರುವಂತೆಯೇ, ಮುಥೋನಿಗೂ ಪ್ರತಿ ಗಂಟೆಗೊಮ್ಮೆ ಐದು ನಿಮಿಷದ ಬಿಡುವು ಲಭ್ಯವಿತ್ತು. ಅದನ್ನು ಪ್ರತಿ ಗಂಟೆಗೂ ತೆಗೆದುಕೊಳ್ಳುವುದು ಅಥವಾ ಎರಡು ಮೂರು ಗಂಟೆ ಬಳಿಕ ಒಟ್ಟಿಗೆ ತೆಗೆದುಕೊಳ್ಳುವ ನಿರ್ಧಾರ ಅವರಿಗೇ ಬಿಟ್ಟದ್ದಾಗಿತ್ತು.

ಮೊದಲ ಪ್ರಯತ್ನ ಹೇಳಿಕೆಯಷ್ಟೇ; ಆದರೆ,

ಹೀಗೆ ದೀರ್ಘಾವಧಿಯವರೆಗೆ ಮರವನ್ನು ಅಪ್ಪಿಕೊಳ್ಳುವ ತಮ್ಮ ಉದ್ದೇಶದ ಬಗ್ಗೆ ಮಾತನಾಡಿರುವ ಮುಥೋನಿ, 'ಮೊದಲ ಸಲದ ನನ್ನ ಪ್ರಯತ್ನವು ಕೇವಲ ಒಂದು ಹೇಳಿಕೆಯಾಗಿತ್ತು. ಸರಳ ಹಾಗೂ ನಿಕಟವಾದ ಕಾರ್ಯದ ಮೂಲಕ ಭೂಮಿಗೆ ದಯೆ, ಕರುಣೆ, ಮಾನವೀಯತೆಯನ್ನು ಮತ್ತೊಮ್ಮೆ ಪರಿಚಯಿಸಲು ಆಯ್ದುಕೊಂಡ ಸಾಂಕೇತಿಕ ಮಾರ್ಗವಾಗಿತ್ತುʼ ಎಂದಿದ್ದಾರೆ.

ʼಆದರೆ, ಎರಡನೇ ಸಲದ ಪ್ರಯತ್ನವು ಬದ್ಧತೆಯ ಪ್ರತೀಕವಾಗಿತ್ತು. ಜಗತ್ತಿಗೆ ಏನನ್ನಾದರೂ ಸಾರಲು ಸಾಂಕೇತಿಕತೆಗಿಂತಲೂ ಹೆಚ್ಚಿನದ್ದನ್ನು ಮಾಡುವ ಅಗತ್ಯವಿದೆ ಎಂಬುದನ್ನು ಅರಿತುಕೊಂಡೆ. ಅದಕ್ಕಾಗಿ ಸಹಿಷ್ಣುತೆ, ಸ್ಥಿರತೆ ಕಾಪಾಡಿಕೊಳ್ಳಬೇಕು ಎಂಬುದನ್ನು ಕಲಿತೆ. ಈ ಗ್ರಹದ ಕಾಳಜಿಯು ಕ್ಷಣಿಕ ಮಾತ್ರದ್ದಲ್ಲ ಎಂಬುದನ್ನು ಸಾಬೀತು ಮಾಡಬೇಕಿತ್ತು. ಎರಡೆರಡು ಸಲ ಈ ರೀತಿ ಮಾಡುವುದು ಏಕಾಏಕಿ ಸಾಧ್ಯವಾಗುವುದಿಲ್ಲ. ಜವಾಬ್ದಾರಿಯನ್ನು ನಿರಂತರವಾಗಿ ಮುನ್ನಡೆಸಬೇಕು ಎಂಬುದನ್ನು ಸಾರಲು ನಾನೇ ಆಯ್ದುಕೊಂಡ ಮಾರ್ಗ ಅದಾಗಿತ್ತುʼ ಎಂದು ಹೇಳಿದ್ದಾರೆ.

ಅಂಧರಿಗೆ ಗೌರವ
ಸಾಮರ್ಥ್ಯವನ್ನೆಲ್ಲ ಪಣಕ್ಕಿಟ್ಟು ನಿಂತಿದ್ದ ಮುಥೋನಿ, ತಮ್ಮ ಹಿಂದಿನ ದಾಖಲೆಯನ್ನು (48 ಗಂಟೆ) ಮೀರುತ್ತಿದ್ದಂತೆ ಕಣ್ಣುಗಳಿಗೆ ಪಟ್ಟಿ ಕಟ್ಟಿಕೊಂಡರು. ಜಗತ್ತಿನಾದ್ಯಂತ ಇರುವ ಅಂಧರಿಗೆ ಗೌರವ ಸಲ್ಲಿಸುವ ಸಲುವಾಗಿ, ಈ ರೀತಿ ಮಾಡಿದ ಅವರು ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದಾರೆ.

ಸಾರಿದ ಸಂದೇಶವೇನು?

ʼಭೂಮಿಯನ್ನು ಉಳಿಸಿಕೊಳ್ಳಲು ಹಿಂಸಾತ್ಮಕ ಹೋರಾಟ, ಸಂಘರ್ಷ ಮಾಡಿಕೊಳ್ಳಬೇಕಿಲ್ಲ. ಹೆದರಿ ಕೂರುವ ಅಗತ್ಯವೂ ಇಲ್ಲʼ ಎನ್ನುವ ಮುಥೋನಿ, ʼಮರವನ್ನು ಬಿಗಿದಪ್ಪಿ ನಿಂತಾಗ ಪ್ರಕೃತಿಯು ನಮ್ಮಿಂದ ಬೇರ್ಪಟ್ಟಿಲ್ಲ ಎಂಬುದು ಅರಿವಾಗುತ್ತದೆ. ವೃಕ್ಷವೂ ನಮ್ಮ ಕುಟುಂಬವೇ. ಮರವನ್ನು 72 ಗಂಟೆವರೆಗೆ ಆಲಂಗಿಸಿ ನಿಲ್ಲಲು ಒಬ್ಬ ವ್ಯಕ್ತಿಗೆ ಸಾಧ್ಯವಾಗುತ್ತದೆ ಎಂದರೆ, ಮನುಕುಲವನ್ನು ಉಳಿಸಿಕೊಳ್ಳಲು ಎಲ್ಲರಿಂದಲೂ ಸಾಧ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದುʼ ಎಂದಿದ್ದಾರೆ.

ʼನಾವು ಲಕ್ಷಾಂತರ ಗಿಡಗಳನ್ನು ನೆಡುವುದಕ್ಕೂ ಮುನ್ನ, ಪ್ರಕೃತಿಯನ್ನು ಪ್ರೀತಿಸುವ ಲಕ್ಷಾಂತರ ಹೃದಯಗಳನ್ನು ಸಜ್ಜುಗೊಳಿಸಬೇಕು. ಸಂರಕ್ಷಣೆ ಎಂಬುದು ಕೇವಲ ಬೋಧನೆಯಾಗಿ ಉಳಿಯದೆ, ಅದು ಪ್ರೀತಿ ಹುಟ್ಟುವ ಸ್ಥಳದಿಂದ ಶುರುವಾಗಬೇಕುʼ ಎಂದು ಒತ್ತಿ ಹೇಳಿದ್ದಾರೆ.

ʼಗಿನ್ನೆಸ್‌ ದಾಖಲೆಯು ನನ್ನ ವೈಯಕ್ತಿಕ ವಿಜಯವೇನಲ್ಲ. ಇದು, ಭೂಮಿಯ ರಕ್ಷಣೆಗಾಗಿ ಸಾಮೂಹಿಕವಾಗಿ ಜವಾಬ್ದಾರಿ ಹೊರಲು ಜನರನ್ನು ಜಾಗೃತಗೊಳಿಸುವ ಸಮಯ ಎಂದು ಪರಿಗಣಿಸುತ್ತೇನೆʼ ಎಂದಿದ್ದಾರೆ.

15 ಶತಕೋಟಿ ಗಿಡ ನೆಡುವ ಅಭಿಯಾನದ ರಾಯಭಾರಿ

2032 ರ ವೇಳೆಗೆ 15 ಶತಕೋಟಿ ಗಿಡಗಳನ್ನು ನೆಟ್ಟು ಪೋಷಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ಅಭಿಯಾನವನ್ನು ಕೆನ್ಯಾ ಸರ್ಕಾರ ಕಾರ್ಯಗತಗೊಳಿಸುತ್ತಿದೆ. ಹವಾಮಾನ ವೈಪರೀತ್ಯವನ್ನು ಸಮರ್ಥವಾಗಿ ಎದುರಿಸುವುದು ಹಾಗೂ ದೇಶದಲ್ಲಿ ಅರಣ್ಯದ ಪ್ರಮಾಣವನ್ನು ಶೇ 30ಕ್ಕೆ ಏರಿಸುವ ಗುರಿ ಇದರ ಹಿಂದಿದೆ. ಬರ, ಮಣ್ಣಿನ ಸವಕಳಿ ತಪ್ಪಿಸುವುದು ಮತ್ತು ಜೀವವೈವಿಧ್ಯವನ್ನು ಉತ್ತೇಜಿಸುವ ಉದ್ದೇಶವೂ ಇದರ ಹಿಂದಿದೆ.

ಈ ಅಭಿಯಾನಕ್ಕೆ ಮುಥೋನಿಯೇ ರಾಯಭಾರಿ ಎಂಬುದು ವಿಶೇಷ. ಕೆನ್ಯಾದ ಅಧ್ಯಕ್ಷ ವಿಲಿಯಂ ರುಟೊ ಅವರು ಡಿಸೆಂಬರ್‌ 15ರಂದು ಈ ಘೋಷಣೆ ಮಾಡಿದ್ದಾರೆ.

ಕೆನ್ಯಾದಲ್ಲಿ 1,131 ಮರ ಪ್ರಭೇದ

ಇತ್ತೀಚೆಗೆ ಪ್ರಕಟವಾಗಿರುವ ʼಸ್ಟೇಟ್ ಆಫ್ ದಿ ವರ್ಲ್ಡ್ಸ್ ಟ್ರೀಸ್ ಅಸೆಸ್ಮೆಂಟ್ʼ ಪ್ರಕಾರ , ಕೆನ್ಯಾದಲ್ಲಿ 1,131 ಪ್ರಭೇದಗಳ ಮರಗಳಿವೆ. ಆದರೆ, ಅದರಲ್ಲಿ ಶೇ 13ಕ್ಕಿಂತ ಹೆಚ್ಚಿನ ಪ್ರಭೇದಗಳು ಅರಣ್ಯ ನಾಶ, ಹವಾಮಾನ ಬದಲಾವಣೆ, ನಗರೀಕರಣದ ಪರಿಣಾಮಗಳಿಂದಾಗಿ ಅಳಿವಿನಂಚಿನಲ್ಲಿವೆ. ಮುಥೋನಿ ಅಪ್ಪಿ ನಿಂತಿದ್ದ ತಾಳೆ ಮರ, ಕೆನ್ಯಾದ್ದಲ್ಲ. ಅದು, ಅಮೆರಿಕದ ಉಷ್ಣವಲಯದಿಂದ ಬಂದದ್ದು ಎನ್ನಲಾಗಿದೆ.

'Mongabayʼ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, ʼಕೆನ್ಯಾದಲ್ಲಿರುವ 49 ಸ್ಥಳೀಯ ಮರ ಪ್ರಭೇದಗಳಲ್ಲಿ, ಹೆಚ್ಚಿನವುಗಳ ಅಸ್ತಿತ್ವಕ್ಕೆ ಸವಾಲು ಎದುರಾಗಿದೆ. ಅವುಗಳಲ್ಲಿ ಹತ್ತೊಂಬತ್ತು ಅಳಿವಿನಂಚಿನಲ್ಲಿವೆ. ಇನ್ನೂ ಎಂಟು ಪ್ರಭೇದಗಳು ಅತ್ಯಂತ ಅಳಿವಿನಂಚಿನಲ್ಲಿವೆ ಎಂದು ಪಟ್ಟಿ ಮಾಡಲಾಗಿದೆ. ಸುಮಾರು 35 ಮೀಟರ್ (115 ಅಡಿ) ಎತ್ತರಕ್ಕೆ ಬೆಳೆಯುವ Meru oak ಮರವೂ ಅತ್ಯಂತ ಅಳಿವಿನಂಚಿನಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.