ADVERTISEMENT

ಆಳ–ಅಗಲ | ವ್ಯಾಪಾರ ಕೊರತೆ: ಕಳವಳಕಾರಿ ಮಟ್ಟಕ್ಕೆ

ಚೀನಾದೊಂದಿಗೆ ದ್ವಿಪಕ್ಷೀಯ ವ್ಯಾಪಾರ; ಭಾರತದ ಪಾಲು ಗಣನೀಯ ಕುಸಿತ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 23:30 IST
Last Updated 31 ಆಗಸ್ಟ್ 2025, 23:30 IST
   
ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಕ್ಕೆ ಏಳು ವರ್ಷಗಳ ಬಳಿಕ ಭೇಟಿ ನೀಡಿ ಅಲ್ಲಿನ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರನ್ನು ಭೇಟಿ ಮಾಡಿದ್ದಾರೆ. ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿಯವರು ತೆರಳಿದ್ದರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತದ ಮೇಲೆ ಶೇ 50ರಷ್ಟು ಸುಂಕ ಹೇರಿದ ಬೆನ್ನಲ್ಲೇ ಇಬ್ಬರೂ ನಾಯಕರು ಮಾತುಕತೆ ನಡೆಸಿರುವುದಕ್ಕೆ ಜಾಗತಿಕ ಮಟ್ಟದಲ್ಲಿ ಮಹತ್ವ ದೊರೆತಿದೆ. ಗಡಿ ವಿವಾದ, ದ್ವಿಪಕ್ಷೀಯ ವ್ಯಾಪಾರ, ಭಯೋತ್ಪಾದನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಇಬ್ಬರೂ ನಾಯಕರು ಚರ್ಚೆ ನಡೆಸಿದ್ದಾರೆ. ಇದೇ ಹೊತ್ತಿನಲ್ಲಿ ಹಲವು ಕೈಗಾರಿಕಾ ವಲಯಗಳಿಗೆ ಸಂಬಂಧಿಸಿದ ಸರಕುಗಳಿಗೆ ಚೀನಾವನ್ನು ಅವಲಂಬಿಸಿರುವ ಭಾರತವು, ಅದರೊಂದಿಗೆ ಹೊಂದಿರುವ ವ್ಯಾಪಾರ ಕೊರತೆ ಕಳವಳಕಾರಿ ಮಟ್ಟಕ್ಕೆ ಏರಿಕೆ ಕಂಡಿರುವ ಸಂಗತಿ ಮುನ್ನೆಲೆಗೆ ಬಂದಿದೆ.

ಲಡಾಖ್‌ನ ಗಾಲ್ವನ್‌ ಕಣಿವೆಯಲ್ಲಿ 2020ರ ಜೂನ್‌ನಲ್ಲಿ ನಡೆದ ಸೇನಾ ಸಂಘರ್ಷದ ಬಳಿಕ ಭಾರತ–ಚೀನಾ ನಡುವಿನ ಗಡಿವಿವಾದ ಮತ್ತಷ್ಟು ಬಿಗಡಾಯಿಸಿ ದ್ವಿಪಕ್ಷೀಯ ಸಂಬಂಧದಲ್ಲಿ ಉಂಟಾಗಿದ್ದ ಬಿರುಕನ್ನು ಸರಿಪಡಿಸುವ ಪ್ರಯತ್ನ ಕಳೆದ ವರ್ಷದಿಂದ ಎರಡೂ ರಾಷ್ಟ್ರಗಳು ಮಾಡುತ್ತಿವೆ. ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸುಂಕ ಹೇರಿಕೆಯಿಂದಾಗಿ ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾಗಳನ್ನೊಳಗೊಂಡ ‘ಬ್ರಿಕ್ಸ್‌’ ಇನ್ನಷ್ಟು ಸಂಘಟಿತವಾಗುತ್ತಿದೆ. ಇದೇ ನೆಪದಲ್ಲಿ, ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು  ಸುಧಾರಿಸುವತ್ತ ಭಾರತ–ಚೀನಾ ಹೆಜ್ಜೆ ಇಟ್ಟಿವೆ. ಇದರ ಮುಂದುವರಿದ ಭಾಗವಾಗಿ ತಿಯಾನ್‌ಜಿನ್‌ನಲ್ಲಿ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ  ಜಿನ್‌ಪಿಂಗ್‌ ಅವರ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಗಡಿ ವಿವಾದ ಬಗೆಹರಿಸುವುದು, ದ್ವಿಪಕ್ಷೀಯ ವ್ಯಾಪಾರವನ್ನು ಇನ್ನಷ್ಟು ಹೆಚ್ಚಿಸುವುದು, ಭಯೋತ್ಪಾದನೆಯ ವಿರುದ್ಧ ಹೋರಾಡುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಇಬ್ಬರೂ ಮಾತುಕತೆ ನಡೆಸಿದ್ದಾರೆ. ದ್ವಿಪಕ್ಷೀಯ ವ್ಯಾ‍‍‍ಪಾರ ವೃದ್ಧಿಯ ಜೊತೆಗೆ ವ್ಯಾಪಾರ ಕೊರತೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ ಎಂದು ವರದಿಯಾಗಿದೆ.

ಭಾರತ ಮತ್ತು ಚೀನಾದ ನಡುವೆ ದ್ವಿಪಕ್ಷೀಯ ವ್ಯಾಪಾರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದರೂ ಚೀನಾದೊಂದಿಗೆ ಭಾರತ ಹೊಂದಿರುವ ವ್ಯಾಪಾರ ಕೊರತೆಯು ಕಳವಳಕಾರಿ ಮಟ್ಟಕ್ಕೆ ಏರಿದೆ. ಭಾರತವು ಜಗತ್ತಿನ ವಿವಿಧ ರಾಷ್ಟ್ರಗಳೊಂದಿಗೆ ಹೊಂದಿರುವ ವ್ಯಾಪಾರ ಕೊರತೆಗೆ ಹೋಲಿಸಿದರೆ, ಚೀನಾದೊಂದಿಗೆ ಗರಿಷ್ಠ ವ್ಯಾಪಾರ ಕೊರತೆ ಹೊಂದಿದೆ. ಆತಂಕಕಾರಿ ಸಂಗತಿ ಎಂದರೆ, ಈ ಕೊರತೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ದ್ವಿಪಕ್ಷೀಯ ವ್ಯಾಪಾರದಲ್ಲಿ 20 ವರ್ಷಗಳ ಹಿಂದೆ ಭಾರತದ ಪಾಲು ಶೇ 42.3ರಷ್ಟು ಇದ್ದಿದ್ದರೆ, ಅದೀಗ ಶೇ 11.2ಕ್ಕೆ ಕುಸಿದಿದೆ. 

2024–25ನೇ ಸಾಲಿನಲ್ಲಿ ವ್ಯಾಪಾರ ಕೊರತೆಯ ಮೌಲ್ಯ ₹8.74 ಲಕ್ಷ ಕೋಟಿ (₹9,921 ಕೋಟಿ ಡಾಲರ್‌). 2003–2004ರಲ್ಲಿ ಇದ್ದಿದ್ದು ಕೇವಲ ₹9,697 ಕೋಟಿ. ಅಂದರೆ, ಎರಡು ದಶಕಗಳಲ್ಲಿ ಭಾರತದ ವ್ಯಾಪಾರದ ಕೊರತೆ 90 ಪಟ್ಟು ಹೆಚ್ಚಾಗಿದೆ. 2023–24ರಲ್ಲಿ ಈ ಕೊರತೆ ₹7.50 ಲಕ್ಷ ಕೋಟಿಯಷ್ಟಿತ್ತು. ವರ್ಷದಲ್ಲಿ ಅದು ₹1.24 ಲಕ್ಷ ಕೋಟಿಯಷ್ಟು ಏರಿಕೆ ಕಂಡಿದೆ. ಈ ವರ್ಷದ ಏಪ್ರಿಲ್‌–ಜುಲೈ ನಡುವಿನ ವ್ಯಾಪಾರದಲ್ಲಿ ₹3.58 ಲಕ್ಷ ಕೊರತೆಯನ್ನು ಭಾರತ ಹೊಂದಿದೆ. 

ADVERTISEMENT

‌ಚೀನಾದ ಮೇಲೆ ಹೆಚ್ಚಿದ ಅವಲಂಬನೆ

ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 2014ರಲ್ಲಿ ‘ಭಾರತದಲ್ಲೇ ತಯಾರಿಸಿ’ (ಮೇಕ್‌ ಇನ್‌ ಇಂಡಿಯಾ) ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಘೋಷಿಸಿತ್ತು. ಚೀನಾ ಸೇರಿದಂತೆ ವಿವಿಧ ರಾಷ್ಟ್ರಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವ ಉದ್ದೇಶದಿಂದ ಇಲ್ಲಿನ ಕಂಪನಿಗಳಿಗೆ ಭಾರತದಲ್ಲೇ ತಯಾರಿಸಲು ಪ್ರೋತ್ಸಾಹ ನೀಡಿ, ದೇಶವನ್ನು ಜಾಗತಿಕ ತಯಾರಿಕಾ ಕೇಂದ್ರವನ್ನಾಗಿ ರೂಪಿಸುವುದು ಮತ್ತು ಆ ಮೂಲಕ ದೇಶದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.  ‘ಭಾರತದಲ್ಲೇ ತಯಾರಿಸಿ’ ಪರಿಕಲ್ಪನೆ ಅನುಷ್ಠಾನಕ್ಕೆ ಬಂದು 11 ವರ್ಷಗಳಾಗಿದ್ದರೂ ಅದರ ನೈಜ ಉದ್ದೇಶ ಈಡೇರಿಲ್ಲ. ಮೊಬೈಲ್‌, ಕಂಪ್ಯೂಟರ್‌, ಸೋಲಾರ್‌ ಘಟಕಗಳು, ಕೆಲವು ರಕ್ಷಣಾ ಸಲಕರಣೆಗಳನ್ನು ಇಲ್ಲಿ ಜೋಡಿಸಲಾಗುತ್ತಿದ್ದರೂ (ಅಸೆಂಬಲ್‌) ಅವುಗಳ ಬಿಡಿಭಾಗಗಳು ವಿದೇಶಗಳಿಂದ ವಿಶೇಷವಾಗಿ ಚೀನಾದಿಂದಲೇ ಬರುತ್ತಿವೆ. ಇದು ಸಂಪೂರ್ಣ ‘ಮೇಕ್‌ ಇನ್‌ ಇಂಡಿಯಾ’ ಅಲ್ಲ ಎಂಬುದು ತಜ್ಞರ ವಾದ. ಹೊರ ದೇಶಗಳಿಂದ ಮಾಡಲಾಗುತ್ತಿರುವ ಆಮದು ಕಡಿಮೆ ಮಾಡಬೇಕಾದರೆ, ಭಾರತದಲ್ಲೇ ವಸ್ತುಗಳನ್ನು ತಯಾರಿಸಬೇಕು. ಸ್ಥಳೀಯವಾಗಿ ತಂತ್ರಜ್ಞಾನ ಅಭಿವೃದ್ಧಿ ಪಡಿಸಬೇಕು ಎಂಬುದು ಅವರ ಸಲಹೆ. 

ದೇಶೀಯವಾಗಿ ತಯಾರಿಕೆಗೆ ಉತ್ತೇಜನ ನೀಡುವುದಕ್ಕಾಗಿ ಕೇಂದ್ರ ಸರ್ಕಾರ 14 ವಲಯಗಳಲ್ಲಿ ತಯಾರಿಕೆಗೆ ಸಂಬಂಧಿಸಿದ ಪ್ರೋತ್ಸಾಹಕ (ಪಿಎಲ್‌ಐ) ಯೋಜನೆಗಳನ್ನು ಘೋಷಿಸಿದೆ. ಅಲ್ಲದೇ, ಕಳಪೆ ಗುಣಮಟ್ಟದ ಸರಕುಗಳ ಆಮದಿಗೆ ಕಡಿವಾಣ ಹಾಕುವುದಕ್ಕಾಗಿ  ಕಠಿಣ ಗುಣಮಟ್ಟ ಮಾನದಂಡಗಳು, ಪರೀಕ್ಷೆ ಮತ್ತು ಪ್ರಮಾಣೀಕರಣ ವ್ಯವಸ್ಥೆಯನ್ನು ರೂಪಿಸಿದೆ. ಪೂರೈಕೆ ವ್ಯವಸ್ಥೆಗಾಗಿ ಒಂದರ ಬದಲು ವಿವಿಧ ಮೂಲಗಳನ್ನು ಅವಲಂಬಿಸಬೇಕು ಎಂದು ಉದ್ದಿಮೆಗಳಿಗೆ ಸೂಚಿಸಿದೆ. ಇಂತಹ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಆಮದಿನ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸಲು ಸಾಧ್ಯವಾಗಿಲ್ಲ.

ಭಾರತವು ಈಗ ಬಹುತೇಕ ಎಲ್ಲ ವಲಯಗಳಲ್ಲೂ ಸರಕುಗಳಿಗಾಗಿ ಚೀನಾವನ್ನೇ ಅವಲಂಬಿಸಿದೆ. ಪ್ರತಿಯೊಂದು ಕೈಗಾರಿಕಾ ವಲಯಕ್ಕೂ ಪೂರೈಕೆಯಾಗುತ್ತಿರುವ ವಸ್ತುಗಳಲ್ಲಿ ಚೀನಾವೇ ಮೇಲುಗೈ ಸಾಧಿಸಿದೆ. ಔಷಧಗಳು, ಎಲೆಕ್ಟ್ರಾನಿಕ್ಸ್‌ನಿಂದ ಹಿಡಿದು ಕಟ್ಟಡ ನಿರ್ಮಾಣ ವಸ್ತುಗಳು, ನವೀಕರಿಸಬಹುದಾದ ಇಂಧನ, ಗ್ರಾಹಕರ ಸರಕುಗಳು, ಯಂತ್ರಗಳು... ಹೀಗೆ ಎಲ್ಲದರಲ್ಲೂ ಚೀನಾವೇ ಪಾರಮ್ಯ ಮೆರೆದಿದೆ. ಇದು ಕಳವಳಕಾರಿ ಸಂಗತಿ ಎಂದು ಚಿಂತಕರ ಚಾವಡಿ ಜಿಟಿಆರ್‌ಐ (ಗ್ಲೋಬಲ್‌ ಟ್ರೇಡ್‌ ರೀಸರ್ಚ್‌ ಇನಿಷಿಯೇಟಿವ್‌) ಹೇಳಿದೆ.  

ಎರಿಥ್ರೋಮೈಸಿನ್‌ನಂತಹ ಆ್ಯಂಟಿಬಯಾಟಿಕ್‌ಗಳ ಪೂರೈಕೆಯಲ್ಲಿ ಚೀನಾದ ಪಾಲು ಶೇ 97.7ರಷ್ಟಿದೆ. ಎಲೆಕ್ಟ್ರಾನಿಕ್ಸ್‌ ಕ್ಷೇತ್ರದಲ್ಲಿ ಶೇ 96.8ರಷ್ಟು ಸಿಲಿಕಾನ್‌ ಬಿಲ್ಲೆಗಳನ್ನು (ಸಿಲಿಕಾನ್‌ ವೇಫರ್ಸ್‌) ಚೀನಾವು ಭಾರತಕ್ಕೆ ರಫ್ತು ಮಾಡುತ್ತದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಶೇ 82.7ರಷ್ಟು ಸೌರಕೋಶಗಳು ಚೀನಾದಿಂದ ಬರುತ್ತವೆ. ಭಾರತಕ್ಕೆ ಪೂರೈಕೆಯಾಗುವ ಲಿಥಿಯಂ ಬ್ಯಾಟರಿಗಳಲ್ಲಿ ಚೀನಾದ ಕೊಡುಗೆ ಶೇ 75.2ರಷ್ಟಿದೆ. ಲ್ಯಾಪ್‌ಟಾಪ್‌ಗಳು (ಶೇ 80.5), ಕಸೂತಿ ಯಂತ್ರೋಪಕರಣ (ಶೇ 91.4) ಸೇರಿದಂತೆ ಇನ್ನೂ ಹಲವು ವಲಯಗಳ ಮೂಲವಸ್ತುಗಳು ದೊಡ್ಡ ಪ್ರಮಾಣದಲ್ಲಿ ಚೀನಾದಿಂದಲೇ ಬರುತ್ತಿವೆ. 

‘ಕಚ್ಚಾ ವಸ್ತುಗಳು, ವಾಹನಗಳು, ಮೊಬೈಲ್‌, ಕಂಪ್ಯೂಟರ್‌ ಬಿಡಿಭಾಗಗಳು, ಯಂತ್ರೋಪಕರಣಗಳು, ಔಷಧಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಂಡು, ಉತ್ಪನ್ನಗಳನ್ನು ಇಲ್ಲಿ ತಯಾರಿಸಿ ನಂತರ ರಫ್ತು ಮಾಡಲಾಗುತ್ತದೆ’ ಎಂದು ಹೇಳುತ್ತದೆ ಹಣಕಾಸು ಸಚಿವಾಲಯ. ದೇಶೀಯ ಮಾರುಕಟ್ಟೆಯಲ್ಲಿಈ ವಸ್ತುಗಳ ಬೇಡಿಕೆ ಮತ್ತು ಪೂರೈಕೆ ನಡುವೆ ದೊಡ್ಡ ಮಟ್ಟಿನ ಅಂತರ ಇರುವುದರಿಂದ ಕಚ್ಚಾ ವಸ್ತುಗಳು ಮತ್ತು ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳಬೇಕಾಗಿದೆ ಎಂಬುದು ಅದರ ಸಮಜಾಯಿಷಿ.

ವ್ಯಾಪಾರ ಕೊರತೆ 

ಒಂದು ದೇಶವು ನಿರ್ದಿಷ್ಟ ದೇಶಕ್ಕೆ ಮಾಡುವ (ನಿಗದಿತ ಅವಧಿಯಲ್ಲಿ) ರಫ್ತಿನ ಮೌಲ್ಯವು, ಆ ದೇಶದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೌಲ್ಯಕ್ಕಿಂತ ಕಡಿಮೆ ಇದ್ದರೆ, ಅವೆರಡರ ನಡುವಿನ ವ್ಯತ್ಯಾಸವನ್ನು ವ್ಯಾಪಾರ ಕೊರತೆ ಎನ್ನಲಾಗುತ್ತದೆ.  

ರಫ್ತು: ಅದಿರುಗಳು, ಅದಿರಿನ ಉಪ ಉತ್ಪನ್ನಗಳು, ಖನಿಜ ಇಂಧನಗಳು, ಖನಿಜ ತೈಲಗಳು ಮತ್ತು ಅವುಗಳ ಉಪ ಉತ್ಪನ್ನಗಳು, ಕಬ್ಬಿಣ, ಉಕ್ಕು ಸೇರಿದಂತೆ ಎಂಜಿನಿಯರಿಂಗ್‌ ಸಲಕರಣೆಗಳು, ಮೀನು,  ಸಿಗಡಿ ಸೇರಿದಂತೆ ವಿವಿಧ ಸಾಗರ ಉತ್ಪನ್ನಗಳು, ಹತ್ತಿ, ಮಸಾಲೆ ಪದಾರ್ಥಗಳು, ಇಂಗಾಲದ ಅಂಶಗಳನ್ನೊಳಗೊಂಡ ರಾಸಾಯನಿಕಗಳು, ಮಸಾಲೆ ಪದಾರ್ಥಗಳು ಇತ್ಯಾದಿ

ಆಮದು: ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌ ಹಾಗೂ ಅವುಗಳ ಬಿಡಿಭಾಗಗಳು ಸೇರಿದಂತೆ ಎಲೆಕ್ಟ್ರಾನಿಕ್ಸ್‌ ವಸ್ತುಗಳು, ಯಂತ್ರೋಪಕರಣಗಳು, ವಿವಿಧ ಕೈಗಾರಿಕೆಗಳಲ್ಲಿ ಬಳಸುವ ರಾಸಾಯನಿಕಗಳು, ಕಬ್ಬಿಣ ಮತ್ತು ಉಕ್ಕು, ವೈದ್ಯಕೀಯ ಸಲಕರಣೆಗಳು, ಔಷಧಿಗಳು, ಪ್ಲಾಸ್ಟಿಕ್‌, ರಸಗೊಬ್ಬರಗಳು, ಆಟಿಕೆ, ವಾಹನ ಮತ್ತು ಬಿಡಿಭಾಗಗಳು, ಜವಳಿ ಉತ್ಪನ್ನಗಳು, ಲಿಥಿಯಂ ಬ್ಯಾಟರಿಗಳು, ಅಪರೂಪದ ಲೋಹಗಳು ಇತ್ಯಾದಿ

ಆತಂಕಕಾರಿ ಏಕೆ?

  • ಭಾರತದ ಸರಕು ಪೂರೈಕೆ ವ್ಯವಸ್ಥೆಯ ಮೇಲೆ ಚೀನಾ ಹಿಡಿತ ಸಾಧಿಸಬಹುದು

  •  ಗಡಿ ವಿವಾದ ಸೇರಿದಂತೆ ಉಭಯ ರಾಷ್ಟ್ರಗಳ ನಡುವೆ ಯಾವುದೇ ಬಿಕ್ಕಟ್ಟು ಉದ್ಭವವಾದರೆ ಭಾರತದ ಮೇಲೆ ಒತ್ತಡ ಹೇರುವುದಕ್ಕೆ ಇದನ್ನೇ ಗುರಾಣಿಯನ್ನಾಗಿ ಬಳಸಬಹುದು. ರಫ್ತಿನ ಮೇಲೆ ಚೀನಾ ನಿರ್ಬಂಧ ಹೇರಿದರೆ, ಅದು ಭಾರತದ ಅರ್ಥವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ (ವಾಹನಗಳ ತಯಾರಿಕೆಗೆ ಪ್ರಮುಖವಾಗಿ ಬೇಕಾಗಿದ್ದ ಅಪರೂಪದ ಖನಿಜ ಲೋಹಗಳ ರಫ್ತಿಗೆ ಚೀನಾ ನಿರ್ಬಂಧ ಹೇರಿತ್ತು. ಇದು ಭಾರತದ ವಾಹನ ಉದ್ಯಮದ ಮೇಲೆ ಪರಿಣಾಮ ಬೀರಿತ್ತು)

  • ವಿದೇಶಿ ವಿನಿಮಯ ಮೀಸಲಿನ ಮೇಲೆ ಒತ್ತಡ ಬೀಳುತ್ತದೆ

  • ವಿದೇಶಿ ಪೂರೈಕೆದಾರರ ಮೇಲೆ ಅವಲಂಬನೆ ಮತ್ತು ಕಡಿಮೆ ಬೆಲೆಯ ವಸ್ತುಗಳ ಆಮದಿನಿಂದ ಸ್ಥಳೀಯ ತಯಾರಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ

  • ಕರೆನ್ಸಿ ಮೌಲ್ಯದ ಕುಸಿತದಿಂದ ಆಮದು ವೆಚ್ಚ ಹೆಚ್ಚುವುದಲ್ಲದೆ, ಅದು ಹಣದುಬ್ಬರ ಏರಿಕೆಗೆ ಕಾರಣವಾಗಬಹುದು

  • ಹೊರದೇಶಗಳ ಮೇಲಿನ ಅವಲಂಬನೆ ದೇಶದ ಕೈಗಾರಿಕಾ ಪ್ರಗತಿಗೆ ಅಡ್ಡಿಯಾಗಬಹುದು

ಆಧಾರ: ಪಿಟಿಐ, ಕೇಂದ್ರ ಹಣಕಾಸು ಸಚಿವಾಲಯ, ಬೀಜಿಂಗ್‌ನಲ್ಲಿನ ಭಾರತದ ರಾಯಭಾರ ಕಚೇರಿ ವೆಬ್‌ಸೈಟ್‌ ಮಾಧ್ಯಮ ವರದಿಗಳು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.