ಮಂಗಳೂರಿನ ಚಿತ್ರಾಪುರ ಬೀಚ್‌ನಲ್ಲಿ ನಾಡದೋಣಿ ಮೀನುಗಾರರು ತಮಗೆ ಸಿಕ್ಕಿ ಸ್ವಲ್ಪ ಮೀನುಗಳೊಂದಿಗೆ ವಾಪಸಾಗಿರುವುದು
ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಲೈಟ್ ಫಿಶಿಂಗ್ ಹಾಗೂ ಬುಲ್‌ಟ್ರಾಲಿಂಗ್ ಪದ್ಧತಿಗೆ ನಮ್ಮಲ್ಲಿ ನಿಷೇಧ ಇದೆ. ಆದರೂ, ಅದು ನಡೆಯುತ್ತಲೇ ಇದೆ. ಮೀನುಗಾರಿಕೆ ಇಲಾಖೆಯವರು ಕ್ರಮ ತೆಗೆದುಕೊಳ್ಳದೆ ಕಣ್ಮುಚ್ಚಿ ಕುಳಿತಿದ್ದಾರೆ. ಕರಾವಳಿಯಲ್ಲಿ ಅಂದಾಜು ಒಂದು ಲಕ್ಷ ಕುಟುಂಬಗಳು ನಾಡದೋಣಿ ಮೀನುಗಾರಿಕೆಯನ್ನೇ ನಂಬಿವೆ. ಅಕ್ರಮ ಮೀನುಗಾರಿಕೆಯು ಇವರೆಲ್ಲರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಮೀನುಗಾರರು ಆಪಾದಿಸುತ್ತಾರೆ.
ಮಂಗಳೂರು: ‘ಸಮುದ್ರಕ್ಕಿಳಿದರೆ ನಿತ್ಯವೂ ಬರಿಗೈಯಲ್ಲೇ ಮರಳಬೇಕಾಗಿದೆ. ದೋಣಿಗಳನ್ನು ದಡಕ್ಕೆ ಸೇರಿಸಿ, ಮನೆಯಲ್ಲೇ ಕುಳಿತಿದ್ದೇವೆ’ ಎನ್ನುತ್ತ ಕೆಲಹೊತ್ತು ಮೌನಕ್ಕೆ ಜಾರಿದರು ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ಉಪ್ಪುಂದ ಸಮೀಪದ ಅಳಿವೆಕೋಡಿಯ ಗೋಪಾಲ ಖಾರ್ವಿ.
‘ನಾಡದೋಣಿ ಮೀನುಗಾರರಿಗೆ ಹೊತ್ತಿನ ದುಡಿಮೆಯೂ ಆಗುತ್ತಿಲ್ಲ. ಪಾರಂಪರಿಕವಾಗಿ ಮೀನುಗಾರಿಕೆ ದೋಣಿ ನಡೆಸಿಕೊಂಡು ಬಂದಿದ್ದ ನೂರಾರು ಕುಟುಂಬಗಳು ಈಗ ದೋಣಿ ಮಾರುವ ಸ್ಥಿತಿಗೆ ತಲುಪಿವೆ. ನಾಡದೋಣಿ, ಪಾತಿದೋಣಿಗಳ ಮಾಲೀಕರಾಗಿದ್ದವರು ಯಾಂತ್ರೀಕೃತ ಬೋಟುಗಳಲ್ಲಿ ಕಾರ್ಮಿಕರಾಗಿದ್ದಾರೆ’ ಎಂದು ಒಂದೇ ಉಸಿರಿನಲ್ಲಿ ಬೇಸತ್ತು ಹೇಳಿದರು ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲ್ಲೂಕಿನ ಆನಂದು ಸೈಲ್.
ರಾಜ್ಯದ ಕರಾವಳಿ ಪ್ರದೇಶದ ಯಾವುದೇ ನಾಡದೋಣಿ ಮೀನುಗಾರರನ್ನು ಮಾತನಾಡಿಸಿದರೂ, ಅವರು ಹೇಳುವುದು ‘ನಮಗೆ ಮೀನು ಸಿಗುತ್ತಿಲ್ಲ; ಸಿಕ್ಕರೂ ಅತ್ಯಲ್ಪ’. ಏಕೆ ಎಂದು ಕೇಳಿದರೆ ಅವರು ಬೆಟ್ಟು ಮಾಡುವುದು ಬುಲ್‌ಟ್ರಾಲಿಂಗ್ ಮತ್ತು ಲೈಟ್ ಫಿಶಿಂಗ್ ನಡೆಸುವ ಟ್ರಾಲ್ ಮತ್ತು ಪರ್ಸಿನ್ ಬೋಟ್‌ಗಳವರತ್ತ!
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು 320 ಕಿ.ಮೀ. ಕರಾವಳಿ ಪ್ರದೇಶ ಹೊಂದಿವೆ. ಈ ಜಿಲ್ಲೆಗಳ ಕರಾವಳಿ ಭಾಗದಲ್ಲಿ ನಾಡದೋಣಿ ಅವಲಂಬಿಸಿರುವ ಮೀನುಗಾರರ ಕುಟುಂಬಗಳ ಸಂಖ್ಯೆ ದೊಡ್ಡದಿದೆ. ಅವುಗಳ ಪೈಕಿ ಬಹುತೇಕ ಕುಟುಂಬಗಳು ಆರ್ಥಿಕವಾಗಿ ಇಂದಿಗೂ ದುರ್ಬಲವಾಗಿವೆ. ಮಕ್ಕಳ ಶಿಕ್ಷಣಕ್ಕೆ, ಆರೋಗ್ಯ ಚಿಕಿತ್ಸೆಗೆ ವೆಚ್ಚ ಹೊಂದಿಸಲು ಪರದಾಡಬೇಕಾಗಿದೆ.
ಪಾತಿದೋಣಿ, ನಾಡದೋಣಿಯ ಜೊತೆಗೆ 10 ಎಚ್.ಪಿ.ವರೆಗಿನ ಸಾಮರ್ಥ್ಯದ ಎಂಜಿನ್ ಹೊಂದಿರುವ ದೋಣಿಗಳು ನಾಡದೋಣಿ ವ್ಯಾಪ್ತಿಗೆ ಬರುತ್ತವೆ. 10 ಎಚ್.ಪಿ.ಗಿಂತ ಹೆಚ್ಚು ಎಂಜಿನ್ ಸಾಮರ್ಥ್ಯ ಹೊಂದಿರುವ ಬೋಟ್‌ಗಳ ಜೊತೆಗೆ ಟ್ರಾಲ್, ಪರ್ಸಿನ್ ಬೋಟ್‌ಗಳನ್ನೂ ಮೀನುಗಾರಿಕೆಗೆ ಬಳಸಲಾಗುತ್ತದೆ.
‘ಪ್ರತಿ ವರ್ಷ ಜೂನ್ 1ರಿಂದ ಜುಲೈ 31ರವರೆಗೆ ಎರಡು ತಿಂಗಳು, ಅರಬ್ಬಿ ಸಮುದ್ರದಲ್ಲಿ ಆಳಸಮುದ್ರ ಮೀನುಗಾರಿಕೆಯನ್ನು ನಿಷೇಧಿಸಲಾಗುತ್ತದೆ. ಇದು ಮೀನುಗಳ ಸಂತಾನ ಅಭಿವೃದ್ಧಿಯ ಸಮಯ ಮತ್ತು ಈ ಅವಧಿಯಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿರುತ್ತದೆ ಎಂಬ ಕಾರಣಕ್ಕೆ ಆಳಸಮುದ್ರ ಮೀನುಗಾರಿಕೆ ನಿಷೇಧಿಸಲಾಗುತ್ತದೆ. 10 ಎಚ್.ಪಿ.ಗಿಂತ ಹೆಚ್ಚಿನ ಸಾಮರ್ಥ್ಯ ಎಂಜಿನ್ ಹೊಂದಿರುವ ಎಲ್ಲ ಬಗೆಯ ಬೋಟ್‌ಗಳನ್ನು ಬಳಸಿ ಮೀನುಗಾರಿಕೆ ಮಾಡುವುದನ್ನು ಈ ಅವಧಿಯಲ್ಲಿ ನಿಷೇಧಿಸಲಾಗುತ್ತದೆ. ಮಳೆಗಾಲದ ಈ ಎರಡು ತಿಂಗಳು ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ನಾಡದೋಣಿಯವರಿಗೆ ಮಾತ್ರ ಅವಕಾಶ ಇರುತ್ತದೆ. ಆದರೆ, ಚಂಡಮಾರುತ, ಸಮುದ್ರ ಪ್ರಕ್ಷುಬ್ಧಗೊಳ್ಳುವುದು, ವಿಪರೀತ ಮಳೆ ಮತ್ತಿತರ ಕಾರಣಗಳಿಂದ ಮೀನುಗಾರಿಕೆಗೆ ಸಿಗುವ ಅವಕಾಶ ಒಂದು ತಿಂಗಳಿಗಿಂತಲೂ ಕಡಿಮೆ’ ಎಂದು ಬಹುಪಾಲು ಮೀನುಗಾರರು ಹಿಂದಿನ ವರ್ಷಗಳ ಲೆಕ್ಕ ಒಪ್ಪಿಸುತ್ತಾರೆ.
‘ನಾಡದೋಣಿ ಮೀನುಗಾರಿಕೆಗೆಯಲ್ಲಿ ನಿರೀಕ್ಷಿಸಿದಷ್ಟು ಮೀನು ಸಿಗದೆ ಯಾವುದೋ ಕಾಲವಾಯಿತು. ಯಾಂತ್ರೀಕೃತ ಬೋಟ್‌ಗಳ ಅವೈಜ್ಞಾನಿಕ ಮೀನುಗಾರಿಕೆಯು ಮೀನು ಕೊರತೆ ಸಮಸ್ಯೆ ಸೃಷ್ಟಿಸಿದೆ. ಕಡಲತೀರದಿಂದ ಐದು ನಾಟಿಕಲ್ ಮೈಲಿ ದೂರದವರೆಗೂ ನಮಗೆ ಮೀನು ಸರಿಯಾಗಿ ಸಿಗುತ್ತಿಲ್ಲ’ ಎನ್ನುತ್ತಾರೆ ಭಟ್ಕಳ ತಾಲ್ಲೂಕು ಹೆರ್ತಾರ ಗ್ರಾಮದ ಮೀನುಗಾರ ಸೋಮನಾಥ ಮೊಗೇರ.
‘ಪ್ರಾಕೃತಿಕ ವಿಕೋಪದಿಂದ ಮತ್ಸ್ಯಕ್ಷಾಮ ತಲೆದೋರಿಲ್ಲ. ದೊಡ್ಡಬೋಟ್‌ನವರು ಅತಿ ಆಸೆಯಿಂದಾಗಿ ಬುಲ್‌ಟ್ರಾಲಿಂಗ್, ಲೈಟ್ ಫಿಶಿಂಗ್‌ನಂತಹ ಅವೈಜ್ಞಾನಿಕ ರೀತಿಯ ಮೀನುಗಾರಿಕೆ ನಡೆಸುವುದರಿಂದ ಮೀನುಗಳ ಸಂತತಿಯೇ ನಾಶವಾಗಿ ಮೀನಿನ ಬರ ತಲೆದೋರಿದೆ’ ಎಂಬುದು ಮಂಗಳೂರು ಬಳಿಯ ಗುಡ್ಡೆಕೊಪ್ಪಲು ಮೀನುಗಾರ ಉದಯ ಅವರು ಹೇಳುವ ಮಾತು. ಇದು ಬಹುತೇಕ ನಾಡದೋಣಿ ಮೀನುಗಾರರ ಆಕ್ರೋಶದ ಮಾತು ಸಹ. ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಕೆಲತಿಂಗಳ ಹಿಂದೆ ತ್ರಾಸಿ ಕಡಲ ತೀರದಲ್ಲಿ ಪ್ರತಿಭಟನೆ ನಡೆಸಿ, ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಎರಡು ವರ್ಷಗಳ ಹಿಂದೆ ಕಾರವಾರದಲ್ಲಿಯೂ ಮೀನುಗಾರರು ದೊಡ್ಡಮಟ್ಟದ ಪ್ರತಿಭಟನೆ ನಡೆಸಿದ್ದರು.
ಹಲವು ವರ್ಷಗಳಿಂದ ಕೆಲ ದೊಡ್ಡ ಬೋಟ್‌ನವರು ಅವೈಜ್ಞಾನಿಕ ರೀತಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದರೂ ಮೀನುಗಾರಿಕೆ ಇಲಾಖೆಯವರು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಲೈಟ್ ಫಿಶಿಂಗ್ ಹಾಗೂ ಬುಲ್‌ಟ್ರಾಲಿಂಗ್ ಪದ್ಧತಿಗೆ ನಮ್ಮಲ್ಲಿ ನಿಷೇಧ ಇದೆ. ಆದರೂ, ಅದು ನಡೆಯುತ್ತಲೇ ಇದೆ. ಮೀನುಗಾರಿಕೆ ಇಲಾಖೆಯವರು ಕ್ರಮ ತೆಗೆದುಕೊಳ್ಳದೆ ಕಣ್ಮುಚ್ಚಿ ಕುಳಿತಿದ್ದಾರೆ. ಕರಾವಳಿಯಲ್ಲಿ ಅಂದಾಜು ಒಂದು ಲಕ್ಷ ಕುಟುಂಬಗಳು ನಾಡದೋಣಿ ಮೀನುಗಾರಿಕೆಯನ್ನೇ ನಂಬಿವೆ. ಅಂದಾಜು 50 ಸಾವಿರ ಕುಟುಂಬಗಳು ಪರೋಕ್ಷವಾಗಿ ಅವಲಂಬಿತವಾಗಿವೆ. ಅಕ್ರಮ ಮೀನುಗಾರಿಕೆಯು ಇವರೆಲ್ಲರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ನಾಡದೋಣಿ ಮೀನುಗಾರರು ಆಪಾದಿಸುತ್ತಾರೆ.
ಎರಡು ಬೋಟ್‌ಗಳನ್ನು ಪರಸ್ಪರ ನಿರ್ದಿಷ್ಟ ದೂರದಲ್ಲಿರಿಸಿ ಬೋಟ್‌ಗಳಿಗೆ 150 ಮೀಟರ್‌ಗೂ ದೊಡ್ಡಬಲೆ ಕಟ್ಟಿ ಸಮುದ್ರದಾಳದಿಂದ ಮೀನನ್ನು ಹಿಡಿಯುವ ವಿಧಾನಕ್ಕೆ ‘ಬುಲ್ ಟ್ರಾಲಿಂಗ್ ಫಿಶಿಂಗ್’ ಎನ್ನುತ್ತಾರೆ. ಸಣ್ಣ ಕಣ್ಣಿನ ಬಲೆ ಬಳಸುವುದರಿಂದ ಮರಿ ಮೀನುಗಳು ಸಹ ಬಲೆಗೆ ಸಿಲುಕಿ ಸಾಯುತ್ತವೆ. ಲೈಟ್ ಫಿಶಿಂಗ್‌ನಲ್ಲಿ ಪ್ರಖರವಾದ ಬೆಳಕನ್ನು ಸಮುದ್ರಕ್ಕೆ ಹಾಯಿಸಲಾಗುತ್ತದೆ. ಬೆಳಕಿಗೆ ಆಕರ್ಷಿತಗೊಂಡು ಮೀನು ಬರುತ್ತವೆ. ದೊಡ್ಡ ಬಲೆ ಬಳಸಿ ಅವುಗಳನ್ನು ಹಿಡಿಯುತ್ತಾರೆ. ಎರಡೂ ವಿಧಾನಗಳಲ್ಲಿ ಮೀನಿನ ಮರಿಗಳನ್ನು ಹಿಡಿಯುವುದರಿಂದಲೂ ಮೀನಿನ ಸಂತತಿ ಕಡಿಮೆಯಾಗುತ್ತಿದೆ. ಲೈಟ್ ಫಿಶಿಂಗ್‌ಗಾಗಿ ಜನರೇಟರ್‌ಗಳನ್ನು ಬೋಟ್‌ಗಳಲ್ಲಿ ಕೊಂಡು ಹೋದರೂ ಯಾರೂ ಪರಿಶೀಲಿಸುವವರೇ ಇಲ್ಲದಾಗಿದೆ. ಇಂದು ದೊಡ್ಡ ಯಾಂತ್ರಿಕ ಬೋಟ್‌ಗಳು ಮೀನುಗಾರರಿಗಿಂತ ಉದ್ಯಮಿಗಳ ಕೈಯಲ್ಲಿವೆ ಎನ್ನುತ್ತಾರೆ ನಾಡದೋಣಿ ಮೀನುಗಾರರು.
‘ರಾಜ್ಯದ ಕರಾವಳಿಯಲ್ಲಿ ಒಟ್ಟಾರೆ ಮೀನು ವಹಿವಾಟು ವಾರ್ಷಿಕ ₹10 ಸಾವಿರ ಕೋಟಿಗೂ ಮಿಕ್ಕಿದೆ. ರಫ್ತು ಸಹ ಆಗುತ್ತದೆ. ಹೇಗಾದರೂ ಹಿಡಿದು ತರಲಿ, ರಫ್ತಿಗೆ ಮೀನು ಸಿಕ್ಕರೆ ಸಾಕು ಎಂಬಂತಹ ಸ್ಥಿತಿ ಸರ್ಕಾರಗಳದ್ದು. ಮೀನು ಸಂತತಿ ವೃದ್ಧಿಗೆ ಸಮುದ್ರದಲ್ಲಿ ಕೃತಕ ಬಂಡೆ ಹಾಕುವ ಯೋಜನೆ ಜಾರಿ ಬಿಟ್ಟರೆ ನಾಡದೋಣಿ ಮೀನುಗಾರರ ಈ ಸಮಸ್ಯೆ ಪರಿಹಾರಕ್ಕೆ ಪರಿಣಾಮಕಾರಿಯಾದ ಕೆಲಸ ರಾಜ್ಯ ಸರ್ಕಾರದಿಂದ ಆಗಿಲ್ಲ. ಸ್ಥಳೀಯ ಮಟ್ಟದಲ್ಲಿಯೂ ಅಷ್ಟೇ’ ಎನ್ನುತ್ತಾರೆ ಅವರು.
‘ಪ್ರತಿವರ್ಷ ಮಳೆಗಾಲದಲ್ಲಿ ಮೀನುಗಾರಿಕೆಗೆ ಇಳಿಯುವ ಮೊದಲು ಬಲೆಗಳ ರಿಪೇರಿ, ಸಲಕರಣೆಗಳ ಖರೀದಿಗೆ ದೊಡ್ಡ ಮೊತ್ತ ವಿನಿಯೋಗಿಸುತ್ತೇವೆ. ಮೀನುಗಾರಿಕೆಗೆ ತೆರಳುವುದಕ್ಕೂ ಮೊದಲು ಕೆಲಸದವರಿಗೆ ಮುಂಗಡ ಹಣ ನೀಡಬೇಕು. ಅದಕ್ಕಾಗಿ ನಾವು ಸೊಸೈಟಿಗಳಿಂದ ಸಾಲ ಪಡೆಯುತ್ತೇವೆ. ಮೀನುಗಾರಿಕೆ ಉತ್ತಮವಾಗಿ ನಡೆದರೆ. ಸುಲಭವಾಗಿ ಸಾಲ ತೀರಿಸಬಹುದು. ಈ ವರ್ಷ ನವೆಂಬರ್ ನಂತರ ಮೀನು ಸಿಗುತ್ತಿಲ್ಲ. ಸಾಲ ತೀರಿಸಲಾಗದೆ ಸಂಕಷ್ಟದಲ್ಲಿದ್ದೇವೆ’ ಎನ್ನುತ್ತಾರೆ ಉಪ್ಪುಂದದ ನಾಡ ದೋಣಿ ಮೀನುಗಾರ ಜನಾರ್ದನ.
‘ಕೆಲ ವರ್ಷಗಳ ಹಿಂದೆ ಮೆಲು ಮೀನು, ತೇಡೆ ಮೀನುಗಳು ನಾಡದೋಣಿಯವರಿಗೆ ದೊಡ್ಡ ಪ್ರಮಾಣದಲ್ಲಿ ಸಿಗುತ್ತಿದ್ದವು. ಈಗ ಈ ಮೀನುಗಳು ಕಣ್ಣಿಗೇ ಬೀಳುವುದಿಲ್ಲ. ಅಲ್ಲದೆ ಯಥೇಚ್ಛವಾಗಿ ಸಿಗುತ್ತಿದ್ದ ಬೈಗೆ, ಬಂಗುಡೆ ಮೀನುಗಳ ಪ್ರಮಾಣವೂ ತೀರಾ ಕಡಿಮೆಯಾಗಿದೆ. ಲೈಟ್ ಫಿಶಿಂಗ್‌ನಿಂದಾಗಿ ಇಂತಹ ಮೀನುಗಳ ಸಂತತಿ ನಾಶವಾಗುತ್ತಿರುವ ಸಾಧ್ಯತೆಯೂ ಇರಬಹುದು’ ಎಂದು ಅನುಮಾನಿಸುತ್ತಾರೆ ಮೀನುಗಾರ ಚಂದ್ರಶೇಖರ್.
ಬುಲ್ ಟ್ರಾಲಿಂಗ್ ಮತ್ತು ಲೈಟ್ ಫಿಶಿಂಗ್ ಹಾವಳಿ ಆರಂಭವಾದ ನಂತರ ನಮಗೆ ಮೀನು ಲಭ್ಯತೆಯಲ್ಲಿ ಶೇ 75ರಷ್ಟು ಕಡಿಮೆಯಾಗಿದೆ. ಇತ್ತೀಚಿನ ವರ್ಷಗಳಲ್ಲಂತೂ ಈ ಹಾವಳಿ ಹೆಚ್ಚಿದೆ. ಎರಡು ಬೋಟ್‌ಗಳಿಗೆ ಬಲೆ ಕಟ್ಟಿ ಕಿಲೋ ಮೀಟರ್‌ಗಟ್ಟಲೆ ಎಳೆದುಕೊಂಡು ಹೋಗಿ ಮೀನು ಹಿಡಿಯುತ್ತಾರೆ. ಲೈಟ್‌ಫಿಶಿಂಗ್‌ನಲ್ಲಿ ಒಂದು ಕಿ.ಮೀ. ದೂರದ ವರೆಗೂ ಪ್ರಖರ ಬೆಳಕು ಹಾಯಿಸಲಾಗುತ್ತದೆ. ಬೆಳಕಿನತ್ತ ಆಕರ್ಷಿತವಾಗಿ ಎಲ್ಲ ಮೀನುಗಳು ಹೋಗುತ್ತವೆ. ಆಗ ಮೀನಿಗೆ ಬಲೆ ಹಾಕಿ ಹಿಡಿಯುತ್ತಾರೆ. ಹೀಗಾಗಿ ಮೀನುಗಳು ದಡಕ್ಕೆ ಬರುತ್ತಿಲ್ಲ. ನಾವು ಹೆಚ್ಚೆಂದರೆ 8 ರಿಂದ 10 ನಾಟಿಕಲ್ ಮೈಲಿ ದೂರದ ವರೆಗೆ ಮಾತ್ರ ಸಾಗಬಹುದು. ಕೇರಳದಲ್ಲಿ ಇಂತಹ ಕೆಟ್ಟ ವಹಿವಾಟಿಗೆ ಕಡಿವಾಣ ಹಾಕಲಾಗಿದೆ. ನಿಯಮ ಉಲ್ಲಂಘಿಸಿ ಹೀಗೆ ಮೀನುಗಾರಿಕೆ ಮಾಡುವವರಿಗೆ ಅಲ್ಲಿ ದೊಡ್ಡಮೊತ್ತದ ದಂಡ ವಿಧಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಮಾತ್ರ ಏನೂ ನಡೆದಿಲ್ಲ ಎಂಬಂತೆ ಎಲ್ಲರೂ ಮೌನವಾಗಿದ್ದಾರೆ’ ಎಂದು ಉದಯ ಆಕ್ರೋಶ ವ್ಯಕ್ತಪಡಿಸುತ್ತಾರೆ.
ನಾಡದೋಣಿ ಮೀನುಗಾರರ ಸಮಸ್ಯೆಯು ಸ್ವಾವಲಂಬಿಯಾಗಿ ದುಡಿಯುವ ಮೀನುಗಾರ ಮಹಿಳೆಯರ ಮೇಲೂ ಪರಿಣಾಮ ಬೀರಿದೆ. ನಾಡದೋಣಿಗಳು ಕಡಲಿಗಿಳಿಯುವುದೇ ಅಪರೂಪವಾದ ಕಾರಣ ಈ ಮಹಿಳೆಯರು ಹೆಚ್ಚಿನ ದರ ನೀಡಿ ಯಾಂತ್ರಿಕ ಬೋಟ್‌ನವರಿಂದ ಮೀನುಗಳನ್ನು ಖರೀದಿಸಿ ಮಾರಾಟ ಮಾಡಬೇಕಾದ ಅನಿವಾರ್ಯತೆಯೂ ಎದುರಾಗಿದೆ.
‘25 ವರ್ಷಗಳಿಂದ ಮೀನು ಮಾರಾಟ ಮಾಡುತ್ತಿದ್ದೇನೆ. ನಾಡದೋಣಿಯವರ ಹತ್ತಿರ ಮೀನು ಖರೀದಿಸಿ ಮಾರಾಟ ಮಾಡುತ್ತಿದ್ದೆ. ನಮ್ಮೂರ ಬಳಿಯೇ ಮೀನು ಸಿಗುತ್ತಿತ್ತು. ಮೇಲಾಗಿ ವರ್ತಕರಿಗೆ ಕೊಡುವುದಕ್ಕಿಂತ ಕಡಿಮೆ ದರದಲ್ಲಿ ನಾಡದೋಣಿಯವರು ನಮಗೆ ಮೀನು ಕೊಡುತ್ತಾರೆ. ಆದರೆ, ಈಗ ಅವರಿಗೇ ಸರಿಯಾಗಿ ಮೀನು ಸಿಗುತ್ತಿಲ್ಲ. ಹೀಗಾಗಿ ಮಂಗಳೂರು ದಕ್ಕೆಗೆ ಹೋಗಿ ಮೀನು ಖರೀದಿಸಿ ತರಬೇಕಿದೆ. ಹಿಂದೆ ದಿನಕ್ಕೆ ₹500ರಿಂದ ₹600 ಸಂಪಾದನೆಯಾಗುತ್ತಿತ್ತು. ಈಗ ಅದರ ಅರ್ಧದಷ್ಟೂ ಸಂಪಾದನೆ ಇಲ್ಲ’ ಎಂದು ಗೋಳುತೋಡಿಕೊಂಡರು ಗುಡ್ಡೆಕೊಪ್ಪಲು ಗ್ರಾಮದ ಮೀನುಮಾರುವ ಮಹಿಳೆಯೊಬ್ಬರು. ‘ಬಹುತೇಕ ಮಹಿಳೆಯರು ಮೀನುಮಾರಿ ಕುಟುಂಬ ನಿರ್ವಹಿಸುತ್ತಿದ್ದೇವೆ. ಒಂದೆಡೆ ಆದಾಯ ಕಡಿಮೆಯಾಗಿದ್ದರೆ, ಇನ್ನೊಂದೆಡೆ ಬೆಲೆ ಏರಿಕೆಯ ಬಿಸಿ. ಮಕ್ಕಳ ಶಿಕ್ಷಣಕ್ಕೆ ಹಣಹೊಂದಿಸುವುದೂ ಕಷ್ಟವಾಗಿದೆ’ ಎಂದು ಇನ್ನೊಬ್ಬ ಮಹಿಳೆ ಕಣ್ಣೀರಾದರು.
‘ನಾಡದೋಣಿಯಲ್ಲಿ 8 ಜನ ಮೀನುಗಾರಿಕೆಗೆ ತೆರಳುತ್ತೇವೆ. ಅವರ ಕೂಲಿ, ಸೀಮೆ ಎಣ್ಣೆ ವೆಚ್ಚ ನಿಭಾಯಿಸಲೂ ಆಗುತ್ತಿಲ್ಲ. ಮಕ್ಕಳ ಶಿಕ್ಷಣಕ್ಕೆ ಸಾಲ ಮಾಡಿದ್ದೇನೆ. ಅದನ್ನು ತೀರಿಸುವುದು ಹೇಗೆ ಎಂಬ ಚಿಂತೆ’ ಎಂದು ಮೀನುಗಾರರೊಬ್ಬರು ಹೇಳಿಕೊಂಡರು.
ಕೇರಳ ಸರ್ಕಾರವು ಮಿನುಗಾರರಿಗೆ ಬಲೆ, ಸೀಮೆ ಎಣ್ಣೆ ಖರೀದಿಗೆ ಸಹಾಯಧನ ನೀಡುತ್ತಿದೆ. ಮೀನುಗಾರರಿಗೆ ಮನೆ ನಿರ್ಮಾಣಕ್ಕೆ ಅವರ ಮಕ್ಕಳ ಶಿಕ್ಷಣಕ್ಕೂ ಯೋಜನೆಗಳನ್ನು ಜಾರಿಗೊಳಿಸಿದೆ. ನಮ್ಮ ರಾಜ್ಯದಲ್ಲೂ ಅಂತಹ ಯೋಜನೆಗಳು ಜಾರಿಯಾಗಬೇಕು ಎನ್ನುತ್ತಾರೆ ನಾಡದೋಣಿ ಮೀನುಗಾರರು.
ಮಂಗಳೂರಿನ ಚಿತ್ರಾಪುರ ಬೀಚ್‌ನಲ್ಲಿ ನಾಡದೋಣಿ ಮೀನುಗಾರರು ತಮಗೆ ಸಿಕ್ಕಿ ಸ್ವಲ್ಪ ಮೀನುಗಳನ್ನು ಟ್ರೇಯಲ್ಲಿ ತುಂಬಿರುವುದು
ಮಂಗಳೂರು ಬಳಿಯ ಸುರತ್ಕಲ್ ಲೈಟ್‌ಹೌಸ್ ಬಳಿ ನಾಡದೋಣಿ ಮೀನುಗಾರರು ತಮಗೆ ಸಿಕ್ಕ ಸ್ವಲ್ಪವೇ ಮೀನುಗಳನ್ನು ಬೆಲೆಯಿಂದ ತೆಗೆಯುತ್ತಿರುವುದು
ಮಂಗಳೂರಿನ ಚಿತ್ರಾಪುರ ಬೀಚ್‌ನಲ್ಲಿ ನಾಡದೋಣಿ ಮೀನುಗಾರರು ದೋಣಿಗಳನ್ನು ದಡಕ್ಕೆ ಎಳೆದು ತರುತ್ತಿರುವುದು
ಯಾಂತ್ರಿಕ ಬೋಟ್‌ಗಳು ಬಂದರು ಪ್ರದೇಶಗಳಲ್ಲಿ ಮಾತ್ರ ಲಂಗರು ಹಾಕಿ ಅಲ್ಲಿಂದ ಮೀನುಗಾರಿಕೆಗೆ ತೆರಳುತ್ತವೆ. ನಾಡ ದೋಣಿಗಳು ಬಂದರು ಸೇರಿದಂತೆ ಎಲ್ಲಾ ಕಡೆಗಳಿಂದ ಮೀನುಗಾರಿಕೆಗೆ ತೆರಳುವುದರಿಂದ ಈ ದೋಣಿಗಳಿಂದಲೇ ಅಂದಾಜು ಶೇ 70ರಷ್ಟು ಮೀನುಗಳು ಸಿಗುತ್ತಿದ್ದವು. ಅದು ಈಗ ಶೇ 30ಕ್ಕೆ ಇಳಿದಿದೆ. ಲೈಟ್‌ಫಿಶಿಂಗ್‌ನಂತಹ ಅವೈಜ್ಞಾನಿಕ ಮೀನುಗಾರಿಕೆ ಕಣ್ಣೆದುರು ನಡೆದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಾಡದೋಣಿ ಮೀನುಗಾರರು ಉಳಿಯಬೇಕಾದರೆ ಇಂತಹ ಮೀನುಗಾರಿಕೆಗೆ ಸಂಪೂರ್ಣ ಕಡಿವಾಣ ಹಾಕಬೇಕಾಗಿದೆ. ಸಮುದ್ರದಲ್ಲಿ ಕಲ್ಲುಗಳಿರುವ ಪ್ರದೇಶದಲ್ಲಿ ಲೈಟ್‌ಫಿಶಿಂಗ್ ನಡೆಸಲಾಗುತ್ತದೆ. ಇದರಿಂದ ಹಲವು ಬಗೆಯ ಮೀನುಗಳ ಸಂತತಿಯೇ ಅಳಿವಿನಂಚಿಗೆ ತಲುಪಿದೆ. ಇಂತಹ ಅವೈಜ್ಞಾನಿಕ ಮೀನುಗಾರಿಕೆ ತಡೆಗೆ ಸರ್ಕಾರ ಮುಂದಾಗದಿದ್ದರೆ ಮುಖ್ಯಮಂತ್ರಿ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತೇವೆ.
-ನಾಗೇಶ ಖಾರ್ವಿ ಅಧ್ಯಕ್ಷ ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ
ನಾಡದೋಣಿ ಮೀನುಗಾರರು ಎದುರಿಸುತ್ತಿರುವ ಮೀನಿನ ಬರದ ಸಮಸ್ಯೆ ನೀಗಿಸಲು ಮೀನುಗಾರಿಕೆ ಇಲಾಖೆ 2023ರಲ್ಲಿ ಭಟ್ಕಳ ತಾಲ್ಲೂಕಿನ ಬೆಳಕೆ ಸಮೀಪ ಸಮುದ್ರಕ್ಕೆ ಕೃತಕ ಬಂಡೆಗಳನ್ನು ಬಿಟ್ಟಿತ್ತು. ದಡದಿಂದ ಸುಮಾರು ಐದು ನಾಟಿಕಲ್ ಮೈಲಿ ವ್ಯಾಪ್ತಿಯೊಳಗೆ ಹೆಚ್ಚು ಆಳ ಇಲ್ಲದ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಕೃತಕ ಬಂಡೆ ಇಟ್ಟು ಮೀನು ಸಂತತಿ ವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸುವುದು ಯೋಜನೆಯ ಉದ್ದೇಶವಾಗಿತ್ತು. ‘ಬೆಳಕೆ ಮುರುಡೇಶ್ವರ ಮಂಕಿ ಕುಮಟಾ ಸೇರಿದಂತೆ 13 ಕಡೆಗಳಲ್ಲಿ ಕೃತಕ ಬಂಡೆ ಅಳವಡಿಸಲು ಜಾಗ ಗುರುತಿಸಲಾಗಿದೆ. ಈಗಾಗಲೆ 5ಕ್ಕೂ ಹೆಚ್ಚು ಕಡೆ ಮೂರು ಬೇರೆ ಬೇರೆ ಆಕೃತಿಯ 1500 ರಷ್ಟು ಕೃತಕ ಬಂಡೆಗಳನ್ನು ಸಮುದ್ರದಲ್ಲಿ ಅಳವಡಿಸಲಾಗಿದೆ. ಒಂದೂವರೆ ವರ್ಷದ ಹಿಂದೆ ಅಳವಡಿಸಿದ್ದ ಬಂಡೆಗಳ ಸುತ್ತಮುತ್ತ ಮೀನು ಫಸಲು ಉತ್ತಮವಾಗಿದೆ ಎಂಬ ಅಭಿಪ್ರಾಯ ಮೀನುಗಾರರಿಂದ ಬಂದಿದೆ’ ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಬಿನ್ ಬೋಪಣ್ಣ.
‘ಕೃತಕ ಬಂಡೆಗಳ ಅಳವಡಿಕೆ ಮೀನಿನ ಬರ ನೀಗಿಸಬಹುದು ಎಂಬ ಲೆಕ್ಕಾಚಾರವೊಂದೇ ಸರಿಯಲ್ಲ. ಮೀನುಗಳ ಸಂತತಿ ವೃದ್ಧಿಗೆ ಸಾಕಷ್ಟು ಸಮಯ ತಗುಲಬಹುದು. ಬೆಳಕಿನ ಮೀನುಗಾರಿಕೆ ಬುಲ್ ಟ್ರಾಲ್ ನಿಯಂತ್ರಿಸಿದರೆ ಕೃತಕ ಬಂಡೆಗಳಿಗಿಂತ ಪರಿಣಾಮಕಾರಿಯಾಗಿ ಮೀನು ಸಂತತಿ ವೃದ್ಧಿಯಾಗುತ್ತದೆ’ ಎನ್ನುತ್ತಾರೆ ಮೀನುಗಾರ ಸೋಮನಾಥ ಮೊಗೇರ.
‘ಕೃತಕ ಬಂಡೆಗಳ ಅಳವಡಿಕೆ ಮೀನು ಸಂತತಿ ವೃದ್ಧಿಸಲು ನಿಜಕ್ಕೂ ಪರಿಣಾಮಕಾರಿ ಆಗಲಿದೆ. ಬಂಡೆಗಳ ನಡುವೆ ಆಶ್ರಯ ತಾಣ ಹುಡುಕುವ ಮತ್ತು ಅಲ್ಲಿನ ಆಹಾರ ಅರಸುತ್ತ ಬೆಳೆಯುವ ಸಿಗಡಿ ಗೊಬ್ರೆ ಬಣಗು ಏಡಿ ಬೊಂಡಾಸ್ ಇನ್ನಿತರ ಮೀನುಗಳ ಸಂತತಿಯಲ್ಲಿ ಗಣನೀಯ ಏರಿಕೆ ಆಗುತ್ತದೆ. ಆದರೆ ಬಂಡೆ ಅಳವಡಿಸಿದ ಎರಡರಿಂದ ಐದು ವರ್ಷದವರೆಗೆ ಕಾಯಬೇಕಾಗುತ್ತದೆ’ ಎನ್ನುತ್ತಾರೆ ಕಾರವಾರದ ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಶಿವಕುಮಾರ ಹರಗಿ.
ಮಂಗಳೂರಿನ ನವಮಂಗಳೂರು ಬಂದರು ನಿರ್ಮಾಣಕ್ಕಾಗಿ ಜಾಗ ಬಿಟ್ಟುಕೊಟ್ಟ ಮೀನುಗಾರರಿಗೆ ಪ್ರತ್ಯೇಕ ಮೀನುಗಾರಿಕಾ ಬಂದರು ನಿರ್ಮಿಸಬೇಕು ಎಂಬ ಬೇಡಿಕೆ ಐದು ದಶಕ ಕಳೆದರೂ ಈಡೇರಿಲ್ಲ. ಮಂಗಳೂರಿನ ಕುಳಾಯಿಯಲ್ಲಿ ನಾಡದೋಣಿ ಮೀನುಗಾರಿಕೆಗೆ ಆದ್ಯತೆ ಸಿಗುವಂತೆ ಸರ್ವಋತು ಬಂದರನ್ನು ನವಮಂಗಳೂರು ಬಂದರು ಪ್ರಾಧಿಕಾರದ ಸಹಕಾರದಲ್ಲಿ ₹ 196.51 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಕಾಮಗಾರಿ 2023ನೇ ಸಾಲಿನಲ್ಲಿ ಶುರುವಾಗಿತ್ತು. ಈ ಬಂದರಿನ ವಿನ್ಯಾಸವನ್ನು ಸ್ಥಳೀಯ ಮೀನುಗಾರರು ಒಪ್ಪದ ಕಾರಣ ಕಾಮಗಾರಿಯೂ ಅರ್ಧದಲ್ಲೇ ಸ್ಥಗಿತಗೊಂಡಿದೆ. ಕುಳಾಯಿ ಬಂದರಿನ ಉತ್ತರದಲ್ಲಿ 831 ಮೀ ಉದ್ದದ ಹಾಗೂ ದಕ್ಷಿಣದಲ್ಲಿ 262 ಮೀ ಉದ್ದದ ಬ್ರೇಕ್ ವಾಟರ್ ನಿರ್ಮಿಸಲು ನಿರ್ಧರಿಸಲಾಗಿತ್ತು. ಕುಳಾಯಿ ಪ್ರದೇಶದಲ್ಲಿ ಮೇ–ಸೆಪ್ಟೆಂಬರ್‌ವರೆಗೆ ಕಿನಾರೆಯಿಂದ ಸುಮಾರು 600– 800 ಮೀ ದೂರದವರೆಗೂ ಸಮುದ್ರದಲ್ಲಿ ಅಲೆಗಳ ಅಬ್ಬರ ಇರುತ್ತದೆ. ಈಗ ಪ್ರಸ್ತಾಪಿಸಿದಷ್ಟು ಉದ್ದದ ಬ್ರೇಕ್ ವಾಟರ್‌ಗೆ ಅಲೆಗಳ ಆರ್ಭಟ ತಡೆಯಲು ಸಾಕಾಗದು. ಉತ್ತರದ ಬ್ರೇಕ್ ವಾಟರ್‌ನ ಉದ್ದವನ್ನು 1081 ಮೀಟರ್‌ಗೆ ಹಾಗೂ ದಕ್ಷಿಣದ ಬ್ರೇಕ್ ವಾಟರ್ ಉದ್ದವನ್ನು 981 ಮೀಟರ್‌ಗೆ ವಿಸ್ತರಿಸಬೇಕು ಎಂಬುದು ಸ್ಥಳೀಯ ಮೀನುಗಾರರ ಬೇಡಿಕೆ. ಅದಕ್ಕೆ ತಗಲುವ ಹೆಚ್ಚುವರಿ ವೆಚ್ಚ ಭರಿಸುವ ವಿಚಾರದಲ್ಲಿ ಕಾಮಗಾರಿ ನಿಂತಿದೆ. ಈ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಸರ್ಕಾರ ಮುಂದಾಗಬೇಕು ಎಂಬುದು ಮೀನುಗಾರರ ಬೇಡಿಕೆ.
ನಾಡದೋಣಿ ಮೀನುಗಾರರ ಅನುಕೂಲಕ್ಕಾಗಿ ಕೃತಕ ಬಂಡೆ ಅಳವಡಿಸುವ ಯೋಜನೆಯನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಪರಿಚಯಿಸಿದ್ದೇವೆ. ಬೆಳಕಿನ ಮೀನುಗಾರಿಕೆ ನಿಷೇಧ ಅಕ್ಕಪಕ್ಕದ ರಾಜ್ಯಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ಮಾಡಲು ಕೇಂದ್ರ ಸರ್ಕಾರ ಪ್ರಯತ್ನಿಸಿಲ್ಲ. ರಾಜ್ಯದ ಸಮುದ್ರ ಗಡಿಯಲ್ಲಿ ಅನ್ಯ ರಾಜ್ಯದವರಿಂದ ಬೆಳಕಿನ ಮೀನುಗಾರಿಕೆ ನಡೆಯುತ್ತಿರುವ ಕಾರಣ ಸಮಸ್ಯೆ ಉಂಟಾಗಿದೆ.-ಮಂಕಾಳ ವೈದ್ಯ, ಮೀನುಗಾರಿಕೆ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.