
ಪ್ರಾತಿನಿಧಿಕ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಾದ್ಯಂತ ವಾಯು ಮಾಲಿನ್ಯ ತೀವ್ರವಾಗಿದೆ. ಜನರು ಉಸಿರಾಟದ ತೊಂದರೆ, ಆಯಾಸ, ರಕ್ತದೊತ್ತಡ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ವಿಷಕಾರಿ ಗಾಳಿ ಗರ್ಭಿಣಿಯರಿಗೆ ಹೆಚ್ಚಿನ ತೊಂದರೆಯುಂಟು ಮಾಡುತ್ತಿದೆ ಎನ್ನುತ್ತಾರೆ ತಜ್ಞ ವೈದ್ಯರು.
ವಿಷಕಾರಿ ಗಾಳಿ ಗರ್ಭಿಣಿಯರಿಗೆ ಮತ್ತು ಹೊಟ್ಟೆಯಲ್ಲಿರುವ ಶಿಶುವಿಗೆ ಅಪಾಯವನ್ನು ತಂದೊಡ್ಡಬಲ್ಲದು. ಕಳಪೆ ಗುಣಮಟ್ಟದ ಗಾಳಿಯಲ್ಲಿರುವ ಸೂಕ್ಷ್ಮ ಕಣಗಳು (PM2.5 ಮತ್ತು PM10) ರಕ್ತದ ಮೂಲಕ ಹಾದುಹೋಗಿ ಮಾಸುವಿನ ಮೇಲೆ ಪರಿಣಾಮ ಬೀರಬಹುದು. ಇದರಿಂದಾಗಿ ಮಗುವಿಗೆ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಾಸವಾಗಿ ಅವಧಿಪೂರ್ವ ಹೆರಿಗೆಯ ಅಪಾಯವನ್ನು ಹೆಚ್ಚಿಸುತ್ತದೆ.
ಹಾಗೆಂದ ಮಾತ್ರಕ್ಕೆ ದಿಢೀರನೆ ನಗರವನ್ನು ತೊರೆದು ಬೇರೆ ಸ್ಥಳಕ್ಕೆ ಪ್ರಯಾಣ ಮಾಡುವುದು ಕೂಡ ಸುರಕ್ಷಿತವಲ್ಲ. ಇದರಿಂದಾಗಿ ಗರ್ಭಿಣಿಯರಿಗೆ ಭಯದ ಅನುಭವ ಉಂಟಾಗಬಹುದು.
ಈ ಬಗ್ಗೆ ಸಲಹೆ ನೀಡಿರುವ ದೆಹಲಿಯ ಸಿಲ್ವರ್‌ಸ್ಟ್ರೀಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಸ್ವಪ್ನಿಲ್ ಅಗ್ರಹರಿ, ಗರ್ಭಿಣಿಯರು ಆತಂಕಕ್ಕೊಳಗಾಗುವುದು ಸಹಜ. ಆದರೆ, ಆತುರದಿಂದ ವರ್ತಿಸದಿರುವುದು ಮುಖ್ಯ. ವಾಯು ಮಾಲಿನ್ಯ ಹೆಚ್ಚಿರುವಾಗ ನಗರದಿಂದ ಹೊರಗೆ ಪ್ರಯಾಣಿಸುವುದು ಒತ್ತಡಕ್ಕೆ ಕಾರಣವಾಗಬಹುದು. ಜತೆಗೆ ಸೋಂಕುಗಳು ಕಾಡಬಹುದು ಎನ್ನುತ್ತಾರೆ.
ಹೀಗಾಗಿ, ಇರುವಲ್ಲಿಯೇ ರಕ್ಷಣೆ ಮಾಡಿಕೊಳ್ಳುವ ಉಪಾಯ ಹುಡುಕಿಕೊಳ್ಳಬೇಕು. ಅದಕ್ಕಾಗಿ N95 ಮಾಸ್ಕ್ ಮತ್ತು ಏರ್ ಪ್ಯೂರಿಫೈರ್ ಬಳಕೆ, ಕಿಟಕಿಗಳನ್ನು ಸೀಲ್ ಮಾಡುವುದು, ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು ಮತ್ತು ಮಾಲಿನ್ಯ ಪ್ರಮಾಣ ಹೆಚ್ಚಾಗುವ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸುವಂತಹ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು ಎನ್ನುತ್ತಾರೆ.
ದ್ವಾರಕಾದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ನಿರ್ದೇಶಕಿ ಮತ್ತು ಘಟಕದ ಮುಖ್ಯಸ್ಥೆ ಡಾ. ಯಾಶಿಕಾ ಗುಡೇಸರ್ ಮಾಹಿತಿ ನೀಡಿದ್ದು, ‘ಗರ್ಭಾವಸ್ಥೆಯಲ್ಲಿ ಕಳಪೆ ಗಾಳಿ ಸೇವನೆಯು ಆಯಾಸ, ವಾಕರಿಕೆ ಮತ್ತು ಉಸಿರಾಟದ ತೊಂದರೆಯನ್ನು ಉಂಟು ಮಾಡಬಹುದು. ಇದರ ಜತೆಗೆ ವಾಯು ಮಾಲಿನ್ಯದ ಬಗ್ಗೆ ಒತ್ತಡ ಮತ್ತು ಆತಂಕಕ್ಕೆ ಒಳಗಾಗುವುದು ಅಷ್ಟೇ ಹಾನಿಕಾರಕವಾಗಿದೆ. ಹೀಗಾಗಿ ದಿನನಿತ್ಯದ ಚಟುವಟಿಕೆಗಳಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ.
‘ಮನೆಯ ಬಳಿ ಗಾಳಿಯನ್ನು ಶುದ್ಧಗೊಳಿಸುವ ಗಿಡಗಳನ್ನು ಬೆಳೆಸುವುದು, ಪೋಷಕಾಂಶಯುತ ಆಹಾರ ಸೇವನೆ ಮತ್ತು ದ್ರವ ಪದಾರ್ಥಗಳ ಸೇವೆ ಮುಖ್ಯವಾಗಿರುತ್ತದೆ’ ಎಂದು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.