
ಇತ್ತೀಚಿನ ದಿನಗಳಲ್ಲಿ ಅನೇಕರು ಮಾನಸಿಕ ಒತ್ತಡಕ್ಕೆ ಒಳಗಾಗಿ ಸಣ್ಣ ವಿಷಯಕ್ಕೂ ಅತಿಯಾಗಿ ಕೋಪಗೊಳ್ಳುವುದು, ಅಳುವುದು, ಕಿರುಚಾಡುತ್ತಿರುತ್ತಾರೆ. ಇಂತಹ ಲಕ್ಷಣಗಳನ್ನು ‘ಉದ್ವೇಗ’ (Anxiety) ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಗಂಭೀರವಾದ ಮಾನಸಿಕ ಆರೋಗ್ಯ ಸಮಸ್ಯೆಗೆ ಕಾರಣ ಎನ್ನುತ್ತಾರೆ ವೈದ್ಯರು. ಉದ್ವೇಗಕ್ಕೆ ಕಾರಣ, ಪರಿಹಾರ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ .
ಉದ್ವೇಗಕ್ಕೆ ಕಾರಣ
ಒತ್ತಡ: ಸಂಸ್ಥೆಗಳಿಂದ, ಅಕಾಡೆಮಿಕ್, ಹಣಕಾಸು ವ್ಯವಹಾರ, ಕುಟುಂಬ– ಪ್ರೇಮ ಸಂಬಂಧದಿಂದ, ಅತಿಯಾದ ಯೋಚನೆ, ಬಾಲ್ಯದಲ್ಲಿ ನಡೆದ ದೈಹಿಕವಾಗಿ ಹಾಗೂ ಮಾನಸಿಕ ಘಟನೆಯಿಂದ ( ದೌರ್ಜನ್ಯ, ಲೈಂಗಿಕ ಕಿರುಕುಳ ಇತರೆ ಸಮಸ್ಯೆಗಳು)
ಅನುವಂಶಿಕತೆ
ಗರ್ಭಿಣಿ, ಬಾಣಂತಿ ಸಮಯದಲ್ಲಿ ಹಾರ್ಮೊನ್ ಬದಲಾವಣೆ
ಅತಿಯಾದ ಫೋನ್ ಬಳಕೆ: ಅಪರಾಧಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಆಸಕ್ತಿ ತೋರುವುದು. ರೀಲ್ಸ್, ಧಾರಾವಾಹಿಗಳ ವೀಕ್ಷಣೆ,
ಸಾಮಾಜಿಕ ಮಾಧ್ಯಮಗಳ ವ್ಯಸನ : ಉದಾಹರಣೆಗೆ, ನಾವು ಮಾಡಿದ ರೀಲ್ಸ್‌ಗಳ ಲೈಕ್ಸ್, ಕಾಮೆಂಟ್ ಬಗ್ಗೆ ಯೋಚಿಸುವುದು.
ಒಡನಾಟ ಇಲ್ಲದಿರುವುದು: ಯಾರ ಜೊತೆಯೂ ಸೇರದೆ, ಮಾತನಾಡದಿರುವುದು,
ಒಂಟಿತನ: ಯಾವಾಗಲೂ ಒಬ್ಬೊಂಟಿಯಾಗಿರುವುದು ಕೂಡ ಉದ್ವೇಗಕ್ಕೆ ಕಾರಣ ಎನ್ನುತ್ತಾರೆ ತಜ್ಞರು.
ಇದರಿಂದ ಆಗುವ ಪರಿಣಾಮಗಳು
ಕೆಲವೊಂದು ಬಾರಿ ಉಸಿರು ಕಟ್ಟಿದಂತೆ ಆಗುವುದು
ಉದ್ವೇಗಕ್ಕೆ ಒಳಗಾದ ವ್ಯಕ್ತಿ ಅತಿಯಾದ ಒತ್ತಡಕ್ಕೆ ಸಿಲುಕಿದಾಗ ಅವರ ವರ್ತನೆ ಮೇಲೆ ಅವರಿಗೆ ನಿಯಂತ್ರಣ ಇರುವುದಿಲ್ಲ. ಆ ಸಮಯದಲ್ಲಿ ಅವರು ಕಿರುಚಾಡುತ್ತಾರೆ, ಕೂಗಾಡುತ್ತಾರೆ, ಕೋಪದಲ್ಲಿ ಎದುರು ಇರುವ ವ್ಯಕ್ತಿಗೆ ಹಲ್ಲೆ ಮಾಡುವುದು, ವಸ್ತುಗಳಿಗೆ ಹಾನಿ ಮಾಡಲು ಯೋಚಿಸುತ್ತಾರೆ.
ಪರಿಹಾರ ಕ್ರಮಗಳು
ತುಂಬಾ ಒತ್ತಡ ಎನಿಸಿದಾಗ ಉಸಿರಾಟದ ವ್ಯಾಯಾಮಗಳನ್ನು ಅನುಸರಿಸಬೇಕು
4- 7- 8 ಉಸಿರಾಟದ ಕ್ರಮ
ಅಂದರೆ, 8 ಬಾರಿ ಉಸಿರು ಹೊರಗೆ ಬಿಟ್ಟು, 4 ಬಾರಿ ಉಸಿರು ಒಳಗೆ ತೆಗೆದುಕೊಳ್ಳುವುದು, 7ಬಾರಿ ಉಸಿರು ಹಿಡಿದುಕೊಳ್ಳಬೇಕು. ಪ್ರತಿ ದಿನ ಹೀಗೆ ಮಾಡುವುದರಿಂದ ಒತ್ತಡ ನಿವಾರಣೆಗೆ ಸಹಕಾರಿ.
ಮುಂದಿನ ದಿನದ ಬಗ್ಗೆ ಅತಿಯಾಗಿ ಯೋಚಿಸಬಾರದು
ನಮಗೆ ನಾವೇ ಆತ್ಮವಿಶ್ವಾಸ ತುಂಬಿಕೊಳ್ಳಬೇಕು
ಪ್ರತಿದಿನ ಜೀವನದಲ್ಲಿ ಸಕಾರಾತ್ಮಕ ಯೋಜನೆಗಳನ್ನು ರೂಢಿಸಿಕೊಳ್ಳಬೇಕು.
ಏನೇ ಸಮಸ್ಯೆ ಇದ್ದರೂ ಮನಸ್ಸಲೇ ಕೊರಗುವುದಕ್ಕಿಂತ ಸೂಕ್ತ ವ್ಯಕ್ತಿ ಬಳಿ ಹೇಳಿಕೊಳ್ಳಬೇಕು.
ತುಂಬಾ ಒತ್ತಡ ಎನಿಸಿದಾಗ ಇಷ್ಟವಾದ ಹಾಡುಗಳನ್ನು ಕೇಳಬೇಕು.
ನಮ್ಮ ಬಗ್ಗೆ ನಕಾರಾತ್ಮಕವಾಗಿ ಯೋಚಿಸಬಾರದು ನನ್ನಿಂದ ಎಲ್ಲವೂ ಸಾಧ್ಯ ಎಂಬ ಯೋಚನೆಯನ್ನು ರೂಡಿಸಿಕೊಳ್ಳಬೆಕು.
ಅರೋಮಾ ಥೆರಪಿ: ನೀಲಗಿರಿ, ಜೆರೇನಿಯಂ, ಲವೆಂಡರ್, ಗಂಧ, ಗುಲಾಬಿ ಸೇರಿದಂತೆ ಸುಗಂಧ ಭರಿತ ವಸ್ತುಗಳ ಮಿಶ್ರಣದ ಸುವಾಸನೆಯನ್ನು ತೆಗೆದುಕೊಳ್ಳುವುದು. ಮನೆಯಲ್ಲಿ ಪ್ರತಿದಿನ ಗಂಧ, ಸಾಂಬ್ರಾಣಿ, ಧೂಪ, ದೀಪ ಹಚ್ಚುವುದರಿಂದ ಒತ್ತಡ ಕಡಿಮೆಯಾಗಿ ಮನಶಾಂತಿಗೆ ಸಹಕರಿಸುತ್ತದೆ.
ಸಾತ್ವಿಕ ಆಹಾರ ಸೇವನೆ
ಶುಚಿಯಾದ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಹಾಲಿನ ಉತ್ಪನ್ನಗಳು, ಜೇನುತುಪ್ಪ, ಬೆಲ್ಲ, ಮತ್ತು ತುಳಸಿಯನ್ನು ಸೇವಿಸುವುದರಿಂದ ಮಾನಸಿಕ ಒತ್ತಡವನ್ನು ನಿವಾರಿಸಲು ಸಹಕರಿಸುತ್ತದೆ.
ಪ್ರತಿಯೊಂದು ವಿಷಯದಲ್ಲೂ ಅಸಮಾಧಾನಗೊಳ್ಳುವುದು ಕೂಡ ಒತ್ತಡಕ್ಕೆ ಕಾರಣ, ಅದರ ಬದಲಾಗಿ ಇರುವುದರಲ್ಲೇ ತೃಪ್ತಿ ಪಡುವುದರಿಂದ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.
ಬರವಣಿಗೆಗೂ ನಮ್ಮ ಮನಸ್ಸಿಗೂ ಸಂಬಂಧವಿರುವುದರಿಂದ ಡೈರಿ ಬರೆಯುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು. ಅದರಲ್ಲೂ ಮುಖ್ಯವಾಗಿ ಆ ದಿನ ನಡೆದ ಸಕಾರಾತ್ಮಕ ವಿಷಯಗಳನ್ನು ಹೆಚ್ಚೆಚ್ಚು ಬರೆಯಬೇಕು.
ಯಾವುದರ ಮೇಲೂ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳಬಾರದು. ನಿರೀಕ್ಷೆಯೂ ಕೂಡ ಮಾನಸಿಕ ಒತ್ತಡಕ್ಕೆ ಕಾರಣವಾಗಿದೆ.
ಉದ್ವೇಗಕ್ಕೆ ಒಳಗಾಗದ ವ್ಯಕ್ತಿಯನ್ನು ಸಮಾಧಾನ ಪಡಿಸುವುದು ಹೇಗೆ..?
ಉದ್ವೇಗಕ್ಕೆ ಒಳಗಾಗದ ವ್ಯಕ್ತಿ ವಿಚಿತ್ರವಾಗಿ ವರ್ತಿಸುತ್ತಿರುತ್ತಾರೆ. ಆ ಸಮಯದಲ್ಲಿ ಅವರಿಗೆ ಸರಿ ತಪ್ಪುಗಳ ಬಗ್ಗೆ ಆ ಕ್ಷಣಕ್ಕೆ ಹೇಳಬಾರದು. ಸ್ವಲ್ಪ ಹೊತ್ತು ಅವರನ್ನು ಅವರ ಪಾಡಿಗೆ ಬಿಡಬೇಕು. ಅವರು ಸಮಾಧಾನ ಆದ ಬಳಿಕ ನಿಧಾನವಾಗಿ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಬೇಕು. ಈ ನಿಮಯಗಳನ್ನು ಪಾಲಿಸುವುದರಿಂದ ಉದ್ವೇಗಕ್ಕೆ ಒಳಗಾವುದನ್ನು ನಿಯಂತ್ರಿಸಬಹುದು ಎನ್ನುತ್ತಾರೆ ವೈದ್ಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.