ADVERTISEMENT

ಥೈರಾಯ್ಡ್‌, ಉಸಿರಾಟ ಸಮಸ್ಯೆ ನಿವಾರಕ ಮತ್ಸ್ಯಾಸನ

ಜಿ.ಎನ್.ಶಿವಕುಮಾರ
Published 19 ಜೂನ್ 2019, 16:39 IST
Last Updated 19 ಜೂನ್ 2019, 16:39 IST
ಮತ್ಯಾಸನ
ಮತ್ಯಾಸನ   

ಗುರು: ಕೆರೆಯ ನೀರಿನಲ್ಲಿ ಮೂರ್ನಾಲ್ಕು ಜನರಿದ್ದಾರೆ. ಅವರು ಏನು ಮಾಡುತ್ತಿದ್ದಾ ರೆಂಬುದು ನಿಮಗೆ ಕಾಣುತ್ತಿದೆಯೇ?

ಶಿಷ್ಯ: ಈಜಾಡುವಂತೆ ಕಾಣುತ್ತಿದೆ.

ಗುರು: ಇಲ್ಲ, ಈಜಾಡುತ್ತಿಲ್ಲ. ಅವರು ಜಾಲಗಾರರು, ಕೆರೆಯಲ್ಲಿ ಮೀನು ಹಿಡಿಯುತ್ತಿದ್ದಾರೆ.

ADVERTISEMENT

ಶಿಷ್ಯ: ಅವರು ಬೀಸಿದ ಬಲೆ, ಗಾಳಕ್ಕೆ ದೊಡ್ಡ ದೊಡ್ಡ ಮೀನು ಗಳು ಸಿಕ್ಕರೆ ಅವರ ಮನೆಯಲ್ಲಿ ಇವತ್ತು ಹಬ್ಬದೂಟ ಅನ್ನಿ...

ಗುರು: ಬರೀ ಮೀನು ತಿಂದು ಜೀವಿಸಕಾಗಲ್ಲ. ಇತರ ವಸ್ತು ಖರೀದಿಗೆ ಹಣ ಬೇಕಲ್ಲವೇ? ಅದಕ್ಕೆ ಅವುಗಳನ್ನು ಮಾರಾಟ ಮಾಡಿ ಒಂದಷ್ಟು ಹಣವನ್ನೂ ಗಳಿಸುತ್ತಾರೆ. ಅಂದಹಾಗೆ, ಮೀನಿಗೆ ಮತ್ಸ್ಯ ಎಂಬ ಇನ್ನೊಂದು ಹೆಸರಿದ್ದು, ಈ ಹೆಸರಿನ ಮತ್ಸ್ಯಾಸನವೂ ರೂಢಿಯಲ್ಲಿದೆ. ವಿಷ್ಣುವಿನ ದಶಾವತಾರಗಳಲ್ಲಿ ಮೊದಲನೆಯದು ಎಂದು ಹೇಳುವ ಮತ್ಸ್ಯಾವತಾರಕ್ಕೆ ಈ ಆಸನ ಮೀಸಲಾಗಿದೆ.

ಅಭ್ಯಾಸಕ್ರಮ: ಕಾಲುಗಳನ್ನು ನೀಳವಾಗಿ ಚಾಚಿ ಕುಳಿತು ಪದ್ಮಾಸನ ಹಾಕಿ. ಕೈಗಳ ಸಹಾಯದಿಂದ ಬೆನ್ನನ್ನು ನೆಲಕ್ಕೊರಗಿಸಿ. ಬಳಿಕ ಎರಡೂ ಅಂಗೈಗಳನ್ನು ತಲೆಯ ಪಕ್ಕ ಬೆರಳುಗಳು ಬೆನ್ನಿನ ಭಾಗಕ್ಕೆ ಮುಖಮಾಡಿರುವಂತೆ ಇರಿಸಿ. ಬೆನ್ನನ್ನು ಮೇಲಕ್ಕೆತ್ತುತ್ತಾ ಎದೆಯನ್ನು ಹಿಗ್ಗಿಸಿ. ಕೈಗಳ ಮೇಲೆ ಭಾರ ಹಾಕಿ ತಲೆಯನ್ನು ನೆಲದಿಂದ ಬಿಡಿಸಿ ನಡು ನೆತ್ತಿಯನ್ನು ನೆಲಕ್ಕೂರಿ. ಬಳಿಕ ಕೈಗಳನ್ನು ತಲೆಯ ಮೇಲೆ ನೀಳವಾಗಿ ಚಾಚಿ ನೇರವಾಗಿಸಿ ತಂದು ಎರಡೂ ಕಾಲಿನ ಹೆಬ್ಬೆರಳನ್ನು ಹಿಡಿದುಕೊಳ್ಳಿ. ಎದೆಯನ್ನು ಮತ್ತಷ್ಟು ಹಿಗ್ಗಿಸುತ್ತಾ ಕೈಗಳ ಹಿಡಿತವನ್ನು ಬಿಗಿಗೊಳಿಸಿ ಮೊಳಕೈಗಳನ್ನು ನೆಲಕ್ಕೆ ತಾಗಿಸಿ. ಉಸಿರಾಟ ವೇಗದಿಂದ ಕೂಡಿರುತ್ತದೆ. ಅಂತಿಮ ಸ್ಥಿತಿಯಲ್ಲಿ 15ರಿಂದ 20 ಸೆಕೆಂಡು ನೆಲೆಸಿ, ವಿರಮಿಸಿ. ಅವರೋಹಣ ಮಾಡುವಾಗ ಕೈಗಳ ಸಹಾಯದಿಂದ ಮೊದಲು ತಲೆಯನ್ನು ಬಿಡಿಸಿ ನಿಧಾನವಾಗಿ ಭುಜ ಮತ್ತು ತಲೆಯನ್ನು ನೆಲಕ್ಕೊರಗಿಸಿ. ಬಳಿಕ ಪುನರಾವರ್ತನೆ ಅಭ್ಯಾಸ ನಡೆಸಬಹುದು. ಕನಿಷ್ಠ 30 ಸೆಕೆಂಡು ವಿಶ್ರಾಂತಿ ಪಡೆದ ಬಳಿಕ ಮೇಲೆದ್ದು ಕಾಲುಗಳನ್ನು ಬಿಸಿಡಿ ಚಾಚಿಡಿ.

ಸೂಚನೆ: ಅಭ್ಯಾಸ ವೇಳೆ ಉಸಿರನ್ನು ಬಿಗಿ ಹಿಡಿಯಬೇಡಿ. ಸರಾಗವಾದ ಉಸಿರಾಟ ನಡೆಯುತ್ತಿರಲಿ. ಅಂತಿಮ ಸ್ಥಿತಿಯಲ್ಲಿ ಕತ್ತನ್ನು ಅತ್ತಿತ್ತ ಹೊರಳಿಸಬಾರದು. ಕತ್ತು ಸೂಕ್ಷ್ಮವಾದ್ದರಿಂದ ತೊಂದರೆ ತಂದುಕೊಳ್ಳಬೇಡಿ.

ಫಲ: ಎದೆಯು ವಿಶಾಲವಾಗುವುದು. ಬೆನ್ನಿನ ಭಾಗ ಹಿಗ್ಗುವುದು. ಕುತ್ತಿಗೆಯು ಹಿಗ್ಗುವುದರಿಂದ ಗೋಮಾಳ ಭಾಗದ ಥೈರಾಯಿಡ್ ಉತ್ತಮ ಪ್ರಯೋಜನ ಹೊಂದುತ್ತದೆ. ತುಂಬಿದ ಉಸಿರಾಟ ನಡೆಯುತ್ತದೆ. ವಸ್ತಿಕುಹರ ಭಾಗದ ಕೀಲುಗಳು ಸ್ಥಿತಿಸ್ಥಾಪಕತ್ವ ಹೊಂದುತ್ತವೆ. ಭುಜ ತೋಳುಗಳಿಗೆ ಉತ್ತಮ ವ್ಯಾಯಾಮ ಲಭ್ಯವಾಗುತ್ತದೆ.

* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.