
ದಿನನಿತ್ಯ ನಡೆಯುವ ಒಂದು ಪುಟ್ಟ ಸಂಸ್ಕಾರ ಊಟ. ನನ್ನ ಪ್ರಕಾರ ಊಟ ಎಂದರೆ ಅದು ಮಧ್ಯಾಹ್ನದ್ದೇ. ನಾವು ವೆಲ್‌ನೆಸ್ ಕ್ಷೇತ್ರದವರಿಗೆ ಲಂಚ್ (lunch) ಮತ್ತು ಡಿನ್ನರ್ (dinner) ಎಲ್ಲವೂ ಒಂದೇ. ರಾತ್ರಿಯದ್ದು ಸಪ್ಪರ್ (supper) ಅಂದರೆ ಫಲಾಹಾರ ಮಾತ್ರ.
ನಿಜವಾಗಿ ಆಹಾರ ವಿಜ್ಞಾನದ ಪ್ರಕಾರ ಈ ಲಂಚ್ ಮತ್ತು ಡಿನ್ನರ್‌ಗಳ ಪ್ರತ್ಯೇಕತೆಯೇ ಇಲ್ಲ. ಅಂದರೆ ಮಧ್ಯಹ್ನದ ಊಟ ಮತ್ತು ರಾತ್ರಿಯ ಊಟ ಎಂಬುದು ಇಲ್ಲವೇ ಇಲ್ಲ. ಇರುವುದೊಂದೇ ’ಭೋಜನ’. ಅಂದರೆ ದಿಕ್ಕೊಂದು ಮುಖ್ಯ ಊಟದ ಕ್ರಮ. ನೀವು ಬೇಕಿದ್ದರೆ ಗೂಗಲ್‌ನಲ್ಲಾಗಲೀ, ನಿಘಂಟಿನಲ್ಲಾಗಲೀ ‘ಡಿನ್ನರ್‘ ಎಂಬ ಇಂಗ್ಲಿಷ್ ಪದವನ್ನು ಹಾಕಿ ನೋಡಿ, ಅಲ್ಲಿರುವುದು ‘The main meal of the day’ ಎಂದೇ ಬರುತ್ತದೆ. ಇನ್ನು ‘ಲಂಚ್’ ಎನ್ನುವುದಕ್ಕೆ ‘a midday meal, typically eaten between 12 pm and 2 pm, designed to replenish energy‘ ಎಂಬ ವ್ಯಾಖ್ಯಾನ ಇದೆ. ಅಂದರೆ ಎರಡೂ ಒಂದೇ! ಕಾಲ ಕ್ರಮೇಣ ನಮ್ಮ ತಿನ್ನಬಾಕತನ ಹೆಚ್ಚಾಗಿ, ಮಧ್ಯಹ್ನಾವೂ ರಾತ್ರಿಯೂ ಹೊಟ್ಟೆ ಬಿರಿಯುವಂತೆ ತಿನ್ನುವ ಅಭ್ಯಾಸ ಹೆಚ್ಚಿದಂತೆಲ್ಲ, ಡಿನ್ನರ್–ಲಂಚ್‌ಗಳು ತಮ್ಮ ವ್ಯಾಖ್ಯಾನವನ್ನು ಬದಲಿಸಿಕೊಂಡವು. ಬ್ರೇಕ್ ಫಾಸ್ಟ್ ಹೆಸರಿಗಷ್ಟೇ ಉಳಿಯಿತು; ಇಲ್ಲವೇ ಬಹುತೇಕರ ದಿನದಲ್ಲಿ ಮಾಯವಾಯಿತು.
ಹಾಗೆ ನೋಡಿದರೆ, ಯಾವಾಗ ನಮ್ಮಲ್ಲಿ ಕೃಷಿ ಸಂಸ್ಕೃತಿಯ ಮೇಲೆ ವ್ಯಾಪಾರಿ ಸಂಸ್ಕೃತಿಯ ಸವಾರಿ ಆರತಂಭವಾಯಿತೋ, ಆಗಿಂದ ಈ ಲಂಚ್ ಮತ್ತು ಡಿನ್ನರ್‌ಗಳ ಪ್ರತ್ಯೇಕತೆ ಆರಂಭವಾಗಿರಬೇಕು. ಮೊದಲೆಲ್ಲ ರೈತ ಹಗಲಿನಲ್ಲಿ ಚೆನ್ನಾಗಿ ದುಡಿಯುವವ. ಆತನಿಗೆ ಶ್ರಮದಾಯಕ ಕೆಲಸಕ್ಕೆ ಹೊಟ್ಟೆ ಗಟ್ಟಿ ಇರಬೇಕಿತ್ತು. ಬೆಳಗ್ಗೆಯಿಂದ ರಟ್ಟೆ ಮುರಿದು ದುಡಿದ ಬಳಿಕ, ಎನರ್ಜಿಯ ಮರುಪೂರಣಕ್ಕೆ ಮಧ್ಯಹ್ನ ಹೊಟ್ಟೆ ತುಂಬ ಊಟ ಬೇಕಿತ್ತು. ಹಾಗೆ ಉಂಡ ಬಳಿಕ, ದೇಹಾಯಾಸವೂ ಸೇರಿ ಸಣ್ಣದೊಂದು ನಿದ್ದೆಗೆ ಜಾರುತ್ತಿದ್ದ (ಇಪ್ಪತ್ತು ನಿಮಿಷಕ್ಕಿಂತ ಕಡಿಮೆಯ ಕಿರುನಿದ್ದೆ ಎಲ್ಲರಿಗೂ ಒಳ್ಳೆಯದು, ಅದು ಪವರ್‌ನ್ಯಾಪ್. ಇದನ್ನು ಮೀರಿದ ಹಗಲಿನ ನಿದ್ದೆ ಅಪಾಯ. ಈ ಬಗ್ಗೆ ಮುಂದೆ ಬೇರೆಯದೇ ಲೇಖನದಲ್ಲಿ ಹೇಳುವೆ) ನಡು ಮಧ್ಯಹ್ನದ ಸುಡು ಬಿಸಿಲಿನಿಂದ ಪಾರಾಗಲೂ ಇದು ಮಾರ್ಗ. ಮತ್ತೆ ಎದ್ದು ಹೊತ್ತು ಮುಳುಗುವತನಕ ದುಡಿಯುತ್ತಿದ್ದ. ಕೊನೆಗೆ ಸೂರ್ಯ ಮುಳುಗುತ್ತಿದ್ದಂತೆ ಮತ್ತೆ ಸ್ನಾನ ಮುಗಿಸಿ, ಹಗುರಾಗಿ, ಅಷ್ಟೇ ಹುಗುರವಾದ ಆಹಾರ ಸೇವಿಸಿ ಪರಿಪೂರ್ಣ ನಿದ್ದೆ ಮಾಡುತ್ತಿದ್ದ. ಆದರೆ, ಎಲ್ಲಿ ಆಡಳಿತಶಾಹಿ, ಬಂಡವಾಳಶಾಹಿ ಸಂಸ್ಕೃತಿ ಬಂತೋ, ಆಗ ಸನ್ನಿವೇಶ ಬದಲಾಯಿತು. ವ್ಯಾಪಾರ–ವ್ಯವಹಾರದ ಮಾತುಕತೆಗಳು ಕುದುರುವುದೇ ರಾತ್ರಿಯ ಊಟದ ಮೇಜಿನಲ್ಲಿ ಎಂಬಂತಾಯಿತು. ಹೀಗಾಗಿ ರಾತ್ರಿಯ ಊಟದಲ್ಲಿ ಎದುರಿನವರನ್ನು ಇಂಪ್ರೆಸ್ ಮಾಡಲೋ, ಬೇರೆ ಯಾವ್ಯಾವುದೋ ಕಾರಣಕ್ಕೋ ಮೆನುಗಳು ಬದಲಾದವು. ಹೆಚ್ಚು ಹೆಚ್ಚು ವೈವಿಧ್ಯದ ಆಹಾರ ಅದರಲ್ಲಿ ಅಡಕಗೊಳ್ಳತೊಡಗಿದವು. ಅದರೊಂದಿಗೆ ಸಮಯವನ್ನು ಲಂಬಿಸಲು ‘ಲಘು–ಬಿಗು’ ಪಾನೀಯಗಳೂ ಮೇಜಿಗೆ ಬಂದು ಕೂತವು. ಹೀಗಾಗಿ ‘ರಾತ್ರಿ ಡಿನ್ನರ್ ಮೀಟಿಂಗ್’ ಎಂಬ ಪದ ಹುಟ್ಟಿಕೊಂಡಿತು.
ಇದರ ಪರಿಣಾಮ ನಮ್ಮ ದಿನಚರಿಯೇ ಬದಲಾಯಿತು. ರಾತ್ರಿ ವ್ಯವಹಾರ ಮಾತುಕತೆ ಸುದೀರ್ಘವಾದಂತೆಲ್ಲ, ಹೊಟ್ಟೆ ಸೇರುವ ದ್ರವ–ಘನ ಆಹಾರಗಳ ಪ್ರಮಾಣವೂ ಜಾಸ್ತಿ ಆಗುತ್ತ ಹೋಯಿತು. ಇದರಿಂದಾಗಿ ಹೊಟ್ಟೆಯ ಭಾರ ಮತ್ತು ಸಮಯದ ವಿಳಂಬ –ಈ ಎರಡೂ ಕಾರಣಕ್ಕೆ ಬೆಳಗ್ಗೆ ನಸುಕಿನಲ್ಲಿ ಏಳುವುದಕ್ಕೆ ಆಗಲಿಲ್ಲ. ಸೂರ್ಯನಿಗಿಂತ ಮೊದಲು ಎದ್ದು, ಆತನ ಬೆಳಕಿಗಾಗಿ ಕಾಯುತ್ತಿದ್ದವರು, ಆತನ ಕಿರಣಗಳು ಪ್ರಖರಗೊಂಡ ಬಳಿಕ ಎದ್ದು, ಬೆಳಕಿಗೇ ಬಯ್ಯುವ ಸ್ಥಿತಿಗೆ ತಲುಪಿದೆವು. ಏಳುವಾಗಲೇ ಅರ್ಧ ದಿನ ಕಳೆಯುವ ಸಮಯವಾಗುತ್ತಿದ್ದುರಿಂದ ಬ್ರೇಕ್‌ಫಾಸ್ಟ್ ಎಂಬುದು ದಿನದಲ್ಲಿ ಗೊತ್ತಿಲ್ಲದಂತೇ ಬ್ರೇಕ್ ಆಗಿಬಿಟ್ಟಿತ್ತು. ಹಿಂದಿನ ದಿನದ ಹೊಟ್ಟೆಯ ಭಾರ ಸರಿಯಾಗಿ ಜೀರ್ಣ ಆಗದ್ದಕ್ಕೆ (ಪೂರ್ಣ ನಿದ್ದೆಯಿಲ್ಲದೇ ಆಹಾರ ಜೀರ್ಣವಾಗದು), ನಿದ್ದೆಯಿಲ್ಲದ ಆಲಸ್ಯವೂ ಸೇರಿ ದೈನಂದಿನ ಕೆಲಸಕ್ಕೆ ಲವಲವಿಕೆ ಇಲ್ಲದೇ ಹೋಯಿತು. ಇದರೊಂದಿಗೆ ಮಧ್ಯಾಹ್ನವೂ ಪೂರ್ಣ ಊಟ ಮಾಡಿದರೆ ಮತ್ತೆ ನಿದ್ದೆಗೆ ಜಾರುವ ಎಲ್ಲ ಅಪಾಯಗಳು ಕಂಡಿದ್ದರಿಂದ, ಮತ್ತು ಅದು ದೈಹಿಕ ಸಹಜವೂ ಆಗಿದ್ದರಿಂದ ನಿಸರ್ಗದ ವಿರುದ್ಧ ಯುದ್ಧಕ್ಕಿಳಿದ ನಾವು ‘ವರ್ಕಿಂಗ್ ಲಂಚ್‘ ಎಂಬ ಕಿರು ಊಟವನ್ನು ಜಾರಿಗೆ ತಂದೆವು.
ಇಲ್ಲದ ಲವಲವಿಕೆಯನ್ನು ಬಲವಂತವಾಗಿ ತುಂಬಿಕೊಳ್ಳಲು ಆಗಾಗ ಕಾಫಿ– ಟೀ ಯಂಥವನ್ನು ಹೊಟ್ಟೆಗೆ ಸುರಿದು ಕೊಂಡು ಚಟುವಟಿಕೆಯಿಂದಿರುವ ಭ್ರಮೆಗೆ ಈಡಾದೆವು. ಈ ನಡುವೆ ಮಧ್ಯಹ್ನದ ಊಟ ಭರ್ತಿಯಾಗದೇ, ರಾತ್ರಿಯದ್ದು ಖಾಲಿಯಾಗಿ ಇಡೀ ದೇಹದ ಮೆಟಬಾಲಿಸಂ ಏರುಪೇರಾಗಿ ಸಂಜೆಯ ಹೊತ್ತಿಗೆ ಏನಾದರೂ ತಿನ್ನಬೇಕೆನಿಸತೊಡಗಿತ್ತು. ಇದು ‘ಈವನಿಂಗ್ ಸ್ನ್ಯಾಕ್ಸ್‘ ಎಂಬುದನ್ನು ಹುಟ್ಟು ಹಾಕಿತ್ತು. ಮತ್ತೆ ರಾತ್ರಿಯ ವ್ಯವಹಾರ–ಡಿನ್ನರ್, ಅರ್ಧ ರಾತ್ರಿ ಕಳೆದ ನಂತರ ನಿದ್ರೆ, ಬೆಳಗ್ಗೆ ಏಳಲಾಗದೇ ಸ್ಕಿಪ್ ಆದ ಬ್ರೇಕ್‌ಫಾಸ್ಟ್, ಆ ಜಾಗಕ್ಕೆ ಬ್ರೇಕ್‌ಪಾಸ್ಟ್–ಲಂಚ್ ಎರಡೂ ಸೇರಿ ’ಬ್ರೆಂಚ್’ ಬಂದು ಕೂತಿತು... ಹೀಗೆ ಒಟ್ಟಾರೆ ನಮ್ಮ ದಿನಚರಿಯನ್ನೇ ಬದಲಿಸಿಬಿಟ್ಟಿತ್ತು ನಮ್ಮ‘ವ್ಯವಹಾರ’ , ಸೋಕಾಲ್ಡ್ ಶ್ರೀಮಂತರ ಈ ಅನಿವಾರ್ಯ ಸಂಕಟವನ್ನೇ ದೊಡ್ಡಸ್ಥಿಕೆ, ಆಧುನಿಕತೆ, ಫ್ಯಾಷನ್ ಎಂದುಕೊಂಡು ನಾವೆಲ್ಲರೂ ಅದನ್ನೇ ಕುರುಡರಾಗಿ, ಕಣ್ಮುಚ್ಚಿ ಅನುಸರಿಸಿದ್ದೇ ನಾವಿಂದು ದೇಹವನ್ನು ಇಂಥ ಸ್ಥಿತಿಗೆ ತಂದು ನಿಲ್ಲಿಸಿಕೊಂಡಿರುವುದಕ್ಕೆ ಕಾರಣ.
ಒಂದು ಗುಟ್ಟನ್ನು ಹೇಳುತ್ತೇನೆ ಕೇಳಿ, ಸೂರ್ಯನ ಚಲನೆಗೂ, ನಮ್ಮ ಆಹಾರ ಪದ್ಧತಿಗೂ, ಜೀರ್ಣಾಂಗ ಪ್ರಕ್ರಿಯೆಗೂ ನೇರವಾದ ಸಂಬಂಧ ಇದೆ. ನಾವು ಯಾವ್ಯಾವಾಗಲೋ, ಹೇಗೆಹೇಗೋ ತಿಂದಿದ್ದರ ಪರಿಣಾಮವೇ ನಮ್ಮ ದೇಹದ ತೂಕ ಹೆಚ್ಚಾಗಿದ್ದುದು. ಸೂರ್ಯ ಮೂಡಲಾರಂಭಿಸುವಾಗ ನಮ್ಮ ಜೀರ್ಣಾಂಗಗಳು ತಮ್ಮ ಕೆಲಸವನ್ನು ನಿಧಾನಕ್ಕೆ ಆರಂಭಿಸುತ್ತವೆ. ಸೂರ್ಯನ ಪ್ರಖರತೆ ಜಾಸ್ತಿ ಆದಂತೆಲ್ಲ ಮೆಟಾಬಾಲಿಸಂ ಸಹ ವೇಗಗೊಳ್ಳುತ್ತದೆ. ಸೂರ್ಯ ನಡು ನೆತ್ತಿಯಲ್ಲಿರುವಾಗ ನಮ್ಮ ಜಠರದಲ್ಲಿನ ಕಾರ್ಖಾನೆ ಸಹ ಭರದಿಂದ ಕೆಲಸ ಮಾಡುತ್ತಿರುತ್ತದೆ. ಮತ್ತೆ ಸೂರ್ಯ ಇಳಿಮುಖವಾಗಲಾರಂಭಿಸಿದಾಗ ನಮ್ಮ ಮೆಟಬಾಲಿಸಂನ ವೇಗವೂ ಕಡಿಮೆ ಆಗ ತೊಡಗುತ್ತದೆ. ಹೀಗಾಗಿ ದಿನದ ಹೆಚ್ಚಿನ ಕ್ಯಾಲೋರಿಯನ್ನು ನಾವು ಸೂರ್ಯ ನಡುನೆತ್ತಿಯಲ್ಲಿದ್ದಾಗ ಅಂದರೆ, ಮಧ್ಯಹ್ನವೇ ತೆಗೆದುಕೊಳ್ಳಬೇಕು. ಬೆಳಗ್ಗೆ ಮತ್ತು ರಾತ್ರಿ ಲಘು ಆಹಾರವನ್ನು ಅಂದರೆ ಕಡಿಮೆ ಕ್ಯಾಲೋರಿಯನ್ನು ಸೇವಿಸಬೇಕು.
ಈಗಾಗಲೇ ಹಿಂದಿನ ಲೇಖನಗಳಲ್ಲಿ ನಾನು ನಿಮಗೆ ಹೇಳಿದ್ದೆ. ಒಟ್ಟಾರೆ ನಮ್ಮ ದೇಹಕ್ಕೆ ಅಗತ್ಯವಾಗಿ ಒಂದು ದಿನಕ್ಕೆ ಬೇಕಾದುದು ಕೇವಲ 1500 ಕ್ಯಾಲೋರಿಗಳಷ್ಟೇ. ಅದಕ್ಕಿಂತ ಹೆಚ್ಚು ಏನನ್ನೂ ಸೇವಿಸಿದರೂ ಒಂದೋ ಅದನ್ನು ಕರಗಿಸಲು ಸೂಕ್ತ ಶ್ರಮ ಅಥವಾ ಕಸರತ್ತು ನಡೆಸಲೇಬೇಕು. ಇಲ್ಲವೇ ಅವೆಲ್ಲವೂ ಕೊಬ್ಬಾಗಿ ನಮ್ಮ ದೇಹದಲ್ಲಿ ಶೇಖರಣೆಗೊಂಡು ನಾವು ತೂಕ ಹೆಚ್ಚಳದ ಸಮಸ್ಯೆ ಎದುರಿಸಬೇಕು. ಈ ಹಿನ್ನೆಲೆಯಲ್ಲಿ 1500 ಕ್ಯಾಲೋರಿಗಳನ್ನು ಸೂರ್ಯನ ಚಲನೆ ಆಧರಿಸಿ ಮೂರು ವಿಭಾಗಗಳನ್ನಾಗಿ ವಿಂಗಡಿಸಿಕೊಂಡು ನಮ್ಮ ದಿನದ ಆಹಾರದ ಕ್ಯಾಲೋರಿಯ ಅನುಪಾತವನ್ನು 250:1000:250 ರಂತೆ ವಿಭಜಿಸಿಕೊಳ್ಳಬೇಕು. ಅದಕ್ಕೇ ಹೇಳಿದ್ದು, ನಾವು ಊಟ ಎಂಬುದನ್ನು ಮಾಡಬೇಕಾದದ್ದು ಮಧ್ಯಾಹ್ನ ಮಾತ್ರವೇ. ಬೆಳಗ್ಗೆ ಮತ್ತು ರಾತ್ರಿ ಲಘು ಆಹಾರ. ಸೂರ್ಯ ಮುಳಗಿದ ನಂತರವಾಗಲೀ, ನಡು–ನಡುವೆಯಾಗಲೀ ಏನನ್ನೂ ಸೇವಿಸಬಾರದು. ಹಾಗೂ ಒಂದೊಮ್ಮೆ ಸೇವಿಸಲೇಬೇಕಾದ ಅನಿವಾರ್ಯ ಸೃಷ್ಟಿಯಾದರೆ 20 ಕ್ಯಾಲೋರಿಗಿಂತ ಕಡಿಮೆ ಇರುವುದನ್ನು ಮಾತ್ರವೇ ಸೇವಿಸಬೇಕು. ಏಕೆಂದರೆ 20 ಕ್ಯಾಲೋರಿಯ ಮೇಲಿನ ಆಹಾರಗಳಷ್ಟೇ ಮೆಟಬಾಲಿಸಂನ ನಮ್ಮೊಳಗಿನ ಯಂತ್ರವನ್ನು ಆನ್ ಮಾಡಬಲ್ಲವು. ಅದನ್ನು ಮೀರಿ ಸೇವಿಸಿದ್ದು ನೇರವಾಗಿ ಕೊಬ್ಬಾಗಿ ಪರಿವರ್ತನೆಯಾಗಿ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಇದನ್ನು ನಾವು ಕಡ್ಡಾಯವಾಗಿ ಪಾಲಿಸಿದರೆ ತನ್ನಿಂದ ತಾನೇ ಸಮತೂಕ ಕಾಯ್ದುಕೊಳ್ಳಲು ಸಾಧ್ಯ. ದೇಹ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು, ಬೊಜ್ಜನ್ನು ಕರಗಿಸಬೇಕೆಂದು ಬಯಸುವವರು, ಮೊದಲು ಇದನ್ನು ಪಾಲಿಸಲಾರಂಭಿಸಿ, ವ್ಯತ್ಯಾಸ ನೋಡಿ.
ಮುಂದಿನ ಲೇಖನದಲ್ಲಿ ನಮ್ಮ ಊಟದ ತಟ್ಟೆ ಹೇಗಿರಬೇಕು, ಏನೇನು, ಎಷ್ಟೆಷ್ಟು ಇರಬೇಕು ಎಂಬುದನ್ನು ಹೇಳುವೆ. ಅಲ್ಲಿವರೆಗೆ 250:1000:250 ಆಹಾರದ ಅನುಪಾತ ಪ್ರಾಕ್ಟೀಸ್ ಮಾಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.