
ಚಿತ್ರ: ಎಐ
2025ರ ಮುಕ್ತಾಯಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷದ ಸಂಭ್ರಮಾಚರಣೆಗೆ ಪ್ರವಾಸ ಹೋಗುವವರಿಗೆ Booking.com 2026ರ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ ಸಾಹಸಮಯ, ವಿವಿಧ ಸಂಸ್ಕೃತಿ, ಪರಂಪರೆಯ ತಾಣಗಳಿವೆ. 2026ರ ಪ್ರಮುಖ ಪ್ರವಾಸಿ ಸ್ಥಳಗಳು ಯಾವುವು ಎಂಬುದನ್ನು ಡೆಕ್ಕಾನ್ ಹೆರಾಲ್ಡ್ ವರದಿ ಮಾಡಿದೆ. ಆ ಸ್ಥಳಗಳು ಯಾವುವು ಎಂಬ ಪಟ್ಟಿ ಇಲ್ಲಿದೆ.
ಮುಯಿ ನೆ:
‘ವಿಯೆಟ್ನಾಂ’ನ ಆಗ್ನೇಯ ಕರಾವಳಿಯಲ್ಲಿರುವ ಮುಯಿ ನೆ, ವಿಭಿನ್ನ ಸಂಸ್ಕೃತಿ, ಸಾಹಸ ಮತ್ತು ಸುಂದರವಾದ ನೈಸರ್ಗಿಕ ಸೌಂದರ್ಯವಿರುವ ಕಡಲ ಕಿನರೆಯಾಗಿದೆ. ಇಲ್ಲಿನ ಬೀಚ್‌ನಲ್ಲಿ ದಿನವೀಡಿ ಕಾಲ ಕಳೆಯಬಹುದು. ಒಂದು ಕಾಲದಲ್ಲಿ ಮೀನುಗಾರರ ಹಳ್ಳಿಯಾಗಿದ್ದ ‘ಮುಯಿ ನೆ’ ಇಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಮರಳಿನ ದಿಬ್ಬದ ಮೇಲೆ ಕುಳಿತು ತಂಪಾದ ಗಾಳಿಯಲ್ಲಿ ಗಾಳಿಪಟ ಹಾರಿಸಬಹುದು. ಇಲ್ಲಿಗೆ ವರ್ಷವಿಡೀ ಪ್ರವಾಸಿಗರು ಭೇಟಿ ನೀಡುತ್ತಾರೆ.
ಗುವಾಂಗ್‌ಝೌ:
‘ಚೀನಾ’ದ ‘ಗುವಾಂಗ್‌ಝೌ’ ಪ್ರವಾಸಿ ತಾಣವು ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುವ ಜನನಿಬಿಡ ಮಹಾನಗರವಾಗಿದೆ. ಈ ನಗರವು ಪ್ರಾಚೀನ ಚೀನಾದ ಪ್ರಮುಖ ಬಂದರುಗಳಲ್ಲಿ ಒಂದಾಗಿತ್ತು. ಇಲ್ಲಿನ ಸಮುದ್ರ ಆಹಾರ ಹಾಗೂ ಸ್ಥಳೀಯ ಚಹಾ ಸಂಸ್ಕೃತಿ ಪ್ರವಾಸಿಗರಿಗೆ ಉತ್ತಮ ಅನುಭವ ನೀಡುತ್ತದೆ. ಸ್ಥಳೀಯವಾಗಿ ‘ಕ್ಯಾಂಟನ್ ಟವರ್‘ ಕೂಡಾ ನೋಡಬಹುದು.
ಕೊಚ್ಚಿ:
Booking.com ನಲ್ಲಿರುವ ಏಕೈಕ ಭಾರತೀಯ ನಗರ ‘ಕೊಚ್ಚಿ’ಯಾಗಿದೆ. ಇಲ್ಲಿನ ವ್ಯಾಪಾರ ಹಾಗೂ ಸಾಂಸ್ಕೃತಿಕ ವೈವಿದ್ಯತೆಗೆ ಶತಮಾನಗಳ ಇತಿಹಾಸವಿದೆ. ಇಲ್ಲಿನ ಮಹಲುಗಳು, ಅಧುನಿಕ ಕೆಫೆ ಹಾಗೂ ಐತಿಹಾಸಿಕ ತಾಣಗಳು ಪ್ರಮುಖ ಆಕರ್ಷಣೆ ಕೇಂದ್ರವಾಗಿವೆ. ಇಲ್ಲಿನ ಕರಾವಳಿ ಹಾಗೂ ಸಾಂಪ್ರದಾಯಿಕ ಆಹಾರಗಳು ಹೆಚ್ಚು ಮನ್ನಣೆ ಪಡೆದಿವೆ.
ಫಿಲಡೆಲ್ಫಿಯಾ:
ಫಿಲಡೆಲ್ಫಿಯಾ 2026 ರಲ್ಲಿ ತನ್ನ 250ನೇ ಸ್ವಾತಂತ್ರ್ಯೋತ್ಸವದ ಆಚರಣೆ ಮಾಡಲಿದೆ. ಈ ನಗರ ಭವ್ಯ ಪರಂಪರೆ, ಇತಿಹಾಸ, ಸಂಸ್ಕೃತಿ ಹಾಗೂ ತಿನಿಸುಗಳಿಗೆ ಹೆಸರುವಾಸಿಯಾಗಿದೆ. ಲಿಬರ್ಟಿ ಬೆಲ್ ಹಾಗೂ ಸ್ವಾತಂತ್ರ್ಯ ಭವನ ಇಲ್ಲಿನ ಪ್ರಮುಖ ಸ್ಥಳಗಳಾಗಿವೆ. ಅಮೆರಿಕಾದ ಮೊದಲ ಮೃಗಾಲಯ, ಮೊದಲ ಆಸ್ಪತ್ರೆ ಮತ್ತು ಮೊದಲ ಸಾರ್ವಜನಿಕ ಗ್ರಂಥಾಲಯ ಫಿಲಡೆಲ್ಫಿಯಾದಲ್ಲಿ ಇದ್ದು, ಇವುಗಳಿಗೂ ಭೇಟಿ ನೀಡಬಹುದು.
ಪೋರ್ಟ್ ಡಗ್ಲಸ್:
ಆಸ್ಟ್ರೇಲಿಯಾದ ಉಷ್ಣವಲಯದ ಈಶಾನ್ಯ ಕರಾವಳಿಯಲ್ಲಿರುವ ಪೋರ್ಟ್ ಡಗ್ಲಸ್ ಪ್ರವಾಸಿಗರಿಗೆ ಸಾಹಸಮಯ ಹಾಗೂ ವಿಶ್ರಾಂತಿ ಪಡೆಯಲು ಪ್ರಮುಖ ಪ್ರವಾಸಿ ತಾಣವಾಗಿದೆ. ಈ ಕಡಲ ತೀರದ ಪಟ್ಟಣದಲ್ಲಿ ಹವಳದ ದಿಬ್ಬಗಳಿಂದ ಸುಂದರ ಸಮುದ್ರ ನೋಟವನ್ನು ಆನಂದಿಸಬಹುದು. ಇಲ್ಲಿನ ಮಳೆಕಾಡಿನ ದಾರಿಗಳು ನಿಮ್ಮನ್ನು ಬೇರೆಯ ಲೋಕಕ್ಕೆ ಕರೆದೊಯ್ಯುತ್ತವೆ. ಸೂರ್ಯೋದಯ , ಸ್ಥಳೀಯ ಮಾರುಕಟ್ಟೆಗಳು ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಗೆ ಭೇಟಿ ನೀಡಬಹುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.