ಏಕನಾಥ ಶಿಂದೆ
ಪಿಟಿಐ ಚಿತ್ರ
ಠಾಣೆ: ‘ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ‘ಬಿಲ್ಲು ಮತ್ತು ಬಾಣ’ದ ಚಿಹ್ನೆಯ ಅಡಿಯಲ್ಲಿ ಸ್ಪರ್ಧಿಸಲು 15 ಎಎಪಿ ಅಭ್ಯರ್ಥಿಗಳು ನನ್ನನ್ನು ಸಂಪರ್ಕಿಸಿದ್ದರು. ಆದರೆ, ಬಿಜೆಪಿ ಜತೆಗಿನ ಮೈತ್ರಿ ಧರ್ಮದ ಕಾರಣ ನಾನು ಅದನ್ನು ನಿರಾಕರಿಸಿದ್ದೆ’ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ, ಶಿವಸೇನಾ ಮುಖ್ಯಸ್ಥ ಏಕನಾಥ ಶಿಂದೆ ಹೇಳಿದ್ದಾರೆ.
ಠಾಣೆ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ‘ಒಟ್ಟು 15 ಎಎಪಿ ಅಭ್ಯರ್ಥಿಗಳು ನನ್ನ ಬಳಿಗೆ ಬಂದಿದ್ದರು. ‘ಬಿಲ್ಲು-ಬಾಣ’ ಚಿಹ್ನೆ ಅಡಿಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಬಿಜೆಪಿ ಮತ್ತು ಶಿವಸೇನಾ ನಡುವೆ ಮತಗಳು ವಿಭಜನೆಯಾಗಲಿದ್ದು, ಇತರೆ ಪಕ್ಷದವರಿಗೆ ಲಾಭವಾಗುತ್ತದೆ ಎಂಬ ಕಾರಣಕ್ಕೆ ಅವರ (ಎಎಪಿ ನಾಯಕರು) ಮನವಿಯನ್ನು ನಿರಾಕರಿಸಿದ್ದೆ’ ಎಂದು ಶಿಂದೆ ತಿಳಿಸಿದ್ದಾರೆ.
‘ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವಂತೆ ನಮ್ಮ ಸಂಸದರಿಗೆ ಹೇಳಿದ್ದೆ. ಹಾಗಾಗಿ ಅವರು ಪ್ರಚಾರದಲ್ಲಿ ಭಾಗವಹಿಸಿದ್ದರು. ಬಿಜೆಪಿ ಮತ್ತು ಶಿವಸೇನಾ ಉಭಯ ಪಕ್ಷದವರು ಮೈತ್ರಿ ಧರ್ಮವನ್ನು ಗೌರವಿಸಬೇಕು’ ಎಂದು ಅವರು ಪ್ರತಿಪಾದಿಸಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 48 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ, ಸರ್ಕಾರ ರಚಿಸಲು ಸಜ್ಜಾಗಿದೆ. ಇತ್ತ ಎಎಪಿ 22 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಪ್ರಮುಖ ಎಎಪಿ ನಾಯಕರು ಸೋಲು ಅನುಭವಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಸದ್ಯ ಅಸ್ಥಿತ್ವದಲ್ಲಿರುವ ‘ಮಹಾಯುತಿ’ ಮೈತ್ರಿಕೂಟದ ಭಾಗವಾಗಿರುವ ಶಿವಸೇನಾ ಪಕ್ಷವು ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.