ADVERTISEMENT

ದರಿದ್ರ, ಹೊಲಸು ಎಲ್ಲವೂ ಹೊರಗೆ ಬರಲಿ: ಸಭಾಧ್ಯಕ್ಷರ ಆಕ್ರೋಶ

ಸಭಾ‌ಧ್ಯಕ್ಷರ ಆಕ್ರೋಶದ ಮಾತು

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 20:16 IST
Last Updated 19 ಜುಲೈ 2019, 20:16 IST
ವಿಧಾನಸೌಧದಲ್ಲಿ ಶುಕ್ರವಾರ ವಿಧಾನಸಭಾ ಕಲಾಪದಲ್ಲಿ ಸ್ಪೀಕರ್‌ ಕೆ. ರಮೇಶ್ ಕುಮಾರ್‌ ಸದಸ್ಯರುಗಳಿಗೆ ಸೂಚನೆ ನೀಡಿದರು -ಪ್ರಜಾವಾಣಿ ಚಿತ್ರ
ವಿಧಾನಸೌಧದಲ್ಲಿ ಶುಕ್ರವಾರ ವಿಧಾನಸಭಾ ಕಲಾಪದಲ್ಲಿ ಸ್ಪೀಕರ್‌ ಕೆ. ರಮೇಶ್ ಕುಮಾರ್‌ ಸದಸ್ಯರುಗಳಿಗೆ ಸೂಚನೆ ನೀಡಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹೊಟ್ಟೆಯೊಳಗೆ ಇರುವ ಎಲ್ಲ ಹೊಲಸು ಹೊರಗೆ ಬರಲಿ. ನಾನು ಯಾರಿಗೂ ಅಡ್ಡಿ ಮಾಡುವುದಿಲ್ಲ. ಈ ವ್ಯಾಪಾರ, ದರಿದ್ರ ಎಲ್ಲವನ್ನೂ ಇಲ್ಲಿ ಹೇಳಿಕೊಳ್ಳಿ. ಎಲ್ಲವನ್ನೂ ಜನರು ನೋಡಲಿ. ಅವರೇ ತೀರ್ಮಾನ ಮಾಡಲಿ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್ ಆಕ್ರೋಶದಿಂದ ನುಡಿದರು.

ವಿಧಾನಸಭೆಯಲ್ಲಿ ಶುಕ್ರವಾರ ‘ಶಾಸಕರ ಖರೀದಿ’ ಬಗ್ಗೆ ಕೆಲವು ಶಾಸಕರು ಪ್ರಸ್ತಾಪ ಮಾಡಿದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು. ‘ಶಾಂತವೇರಿ ಗೋಪಾಲಗೌಡರಂತಹ ಮಹನೀಯರು ಇದ್ದ ವಿಧಾನಸಭೆಯ ಇದು ಎಂಬ ಅನುಮಾನ ಮೂಡುತ್ತಿದೆ. ಅವರು ಮುಖ್ಯಮಂತ್ರಿ ಆಗಿರಲಿಲ್ಲ. ಬಹಳ ಸಲ ಶಾಸಕರೂ ಆಗಿರಲಿಲ್ಲ. ಅವರಿದ್ದಂತಹ ಭೂಮಿಗೆ ಈ ದರಿದ್ರ ಸ್ಥಿತಿ ಬಂದಿದೆಯಾ’ ಎಂದು ಅವರು ಹೇಳಿದರು.

‘ತಮ್ಮ ಪಕ್ಷದ ಶಾಸಕರ ಮೇಲೆ ಬಿಜೆಪಿಯವರು ಕಾವಲು ಇಟ್ಟಿದ್ದಾರೆ. ನೀವು ಆ ಕೆಲಸವನ್ನೂ ಮಾಡಲಿಲ್ಲವಲ್ಲ. ಅವರ ಮೇಲೆ ನಿಗಾ ಇಡುವ ಸಮಯದಲ್ಲಿ ನಿದ್ದೆ ಮಾಡಿದ್ದೀರಿ’ ಎಂದು ಆಡಳಿತ ಪಕ್ಷದ ನಾಯಕರ ಮೇಲೆಯೂ ಚಾಟಿ ಬೀಸಿದರು.

ADVERTISEMENT

‘ನಾನು ಇಲ್ಲಿ ಬೆಂಕಿಯ ಮೇಲೆ ಕುಳಿತಿದ್ದೇನೆ. ನನ್ನ ಮಾತು, ತೀರ್ಪು ಇತಿಹಾಸ ಆಗಬೇಕು ಎಂಬುದು ನನ್ನ ಇಚ್ಛೆ. ನಿಯಮ ಬಿಟ್ಟು ನಾನು ಇಂಚೂ ಕದಲುವುದಿಲ್ಲ. ಆದರೂ, ನನ್ನ ವಿರುದ್ಧ ಕೆಲವು ಹಿರಿಯರು ಹಾಗೂ ಕೆಲವರು ಆರೋಪ ಮಾಡಿದ್ದಾರೆ. ಪಕ್ಷಪಾತ ಮಾಡಿ ಬದುಕುವ ಸ್ಥಿತಿ ನನಗೆ ಬಂದಿಲ್ಲ. ನನ್ನ ಚಾರಿತ್ರ್ಯ ವಧೆ ಮಾಡುವವರು ನೂರು ಸಲ ಹಿಂತಿರುಗಿ ನೋಡಿ. ಆಗ ನೀವೇನೂ ಎಂಬುದು ಗೊತ್ತಾಗುತ್ತದೆ’ ಎಂದು ಅವರು ವಾಗ್ದಾಳಿ ನಡೆಸಿದರು.

ಪರಿಷತ್: ವಾರ ಪೂರ್ತಿ ಕಲಾಪ ಬಲಿ
ಬೆಂಗಳೂರು: ವಿಧಾನ ಪರಿಷತ್ ಕಲಾಪ ಶುಕ್ರವಾರವೂ ನಡೆಯಲಿಲ್ಲ. ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದ್ದರಿಂದ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.

ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸಭಾಪತಿಪೀಠದ ಮುಂಭಾಗದಲ್ಲಿ ಧರಣಿ ಆರಂಭಿಸಿದ್ದರಿಂದ ಕೆಲವೇ ನಿಮಿಷಗಳಲ್ಲಿ ಸದನವನ್ನು ಮಧ್ಯಾಹ್ನ 3.30ಕ್ಕೆ ಮುಂದೂಡಲಾಯಿತು. ಮಧ್ಯಾಹ್ನ ಸದನ ಸೇರುತ್ತಿದ್ದಂತೆ, ಧರಣಿ ಮುಂದುವರಿದ ಕಾರಣ ಮುಂದಕ್ಕೆ ಹಾಕಲಾಯಿತು.

ಜುಲೈ 12ರಂದು ಸಂತಾಪ ಸೂಚಿಸಿದ ನಂತರ ಸದನದಲ್ಲಿ ಕಲಾಪಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಸದಸ್ಯರು ಧರಣಿ ಆರಂಭಿಸಿದರು. ಐದು ದಿನಗಳ ಕಾಲವೂ ಧರಣಿ ಮುಂದುವರಿದಿದ್ದರಿಂದ ಯಾವುದೇ ಕಲಾಪ ನಡೆಯಲಿಲ್ಲ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.