ADVERTISEMENT

ಮರಾಠಿಗರಿಗೆ ದೈರ್ಯ ತುಂಬಲು ಬೆಳಗಾವಿಗೆ ಸರ್ವಪಕ್ಷ ನಿಯೋಗ ಹೋಗಬೇಕು: ಶಿವಸೇನೆ ನಾಯಕ

ಪಿಟಿಐ
Published 13 ಮಾರ್ಚ್ 2021, 10:45 IST
Last Updated 13 ಮಾರ್ಚ್ 2021, 10:45 IST
ಶಿವಸೇನಾ ನಾಯಕ ಸಂಜಯ್‌ ರಾವುತ್
ಶಿವಸೇನಾ ನಾಯಕ ಸಂಜಯ್‌ ರಾವುತ್   

ಮುಂಬೈ: ಮರಾಠಿ ಭಾಷಿಕರನ್ನು ಬೆಳಗಾವಿಯಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ಸದ್ಯದ ಸಮಸ್ಯೆಯನ್ನು ಪರಿಹರಿಸಲು, ಅವರಿಗೆ ಬೆಂಬಲ ಸೂಚಿಸಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಮಹಾರಾಷ್ಟ್ರದ ಸರ್ವಪಕ್ಷಗಳ ನಿಯೋಗವನ್ನು ಬೆಳಗಾವಿಗೆ ಕರೆದೊಯ್ಯಬೇಕು ಎಂದು ಶಿವಸೇನಾ ನಾಯಕ ಸಂಜಯ್‌ ರಾವುತ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, ಕಳೆದ ಎಂಟು ದಿನಗಳಲ್ಲಿ ಬೆಳಗಾವಿಯಲ್ಲಿರುವ ಶಿವಸೇನೆ ಮುಖಂಡರು ಮತ್ತು ಪಕ್ಷದ ಕಚೇರಿಯ ಮೇಲೆ ಕನ್ನಡ ಪರ ಸಂಘಟನೆಗಳಿಂದ ಹಲ್ಲೆ ನಡೆಸಿದ ಉದಾಹರಣೆಗಳಿವೆ. ಬೆಳಗಾವಿ ಭಾರತದ ಭಾಗವಾಗಿದೆ ಮತ್ತು ಮಹಾರಾಷ್ಟ್ರ- ಕರ್ನಾಟಕದ ನಡುವೆ ಭಾಷಾ ವಿವಾದವಿದೆ. ಇದನ್ನು ಹೆಚ್ಚು ವಿಸ್ತರಿಸಬಾರದು ಮತ್ತು ಇದು ಕರ್ನಾಟಕ ಸರ್ಕಾರದ ಜವಾಬ್ದಾರಿ ಕೂಡ ಆಗಿದೆ' ಎಂದು ಹೇಳಿದರು.

'ಒಂದು ವೇಳೆ ಪರಿಸ್ಥಿತಿಯು ಕೈಮೀರಿದರೆ, ಶಿವಸೇನೆ ಮತ್ತು ಮಹಾರಾಷ್ಟ್ರ ಸರ್ಕಾರವನ್ನು ದೂಷಿಸಬಾರದು. ಏಕೆಂದರೆ ಅದರ ಪ್ರತಿಕ್ರಿಯೆ ಅಧಿಕೃತವಾಗಿರುವುದಿಲ್ಲ, ಆದರೆ ರಾಜಕೀಯವಾಗಿರುತ್ತದೆ' ಎಂದು ತಿಳಿಸಿದರು.

ಬೆಳಗಾವಿಯಲ್ಲಿನ ಪರಿಸ್ಥಿತಿಗೆ ಕೇಂದ್ರ ಸರ್ಕಾರವನ್ನು ಧೂಷಿಸಿದ ರಾವುತ್, ಪಶ್ಚಿಮ ಬಂಗಾಳ ಮತ್ತು ತಾನು ಚುನಾವಣೆಗೆ ಸ್ಪರ್ಧಿಸುತ್ತಿರುವ ಸ್ಥಳಗಳಲ್ಲಿನ ಹಿಂಸಾಚಾರ ಮಾತ್ರ ಬಿಜೆಪಿಗೆ ಕಾಣುತ್ತದೆ. ಆದರೆ ಬೆಳಗಾವಿಯಲ್ಲಿನ ಪರಿಸ್ಥಿತಿಗೆ ಮಾತ್ರ ಕಣ್ಮುಚ್ಚಿ ಕೂರುತ್ತಾರೆ. ಮಹಾರಾಷ್ಟ್ರ ಸರ್ಕಾರವು ದೃಢ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲಿನ ಉನ್ನತ ವರ್ಗದವರ ಕೈಯಿಂದ ಬಳಲುತ್ತಿರುವ ಮರಾಠಿ ಜನರೊಂದಿಗೆ ಐಕ್ಯತೆಯನ್ನು ತೋರಿಸಲು-ಮರಾಠಿ ಭಾಷಿಕರಿಗೆ ಬೆಂಬಲ ಸೂಚಿಸಲು ಸರ್ವಪಕ್ಷಗಳ ನಿಯೋಗ ಶೀಘ್ರದಲ್ಲೇ ಬೆಳಗಾವಿಗೆ ಭೇಟಿ ನೀಡಬೇಕು ಎಂದರು.

ಶಿವಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿರುವ ಕನ್ನಡಪರ ಸಂಘಟನೆಯಾಗಿರುವ ಕರ್ನಾಟಕ ರಕ್ಷಣಾ ವೇದಿಕೆಯನ್ನು ಬಿಜೆಪಿ ಪ್ರಾಯೋಜಿಸುತ್ತಿದೆ ಎಂದು ಆರೋಪಿಸಿರುವ ಅವರು, ಬಿಜೆಪಿಯಿಂದ ಯಾರೂ ಇದರ ಬಗ್ಗೆ ಮಾತನಾಡುವುದಿಲ್ಲ. ಶಿವಸೇನೆ ಕೂಡ ಅವರ ರೀತಿಯಲ್ಲೇ ಪ್ರತಿಕ್ರಿಯಿಸಬಹುದು, ಆದರೆ ನಾವು ಎರಡು ರಾಜ್ಯಗಳ ನಡುವೆ ಬಿರುಕನ್ನು ಸೃಷ್ಟಿಸಲು ಬಯಸುವುದಿಲ್ಲ. ಈ ವಿಚಾರದಲ್ಲಿ ಕೇಂದ್ರವು ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಾಜಿ ಕರ್ನಾಟಕ ಮಂತ್ರಿಯೊಬ್ಬರನ್ನು ಒಳಗೊಂಡ ಸಿಡಿ ಹಗರಣದಿಂದ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವಾಗಿ ಬೆಳಗಾವಿಯಲ್ಲಿ ಹೊಸ ಅವಾಂತರವನ್ನು ಸೃಷ್ಟಿಸಲಾಗುತ್ತಿದೆ. ಗಡಿ ವಿವಾದವು ವಿಚಾರಣೆಯಲ್ಲಿದ್ದರೂ ಕೂಡ, ಕರ್ನಾಟಕವು ಬೆಳಗಾವಿಯಲ್ಲಿ ವಿಧಾನ ಭವನವನ್ನು ನಿರ್ಮಿಸಿ ಅದನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಮಾಡಿದೆ ಎಂದು ಅವರು ವಿಷಾದಿಸಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.