ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಎಎಪಿ ನಾಲ್ಕನೇ ಅವಧಿಗೆ ಅಧಿಕಾರಕ್ಕೆ ಬರುತ್ತದೆಯೇ ಅಥವಾ 27 ವರ್ಷಗಳ ನಂತರ ಬಿಜೆಪಿ ಸರ್ಕಾರ ರಚಿಸುತ್ತದೆಯೇ ಎಂಬುದು ಗೊತ್ತಾಗಲಿದೆ.
ಎಣಿಕೆ ಪ್ರಕ್ರಿಯೆಯು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ. ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆ ಇದೆ. ಕೇಂದ್ರ ಚುನಾವಣಾ ಆಯೋಗದ ಪ್ರಕಾರ, ಶೇಕಡಾ 60.54ರಷ್ಟು ಮತಗಳು ಚಲಾವಣೆಯಾಗಿದೆ.
ಈ ಬಾರಿ ಬಿಜೆಪಿ ಸರಳ ಬಹುಮತದ ಗಡಿ ದಾಟಿ ಅಧಿಕಾರಕ್ಕೇರಲಿದ್ದರೆ, ಆಡಳಿತಾರೂಢ ಎಎಪಿ ಎರಡನೇ ಸ್ಥಾನಕ್ಕೆ ಕುಸಿಯಲಿದೆ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಎರಡು ಚುನಾವಣೋತ್ತರ ಸಮೀಕ್ಷೆಗಳು ಮಾತ್ರ ಆಮ್ ಆದ್ಮಿ ಪಕ್ಷ (ಎಎಪಿ) ವಿಜಯಶಾಲಿಯಾಗಿ, ಮತ್ತೆ ಅಧಿಕಾರದ ಗದ್ದುಗೆ ಏರಲಿದೆ ಎಂದಿವೆ.
ದೆಹಲಿ ವಿಧಾನಸಭಾ ಚುನಾವಣೆಯ ಸಮೀಕ್ಷೆ
ಕರೊಲ್ ಬಾಗ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಬಿಜೆಪಿ ಅಭ್ಯರ್ಥಿ ದುಷ್ಯಂತ್ ಗೌತಮ್, ಗ್ರೇಟರ್ ಕೈಲಾಶ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿಖಾ ರೈ, ಇದೇ ಕ್ಷೇತ್ರದ ಎಎಪಿ ಅಭ್ಯರ್ಥಿ ಸೌರಭ್ ಭಾರಧ್ವಜ್, ಮಾಳವೀಯ ನಗರ ಬಿಜೆಪಿ ಅಭ್ಯರ್ಥಿ ಸತೀಶ ಉಪಾಧ್ಯಾಯ, ಕಲ್ಕಾಜಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಲ್ಕಾ ಲಂಬಾ ಸೇರಿ ಚುನಾವಣೆಯಲ್ಲಿ ಅದೃಷ್ಠವನ್ನು ಪರೀಕ್ಷೆ ಒಡ್ಡಿರುವ ಅಭ್ಯರ್ಥಿಗಳು ವಿವಿಧ ದೇಗುಲಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಬೇಡಿದರು.
ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಅಂಚೆ ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಪಡೆದುಕೊಂಡಿದೆ. ಬಿಗಿ ಭದ್ರತೆಯ ನಡುವೆ 19 ಕೇಂದ್ರಗಳಲ್ಲಿ ಮತ ಎಣಿಕೆ ಆರಂಭವಾಗಿದೆ.
ಬೆಳಿಗ್ಗೆ 8.30ರ ವೇಳೆಗೆ ಟ್ರೆಂಡ್
ನಾವು ಮನುಷ್ಯರು. ನಮಗೂ ಫಲಿತಾಂಶದ ಬಗ್ಗೆ ಆತಂಕವಿದೆ. ಅರವಿಂದ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ನಾವು ಮತ್ತೆ ಸರ್ಕಾರ ರಚಿಸುತ್ತೇವೆ ಎಂಬ ನಂಬಿಕೆ ನಮಗಿದೆ. ಜನರು ಪ್ರಾಮಾಣಿಕತೆ ಮತ್ತು ದುಡಿಯುವ ರಾಜಕಾರಣಕ್ಕೆ ಮತ ಹಾಕಿದ್ದಾರೆ. ನಾವು ಕೆಲವೇ ಗಂಟೆಗಳಲ್ಲಿ ಬಹುಮತದೊಂದಿಗೆ ಸರ್ಕಾರವನ್ನು ರಚಿಸಲಿದ್ದೇವೆ.– ಮನೀಷ್ ಸಿಸೋಡಿಯಾ, ಎಎಪಿ ಅಭ್ಯರ್ಥಿ
ನಾನು ಕಲ್ಕಾಜಿ ಮತ್ತು ದೆಹಲಿಯ ಜನರಿಗೆ ಧನ್ಯವಾದ ಹೇಳುತ್ತೇನೆ. ನನ್ನ ತೀರ್ಪು ಜನ ಬರೆದಿದ್ದಾರೆ. ಫಲಿತಾಂಶ ಏನೇ ಬಂದರೂ ಚುನಾವಣೆಯಲ್ಲಿ ಎತ್ತಿದ ಸಮಸ್ಯೆಗಳ ಬಗ್ಗೆ ಹೋರಾಟ ಮುಂದುವರಿಸುತ್ತೇವೆ. ನಾನು ನನ್ನ ಜೀವನದಲ್ಲಿ ನೋಡಿದ ಅತಿ ದೊಡ್ಡ ಸುಳ್ಳುಗಾರ ಕೇಜ್ರಿವಾಲ್. ನವದೆಹಲಿಯಲ್ಲಿ ಬೀಳುವ ಎಎಪಿಯ ಮೊದಲ 'ವಿಕೆಟ್' ಕೇಜ್ರಿವಾಲ್‌ರದ್ದು. ಅವರು ಸೋತರೆ, ಅತಿಶಿ ಮತ್ತು ಮನೀಶ್ ಸಿಸೋಡಿಯಾ ಕೂಡ ಸೋಲುತ್ತಿದ್ದಾರೆ ಎಂಬುದು ಸ್ಪಷ್ಟ.ಅಲ್ಕಾ ಲಂಬಾ, ಕಾಂಗ್ರೆಸ್ ಅಭ್ಯರ್ಥಿ
ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆಯ ಆರಂಭಿಕ ಹಂತದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. 48 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡರೆ, ಎಎಪಿ 21 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿವೆ. ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುಂದಿದೆ.
ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್, ಮನೀಷ್ ಸಿಸೋಡಿಯಾ ಹಾಗೂ ಸತ್ಯೇಂದ್ರ ಜೈನ್ ಹಿನ್ನಡೆಯಲ್ಲಿದ್ದಾರೆ. ಮುಖ್ಯಮಂತ್ರಿ ಅತಿಶಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಆರಂಭಿಕ ಟ್ರೆಂಡ್‌ಗಳು ನಮ್ಮ ನಿರೀಕ್ಷೆಯಂತಿವೆ. ಆದರೆ ನಾವು ಫಲಿತಾಂಶಕ್ಕಾಗಿ ಕಾಯುತ್ತೇವೆ. ನಮ್ಮ ಪಕ್ಷದ ಕಾರ್ಯಕರ್ತರು ಶ್ರಮಿಸಿದ್ದಾರೆ. ಈ ಗೆಲುವು ನಮ್ಮ ಉನ್ನತ ನಾಯಕತ್ವದ ಗೆಲುವಾಗಿದೆ. ನಾವು ದೆಹಲಿಯ ಸಮಸ್ಯೆಗಳ ಆಧಾರದ ಮೇಲೆ ಚುನಾವಣೆಯನ್ನು ಎದುರಿಸಿದ್ದೇವೆ. ಆದರೆ ಅರವಿಂದ್ ಕೇಜ್ರಿವಾಲ್ ಸಮಸ್ಯೆಗಳಿಂದ ವಿಮುಖರಾಗಲು ಪ್ರಯತ್ನಿಸಿದರು. ಮುಖ್ಯಮಂತ್ರಿ ಯಾರು ಎನ್ನುವುದನ್ನು ಕೇಂದ್ರ ನಾಯಕತ್ವ ನಿರ್ಧರಿಸಲಿದೆ.ವೀರೇಂದ್ರ ಸಚ್‌ದೇವ, ದೆಹಲಿ ಬಿಜೆಪಿ ಅಧ್ಯಕ್ಷ
ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ಬಿಜೆಪಿ ಮುನ್ನಡೆ ಪಡೆದುಕೊಂಡಿದೆ. ಬಿಜಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಸಿಹಿ ಹಂಚಿ ಖುಷಿ ವ್ಯಕ್ತಪಡಿಸುತ್ತಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ಬಿಜೆಪಿ ಮುನ್ನಡೆಯಲ್ಲಿದೆ. ಬಹುಮತಕ್ಕೆ ಬೇಕಾದ ಸಂಖ್ಯೆಗಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಮುನ್ನಡೆಯ ಟ್ರೆಂಡ್‌ಗಳು ಬಿಜೆಪಿ ನಾಯಕರಲ್ಲಿ ಸಂಭ್ರಮ ಹೆಚ್ಚಿಸಿದೆ.
ನಾವು ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ಅಂತಿಮ ಫಲಿತಾಂಶ ಈಗಿನ ಟ್ರೆಂಡ್‌ಗಿಂತ ಉತ್ತಮವಾಗಿರಲಿದೆ. ಇದು ಪ್ರಧಾನಿ ಮೋದಿಯವರ ಭರವಸೆಗಳ ಮೇಲೆ ಜನರು ಇಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ. ಇದು ನಮಗೆ ಸಕಾರಾತ್ಮಕ ಫಲಿತಾಂಶವಾಗಿದೆ.ಸುಧಾಂಶು ತ್ರಿವೇದಿ, ಬಿಜೆಪಿ ಸಂಸದ
ರಾಷ್ಟ್ರ ರಾಜಧಾನಿ ಹೇಗಿರಬೇಕು ಎನ್ನುವುದನ್ನು ಪ್ರಧಾನಿ ಮೋದಿಯವರ ಡಬಲ್ ಇಂಜಿನ್ ಸರ್ಕಾರ ತೋರಿಸಲಿದೆ. ಸದ್ಯ 42 ಸ್ಥಾನಗಳಲ್ಲಿ ಮುನ್ನಡೆಯನ್ನು ತೋರಿಸುತ್ತಿದ್ದು, ಅದು 50 ಕ್ಕೆ ಏರಿಕೆಯಾಗಲಿದೆ. ಉತ್ತಮ ಭವಿಷ್ಯವನ್ನು ಆಯ್ಕೆ ಮಾಡಿದ್ದಕ್ಕಾಗಿ ದೆಹಲಿಯ ಜನರನ್ನು ನಾನು ಅಭಿನಂದಿಸುತ್ತೇನೆ.ರವಿ ಕಿಶನ್, ಬಿಜೆಪಿ ಸಂಸದ
ಟ್ರೆಂಡ್‌ಗಳಲ್ಲಿ ಬಿಜೆಪಿ ಮುಂದಿದೆ. ಆದರೆ ಫಲಿತಾಂಶಕ್ಕಾಗಿ ನಾವು ಕಾಯುತ್ತೇವೆ. ನಮ್ಮ ಫಲಿತಾಂಶ ಇದಕ್ಕಿಂಯ ಉತ್ತಮವಾಗಿರಲಲಿದೆ. ದೆಹಲಿಯ ಪ್ರತಿ ವಿಭಾಗದ ಜನ ಎಎಪಿಯಿಂದ ದೂರ ಸರಿದಿದ್ದಾರೆ. ನಿಷ್ಕ್ರಿಯತೆ ಮತ್ತು ಭ್ರಷ್ಟಾಚಾರದಿಂದಾಗಿ ಎಎಪಿ ಬೆಂಬಲ ಕಳೆದುಕೊಂಡಿದೆ.ಮನೋಜ್ ತಿವಾರಿ, ಬಿಜೆಪಿ ಸಂಸದ
ಮತ ಎಣಿಕೆ ಫಲಿತಾಂಶಗಳು ಬಿಜೆಪಿ ಪರ ಬರುತ್ತಿದ್ದು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪರ್ವೇಶ್ ವರ್ಮಾ ಪಕ್ಷದ ಕಚೇರಿಯಲ್ಲಿ ಪೂಜೆ ಸಲ್ಲಿಸಿದರು
ದೆಹಲಿಯ ಜನರು ಬಿಜೆಪಿಯನ್ನು ಆಶೀರ್ವದಿಸಿದ್ದಾರೆ. ನಾನು ದೆಹಲಿಯ ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ಕಾಂಗ್ರೆಸ್‌ಗೆ ನೀತಿ, ಉದ್ದೇಶ ಅಥವಾ ನಾಯಕತ್ವ ಇರಲಿಲ್ಲ. ಈ ಮೂರಿಲ್ಲದೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ.ಸಿ.ಟಿ.ರವಿ, ಬಿಜೆಪಿ ನಾಯಕ
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಪಕ್ಷ ಹೀನಾಯ ಸೋಲು ಅನುಭವಿಸಿದೆ. ಪಕ್ಷದ ಸಂಸ್ಥಾಪಕ ನಾಯಕರಾದ ಮಾಜಿ ಮಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸೋಲನುಭವಿಸಿದ್ದಾರೆ. ಕಲ್ಕಾಜಿ ಕ್ಷೇತ್ರದಿಂದ ಮುಖ್ಯಮಂತ್ರಿ ಅತಿಶಿ ಗೆಲುವು ಸಾಧಿಸಿದ್ದಾರೆ.
ನವದೆಹಲಿ ಕ್ಷೇತ್ರದಿಂದ ಬಿಜೆಪಿಯ ಪರ್ವೇಶ್ ವರ್ಮಾ ಕೇಜ್ರಿವಾಲ್ 3,182 ಮತಗಳಿಂದ ಸೋತಿದ್ದಾರೆ.
ಪಕ್ಷದ ಕಾರ್ಯಕರ್ತರು ಚೆನ್ನಾಗಿ ಹೋರಾಟ ಮಾಡಿದ್ದಾರೆ. ನಾವೆಲ್ಲರೂ ಶ್ರಮಿಸಿದ್ದೇವೆ. ಜನರು ನಮ್ಮನ್ನು ಬೆಂಬಲಿಸಿದ್ದಾರೆ. ನಾನು 600 ಮತಗಳಿಂದ ಸೋತಿದ್ದೇನೆ. ನಾನು ಗೆದ್ದ ಅಭ್ಯರ್ಥಿಯನ್ನು ನಾನು ಅಭಿನಂದಿಸುತ್ತೇನೆ. ಅವರು ಕ್ಷೇತ್ರಕ್ಕಾಗಿ ಕೆಲಸ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ.ಮನೀಷ್ ಸಿಸೋಡಿಯಾ, ಜಂಗ್‌ಪುರ ಕ್ಷೇತ್ರದ ಎಎಪಿ ಅಭ್ಯರ್ಥಿ
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೆ, ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ. ಸಿಹಿ ಹಂಚಿದ್ದಾರೆ. ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದ್ದಾರೆ.
‘ದೆಹಲಿಯ ಮತದಾರರು ಬಿಜೆಪಿ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ. ಜನರ ನಿರೀಕ್ಷೆಯಂತೆ ನಾವು ದೆಹಲಿಯನ್ನು ಮಾಲಿನ್ಯ ಮುಕ್ತಗೊಳಿಸುತ್ತೇವೆ. ಜತೆಗೆ, ವಿಶ್ವದ ಅತ್ಯಂತ ಸುಂದರ ನಗರವನ್ನಾಗಿ ಮಾಡುತ್ತೇವೆ. ಇದರಿಂದಾಗಿ ದೆಹಲಿಯ ಚಿತ್ರಣವೇ ಬದಲಾಗಲಿದೆ. ಮತದಾರರಿಗೆ ಧನ್ಯವಾದಗಳು... ನಮ್ಮ ಗೆಲುವು ನಿರೀಕ್ಷೆಗಿಂತ ದೊಡ್ಡದಾಗಿದೆ’ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಚುನಾವಣಾ ಆಯೋಗದ ಈಗಿನ ಟ್ರೆಂಡ್ (ಮಧ್ಯಾಹ್ನ 2.45) ಪ್ರಕಾರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 47 ಹಾಗೂ ಎಎಪಿ 23 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
'ಇಂದು ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಂದಿದೆ. ದೆಹಲಿ ಜನಾದೇಶವನ್ನು ನಾವು ವಿನಯಪೂರ್ವಕ ಒಪ್ಪಿಕೊಳ್ಳುತ್ತೇವೆ' ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
ದೆಹಲಿ ಫಲಿತಾಂಶ ಖುಷಿ ತಂದಿದೆ. ದೆಹಲಿಯಲ್ಲಿ ಬಲಿಷ್ಠ ಸರ್ಕಾರ ಅಧಿಕಾರದಲ್ಲಿ ಇರುವುದು ಅವಶ್ಯಕ. ಜನರಿಗೆ ಉತ್ತಮ ಆಡಳಿತ ನೀಡುವ ಹಾಗೂ ಜನರಿಗೆ ಸೇವೆ ಸಲ್ಲಿಸುವ ಸರ್ಕಾರ ಅಧಿಕಾರದಲ್ಲಿಯುವುದು ಅತ್ಯಗತ್ಯವಾಗಿದೆ. ಬಿಜೆಪಿ ಅಧಿಕಾರಕ್ಕೆ ಬರುವುದರಿಂದ ದೆಹಲಿ ಜನರಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಜನ ಶಕ್ತಿಯೇ ಸರ್ವಶ್ರೇಷ್ಠ. ಅಭಿವೃದ್ಧಿ ಗೆಲುವು ಸಾಧಿಸುತ್ತದೆ. ಈ ಐತಿಹಾಸಿಕ ಜನಾದೇಶಕ್ಕಾಗಿ ದೆಹಲಿ ಜನತೆಗೆ ಧನ್ಯವಾದಗಳು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ನಿಮ್ಮ ಆಶೀರ್ವಾದ ಪಡೆಯಲು ನಾವು ವಿನಮ್ರರಾಗಿದ್ದೇವೆ. ದೆಹಲಿಯನ್ನು ಅಭಿವೃದ್ಧಿಪಡಿಸುವತ್ತ, ಜನರ ಜೀವನವನ್ನು ಸುಧಾರಿಸುವ ದೃಷ್ಟಿಕೋನದಿಂದ ಸ್ಥಿರ ಆಡಳಿತ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ವಿಕಸಿತ ಭಾರತ ನಿರ್ಮಾಣಕ್ಕೆ ದೆಹಲಿ ಪ್ರಮುಖ ಪಾತ್ರವಹಿಸಲಿದೆ. ಅಭಿವೃದ್ಧಿ ಹೊಂದಿದ ದೇಶವಾಗಿ ಭಾರತ ಹೊರಹೊಮ್ಮಲಿದೆ. ಈ ನಿಟ್ಟಿನಲ್ಲಿ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಮೋದಿ ಹೇಳಿದ್ದಾರೆ.
ಚುನಾವಣೆಯಲ್ಲಿ ಸಾರ್ವಜನಿಕರನ್ನು ದಾರಿತಪ್ಪಿಸಲು ಸಾಧ್ಯವಿಲ್ಲ ಎಂಬುದನ್ನು ದೆಹಲಿಗರು ತೋರಿಸಿಕೊಟ್ಟಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್, ‘ಪ್ರಧಾನಿ ಮೋದಿ ನಾಯಕತ್ವದಲ್ಲಿ ಸಿಕ್ಕ ನಂಬಿಕೆಗೆ ಜಯವಾಗಿದೆ’ ಎಂದಿದ್ದಾರೆ.
‘ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎನ್ನುತ್ತ, ಭ್ರಷ್ಟಾಚಾರವನ್ನೇ ಆಧಾರವನ್ನಾಗಿ ಮಾಡಿಕೊಂಡ ಆಮ್ ಆದ್ಮಿ ಪಕ್ಷದ ನಾಯಕರಿಗೆ ದೆಹಲಿಯ ಜನತೆ, ವಿಧಾನಸಭಾ ಚುನಾವಣೆಯಲ್ಲಿ ಹಿನಾಯವಾಗಿ ಸೋಲಿಸುವ ಮೂಲಕ ಕಪಾಳಮೋಕ್ಷ ಮಾಡಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.
ಈಗ ಸಣ್ಣ ಯುದ್ಧದಲ್ಲಿ ಸೋಲು ಕಂಡಿರಬಹುದು. ಆದರೆ, ಮುಂದಿನ ದಿನಗಳಲ್ಲಿ ದೊಡ್ಡ ಯುದ್ಧಗಳನ್ನು ಗೆಲ್ಲುತ್ತೇವೆ ಎಂದು ಗ್ರೇಟರ್ ಕೈಲಾಶ್ ಕ್ಷೇತ್ರದ ಎಎಪಿ ಪರಾಜಿತ ಅಭ್ಯರ್ಥಿ ಸೌರಭ್ ಭಾರದ್ವಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗ್ರೇಟರ್ ಕೈಲಾಶ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಿಖಾ ರಾಯ್ ವಿರುದ್ಧ ಸೌರಭ್ ಸೋಲು ಕಂಡಿದ್ದಾರೆ. ಫಲಿತಾಂಶ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಆಮ್ ಆದ್ಮಿ ಪಕ್ಷದ ಎಲ್ಲಾ ಬೆಂಬಲಿಗರು, ಕಾರ್ಯಕರ್ತರು ಮತ್ತು ದಾನಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಫಲಿತಾಂಶದಿಂದ ಯಾರೂ ಕೂಡಾ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಚುನಾವಣಾ ಆಯೋಗದ ಈಗಿನ ಟ್ರೆಂಡ್ (ಸಂಜೆ 6.40) ಪ್ರಕಾರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 48 ಹಾಗೂ ಎಎಪಿ 22 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
* ದೆಹಲಿ ಜನರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ: ಮೋದಿ
* ಇಂದು ದೆಹಲಿ ಜನರು ಕೆಲಸ ಮಾಡಲು ನಮಗೆ ಅವಕಾಶ ಕೊಟ್ಟಿದ್ದಾರೆ. ಇದು ಅಭಿವೃದ್ಧಿ, ದೂರದೃಷ್ಟಿ ಮತ್ತು ವಿಕಾಸದ ಗೆಲುವಾಗಿದೆ. ಅಹಂಕಾರಕ್ಕೆ (ಎಎಪಿ) ಸೋಲಾಗಿದೆ.
* ದೆಹಲಿ ಮಿನಿ ಭಾರತವಾಗಿದ್ದು, ಇಲ್ಲಿ ಎಲ್ಲಾ ವರ್ಗದ ಜನರು ವಾಸವಾಗಿದ್ದಾರೆ.
* ಮೋದಿ ಗ್ಯಾರಂಟಿ ಎಂದರೇ ಅದು ಈಡೇರು ಗ್ಯಾರಂಟಿ
* ದೆಹಲಿ ರಾಜಕಾರಣದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ.
* ದೆಹಲಿಯ ಪ್ರತಿವರ್ಗದ ಜನರು ಬಿಜೆಪಿಗೆ ಶಕ್ತಿ ತುಂಬಿದ್ದಾರೆ.
* ದೆಹಲಿಯ ಮಾಲೀಕರಾಗಲು ಹೊರಟವರಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ.
* ದೆಹಲಿಯ ಅಸಲಿ ಮಾಲೀಕರು ದೆಹಲಿಯ ಜನ ಎಂದು ಸಾಬೀತಾಗಿದೆ.
* ಶಾರ್ಟ್ ಕಟ್ ರಾಜಕಾರಣಕ್ಕೆ ಜನರು ಶಾರ್ಟ್ ಸರ್ಕ್ಯೂಟ್ ಮಾಡಿದ್ದಾರೆ
* ಡಬಲ್ ಎಂಜನ್ ಸರ್ಕಾರಕ್ಕೆ ಭರವಸೆ ಅಡಿಪಾಯ ಹಾಕಿದ್ದಾರೆ.
* ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿತ್ತು. ಈಗ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿಗೆ ಜಯ ಸಿಕ್ಕಿದೆ. 2014, 2019, 2024ರ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿದ್ದೇವೆ.
* ಸತತ ಮೂರು ಬಾರಿ ಎಲ್ಲಾ ಕ್ಷೇತ್ರಗಳಲ್ಲಿನ ಗೆಲುವು ನಮಗೆ ಸ್ಪೂರ್ತಿಯಾಗಿದೆ.
* ದೆಹಲಿ ಒಂದು ನಗರವಲ್ಲ, ಮಿನಿ ಹಿಂದೂಸ್ಥಾನವಾಗಿದೆ.
* ರಾಜಕಾರಣದಲ್ಲಿ ಸುಳ್ಳು, ಮೋಸಕ್ಕೆ ಸ್ಥಳವಿಲ್ಲ ಎಂದು ಜನಾದೇಶ ಹೇಳಿದೆ.
* ಹರಿಯಾಣ ವಿಧಾನಸಭಾ ಚುನಾವಣೆಯಲ್ಲೂ ಗೆಲುವು ಸಾಧಿಸಿದ್ದೆವು. ಬಳಿಕ ಮಹಾರಾಷ್ಟ್ರದಲ್ಲೂ ಹೊಸ ದಾಖಲೆ ಸೃಷ್ಟಿಯಾಯಿತು. ಇದೀಗ ದೆಹಲಿಯಲ್ಲೂ ಹೊಸ ದಾಖಲೆ ಸೃಷ್ಟಿಯಾಗಿದೆ.
* ಅರವಿಂದ ಕೇಜ್ರಿವಾಲ್ ಅವರು ದೆಹಲಿಯನ್ನು ಅಪತ್ತಿನಲ್ಲಿ ಸಿಲುಕಿಸುವ ಕೆಲಸ ಮಾಡಿದ್ರು, ಅಬಕಾರಿ ಹಗರಣದ ಮೂಲಕ ದೆಹಲಿಗೆ ಕಳಂಕು ತಂದರು ಎಂದು ಮೋದಿ ವಾಗ್ದಾಳಿ ನಡೆಸಿದರು.
* ದೆಹಲಿಯಲ್ಲಿ ಕಾಂಗ್ರೆಸ್ ‘ಶೂನ್ಯ’ ಸಂಪಾದನೆ ಮಾಡಿದೆ. ಕಾಂಗ್ರೆಸ್ ಒಂದು ಮುಳುಗುತ್ತಿರುವ ಪಕ್ಷವಾಗಿದ್ದು, ತಾನು ಮುಳುಗುತ್ತೆ.. ಜತೆಗಿದ್ದವರನ್ನು ಮುಳುಗಿಸುತ್ತೆ. ಜಮ್ಮು–ಕಾಶ್ಮೀರ, ಬಿಹಾರದಲ್ಲೂ ಕಾಂಗ್ರೆಸ್ ಸ್ಥಿತಿ ಹದಗೆಟ್ಟಿದೆ. ಕಾಂಗ್ರೆಸ್ ರಾಜಕೀಯ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದೆ ಎಂದು ಮೋದಿ ಕಿಡಿಕಾರಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. 70 ಕ್ಷೇತ್ರಗಳ ಪೈಕಿ 48 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಇತ್ತ ಎಎಪಿ 22 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.