ADVERTISEMENT

ಡಿಜಿಟಲ್ ಅರೆಸ್ಟ್‌: ಸೈಬರ್ ವಂಚಕರಿಂದ 81 ವರ್ಷದ ವೃದ್ಧನಿಗೆ ₹7.12 ಕೋಟಿ ವಂಚನೆ!

ಪಿಟಿಐ
Published 4 ಜನವರಿ 2026, 10:11 IST
Last Updated 4 ಜನವರಿ 2026, 10:11 IST
<div class="paragraphs"><p>ಡಿಜಿಟಲ್‌ ಅರೆಸ್ಟ್‌</p></div>

ಡಿಜಿಟಲ್‌ ಅರೆಸ್ಟ್‌

   

ಹೈದರಾಬಾದ್: ಮುಂಬೈ ಪೊಲೀಸರ ಸೋಗಿನಲ್ಲಿ ಕರೆ ಮಾಡಿದ್ದ ಸೈಬರ್ ವಂಚಕರು, ಮಾದಕವಸ್ತು ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿರುವುದಾಗಿ ಬೆದರಿಸಿ, 81 ವರ್ಷದ ವೃದ್ಧರೊಬ್ಬರಿಗೆ ₹7.12 ಕೋಟಿ ವಂಚಿಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

2024ರ ಅಕ್ಟೋಬರ್ 27ರಂದು ಅಪರಿಚಿತ ವ್ಯಕ್ತಿಗಳು ಕೊರಿಯರ್ ಕಂಪನಿಯವರೆಂದು ಪರಿಚಯಿಸಿಕೊಂಡಿದ್ದರು. ಮುಂಬೈನಿಂದ ಥೈಲ್ಯಾಂಡ್‌ಗೆ ನಿಮ್ಮ (ಸಂತ್ರಸ್ತ) ಹೆಸರಿನಲ್ಲಿ ಪಾರ್ಸೆಲ್ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದರು. ಅದರಲ್ಲಿ ಎಂಡಿಎಂಎ ಮಾದಕ ದ್ರವ್ಯ, ಪಾಸ್‌ಪೋರ್ಟ್‌ಗಳು ಸೇರಿದಂತೆ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದರು.

ADVERTISEMENT

ಪಾರ್ಸೆಲ್ ಅನ್ನು ತಡೆ ಹಿಡಿದಿರುವ ಅಧಿಕಾರಿಗಳು ಪ್ರಕರಣವನ್ನು ಮುಂಬೈ ಪೊಲೀಸರಿಗೆ ವರ್ಗಾಯಿಸಿದ್ದಾರೆ ಎಂದು ವಂಚಕರು ತಿಳಿಸಿದ್ದರು.

ಇದಾದ ಕೆಲವೇ ಗಂಟೆಗಳಲ್ಲಿ ಸಂತ್ರಸ್ತ ವ್ಯಕ್ತಿಗೆ ಕರೆ ಮಾಡಿದ್ದ ಮತ್ತೊಬ್ಬ ವಂಚಕ, ‘ಮುಂಬೈಯಿಂದ ಪೊಲೀಸ್ ಅಧಿಕಾರಿ ಮಾತನಾಡುತ್ತಿದ್ದೇನೆ... ನೀವು ಮಾದಕವಸ್ತು ಕಳ್ಳಸಾಗಣೆ, ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದಕ ಚಟುವಟಿಕೆಗಳ ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ ಎಂದು ಹೇಳುವ ಮೂಲಕ ಅವರನ್ನು ಬೆದರಿಸಿದ್ದ’ ಎಂದು ಪೊಲೀಸರು ವಿವರಿಸಿದ್ದಾರೆ.

‘ನಾವು ನಿಮ್ಮ ಬ್ಯಾಂಕ್ ಖಾತೆ ವಿವರಗಳು ಮತ್ತು ಹಣದ ಹೂಡಿಕೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ನೀವು ಪ್ರಕರಣದಿಂದ ಹೊರಬರಬೇಕಾದರೆ ನಾವು ನೀಡುವ ಖಾತೆಗಳಿಗೆ ಹಣ ವರ್ಗಾಯಿಸಬೇಕು. ಒಂದು ವೇಳೆ ನೀವು ನಿರಪರಾಧಿ ಎಂದು ಕಂಡುಬಂದಲ್ಲಿ ನಿಮ್ಮ ಹಣವನ್ನು ಹಿಂತಿರುಗಿಸುತ್ತೇವೆ. ಈ ವಿಷಯವನ್ನು ಯಾರಿಗೂ ತಿಳಿಸದಂತೆ ವಂಚಕ ಸಂತ್ರಸ್ತ ವ್ಯಕ್ತಿಗೆ ಬೆದರಿಸಿದ್ದ’ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

81 ವರ್ಷದ ವ್ಯಕ್ತಿ ಎರಡು ತಿಂಗಳ ಅವಧಿಯಲ್ಲಿ ₹7.12 ಕೋಟಿ ಹಣ ವರ್ಗಾಯಿಸಿದ್ದಾರೆ. ಮತ್ತೆ ₹1.2 ಕೋಟಿ ಹಣ ಕಳುಹಿಸುವಂತೆ ವಂಚಕರು ಪದೇ ಪದೇ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ತಾನು ಮೋಸ ಹೋಗಿದ್ದೇನೆಂದು ಅರಿತು ಡಿಸೆಂಬರ್ 30ರಂದು ತೆಲಂಗಾಣ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.