ADVERTISEMENT

ಕೆಂಪು ಕೋಟೆ: ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸಿ ಪ್ರತಿಭಟನಾಕಾರರ ಲಾಠಿ ಪ್ರಹಾರ!

ವಿಡಿಯೊ ನೋಡಿ

ಏಜೆನ್ಸೀಸ್
Published 26 ಜನವರಿ 2021, 19:50 IST
Last Updated 26 ಜನವರಿ 2021, 19:50 IST
ಪೊಲೀಸರು ಪ್ರಾಣ ರಕ್ಷಣೆಗೆ ಗೋಡೆ ಜಿಗಿಯುತ್ತಿರುವುದು–ಎಎನ್‌ಐ ವಿಡಿಯೊ ಸ್ಕ್ರೀನ್‌ ಶಾಟ್
ಪೊಲೀಸರು ಪ್ರಾಣ ರಕ್ಷಣೆಗೆ ಗೋಡೆ ಜಿಗಿಯುತ್ತಿರುವುದು–ಎಎನ್‌ಐ ವಿಡಿಯೊ ಸ್ಕ್ರೀನ್‌ ಶಾಟ್   

ನವದೆಹಲಿ: 72ನೇ ಗಣರಾತ್ಯೋತ್ಸವದ ದಿನವೇ ದೇಶದ ರೈತರು ಟ್ರ್ಯಾಕ್ಟರ್‌ ರ್‍ಯಾಲಿ, ಪೆರೇಡ್‌ ನಡೆಸುವ ಮೂಲಕ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ದಾಖಲಿಸಿದರು. ಎರಡು ತಿಂಗಳಿಂದ ದೆಹಲಿಯ ಗಡಿ ಭಾಗಗಳಲ್ಲಿ ಬಹುತೇಕ ಶಾಂತಿಯುತವಾಗಿ ನಡೆದಿದ್ದ ಪ್ರತಿಭಟನೆ ಮಂಗಳವಾರ ನಗರ ಭಾಗದಲ್ಲಿ ಹಿಂಸಾಚಾರಕ್ಕೆ ತಿರುಗಿತು. ಮಾರ್ಗ ಬದಲಿಸಿದ ರೈತರನ್ನು ತಡೆಯಲು ಪೊಲೀಸರು ಲಾಠಿ ಬೀಸಿದರೆ, ಅಂಥದ್ದೇ ಲಾಠಿ ಹಿಡಿದು ಪೊಲೀಸರನ್ನೇ ಅಟ್ಟಾಡಿಸಿರುವ ಘಟನೆಯೂ ದಾಖಲಾಗಿದೆ.

ನಿಗದಿತ ಮಾರ್ಗ ಹೊರತು ಪಡಿಸಿ ಬೇರೆ ಕಡೆಗೆ ರೈತರ ಪೆರೇಡ್‌ ಸಾಗದಂತೆ ನಿಯಂತ್ರಿಸಲು ನಗರದ ಹಲವು ಭಾಗಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಬಸ್‌ಗಳು, ಸಿಮೆಂಟ್‌ ಬ್ಲಾಕ್‌ಗಳನ್ನೂ ಕೆಲವು ಕಡೆ ಅಡ್ಡಲಾಗಿ ತರಲಾಗಿತ್ತು. ಆದರೆ, ಕೆಲವು ಪ್ರತಿಭಟನಾ ನಿರತರು ನಿಗದಿತ ಮಾರ್ಗದಲ್ಲಿ ಸಾಗುವ ನಿಯಮಗಳನ್ನು ಉಲ್ಲಂಘಿಸಿ, ನಿರ್ಬಂಧವಿದ್ದ ರಸ್ತೆಗಳಲ್ಲಿ ಟ್ರ್ಯಾಕ್ಟರ್‌ ನುಗ್ಗಿಸುವ ಪ್ರಯತ್ನ ನಡೆಸಿದರು. ಇಂಥದ್ದೇ ಪ್ರಯತ್ನದಲ್ಲಿ ಬ್ಯಾರಿಕೇಡ್‌ಗಳಿಗೆ ರಭಸದಲ್ಲಿ ಡಿಕ್ಕಿಯಾದ ಟ್ರ್ಯಾಕ್ಟರ್‌ ಮಗುಚಿ ಬಿದ್ದು ಎಲ್ಲರ ಕಣ್ಣೆದುರಿಗೇ ರೈತರೊಬ್ಬರು ಸಾವಿಗೀಡಾದರು.

ಕೆಂಪು ಕೋಟೆ ಸಮೀಪ ಸೇರಿದ ಪ್ರತಿಭಟನಾ ನಿರತರಲ್ಲಿ ಕೆಲವು ಮಂದಿ ಕೋಟೆಯ ಗೋಪುರಗಳನ್ನು ಏರಿದರು. ಅನ್ಯ ಬಾವುಟಗಳನ್ನು ಹಾರಿಸಿ ಘೋಷಣೆಗಳನ್ನು ಕೂಗಿದರು. ಈ ನಡುವೆ, ಕೆಂಪು ಕೋಟೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ನಿಯೋಜನೆಯಾಗಿದ್ದ ಪೊಲೀಸರೊಂದಿಗೆ ಪ್ರತಿಭಟನಾಕಾರರು ಘರ್ಷಣೆಗೆ ಇಳಿದಿದ್ದರು. ಪೊಲೀಸರಿಗೇ ಲಾಠಿ ಬೀಸಿದ ಗುಂಪೊಂದು, ಅವರಿಗೆ ಸ್ಥಳದಿಂದ ಎಲ್ಲೂ ಹೋಗಲು ಸಾಧ್ಯವಿರದಂತೆ ಇಕ್ಕಟ್ಟಿಗೆ ಸಿಲುಕಿಸಿದರು. ಮನಸ್ಸಿಗೆ ಬಂದಂತೆ ಲಾಠಿ ಬೀಸುತ್ತಿದ್ದ ಗುಂಪು ದೊಡ್ಡದಾಗುತ್ತಿದ್ದಂತೆ ಪೊಲೀಸರು ತಪ್ಪಿಸಿಕೊಳ್ಳಲು ಎತ್ತರದ ಗೋಡೆಯಿಂದ ಕೆಳಕ್ಕೆ ಜಿಗಿದರು. ಇನ್ನೂ ಕೆಲವರು ಜಿಗಿಯಲೂ ಆಗದೆ, ಹೊಡೆತದಿಂದ ತಪ್ಪಿಸಿಕೊಳ್ಳಲು ಆಗದ ಸ್ಥಿತಿಯಲ್ಲಿ ಸಿಲುಕಿದರು. ಹೇಗೋ ಗೇಟ್‌ ತೆರೆದ ಪೊಲೀಸ್‌ ಸಿಬ್ಬಂದಿ ಅಲ್ಲಿಂದ ಮುಂದೆ ಓಡಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ADVERTISEMENT

ನಗರದ ಮತ್ತೊಂದು ಕಡೆ ರಭಸವಾಗಿ ಟ್ರ್ಯಾಕ್ಟರ್‌ ಓಡಿಸುತ್ತ ಪೊಲೀಸರನ್ನು ಚದುರಿಸುವ ಪ್ರಯತ್ನವೂ ದಾಖಲಾಗಿದೆ. ಇಂಥ ಘಟನೆಗಳು ಹಲವು ಭಾಗಗಳಲ್ಲಿ ನಡೆದಿದ್ದು, ಪೊಲೀಸರು ಹಾಗೂ ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಪ್ರತಿಭಟನೆ ಗಲಾಟೆ ರೂಪ ಪಡೆದಿದ್ದರಿಂದ ಕೆಂಪು ಕೋಟಿಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಲಾವಿದರು ಹಾಗೂ ಮಕ್ಕಳು ಸೇರಿದಂತೆ ಸುಮಾರು 300 ಜನರು ಅಲ್ಲಿಯೇ ಸಿಲುಕಿದ್ದರು.

ಇನ್ನಷ್ಟು ಓದು

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.